ಚಿದಗ್ನಿಕುಂಡ ಸಂಭೂತೆ ತಾಯಿ ಲಲಿತೆ

ಲಲಿತಾ ಸಹಸ್ರ ನಾಮದಲ್ಲಿ ಶ್ರೀಮಾತೆಯ ವರ್ಣನೆ ಯಾವ ರೀತಿ ಇದೆ ಎಂಬುದನ್ನು ಖ್ಯಾತ ಬರಹಗಾರ, ಮದ್ದಳೆಗಾರ ಶ್ರೀ ಕೃಷ್ಣಪ್ರಕಾಶ್ ಉಳಿತ್ತಾಯ ಅವರು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ವರ್ಣಿಸಿದ್ದಾರೆ.  

  ಸ್ತೋತ್ರ ಸಾಹಿತ್ಯದಲ್ಲಿ ವಿಷ್ಣುಸಹಸ್ರನಾಮವನ್ನು ಹೊರತುಪಡಿಸಿದರೆ ತುಂಬಾ ಪ್ರಸಿದ್ದಿಯನ್ನು ಪಡೆದದ್ದು ಲಲಿತಾ ಸಹಸ್ರನಾಮ. ತನ್ನ ಕಾವ್ಯಗುಣಗಳಿಂದಲೂ ಪದಗುಂಫನವೂ ಭಾವಗುಂಫನದಿಂದಲೂ ಕೇಳುವಾಗ ತನ್ಮಯತೆಯನ್ನು ಕೊಡುವ ಭಕ್ತಿಯ ಭಾವವನ್ನು ವೃದ್ಧಿಸುವ ನವನೋನ್ಮೇಶಶಾಲಿನಿಯಾದ ಸ್ತೊತ್ರರತ್ನ.

ಸಪ್ತಶತೀ ಅಥವಾ ಚಂಡೀಪಾಠ್ ದೇವೀ ಮಹಾತ್ಮ್ಯೆ  ಬಿಟ್ಟರೆ ಶಕ್ತಿ ದೇವತೆಯ ಸ್ತೋತ್ರ ಮಾಲಿಕೆಗಳಲ್ಲಿ ಲಲಿತಾ ಸಹಸ್ರವೇ ಜನಮನದಲ್ಲಿ ಬಳಕೆಯಲ್ಲಿರುವುದು. ಸ್ತ್ರೀಪುರುಷರಾದಿಯಾಗಿ ಬೇಧಭಾವವಿಲ್ಲದೆ ಸಾಮೂಹಿಕವಾಗಿಯೂ ಆಂತರಂಗಿಕವಾಗಿಯೂ ದೇವಿಯನ್ನು ಭಜಿಸುವಲ್ಲಿ ಪ್ರಯುಕ್ತವಾಗುವ ಸ್ತೋತ್ರರತ್ನವಿದು. ಶ್ರೀ ಲಲಿತಾ ತ್ರಿಪುರ ಸುಂದರಿ ಈ ಸ್ತೋತ್ರ ಮಾಲಿಕೆಯ ಅಧಿಷ್ಠಾತ್ರಿ.  ಶ್ರೀ ಚಕ್ರದ ಮಧ್ಯದ ಬಿಂದುವಿನಲ್ಲಿ ತನ್ನ ಪತಿ ಕಾಮೇಶ್ವರನ ಜತೆಯಾಗಿ ನೆಲೆಸಿರುವ ಈಕೆ ಯೋಗವನ್ನೂ ಭೋಗವನ್ನೂ ಕೊಡುವವಳು. ಶ್ರದ್ಧೆಯನ್ನು ಭಜಕರಲ್ಲಿ ಅಪೇಕ್ಷಿಸುವವಳು.

ಶ್ರೀಲಲಿತಾ ಸಹಸ್ರನಾಮವು ಬ್ರಹ್ಮಾಂಡ ಪುರಾಣದಲ್ಲಿ ಬರುವ ಲಲಿತೋಪಾಖ್ಯಾನದ ಭಾಗ. ಹಯಗ್ರೀವ ಮುನಿ ಅಗಸ್ತ್ಯರಿಗೆ ಉಪದೇಶಿಸಿದ ನಾಮಮಾಲೆ. ಲಲಿತಾ ದೇವಿಯ ಅವತಾರ, ಆಕೆಯ ಪಟ್ಟಾಭಿಷೇಕ, ಪರಶಿವನ ಮೂರನೆಯ ಕಣ್ಣಿನ ಉರಿಗೆ ಭಸ್ಮವಾದ ಮನ್ಮಥನ ಭಸ್ಮವನ್ನು ಚಿತ್ರರಥನೆಂಬ ಗಣೇಶ್ವರ ಆಕಾರ ಕೊಡುತ್ತಾನೆ ಆ ಮೂರ್ತಿಗೆ ಶಿವನ ಕಟಾಕ್ಷ (ಕಣ್ಣ ನೋಟ) ಬೀಳುತ್ತದೆ ಸುಂದರ ಪುರುಷಾಕಾರ ತಾಳುತ್ತದೆ; ಮುಂದೆ ಗಣೇಶ್ವರನಿಂದ ಶತರುದ್ರೀಯದ ಉಪದೇಶ ಪಡೆಯುತ್ತಾನೆ. ಶಿವ ಅರವತ್ತುಸಾವಿರ ವರುಷದ ಚಕ್ರವರ್ತಿತ್ವದ ವರ ಕೊಡುತ್ತಾನೆ. ಬ್ರಹ್ಮ ಇದನ್ನು ನೋಡಿ “ಭಂಡ್ ಭಂಡ್” ಎನ್ನುತ್ತಾನೆ. ಆದುದರಿಂದ ಈತನಿಗೆ ಭಂಡಾಸುರ ಎಂಬ ಹೆಸರು. ಈತನನ್ನು ಲಲಿತೆ ವಧಿಸುತ್ತಾಳೆ. ಇವೆಲ್ಲ ಲಲಿತಾ ಸಹಸ್ರನಾಮದಲ್ಲಿ ವರ್ಣಿಸಲ್ಪಟ್ಟಿದೆ. ಲಲಿತಾ ಸಹಸ್ರನಾಮದಲ್ಲಿ ಪೂರ್ವಭಾಗ, ಲಲಿತಾ ಸಹಸ್ರನಾಮ ಮತ್ತು ಫಲಶ್ರುತಿಯೆಂದು ಮೂರು ಭಾಗಗಳಿವೆ‌.  

ಮೊದಲ ಹಾಡು

ಶ್ರೀಮಾತಾ ಶ್ರೀಮಹಾರಾಜ್ಞೀ ಶ್ರೀಮತ್ಸಿಂಹಾಸನೇಶ್ವರೀ| ಚಿದಗ್ನಿಕುಂಡ ಸಂಭೂತಾ ದೇವಕಾರ್ಯ ಸಮುದ್ಯತಾ||

ಸ್ತೋತ್ರ ಮಾಲೆಯ ಮೊದಲ ಹೆಸರೇ ಅಮ್ಮ! ಶ್ರೀ ಮಾತಾ ಎಂದು ಹೇಳಿ ಇಡೀ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಕೊಟ್ಟ ಸ್ಥಾನವನ್ನು ಪ್ರತೀಕ ಮಾಡಿ ಹೇಳಿದಂತಿದೆ. ಕೇವಲ ಮಾತಾ ಎನ್ನದೆ ಶ್ರೀ ಮಾತಾ ಎಂದು ಕರೆದಿದ್ದಾರೆ. ಮಾತಾ ಎಂಬಲ್ಲಿ ಐಹಿಕಕ್ಕೆ ಅಂದರೆ ಈ ಲೊಕದಲ್ಲಿನ ರಕ್ಷಣೆ ಮಾಡುವವಳು ಎನ್ನುವುದಾದರೆ ಶ್ರೀ ಸೇರಿಸಿರುವ ಶಬ್ದವಾದುದರಿಂದ ಆಮುಷ್ಮಿಕ ಅಥವಾ ಪಾರಲೌಕಿಕ ಅಭೌತಿಕ ನೆಲೆಯಲ್ಲಿಯೂ ಅವಳು ನಮಗೆ ಸರ್ವಾವಲಂಬನೀಯಳು ಎಂಬುದನ್ನು ಈ ಹೆಸರು ಸೂಚಿಸುತ್ತದೆ.

ಮತ್ತೊಂದು ರೀತಿಯಿಂದಲೂ ಯೋಚಿಸಬಹುದು. ಶ್ರೀ ಮತ್ತು ಭೂತ್ತ್ವದ ಅನುಸಂಧಾನವೂ ಆಗುತ್ತದೆ. ಮಾತಾ ಎಂಬುದು ನಮ್ಮ ಜಗದ ಭಾವದಲ್ಲಿ ನಮ್ಮನ್ನು ಪೊರೆದವಳು, ಪೊರೆಯುವವಳು ಎಂಬ ಅರ್ಥಾನುಸಂಧಾನ ಮಾಡಿದರೆ ಭೂಮಿಗೂ ಇದೇ ರೀತಿಯಲ್ಲಿ ನಾವು ಅರ್ಥಾನುಸಂಧಾನ ಮಾಡಬಹುದು. ಶ್ರೀ ಎಂಬುದು ಶ್ರೇಯಸ್ಕರವಾದ ಬೀಜಾಕ್ಷರವಾಗಿರುವುದು ಒಂದು ಬಗೆಯಾದರೆ ; ಮೋಕ್ಷಗಾಮಿಗಳಾಗುವವರಿಗೆ ದಾರಿ ತೋರುವ ಆಧ್ಯಾತ್ಮಿಕ ಉನ್ನತಿಗೆ ಒದಗುವ ತತ್ತ್ವವೂ ಹೌದು.

ಹಾಗಾಗಿ ಶ್ರೀ –ಭೂ ತತ್ತ್ವಗಳು ಎರಕವಾದ ಹೆಸರು “ಶ್ರೀಮಾತಾ”. ಎರಡನೆಯ ಹೆಸರು “ಶ್ರೀ ಮಹಾರಾಜ್ಞೀ”. ಇಲ್ಲಿ ಸಕಲ ಚರಾಚರ ವಸ್ತುಗಳಿಗೆ ಚೇತನ-ಅಚೇತನ ವಸ್ತುಗಳಿಗೆ ಒಡೆಯಳು ಎಂಬ ಅರ್ಥ ಪ್ರಕಟವಾಗಿದೆ. ಇಡೀ ಬ್ರಹ್ಮಾಂಡದ ಅಭಿವ್ಯಕ್ತಿಯ ಸ್ವರೂಪವೇ “ಮಾಯಾ” ಅಂದರೆ ಶಕ್ತಿಯ ಲೀಲಾನಾಟಕ ಅಥವಾ ಶಕ್ತಿಯ ಅಸ್ತಿತ್ವದ ಪ್ರತೀಕ ಎಂದು ಪರಿಭಾವಿಸಲ್ಪಟ್ಟಿದೆ. ಹಾಗಾಗಿ ಬ್ರಹ್ಮಾಂಡದ ಅಧಿಕಾರಿಯು ನೀನು ಎಂದು ತಾಯಿಯನ್ನು ಕರೆದಿದ್ದಾರೆ.

“ಶ್ರೀಮತ್ಸಿಂಹಾಸನೇಶ್ವರೀ” ದೇವಿಯು ಸಿಂಹಾಸನದಲ್ಲಿ ಆಸೀನಳಾಗಿದ್ದಾಳೆ. ದೇವೀ ಪುರಾಣದಲ್ಲಿ ದೇವಿಯು ಸಿಂಹದ ಮೇಲೇರಿ ಮಹಿಷಾಸುರನನ್ನು ಕೊಂದ ಕಥೆ ಬರುತ್ತದೆ. ಆದುದರಿಂದಲೂ ಆಕೆ ಸಿಂಹಾಸನೆಶ್ವರಿ. ಇವಿಷ್ಟು ಮೊದಲ ಸಾಲಲ್ಲಿ ಬರುವ ದೇವಿಯ ಮೂರು ಹೆಸರು. ಇನ್ನೆರಡು ಹೆಸರು “ಚಿದಗ್ನಿಕುಂಡ ಸಂಭೂತಾ” ಮತ್ತು”ದೇವಕಾರ್ಯ ಸಮುದ್ಯತಾ”.

“ಚಿದಗ್ನಿಕುಂಡ ಸಂಭೂತಾ” ಇಲ್ಲಿ ಚಿತ್ ಬ್ರಹ್ಮ ಎಂಬ ಅರ್ಥವೂ ಬ್ರಹ್ಮದಿಂದ ಆವಿರ್ಭವಿಸಿದವಳು ಎಂಬ ಅರ್ಥವಿದ್ದರೆ; ಜ್ಞಾನ ಎಂಬ ನೆಲೆಯಲ್ಲೂ ಚಿತ್ ಅನ್ನು ಅರ್ಥೈಸಬಹುದು.

ಭಂಡಾಸುರನ ವಧೆಗೋಸ್ಕರ ತಾಯಿಯ ಆವಿರ್ಭಾವಕ್ಕಾಗಿ ದೇವಾದಿ ದೇವತೆಗಳೆಲ್ಲರೂ ಯಜ್ಞಮಾಡುತ್ತಾರೆ. ಆ ಯಜ್ಞದಿಂದ ತಾಯಿ ಲಲಿತೆ ಹುಟ್ಟುತ್ತಾಳೆ. ಇಲ್ಲಿ ಸಕಲ ದೇವತೆಗಳ ಚಿತ್ ಎಂಬ ಜ್ಞಾನಸ್ವರೂಪಿ -ಅಗ್ನಿಯಿಂದ ಆವಿರ್ಭವಿಸಿದ ದೇವಿಯನ್ನು ಮತ್ತು ಅವಳ ಪ್ರಾದುರ್ಭಾವದ(ಅವತರಣದ) ರೀತಿಯನ್ನು  ಹೇಳಿದೆ. ಇಲ್ಲಿ “ಚಿತ್ “ ಆರಾಧಕನ ಚಿತ್ತದ ಅಗ್ನಿಯಲ್ಲಿ ಹುಟ್ಟುವವಳು ಅಥವಾ ಚಿತ್ತದಲ್ಲಿ ಅವಳನ್ನು ಕುರಿತಾಗಿ ಪ್ರಾರ್ಥಿಸುವಾಗ ಉದಿಸುವವಳು ಎಂಬ ಅರ್ಥಾನುಸಂಧಾನವೂ ಒಗ್ಗುತ್ತದೆ. ಹಾಗಾಗಿ ನಮ್ಮ ಧೀ, ಬುದ್ಧಿ, ಚಿತ್ತವೇ ಯಜ್ಞಕುಂಡವಾಗಿ ನಾವು ಮಾಡುವ ಧ್ಯಾನವೇ ಯಜ್ಞವಾದಾಗ ಅವಳು ನಮ್ಮಹೃದಯ ಕಮಲದಲ್ಲಿ ಪಡಿಮೂಡುತ್ತಾಳೆ.

“ದೇವಕಾರ್ಯ ಸಮುದ್ಯತಾ” ದೇವತೆಗಳ ಕಾರ್ಯಾರ್ಥವಾಗಿ ಹುಟ್ಟಿದವಳು ಎಂಬ ಅರ್ಥವೂ ಇದೆ. ಭಂಡಾಸುರನ ಹನನಕ್ಕಾಗಿ, ಮಹಿಷಾಸುರನ ಹನನ, ಶುಂಭಾದಿಗಳು ಹನನ ಇವೆಲ್ಲ ದೇವಕಾರ್ಯಗಳು.  ಹೀಗೆ ಎರಡನೆಯ ಸಾಲಿನಲ್ಲಿ ದೇವಿಯ ಹುಟ್ಟು ಮತ್ತು ಕಾರಣವನ್ನು ತಿಳಿಸಲಾಗಿದೆ. ಇಂತಹಾ ದೇವಿಯ ಈ ನಾಮಗಳ ಸ್ಮರಣೆ ನಮಗೆ ಒಳಿತನ್ನೀಯಲಿ.

Related Articles

ಪ್ರತಿಕ್ರಿಯೆ ನೀಡಿ

Latest Articles