ದೇವಿ ಮೂಗುತಿಯ ಹೊಳಪು ಹೋಲಿಕೆ ಮಾಡಲಾಗದು

ಲಲಿತಾ ಸಹಸ್ರನಾಮದಲ್ಲಿ ದೇವಿಯ ಮೂಗುತಿಯನ್ನು ಅದೆಷ್ಟು ಸುಂದರವಾಗಿ ಬಣ್ಣಿಸಿದ್ದಾರೆ . ಆ ಶ್ಲೋಕವನ್ನು ತುಂಬಾ ಸರಳವಾಗಿ, ಅಷ್ಟೇ ಸೊಗಸಾಗಿ ವ್ಯಾಖ್ಯಾನ ಮಾಡಿದ್ದಾರೆ ಖ್ಯಾತ ಬರಹಗಾರ ಶ್ರೀ ಕೃಷ್ಣಪ್ರಕಾಶ್ ಉಳಿತ್ತಾಯ ಅವರು.

ನವಚಂಪಕಪುಷ್ಪಾಭನಾಸಾದಂಡವಿರಾಜಿತಾ /ತಾರಾಕಾಂತಿತಿರಸ್ಕಾರಿನಾಸಾಭರಣಭಾಸುರಾ||

ತಾಯಿಯ ನಾಸಿಕ (ಮೂಗು)ವನ್ನು ಮತ್ತು ನಾಸಿಕಕ್ಕೆ ಇರಿಸಿದ ಮೂಗುತಿಯನ್ನು ವರ್ಣಿಸುತ್ತಾ ಶ್ರೀದೇವಿಯನ್ನು ಸ್ಮರಿಸಿದ್ದಾರೆ. ಹೊಸದಾಗಿ ಅರಳಿರುವ ಸಂಪಗೆಯ ಹೂವಿನಂತೆ ನೀಳವಾಗಿರುವ ನಾಸಿಕವನ್ನು ಹೊಂದಿದವಳನ್ನಾಗಿ ಇಲ್ಲಿ ಲಲಿತೆಯನ್ನು ಕಂಡಿದ್ದಾರೆ.

ಆರಾಧಕರಿಗೆ ಜಗತ್ತನ್ನು ಕಂಡಾಗ ಎಲ್ಲವನ್ನೂ ದೇವಿಗೆ ಅನ್ವಯಿಸಿ ನೋಡುವ ಮನೋಭಾವ-ಬುದ್ಧಿ ಬರುತ್ತದೆ. ಸಂಪಗೆಯನ್ನು ಕಂಡಾಗ ದೇವಿಯ ನಾಸಿಕವನ್ನು ನೆನೆಯುತ್ತಾರೆ. ಚಂದ್ರನನ್ನು ಕಂಡಾಗ ದೇವಿಯ ಲಲಾಟ; ಚಂದ್ರಕಲೆಯೇ ಕಸ್ತೂರಿ ತಿಲಕವಾಗುತ್ತದೆ; ಸರಸ್ಸಿನ ಮೀನುಗಳು ತಾಯಿಯ ಕಣ್ಣುಗಳನ್ನು ಕಂಡಂತಾಗುತ್ತದೆ ಹೀಗೆ ದೇವಿ ಅದೆಷ್ಟು ಬಗೆಯಲ್ಲಿ ತನ್ನಿರವನ್ನು ಭಜಕರಿಗೆ ತೋರಿಸುತ್ತಾಳೆ?!

ಇಲ್ಲಿ ಭಕ್ತಿ ಉದಿಸಿದೆ. ಇದರಿಂದ ಹೊಸ ದೃಷ್ಟಿ ಭಕ್ತನಿಗೆ ಲಭಿಸುತ್ತದೆ. ಇಡೀ ರಾತ್ರಿಯ ಆಕಾಶವನ್ನು ಕಂಡಾಗ ಅಲ್ಲಿರುವ ಚಂದ್ರನನ್ನೇ ನೆಟ್ಟದೃಷ್ಟಿಯಿಂದ ನೋಡುವಾಗ ಅದು ತಾಯಿ ಕಾಳಿಯ ಹಣೆಯ ಬೊಟ್ಟಿನಂತೆ ಭಾಸಸವಾಗದಿರದು.

ಅಂತೆಯೇ, “ತಾರಾಕಾಂತಿತಿರಸ್ಕಾರಿನಾಸಾಭರಣಭಾಸುರಾ” ಗಗನದ ತಾರೆಗಳ ಕಾಂತಿಯನ್ನು ಕೂಡ ಧಿಕ್ಕರಿಸುವಂತೆ ತಾಯಿಯ ಮೂಗಿನ ಬೊಟ್ಟು ರಾರಾಜಿಸುತ್ತಿದೆ-ಬೆಳಗುತ್ತಿದೆ.

ಬಗೆಬಗೆಯಿಂದ ನೋಡುವುದು ಪ್ರಾಯಶಃ ಪುಟಪಾಕಗೊಂಡ ಭಕ್ತನಿಗೆ ಮಾತ್ರ ಸಾಧ್ಯ. ಹೀಗೆಲ್ಲ ತಾಯಿಯನ್ನು ಸ್ಮರಿಸುವುದರ ಫಲ ಏನು? ತಾಯಿಯ ಸಾಮೀಪ್ಯವನ್ನು ಅನುಭವಿಸುತ್ತೇವೆ; ತಾಯಿಯ ಭಜನೆಯಿಂದ ಮನಸ್ಸು ಮಂಗಲಮಯವಾಗುತ್ತದೆ; ಚಿತ್ತಕ್ಕೆ ಚಾಂಚಲ್ಯ ತಪ್ಪುತ್ತದೆ;  ನಮ್ಮ ಒಳಿತಿಗೆ ಅವಳೇ ಹೊಣೆಯಾಗುತ್ತಾಳೆ. ನಮಗೆ ಬೇರೇನು ಬೇಕು?!

Related Articles

2 COMMENTS

ಪ್ರತಿಕ್ರಿಯೆ ನೀಡಿ

Latest Articles