ಪಾಕಪ್ರವೀಣೆ ಬೆಂಗಳೂರಿನ ಶ್ರೀಮತಿ ವೇದಾವತಿ ಹೆಚ್.ಎಸ್.ಅವರು ಗೋಧಿ ನುಚ್ಚಿನ ಖೀರ್, ಮಸಾಲೆ ಅವಲಕ್ಕಿ ಹಾಗೂ ಖರ್ಜೂರದ ಪಾನಕ ಹೇಗೆ ಮಾಡುವುದು ಎಂಬುದನ್ನು ಇಲ್ಲಿ ತಿಳಿಸಿಕೊಟ್ಟಿದ್ದಾರೆ.
ಗೋಧಿ ನುಚ್ಚಿನ ಖೀರ್
ಬೇಕಾಗುವ ಸಾಮಗ್ರಿಗಳು:ಗೋಧಿ ನುಚ್ಚು 1/2ಕಪ್.ಆಗಲೇ ತುರಿದ ತೆಂಗಿನಕಾಯಿ 1/2ಕಪ್ಬೆಲ್ಲದ ಪುಡಿ 1/2ಕಪ್/ಸಿಹಿ ಎಷ್ಟು ಬೇಕು ಅಷ್ಟು.ಗಸಗಸೆ 1/2ಟೇಬಲ್ ಚಮಚಹಾಲು 1/2ಲೀಟರ್ನೀರು 1ಕಪ್ತುಪ್ಪ 2ಟೇಬಲ್ ಚಮಚದ್ರಾಕ್ಷಿ, ಗೋಡಂಬಿ ಸ್ವಲ್ಪಏಲಕ್ಕಿ 2ಚಿಟಿಕೆ ಉಪ್ಪು.
ತಯಾರಿಸುವ ವಿಧಾನ: ಗೋಧಿ ನುಚ್ಚನ್ನು ತೊಳೆದು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಕುಕ್ಕರಿನ ಬಟ್ಟಲಿನಲ್ಲಿ ಹಾಕಿ ಒಂದು ಕಪ್ ನೀರು ಸೇರಿಸಿ ಮೂರರಿಂದ ನಾಲ್ಕು ವಿಷಲ್ ಬರುವರೆಗೆ ಬೇಯಿಸಿ. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಅದು ಮುಳುಗುವರೆಗೆ ನೀರು ಹಾಕಿ ಕರಗಿಸಿಕೊಳ್ಳಿ. ನಂತರ ಸೋಸಿಕೊಳ್ಳಿ. ಬೆಲ್ಲದಲ್ಲಿ ಕಸವಿದ್ದರೆ ಈರೀತಿ ಮಾಡುವುದರಿಂದ ಒಳ್ಳೆಯದು. ನಂತರ ಚಿಕ್ಕ ಬಾಣಲೆಯಲ್ಲಿ ಗಸಗಸೆಯನ್ನು ಹುರಿದು ಕೊಳ್ಳಿ. ಮಿಕ್ಸಿಯಲ್ಲಿ ತೆಂಗಿನಕಾಯಿ ತುರಿ, ಏಲಕ್ಕಿ, ಗಸಗಸೆ ಮತ್ತು ನುಣ್ಣಗೆ ರುಬ್ಬಿ ಕೊಳ್ಳಲು ಸ್ವಲ್ಪ ಹಾಲನ್ನು ಹಾಕಿ ರುಬ್ಬಿಕೊಳ್ಳಿ. ನಂತರ ಕರಗಿಸಿ ಸೋಸಿ ಕೊಂಡ ಬೆಲ್ಲ ಮತ್ತು ರುಬ್ಬಿದ ಮಿಶ್ರಣವನ್ನು ಒಂದು ದಪ್ಪ ತಳದ ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಸಿ ಕೊಳ್ಳಿ. ಚೆನ್ನಾಗಿ ಕುದಿ ಬಂದ ನಂತರ ಬೇಯಿಸಿ ಕೊಂಡ ಗೋಧಿ ನುಚ್ಚನ್ನು ಅದರೊಂದಿಗೆ ಸೇರಿಸಿ ಕುದಿಸಿ. ಕೊನೆಯಲ್ಲಿ ಉಳಿದ ಹಾಲನ್ನು ಹಾಕಿ ಕುದಿಸಿ ಒಲೆಯಿಂದ ಇಳಿಸಿ. ಚಿಟಿಕೆ ಉಪ್ಪು ಹಾಕಿ. ನಂತರ ಕೈಬಾಣಲೆಯಲ್ಲಿ ತುಪ್ಪವನ್ನು ಹಾಕಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದು ಪಾಯಸಕ್ಕೆ ಸೇರಿಸಿ. ಆರೋಗ್ಯಕರವಾದ ಮತ್ತು ರುಚಿಕರವಾದ ಗೋಧಿ ನುಚ್ಚಿನ ಪಾಯಸವನ್ನು ತಯಾರಿಸಿ ಸವಿಯಿರಿ.
ಮಸಾಲೆ ಅವಲಕ್ಕಿ
ಬೇಕಾಗುವ ಸಾಮಗ್ರಿ: ತೆಳು ಅವಲಕ್ಕಿ 1/2 ಕೆಜಿ., ತೆಂಗಿನಕಾಯಿಯ ಅರ್ಧ ಭಾಗ, ಕೊತ್ತಂಬರಿ ಬೀಜ(ಧನಿಯಾ) ಒಂದೂವರೆ ಟೇಬಲ್ ಚಮಚ, ಜೀರಿಗೆ ಒಂದೂವರೆ ಟೀ ಚಮಚ, ಬ್ಯಾಡಗಿ ಮೆಣಸಿನ ಕಾಯಿ 6-7, ಉಪ್ಪು ರುಚಿಗೆ ತಕ್ಕಷ್ಟು, ಸಕ್ಕರೆ 2ಟೇಬಲ್ ಚಮಚ ಅಥವಾ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು.
ಒಗ್ಗರಣೆಗೆ: ಎಣ್ಣೆ 2ಟೇಬಲ್ , 2ಚಿಟಿಕೆ, ಸಾಸಿವೆ 1/2ಟೀ ಚಮಚ, ಜೀರಿಗೆ 1ಟೀ ಚಮಚ,
ತಯಾರಿಸುವ ವಿಧಾನ: ಮಿಕ್ಸಿಯಲ್ಲಿ ಒಣಮೆಣಸಿನಕಾಯಿ, ಧನಿಯಾ, ಜೀರಿಗೆ (ಈ ಮೂರನ್ನು ಬೇಕಿದ್ದರೆ ಬಾಣಲೆಯಲ್ಲಿ ಬೆಚ್ಚಗೆ ಮಾಡಿಕೊಳ್ಳಿ) ಮೂರನ್ನು ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಸಕ್ಕರೆಯನ್ನು ಅದರೊಂದಿಗೆ ಪುಡಿ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಆಗಲೇ ತುರಿದ ತೆಂಗಿನಕಾಯಿ ಹಾಗಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ತುಂಬಾ ನುಣ್ಣಗೆ ಬೇಡ. ನಂತರ ಕೈಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಸಾಸಿವೆ, ಜೀರಿಗೆ ಮತ್ತು ಇಂಗನ್ನು ಹಾಕಿ. ಸಾಸಿವೆ ಸಿಡಿದ ನಂತರ ರುಬ್ಬಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಗ್ಗರಣೆಯನ್ನು ಅವಲಕ್ಕಿಗೆ ಹಾಕಿ ನಿಧಾನವಾಗಿ ಮಿಶ್ರಣ ಮಾಡಿ.
ಖರ್ಜೂರ ಪಾನಕ
ಬೇಕಾಗುವ ಸಾಮಗ್ರಿಗಳು: ಬೀಜ ತಗೆದ ಖರ್ಜೂರ 1 ಕಪ್, ಹುಣಸೆ ಹಣ್ಣಿನ ಗಟ್ಟಿ ರಸ 1ಟೀ ಚಮಚ, ಉಪ್ಪು ಚಿಟಿಕೆ, ಬೆಲ್ಲ ಸಿಹಿ ಎಷ್ಟು ಬೇಕು ಅಷ್ಟು, ಕಾಳುಮೆಣಸಿನ ಪುಡಿ ಚಿಟಿಕೆ, ನೀರು ಅರ್ಧ ಲೀಟರ್.
ತಯಾರಿಸುವ ವಿಧಾನ: ಖರ್ಜೂರವನ್ನು ಸಣ್ಣಗೆ ಕತ್ತರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಹುಣಸೆ ರಸ ಮತ್ತು ಬೆಲ್ಲವನ್ನು ಸೇರಿಸಿ. ನೀರನ್ನು ಹಾಕಿ ಪುನಃ ನುಣ್ಣಗೆ ರುಬ್ಬಿಕೊಳ್ಳಿ. ಕುಡಿಯುವಾಗ ಚಿಟಿಕೆ ಕಾಳು ಮೆಣಸು ಮತ್ತು ಚಿಟಿಕೆ ಉಪ್ಪುನ್ನು ಹಾಕಿ ಕುಡಿಯಿರಿ. ಶಕ್ತಿವರ್ಧಕ ಪಾನಕ ಇದಾಗಿದೆ.