ತುಳುನಾಡಿನಲ್ಲಿ ಆಚರಣೆಯಲ್ಲಿರುವ ಈ ಪದ್ಧತಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ

ಹಿಂದಿನ ಕಾಲದಲ್ಲಿ ಭತ್ತದ ಬೇಸಾಯವೇ ಪ್ರಮುಖ ಕಸುಬು ಆಗಿತ್ತು. ವರ್ಷಪೂರ್ತಿ ಆ ಬೆಳೆಯಿಂದಲೇ ಎಲ್ಲರ ಜೀವನ ಸಾಗುತ್ತಿತ್ತು. ಮನೆಗೆ ಸಮೃದ್ಧಿಯ ಸಂಕೇತ ಅಂದರೆ ಭತ್ತ. ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗೆ ಪೂಜೆ ಸಲ್ಲಿಸಿ, ಮನೆ ತುಂಬಿಸುವ ಕ್ರಮ ಮಾಡುವುದರ ಮೂಲಕ ವರ್ಷಪೂರ್ತಿ ಸಕಲ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುವ ಶುಭ ಸಂದರ್ಭವದು.ಭತ್ತದ ಬೇಸಾಯ ಹೋಗಿ, ಅಡಿಕೆ, ತೆಂಗು ಬೆಳೆ ಕಳೆಗಟ್ಟಿದ್ದರೂ ಕರಾವಳಿಯಲ್ಲಿ ಈ ಆಚರಣೆ ಮಾತ್ರ ಕಳೆಗುಂದಿಲ್ಲ.


ಆಟಿ ಅಥವಾ ಸೋಣ ತಿಂಗಳು ಮನೆಯ ಅಟ್ಟ ಗುಡಿಸಿ, ಧೂಳು ತೆಗೆದು ಕಳೆದ ವರ್ಷ ಕಟ್ಟಿದ ಕದಿರನ್ನು ತೆಗೆದು ಸ್ವಚ್ಛ ಮಾಡಬೇಕು. ಗಣೇಶ ಚತುರ್ಥೀಯಿಂದ ಹಿಡಿದು ತಲಕಾವೇರಿ ಸಂಕ್ರಮಣದವರೆಗೆ ಏಣೇಲು ಬೆಳೆ ತೆನೆ ತುಂಬಿ ನಿಂತ ಪೈರು ಗದ್ದೆಯಲ್ಲಿರುವಾಗ ಯಾವಾಗ ಬೇಕಾದರೂ ಮನೆ ತುಂಬಿಸುವುದು ಮಾಡಬಹುದು.

ಮನೆ ತುಂಬಿಸುವ ವಸ್ತುಗಳು: ನಕ್ಷತ್ರಕ್ಕೆ ಅನುಗುಣವಾಗಿ ವಸ್ತುಗಳಿರಬೇಕು. ಅಶ್ವತ್ಥ, ಮಾವು, ಹಲಸು, ಬಿದಿರು, ಗೋಳಿ, ನಾಯಿ ಕರುಂಬು. ಪೊಲಿಬೊಳ್ಳಿ, ಇಟ್ಟೊವು ಸೊಪ್ಪು, ಗಬ್ಬಲ ಮರದ ಬಳ್ಳಿ, ಕವುಂತೆ ಬಳ್ಳಿ ಸೊಪ್ಪು, ಇವುಗಳು ಮುಖ್ಯವಾಗಿ ಇರಲೇಬೇಕು.
ಮನೆ ತುಂಬಿಸುವ ಮೊದಲಿನ ದಿನಮೇಲಿನ ವಸ್ತುಗಳನ್ನು ಸಂಗ್ರಹಿಸಿ ಯಾರೂ ಮುಟ್ಟದ ಜಾಗದಲ್ಲಿ /ಹಲಸಿನ ಮರದ ಬುಡದಲ್ಲಿ/ತುಳಸಿಕಟ್ಟೆಯಲ್ಲಿ ತಂದಿಡಬೇಖು. ಮಾರನೇ ದಿನ ಮನೆಯ ಯಜಮಾನರು ಸ್ನಾನ ಮಾಡಿಮಡಿಯುಟ್ಟು, ಗುರು ಹಿರಿಯರಿಗೆ ದೈವ ದೇವರಿಗೆ ಪ್ರಾರ್ಥನೆ ಮಾಡಿ ಕದಿರು ತೆಗೆಯಲು ಗದ್ದೆಗೆ ಹೋಗುತ್ತಾರೆ.ಹೋಗುವಾಗ ಮನೆಯ ಇತರ ಸದಸ್ಯರುಬೆಸ ಸಂಖ್ಯೆಯಲ್ಲಿ ಒಟ್ಟಿಗೆ ಹೋಗುತ್ತಾರೆ. ಹೋಗುವಾಗ ಐದು ಎಲೆ, ಒಂದು ಅಡಿಕೆ, ಒಂದು ಕೊಡಿ ಬಾಳೆ ಎಲೆ ತೆಗೆದುಕೊಂಡು ಹೋಗುತ್ತಾರೆ. ತೆನೆ ತೆಗೆಯುವ ಮೊದಲು ಕೈ ಮುಗಿಯಬೇಕು. ಅನಂತರ ಪೊಲಿ, ಪೊಲಿ ಹೇಳುತ್ತಾ ಕದಿರು(ಭತ್ತದ ತೆನೆ) ತೆಗೆಯುತ್ತಾರೆ. ತೆಗೆದುಕೊಂಡು ಬರುವಾಗ ಪೊಲಿ ಪೊಲಿ ಹೇಳುತ್ತಾ ಕದಿರು ತರಬೇಕು. ಅಂಗಳಕ್ಕೆ ಬಂದ ಮೇಲೆ ಹಿಂದಿನ ದಿನ ಸಂಗ್ರಹಿಸಿದ್ದ ಎಲ್ಲಾ ವಸ್ತುಗಳನ್ನು ಮನೆಯಲ್ಲಿದ್ದವರು ಒಂದು ಗೆರಸೆಯಲ್ಲಿಟ್ಟಿರುತ್ತಾರೆ. ಅದನ್ನು ಮತ್ತು ಕದಿರುನ್ನು ಹಿಡಿದುಕೊಂಡು ತುಳಸಿಕಟ್ಟೆಗೆ ಸುತ್ತು ಬರುತ್ತಾ ಪೊಲಿ, ಪೊಲಿ ಹೇಳಬೇಕು.

ಮನೆ ಒಳಗೆ ಹೋಗುವ ಮೊದಲು ಮುತ್ತೈದೆಯರು ಕಾಲಿಗೆ ನೀರು ಹಾಕುವರು. ಮತ್ತು ಕುಡಿಯಲು ಹಾಲು ಕೊಡುತ್ತಾರೆ. ದೇವರ ಕೋಣೆ ಅಥವಾ ಕನ್ನಿಗಂಬದ ಹತ್ತಿರ ಮನೆಯ ಯಜಮಾನ ಮೊದಲೇ ದೀಪ ಹಚ್ಚಿ ಗಣಪತಿಗೆ ಇಟ್ಟಿರುತ್ತಾರೆ. (ಗಣಪತಿಗೆ 5 ಎಲೆ, ಒಂದು ಅಡಿಕೆ, 5 ಕುಡ್ತೆ ಅಕ್ಕಿ, ಒಂದು ತೆಂಗಿನಕಾಯಿ) ತಂದ ಕದಿರ ಸಮೇತ ಎಲ್ಲಾ ವಸ್ತುಗಳನ್ನು ಮಣೆಯಲ್ಲಿಟ್ಟಿರುತ್ತಾರೆ. ತಂದ ಕದಿರಿನಿಂದ ಭತ್ತ ತೆಗೆದು ಮನೆಯ ಯಜಮಾನ ಮೊದಲು, ನಂತರ ಎಲ್ಲರೂ ದೀಪಕ್ಕೆ ಹಾಕಿ ಕೈಮುಗಿಯುತ್ತಾರೆ. ಇದಾದ ನಂತರ ಕಿರಿಯರು ಹಿರಿಯರ ಕಾಲು ಹಿಡಿದು ಆಶೀರ್ವಾದ ಬೇಡುತ್ತಾರೆ.

ಸಂಗ್ರಹಿಸಿದ ಎಲ್ಲಾ ಎಲೆಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಅದರೊಳಗೆ 2 ಕದಿರನ್ನು ಇಟ್ಟು ಮೇಲೆ ಬಳ್ಳಿಯಿಂದ ಸುತ್ತುತ್ತಾರೆ. ಮೊದಲು ದೇವರ ಕೋಣೆಗೆ ಕಟ್ಟಿದ ನಂತರ ದೈವಸ್ಥಾನಕ್ಕೆ ಕಟ್ಟಬೇಕು. ನಂತರ ಮನೆಯ ಮುಖ್ಯ ಭಾಗಗಳಿಗೆ ಮನೆಯ ಎದುರಿನ ದಾರಂದಕ್ಕೆ ಮಾವಿನ ಎಲೆ, ಅಶ್ವತ್ಥ ಎಲೆ, ಮಾಲೆ ಮಾಡಿ ಮಧ್ಯೆ ಮಧ್ಯೆ ಕದಿರನ್ನು ಕಟ್ಟಬೇಕು. ನೊಗ, ನೇಗಿಲು, ಅಡಿಕೆ ಮರ, ತೆಂಗಿನ ಮರ, ವಾಹನ ಮನೆಯ ಪೀಠೋಪಕರಣಗಳಿಗೆ ಕದಿರು ಕಟ್ಟುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದು ಬಂದಿದೆ.

(ಪೂರಕ ಮಾಹಿತಿ: ಒಕ್ಕೊರಲು, ಪುತ್ತೂರು ತಾಲ್ಲೂಕು ಗೌಡ ಸಮುದಾಯದ ಸಾಂಸ್ಕøತಿಕ ಕೈಪಿಡಿ)

Related Articles

2 COMMENTS

ಪ್ರತಿಕ್ರಿಯೆ ನೀಡಿ

Latest Articles