ಮಂಗಳೂರು: ಇಲ್ಲಿನ ಹಳೇಕೋಟೆ ಮಾರಿಯಮ್ಮ ದೇವಸ್ಥಾನದ ಆರಾಧ್ಯದೇವತೆಯ ಪುಣ್ಯಚರಿತ್ರೆ “ಹಳೇಕೋಟೆ ಬೋಳಾರದ ಮಾರಿಯಮ್ಮ ಕ್ಷೇತ್ರ ಪುರಾಣ’ ಗ್ರಂಥ ರೂಪದಲ್ಲಿ ಬಿಡುಗಡೆಯಾಗಲಿದೆ.
ಅ.23ರಂದು ಸಂಜೆ 5 ಕ್ಕೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಸಂಸದ ಶ್ರೀ ನಳಿನ್ ಕುಮಾರ ಕಟೀಲು, ಶಾಸಕ ಡಿ.ವೇದವ್ಯಾಸ ಕಾಮತ್, ಶಾಸಕ ಉಮಾನಾಥ ಕೋಟ್ಯಾನ್, ಮೇಯರ್ ದಿವಾಕರ ಪಾಂಡೇಶ್ವರ, ಭಾ.ಜ.ಪ.ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದರೆ, ಪ್ರದೀಪ ಕುಮಾರ ಕಲ್ಕೂರ, ಉದ್ಯಮಿ ಮೋಹನ ಬೇಂಗ್ರೆ ಮೊದಲಾದವರು ಭಾಗವಹಿಸಲಿದ್ದಾರೆ.
ಈ ಸಂಶೋಧನಾ ಗ್ರಂಥ 440 ಪುಟಗಳನ್ನು ಹೊಂದಿದ್ದು ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷ, ಸಾಹಿತಿ, ನಾಟಕಕಾರ ಕದ್ರಿ ನವನೀತ ಶೆಟ್ಟಿ ಅವರು ರಚಿಸಿದ್ದಾರೆ.
ಮಾರಿದೇವತೆಯ ಪುರಾಣ ಕತೆಗಳು, ಬೋಳಾರದ ಕೋಟೆಯ ಇತಿಹಾಸ, ಬೋಳಾರ ಪರಿಸರದ ಐತಿಹ್ಯ, ಬೋಳಾರ ಮಾರಿಗುಡಿಯ ಚರಿತ್ರೆ, ಕರಾವಳಿಯ ಮಾರಿ ಆರಾಧನಾ ಸ್ವರೂಪ , ಬೋಳಾರ ಮಾರಿಗುಡಿಯ ಪರಿವಾರ ಶಕ್ತಿಗಳ ಪರಿಚಯ, ಮೊದಲಾದ ಮಾಹಿತಿಗಳನ್ನೊಳಗೊಂಡ ಸಂಗ್ರಹ ಯೋಗ್ಯ ಚರಿತ್ರೆಯ ಪುಸ್ತಕ ಇದಾಗಿದೆ. ಜೀರ್ಣೊದ್ದಾರ, ಬ್ರಹ್ಮಕಲಶದ ದಾಖಲೆಗಳಿರುವ ಈ ಗ್ರಂಥವು ಬೋಳಾರ ಮಾರಿಯಮ್ಮನ ಪ್ರತಿಯೊಬ್ಬ ಭಕ್ತರ ಮನೆಯಲ್ಲೂ ಇರಬೇಕು ಎಂಬ ಅಪೇಕ್ಷೆಯೊಂದಿಗೆ ದೇವಸ್ಥಾನದ ವತಿಯಿಂದ ಪುಸ್ತಕ ಪ್ರಕಟಿಸಲ್ಪಡುತ್ತಿದೆ.
ಸಾಹಿತಿ ಪ್ರೊ. ಬಿ.ಎ.ವಿವೇಕ ರೈ ಅವರು ಮುನ್ನುಡಿ ಬರೆದಿದ್ದು, ಅಪೂರ್ವ ಚಿತ್ರಗಳನ್ನೊಳಗೊಂಡ ಈ ಪುಸ್ತಕವನ್ನು ಕಲ್ಲೂರು ನಾಗೇಶ ವಿನ್ಯಾಸಗೊಳಿಸಿ ಮುದ್ರಿಸಿದ್ದಾರೆ.
ಭಕ್ತರ ಮನೆಗೊಂದು ಗ್ರಂಥ
ಮಾರಿಗುಡಿ ಸೇವಾ ಪರಿವಾರದ ಕರಸೇವಕರು, ಭಕ್ತರು, ದಾನಿಗಳು, ಸಾಹಿತ್ಯ ಪ್ರಿಯರು ಈ ಗ್ರಂಥವನ್ನು ಕೊಂಡು ಉಡುಗೊರೆ/ಸ್ಮರಣಿಕೆಯಾಗಿ ನೀಡಲು ಬಳಸಬಹುದು. 5 ಕ್ಕಿಂತ ಹೆಚ್ಚು ಪ್ರತಿ ಕೊಳ್ಳುವವರಿಗೆ ಗಣ್ಯರಿಂದ ವೇದಿಕೆಯಲ್ಲಿ ಗ್ರಂಥ ವಿತರಿಸಲಾಗುವುದು ಎಂದು ಕಾರ್ಯಕ್ರಮ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.