ದೇವರಿಗೆ ನೈವೇದ್ಯ ಮಾಡುವಾಗ ತುಳಸಿ ದಳ ಬಳಸುವುದು ಏಕೆ?

ಪ್ರತಿಯೊಂದು ಸಂಪ್ರದಾಯ ಆಚರಣೆಯ ಹಿಂದೆ ಒಂದು ಒಳ್ಳೆಯ ಉದ್ದೇಶ ಇದ್ದೇ ಇದೆ. ಅದಕ್ಕೊಂದು ಉದಾಹರಣೆ ತುಳಸಿ ಗಿಡವನ್ನು ಪೂಜ್ಯನೀಯ ಭಾವದಿಂದ ಕಾಣುವ ಪದ್ಧತಿ. ತುಳಸಿ ಗಿಡವನ್ನು ಧಾರ್ಮಿಕ ಆಚರಣೆಗಳಲ್ಲಿ ಬಳಕೆ ಮಾಡುವುದರ ಜತೆಗೆ ಅದರಿಂದ ಆರೋಗ್ಯಲಾಭಗಳನ್ನು ಪಡೆದುಕೊಳ್ಳಬಹುದು.

ಶುದ್ಧತೆಯ ಸಂಕೇತವಾಗಿ ತುಳಸಿಯನ್ನು ಬಳಸುವ ಕ್ರಮ ಇದೆ, ತುಳಸಿ ಬೆಳೆವ ಜಾಗದಲ್ಲಿ ವಾತಾವರಣ ಪರಿಶುದ್ಧವಾಗಿರುತ್ತದೆ. ವಿಶೇಷ ಅಂದರೆ ತುಳಸಿಯನ್ನು ಬಳಸದೇ ಪೂಜೆ ಸಂಪನ್ನಗೊಳ್ಳುವುದಿಲ್ಲ.

ಯಾವುದೇ ಪೂಜೆ, ಹಬ್ಬದ ಸಂದರ್ಭಗಳಲ್ಲಿ ದೇವರಿಗೆ ನೈವೇದ್ಯ ಸಮರ್ಪಣೆಯಾಗುತ್ತದೆ. ನೈವೇದ್ಯ ಅರ್ಪಿಸುವ ವೇಳೆ ತುಳಸಿ ದಳ ಮಹತ್ವ ಪಡೆದುಕೊಂಡಿದೆ. ಯಾಕೆ ತುಳಸಿ ದಳವನ್ನೇ ಬಳಸುತ್ತಾರೆ ಎಂಬುದಕ್ಕೆ ಇಲ್ಲಿದೆ ಕಾರಣ.

ತುಳಸಿಯ ವೈಶಿಷ್ಟ್ಯಗಳು

ತುಳಸಿಯ ಗಿಡವು ವಾಯುಮಂಡಲದಲ್ಲಿನ ಸಾತ್ವಿಕತೆಯನ್ನು ಸೆಳೆದುಕೊಳ್ಳುತ್ತದೆ ಮತ್ತು ಅದನ್ನು ಜೀವದ ಕಡೆಗೆ ಪ್ರಕ್ಷೇಪಿಸುತ್ತದೆ. ತುಳಸಿಯಲ್ಲಿ ಬ್ರಹ್ಮಾಂಡದಲ್ಲಿನ ಕೃಷ್ಣತತ್ವವನ್ನು ಸೆಳೆದುಕೊಳ್ಳುವ ಕ್ಷಮತೆಯೂ ಅಧಿಕವಾಗಿರುತ್ತದೆ.

ತುಳಸಿಯ ಎಲೆಯಿಂದ ನೈವೇದ್ಯವನ್ನು ಅರ್ಪಿಸುವುದರಿಂದ ಸಾತ್ವಿಕ ಅನ್ನದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಲಹರಿಗಳನ್ನು ತುಳಸಿಯ ಎಲೆಯು ಗ್ರಹಿಸಿಕೊಳ್ಳುತ್ತದೆ. ಹೀಗೆ ಸೂಕ್ಷ್ಮಲಹರಿಗಳಿಂದ ತುಂಬಿಕೊಂಡಿರುವ ಎಲೆಯನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಯ ತತ್ವವು ಆ ಲಹರಿಗಳನ್ನು ಕೂಡಲೇ ಸೆಳೆದುಕೊಳ್ಳುತ್ತದೆ. ಈ ರೀತಿ ನಾವು ಅರ್ಪಿಸಿದ ಅನ್ನವು ತುಳಸಿ ಎಲೆಯ ಮಾಧ್ಯಮದಿಂದ ದೇವತೆಗಳಿಗೆ ಬೇಗನೇ ತಲುಪಿ ದೇವತೆಯು ಸಂತುಷ್ಟಳಾಗುತ್ತಾಳೆ.

ತುಳಸಿಯ ಎಲೆಯನ್ನು ನೈವೇದ್ಯದ ಮೇಲಿಡುವುದರಿಂದ ಅನ್ನದ ಮೇಲೆ ಬಂದಿರುವ ರಜ-ತಮ ಕಣಗಳ ಆವರಣವು ಕಡಿಮೆಯಾಗುತ್ತದೆ. ತುಳಸಿ ಎಲೆಯಿಂದ ಪ್ರಕ್ಷೇಪಿತವಾಗುವ ಸಾತ್ವಿಕ ಲಹರಿಗಳಿಂದ ನೈವೇದ್ಯದ ಸುತ್ತಲಿನ ವಾಯುಮಂಡಲವು ಶುದ್ಧವಾಗಿ ನೈವೇದ್ಯದ ಮೇಲೆ ಕೆಟ್ಟ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ.

ಭಾವಪೂರ್ಣವಾಗಿ ನೈವೇದ್ಯದ ಮೇಲೆ ತುಳಸಿ ಎಲೆಯನ್ನಿಡುವುದರಿಂದ ದೇವತೆಯಿಂದ ಬರುವ ಚೈತನ್ಯವನ್ನು ಗ್ರಹಿಸಿಕೊಂಡು ನೈವೇದ್ಯದಲ್ಲಿ ಹರಡುತ್ತದೆ. ಇಂತಹ ನೈವೇದ್ಯವನ್ನು ಸೇವಿಸುವುದರಿಂದ ಜೀವಕ್ಕೆ ಚೈತನ್ಯ ಬರುತ್ತದೆ.

ಸಂಗ್ರಹ: ಹೆಚ್‍ಎಸ್. ರಂಗರಾಜನ್
ಪ್ರಧಾನ ಅರ್ಚಕರು, ಚನ್ನರಾಯ ಸ್ವಾಮಿ ದೇವಸ್ಥಾನ, ಹುಸ್ಕೂರು, ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles