ಬೀಟ್ರೂಟ್ ಸಾಗು

ಬೀಟ್‍ರೂಟ್‍ನಿಂದ ಸಾರು, ಪಲ್ಯ, ಚಟ್ನಿ, ದೋಸೆ ಹೀಗೆ…ಹಲವು ಬಗೆಯ ರೆಸಿಪಿಗಳನ್ನು ಮಾಡಿ ಸವಿಯಬಹುದು. ರುಚಿಯಾದ ಬೀಟ್‍ರೂಟ್ ಸಾಗು ಮಾಡುವ ವಿಧಾನ ಇಲ್ಲಿದೆ.

ರೆಸಿಪಿ ಬರಹ: ಶಿವಭಟ್ ಸೂರ್ಯಂಬೈಲು, ಉಪ್ಪಿನಂಗಡಿ

ಬೇಕಾಗುವುದೇನು: ಬೀಟ್ರೂಟ್- 3, ತೆಂಗಿನ ತುರಿ- 1 ಕಪ್, ಬ್ಯಾಡಗಿ ಮೆಣಸು- 6-7, ದನಿಯ- 1 ಚಮಚ, ಜೀರಿಗೆ- ಕಾಲು ಚಮಚ, ದಾಲ್ಚಿನ್ನಿ- 2 ತುಂಡು, ಹುಣಸೆಹಣ್ಣು- 2-3 ಎಸಳು, ಬೆಲ್ಲ- ಅಡಿಕೆ ಗಾತ್ರ, ಉಪ್ಪು- ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಎಣ್ಣೆ- 2ಚಮಚ, ಸಾಸಿವೆ- ಕಾಲು ಚಮಚ, ಕರಿಬೇವಿನ ಸೊಪ್ಪು- 6-8 ಎಲೆಗಳು, ಅರಿಶಿನ- ಕಾಲು ಚಮಚ.

ಮಾಡುವ ವಿಧಾನ: ಬೀಟ್ರೂಟನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು, ತುರಿದುಕೊಳ್ಳಿ.ತೆಂಗಿನ ತುರಿ, ಕೊತ್ತುಂಬರಿ ಬೀಜ, ಜೀರಿಗೆ, ಬ್ಯಾಡಗಿ ಮೆಣಸಿನಕಾಯಿ, ದಾಲ್ಚಿನ್ನಿ, ಹುಳಿ- ಇಷ್ಟನ್ನೂ ಮಿಕ್ಸರ್ ಗೆ ಹಾಕಿ ಸ್ವಲ್ಪ ನೀರು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. (ಯಾವುದನ್ನೂ ಹುರಿದುಕೊಳ್ಳುವ ಅವಶ್ಯಕತೆಯಿಲ್ಲ). ಒಂದು ಪ್ಯಾನ್ ಗೆ 2 ಚಮಚ ಎಣ್ಣೆ ಹಾಕಿ, ಕಾದಾಗ ಸಾಸಿವೆಕಾಳು ಹಾಕಿ, ಸಿಡಿದಾಗ ಸಣ್ಣಗೆ ಹೆಚ್ಚಿದ ಕರಿಬೇವು, ಅರಿಶಿನ ಹಾಕಿ. ನಂತರ ಬೀಟ್ರೂಟ್ ತುರಿಯನ್ನು ಹಾಕಿ ಒಂದೆರಡು ನಿಮಿಷ ಹುರಿದು ಒಂದು ಲೋಟದಷ್ಟು ನೀರನ್ನು ಹಾಕಿ, ಉರಿಯನ್ನು ಸ್ವಲ್ಪ ಕಡಿಮೆ ಮಾಡಿ, ಮುಚ್ಚಿಡಿ. 5 ನಿಮಿಷದೊಳಗೆ ಬೀಟ್ರೂಟ್ ತುರಿ ಬೆಂದಿರುತ್ತದೆ.

ಈಗ ಅದಕ್ಕೆ ಉಪ್ಪು, ಬೆಲ್ಲ ಹಾಕಿ, ಮಿಕ್ಸರ್‍ನಲ್ಲಿ ರುಬ್ಬಿಕೊಂಡ ಮಸಾಲೆಯನ್ನೂ ಹಾಕಿ. ಬೇಕೆಂದಲ್ಲಿ ಸ್ವಲ್ಪ ನೀರನ್ನು ಸೇರಿಸಿ. ಇದು ಗ್ರೇವಿಯ ಹದವಿರಲಿ. ಚೆನ್ನಾಗಿ ಕುದಿದ ನಂತರ ಸ್ಟವ್ ಆರಿಸಿ. ಆರೋಗ್ಯಕರವಾದ ಅಷ್ಟೇ ರುಚಿಯಾದ ಬೀಟ್ರೂಟ್ ಸಾಗು ಸಿದ್ಧ.

Related Articles

ಪ್ರತಿಕ್ರಿಯೆ ನೀಡಿ

Latest Articles