ಆ ಮನಸ್ಥಿತಿ ಬದಲಾದರೆ ಬದುಕು ಎಷ್ಟು ಚಂದ …

ಬುದ್ಧಿವಂತ ಎನಿಸಿಕೊಂಡಿರುವ ಮನುಷ್ಯ ಮಾತ್ರ ಎಲ್ಲಾ ಬದಲಾವಣೆಗಳನ್ನು ಕಾಲಕಾಲಕ್ಕೆ ಒಪ್ಪಿಕೊಂಡಿದ್ದಾನೆ. ಆದರೆ ತನ್ನ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಲು ಏಕೋ ಹಿಂಜರಿಯುತ್ತಾನೆ. ಹಾಗಾಗಿಯೇ ನಮ್ಮ ನಡುವೆ ಕೆಲವೊಂದು ಕಡೆ ದುಃಖ ದುಮ್ಮಾನಗಳೇ ತುಂಬಿಕೊಂಡಿವೆ.

*ಪ್ರಮೀಳಾ

ಭಗವಂತ ಅದೆಷ್ಟು ಅದ್ಭುತ ಸೃಷ್ಟಿಕರ್ತನೆಂದರೆ ಸಕಲ ಜೀವಿಗಳಿಗಿಂತ ವಿಭಿನ್ನವಾಗಿ ಮನುಷ್ಯನೆಂಬ ಬುದ್ಧಿವಂತನನ್ನು ಸೃಷ್ಟಿಸಿದ. ಜಗತ್ತಿನ ಒಳಿತು, ಕೆಡಕು ಅರಿತುಕೊಂಡು ಕಾಲಕ್ಕನುಗುಣವಾಗಿ, ಸಮಯದ ಸಂದರ್ಭ ಅರಿತು ಮುನ್ನೆಡೆಯಲು ಜ್ಞಾನ ನೀಡಿದ. ಆದರ್ಶ ವ್ಯಕ್ತಿಯಾಗಿ ಬಾಳಲು ಅವಕಾಶಗಳು ಇದ್ದರೂ ಸಹ ಮನುಷ್ಯ ದುರಾಸೆಗಳ ಜಾಡುಹಿಡಿದು ಪಯಣ ಮಾಡುತ್ತಿರುವುದು ಬೇಸರದ ಸಂಗತಿ.

ತಾನೊಬ್ಬನೇ ಶ್ರೇಷ್ಠ, ಉಳಿದವರು ಕನಿಷ್ಠ ಎಂಬ ಭಾವನೆ ಬೆಳೆಸಿಕೊಳ್ಳುತ್ತ ಉದಾರ ಮನೋಭಾವನೆ ಮರೆತು ಹೋಗುತ್ತಿರುವುದು ನಿಜಕ್ಕೂ ವಿಪರ್ಯಾಸ. ಮನುಷ್ಯ ಎಷ್ಟು ವಿಚಿತ್ರವೆಂದರೆ, ಹಂಚಿ ತಿನ್ನುವುದಕ್ಕೆ ವ್ಯಥೆ ಪಡುತ್ತಾನೆ. ಇತರರ ಬೆಳವಣಿಗೆ ಕಂಡು ಅಸೂಯೆ ಪಡುತ್ತಾನೆ. ತನ್ನ ವಸ್ತುಗಳನ್ನು ಇತರರು ತೆಗೆದುಕೊಂಡರೆ ಕೋಪಿಸಿಕೊಳ್ಳುತ್ತಾನೆ. ಹಣದ ನಶೆಯಲ್ಲಿ ಅಹಂಕಾರ ಮೈಗೂಡಿಸಿಕೊಳ್ಳುತ್ತಾನೆ.

ಜೀವನದ ಏಳು ಬೀಳುಗಳ ಪಯಣದಲ್ಲಿ ತನ್ನನ್ನು ತಾನು ಮರೆತು ಇತರರ ಮಾತಿಗೆ ಬೆಲೆ ಕೊಡುತ್ತಾನೆ. ತನ್ನ ಮನಸ್ಸಿನ ಭಾವನೆಗಳನ್ನು ಅರ್ಥೈಸಿಕೊಳ್ಳದೆ, ತನ್ನನ್ನು ತಾನು ಅರಿತುಕೊಳ್ಳದೆ, ನೆಮ್ಮದಿಯ ಬದುಕು ಸಾಗಿಸದೆ, ಚಿಂತೆಯ ಚಿತೆಯಲ್ಲಿ ಮನಸ್ಸನ್ನು ಒಗ್ಗೂಡಿಸಿಕೊಳ್ಳುವಷ್ಟು ಬೇಗ ನೆಮ್ಮದಿ, ಶಾಂತಿಯ ಮನಸ್ಥಿತಿಗೆ ಹೊಂದಿಕೊಳ್ಳುವುದಿಲ್ಲ. ಏಕೆಂದರೆ, ಅಲ್ಲಿ ನಿಷ್ಕಲ್ಮಶ ಪ್ರೀತಿ, ಕರುಣೆ, ಮಮತೆ, ಮಾನವೀಯತೆ ಮರೆಯಾಗಿ ಕೋಪ, ಅಹಂಕಾರ, ಮತ್ಸರ ಮನೆ ಮಾಡಿದೆ.

ಸಮಯ ಬದಲಾದಂತೆ ಕಾಲ ಬದಲಾಗುತ್ತಾ ಹೋಗುತ್ತದೆ. ಇವೆರಡಕ್ಕೂ ಅನುಗುಣವಾಗಿ ಮನುಷ್ಯ ಬದಲಾಗೋದು ಜಗತ್ತಿನ ನಿಯಮ. ವಿಪರ್ಯಾಸವೆಂದರೆ, ಸಮಯ ಮತ್ತು ಕಾಲ ಬದಲಾದಂತೆ ಹೊಸ ಆವಿಷ್ಕಾರಗಳಾಗುತ್ತವೆ. ಪ್ರಕೃತಿ ಮತ್ತಷ್ಟು ಆಕರ್ಷಕ ಮತ್ತು ಚೈತನ್ಯದಾಯಕವಾಗುತ್ತಾ ಹೋಗುತ್ತದೆ. ಆದರೆ ಮನುಷ್ಯ ಮಾತ್ರ ತನ್ನ ಜೀವನ ಶೈಲಿಯನ್ನು ಬದಲಾಯಿಸಲು ಸಿದ್ದನಾಗಿರುವುದಿಲ್ಲ.

ಕೋಪ, ಅಸೂಯೆ, ಅಹಂಕಾರವನ್ನು ಇನ್ನಷ್ಟು ಹೆಚ್ಚಾಗಿ ಮೈಗೂಡಿಸಿಕೊಳ್ಳುತ್ತಾ ಹೋಗುತ್ತಾನೆ. ಒಂದು ಕ್ಷಣ ಹಾಗೇ ಸುಮ್ಮನೆ ಯೋಚಿಸಿ, ಸಮಯ ಮತ್ತು ಕಾಲಕ್ಕೆ ಅನುಗುಣವಾಗಿ ಮಾನವ ಬದಲಾಗಿ ಜೀವನ ನಡೆಸುತ್ತಿದ್ದರೆ ಅದೆಷ್ಟು ಸುಂದರವಾಗಿರುತ್ತಿತ್ತು ನಮ್ಮ ಸಮಾಜ. ಬದಲಾವಣೆಯ ಸಿಹಿಯಾದ ಕ್ಷಣವನ್ನು ಸ್ವೀಕಾರ ಮಾಡಿ, ಕಹಿ ಕ್ಷಣವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಸಾಧನೆಯ ಶಿಖರ ತಲುಪುವಂತೆ ಪ್ರಯತ್ನ ಮಾಡಿದ್ದರೆ ಬಹುಷಃ ಮಾದರಿಯಾಗುತ್ತಿದ್ದ. ಉತ್ತಮ ಸಮಾಜದ ನಿರ್ವಾಹಕನಾಗಿರುತ್ತಿದ್ದ.

(ಪ್ರಮೀಳಾ

ಅಂತಿಮ ಪದವಿ,

ಪತ್ರಿಕೋದ್ಯಮ ವಿಭಾಗ,

ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು.)

Related Articles

2 COMMENTS

  1. Chinthe hecchu madabedi emba nimma mathu sari. Lekhana chennagide.. Ondu lekhanadalli once vishayada bagge Poorna vivarane irali. Thumba vishaya Beda. Paragala naduve link idre chanda…

ಪ್ರತಿಕ್ರಿಯೆ ನೀಡಿ

Latest Articles