ಬಾಲ್ಯದಿಂದ ಜೀವನದ ಕೊನೆಯವರೆಗೂ ಹಲ್ಲುಗಳ ಸಂರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬುದರ ಕುರಿತು ಮುಳ್ಳೇರಿಯಾದ ಮನೋಹರ್’ಸ್ ಕ್ಲಿನಿಕ್‍ನಲ್ಲಿ ಹದಿನೈದು ವರ್ಷಗಳಿಂದ ದಂತವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಅನುಪಮಾ ಮನೋಹರ್ ಸಂಕ್ಷಿಪ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ನಮ್ಮ ಮನಸ್ಸು ಪ್ರಫುಲ್ಲವಾಗಿದ್ದರೆ ಸುಂದರವಾದ ನಗು ಅರಳುತ್ತದೆ. ಸಹಜವಾದ ಸುಂದರವಾದ ನಗು ಸ್ವಚ್ಛ ಮನಸ್ಸಿನ ಪ್ರತೀಕ. ಇದು ಆತ್ಮವಿಶ್ವಾಸದ ಕೀಲಿಕೈಯೂ ಹೌದು. ನಗು ಆಕರ್ಷಕವಾಗಿರಲು ಹಲ್ಲುಗಳು ಹುಳುಕುರಹಿತವಾಗಿ, ಶುಚಿತ್ವದಿಂದ ಕೂಡಿರಬೇಕು.
ಹಲ್ಲುಗಳು ಕೂಡಾ ನಮ್ಮ ಶರೀರದ ಅತಿಮುಖ್ಯ ಭಾಗ. ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣಗೊಳ್ಳಲು ಹಲ್ಲುಗಳ ಸಹಾಯವನ್ನು ಮರೆಯುವಂತಿಲ್ಲ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಹಲ್ಲಿನ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ.
ಮಕ್ಕಳಲ್ಲಿ ಹಾಲು ಹಲ್ಲುಗಳ ಹುಳುಕು, ಅಲುಗಾಡುವ ಹಾಲು ಹಲ್ಲುಗಳು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳು. ಶೈಶವಾವಸ್ಥೆಯಲ್ಲಿ ಸಾಮಾನ್ಯ ಆರೇಳು ತಿಂಗಳ ಮಗುವಿಗೆ ಹಲ್ಲುಗಳು ಮೂಡಲು ಆರಂಭವಾಗುವಾಗಲೇ ಹಲ್ಲುಗಳ ಅಥವಾ ಬಾಯಿಯ ಸ್ವಚ್ಛತೆ ಅತ್ಯಗತ್ಯ. ತಾಯಿಯ ಹಾಲು ಕುಡಿಯುವ ಹಸುಗೂಸುಗಳ ಹಲ್ಲು ಪೂರ್ತಿ ಮೂಡುವ ಮೊದಲೇ ಕಪ್ಪು ಕಪ್ಪಾಗಿ ಬಿಡುತ್ತವೆ. ಹಾಗಾಗಿ ಮಗುವಿನ ಬಾಯಿಯ ಸ್ವಚ್ಛತೆ ಕಡೆ ಹೆತ್ತವರು ಗಮನಿಸಬೇಕು. ಹೇಗೂ ಉದುರಿ ಹೋಗುವ ಹಲ್ಲುಗಳೆಂಬ ತಾತ್ಸಾರ ಸಲ್ಲದು. ಪ್ರತೀ ಹಾಲು ಹಲ್ಲಿಗೆ ಮೂಡಲು ಅದರದ್ದೇ ಆದ ಪ್ರಾಕೃತಿಕ ಸಮಯವಿದೆ.
ಆರನೇ ವರ್ಷದಲ್ಲಿ ಮೂಡುವ ದವಡೆ ಹಲ್ಲು ಶಾಶ್ವತ ಹಲ್ಲು ಇದರ ಬಗ್ಗೆ ಗಮನ ನೀಡಬೇಕು. ಇದು ಇರುವ ಹಾಲು ಹಲ್ಲುಗಳ ಹಿಂಬದಿಯಲ್ಲಿ ನಾಲ್ಕೂ ಭಾಗಗಳಲ್ಲಿ ಮೂಡುವ ಹಲ್ಲು. ನಮ್ಮ ಬಾಯಿಯಲ್ಲಿರುವ ಅತೀ ದೊಡ್ಡ ಹಾಗೂ ಗಟ್ಟಿಮುಟ್ಟಾದ ಹಲ್ಲು. ಹಾಲು ಹಲ್ಲುಗಳು ಎಂಬ ತಪ್ಪು ಕಲ್ಪನೆಯಿಂದ ಬಹುತೇಕ ಮಕ್ಕಳಲ್ಲಿ ಹುಳುಕಾಗಿ ನಿಷ್ಪ್ರಯೋಜಕವಾಗಿ ಕೀಳಿಸುವ ಹಂತಕ್ಕೆ ತಲುಪುತ್ತವೆ.
ಹನ್ನೊಂದರಿಂದ ಹದಿಮೂರು ವರ್ಷದೊಳಗೆ ನಾಲ್ಕು ಬುದ್ಧಿ ಹಲ್ಲುಗಳನ್ನು ಬಿಟ್ಟುಉಳಿದ ಎಲ್ಲಾ ಹಲ್ಲುಗಳು ಮೂಡಿರುತ್ತವೆ. (ಒಟ್ಟು 28)ಹಲ್ಲುಗಳು. ವಕ್ರವಾಗಿದ್ದರೆ ಸರಿಪಡಿಸಿಕೊಳ್ಳಲು ಇದು ಸರಿಯಾದ ಸಮಯ.
ಹದಿನೇಳರಿಂದ 21 ವರ್ಷಬುದ್ಧಿ ಹಲ್ಲುಗಳು ಮೂಡುವ ಸಮಯ. ಇರುವ ದವಡೆ ಹಲ್ಲುಗಳ ಹಿಂಭಾಗದಲ್ಲಿ ಮೇಲೂ-ಕೆಳಗೂ, ಬಲಕ್ಕೂ-ಎಡಕ್ಕೂ ಒಂದೊಂದು ಹಲ್ಲುಗಳು ಮೂಡುತ್ತವೆ. ಕೆಲವರಿಗೆ ಇವು ಮೂಡುವುದಿಲ್ಲ. ಕೆಲವರಲ್ಲಿ ಇವು ಸರಿಯಾಗಿದ್ದು ನಿರುಪ್ರದವಿಗಳಾಗಿರುತ್ತವೆ. ಆಹಾರ ಜಗಿಯುವಿಕೆಯಲ್ಲಿ ಇತರ ದವಡೆ ಹಲ್ಲುಗಳೊಂದಿಗೆ ಸಹಕರಿಸುತ್ತವೆ.
ಬಹುತೇಕರಲ್ಲಿ ಇವು ದವಡೆಯಲ್ಲಿ ಸ್ಥಳದ ಅಭಾವದಿಂದಾಗಿ ಸಮಸ್ಯೆಯಾಗಿ ಕಾಡುತ್ತವೆ. ಇವು ಹುಳುಕಾದರಂತೂ ಇನ್ನೂ ಕಷ್ಟ. ಅಲ್ಲಿ ಆಹಾರ ನಿಂತು ಆಗಾಗ ಉರಿಯೂತ ಕಾಣಿಸಿಕೊಳ್ಳುತ್ತದೆ. ಕೀವು ಆಗಿ ಜ್ವರ, ಕಿವಿನೋವು, ಬಾಯಿ ತೆರೆಯಲು ತೊಂದರೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಹಲ್ಲುಗಳನ್ನು ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಕೀಳಿಸುವುದು ಉತ್ತಮ.
ಸಾಮಾನ್ಯವಾಗಿ ಹಲ್ಲುನೋವು ಬಂದರೆ ನೀರಿನ ಆವಿ ಶಾಖ ಕೊಡುವುದು, ಹಲ್ಲಿನ ತೂತಿನೊಳಗೆ ಉಪ್ಪು,Z ಹತ್ತಿ, ಲವಂಗ ಹಾಕಿ ಮುಚ್ಚುವುದು ಇತ್ಯಾದಿ ಮನೆಮದ್ದುಗಳನ್ನು ಕೆಲವರು ಮಾಡುತ್ತಾರೆ. ಇದರಿಂದ ಕೆಲವೊಮ್ಮೆ ಸಮಸ್ಯೆಗಳು ಉಲ್ಬಣಿಸಬಹುದು. ಇಡೀ ಮುಖವೇ ಬೀಗುವುದು, ಕೆಂಪಗಾಗುವುದು.
ಹಲ್ಲು ನೋವು, ಹುಳುಕು ಹಲ್ಲು ಇದ್ದರೆ ನೇರವಾಗಿ ವೈದ್ಯರನ್ನು ಸಂಪರ್ಕಿಸಿ, ಮುಂದೂಡಬೇಡಿ. ಸಣ್ಣ ತೂತು, ನೋವಿಲ್ಲ ಎಂದು ನಿರ್ಲಕ್ಷಿಸಿದರೆ ಮುಂದೆ ನಾವೇ ಹೆಚ್ಚಿನ ಚಿಕಿತ್ಸೆಗೆ ಒಳಪಡಬೇಕಾಗಬಹುದು. ಅಥವಾ ಹಲ್ಲನ್ನೇ ಕಳೆದುಕೊಳ್ಳಬಹುದು.
ಮಧ್ಯವಯಸ್ಕರಲ್ಲಿ ಕಂಡು ಬರುವ ಸಮಸ್ಯೆಗಳು
ಮಧ್ಯವಯಸ್ಕರಲ್ಲಿಯೂ ಹುಳುಕು ಹಲ್ಲುಗಳು, ಬಾಯಿಯ ದುರ್ಗಂಧ, ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು. ಒಸಡಿನ ಸಮಸ್ಯೆಯಿಂದಾಗಿ ಹಲ್ಲುಗಳು ಅಲುಗಾಡುವ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ. ಪ್ರಥಮ ಹಂತದ ಅಂದರೆ ಸಣ್ಣ ಅಲುಗಾಟ ಆಗಿದ್ದರೆ ಒಸಡಿನ ಶಸ್ತ್ರಚಿಕಿತ್ಸೆಯಿಂದ ಅವುಗಳನ್ನು ಉಳಿಸಿಕೊಳ್ಳಬಹುದು.
ವೃದ್ಧರಲ್ಲಿಯೂ ಹುಳುಕುಹಲ್ಲುಗಳು ಒಸಡಿನ ತೊಂದರೆ, ಉರಿಯೂತ, ಹಲ್ಲೇ ಇಲ್ಲದಿರುವುದು, ಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆಗಳು. ಶಾರೀರಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ ದಂತ ಚಿಕಿತ್ಸೆಯನ್ನು ಕೊಡಲಾಗುವುದು.
ದೈಹಿಕ ಆರೋಗ್ಯವೂ ಕಾರಣ
ನಮ್ಮ ಶಾರೀರಿಕ ಆರೋಗ್ಯಕ್ಕೂ ನೇರ ಸಂಬಂಧವಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ವಿಟಮಿನ್ ಕೊರತೆ ಇತ್ಯಾದಿಗಳು ಹಲ್ಲಿನ ಹಾಗೂ ಒಸಡಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಇಂತಹ ತೊಂದರೆಗಳನ್ನು ದಂತವೈದ್ಯರಲ್ಲಿ ಮುಕ್ತವಾಗಿ ತಿಳಿಸಿ ಮುಂದುವರಿಯಬೇಕು.
ದಂತ ವೈದ್ಯಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಇನ್ನೂ ಹೊಸ ಹೊಸ ವಿಧಾನಗಳು ಸೌಲಭ್ಯಗಳು ಲಭ್ಯ. ಸಾಧ್ಯವಾದಷ್ಟರ ಮಟ್ಟಿಗೆ ಪ್ರಕೃತಿದತ್ತ ಹಲ್ಲುಗಳನ್ನು ಉಳಿಸಿಕೊಳ್ಳಲು ಅವಕಾಶವಿದೆ. ಉದುರಿ ಹೋದ ಹಲ್ಲುಗಳನ್ನು ಕೃತಕ ಹಲ್ಲುಗಳಿಂದ ಭರಿಸುವ ನವನವೀನ ವ್ಯವಸ್ಥೆಗಳಿವೆ. ಪೌಷ್ಟಿಕ ಆಹಾರ, ಬಾಯಿಯ ಸ್ವಚ್ಛತೆ, ನಿಯಮಿತವಾದ ದಂತವೈದ್ಯರ ಭೇಟಿಯಿಂದ ನಮ್ಮ ಸ್ವಾಭಾವಿಕ ಹಲ್ಲುಗಳನ್ನು ಜೀವನಪರ್ಯಂತ ಉಳಿಸಿಕೊಳ್ಳುವುದಕ್ಕೆ ಸಾಧ್ಯ.
ಉಪಯುಕ್ತ ಮಾಹಿತಿ