* ಕೃಷ್ಣಪ್ರಕಾಶ ಉಳಿತ್ತಾಯ
ಅನಾಕಲಿತಸಾದೃಶ್ಯಚುಬುಕಶ್ರೀವಿರಾಜಿತಾ| ಕಾಮೇಶಬದ್ಧಮಾಂಗಲ್ಯಸೂತ್ರಶೋಭಿತಕಂಧರಾ||
ಅಸದೃಶವಾದ ಕಾಂತಿಯಿಂದ ಬೆಳಗುತ್ತಿರುವ ತಾಯಿಯ ಗಲ್ಲವನ್ನು ಸಹಸ್ರನಾಮದ ಋಷಿ ಸ್ಮರಿಸುತ್ತಾರೆ. ತಾಯಿಯ ಗಲ್ಲ (ಚುಬುಕ) ಬರೀಯ ಚುಬುಕವಲ್ಲ ಅದು “ಚುಬುಕಶ್ರೀ”. ತಾಯಿ ಚುಬುಕವನ್ನು ಕಂಡು ತನ್ಮಯಗೊಂಡವರಿಗೆ ಸೌಭಾಗ್ಯವನ್ನು ಕೊಡುವಂತಹಾ “ಚುಬುಕ”ವದು.
ಇಲ್ಲೊಂದು ವಿಸ್ಮಯವಿದೆ. ಸ್ತೋತ್ರ ತಾಯಿಯ ಕುರಿತು- ಮಾಡುವುದು ಅವಳ ಮಕ್ಕಳಾದ ನಾವು. ಸ್ತೋತ್ರ ಮಾಡುತ್ತಾ ಮಾಡುತ್ತಾ ತನ್ಮಯರಾಗುತ್ತೇವೆ-ಭಾಗ್ಯವಿದ್ದರೆ. ಇದೇ ಆಕೆಯ ಅನುಗ್ರಹ. ಈ ತನ್ಮಯೀ ಭಾವವೇ ಆಕೆ ಕೊಡುವ ಪ್ರಸಾದದ ಸ್ವರೂಪ. ನಾವು ಮೈಮರೆತು ಹಾಡಿದಾಗ ಆಕೆಯೇ ನಮ್ಮ ಮೆಯ್ ಆಗುತ್ತಾಳೆ. ಮತ್ತೂ ಮುಂದುವರಿದರೆ ಆಕೆ ಸಹೃದಯಳಾಗುತ್ತಾಳೆ.
ಆಕೆ ಕೇಳುತ್ತಾಳೆ;ನಾವು ಹಾಡುತ್ತೇವೆ. ತಾಯಿಯ ‘ಚುಬುಕ’ವನ್ನು ‘ಚುಬುಕಶ್ರೀ’ಯನ್ನಾಗಿ ಕಾಣಲು ಸೌಭಾಗ್ಯಬೇಕು. ತಾಯಿಯ ಚುಬುಕಶ್ರೀಯ ಹೊಂಬೆಳಕಲ್ಲಿ ಮಿಂದು ಮಡಿಯಾಗೋಣ.
ಕರಾಗ್ರೇಣ ಸ್ಪೃಷ್ಟಂ ತುಹಿನಗಿರಿಣಾ ವತ್ಸಲತಯಾ ಗಿರೀಶೇನೊದಸ್ತಂ ಮುಹುರಧರಪಾನಾಕುಲತಯಾ| ಕರಗ್ರಾಹ್ಯಂ ಶಂಭೋರ್ಮುಖಮುಕುರವೃಂತಂ ಗಿರಿಸುತೇ ಕಥಂಕಾರಂ ಭ್ರೂಮಸ್ತವ ಚುಬುಕಮೌಪಮ್ಯರಹಿತಂ||
ಶಂಭುವಿನ ಕೈಯಲ್ಲಿ ಹಿಡಿಯಲು ಯೋಗ್ಯವಾದ ನಿನ್ನ ಮುಖವೆಂಬ ಕನ್ನಡಿಗೆ ಸುಂದರವಾದ ಹಿಡಿಯಂತಿರುವ ಗಲ್ಲವನ್ನು ಯಾವ ರೀತಿಯಲ್ಲಿ ವರ್ಣಿಸಲಿ? ಎಂದು ಪ್ರಾರ್ಥಿಸುವ ಆಚಾರ್ಯ ಶಂಕರರ ಸೌಂದರ್ಯ ಲಹರಿ ಸ್ತೋತ್ರದ ಹಾಡಿದು. ಶಂಭು ಶಿವೆಯ ಮುಖವೆಂಬ ಕನ್ನಡಿಯನ್ನು ಹಿಡಿದಿದ್ದಾನೆ. ಅಂದರೆ ಕನ್ನಡಿಯಲ್ಲಿ ತನ್ನನ್ನು ತಾನು ನೋಡುತ್ತಿದ್ದಾನೆ. ತನ್ನ ಇರವನ್ನು ತಾಯಿಯಲ್ಲಿ ಕಾಣುತ್ತಿದ್ದಾನೆ. ಇದು ಅನುಪಮ ದಾಂಪತ್ಯ.
ಶಂಭು ತನ್ನ ವ್ಯಕ್ತಿತ್ವವನ್ನು ಕಾಣುವುದು ಶಾಂಭವಿಯಲ್ಲಿ ಇದಲ್ಲವೇ ಇಲ್ಲಿರುವ ಧ್ವನಿ!? “ಕಾಮೇಶಬದ್ಧಮಾಂಗಲ್ಯಸೂತ್ರಶೋಭಿತಕಂಧರಾ” ತನ್ನರಸನಾದ ಕಾಮೇಶ್ವರನಿಂದ ಮಂಗಲಸೂತ್ರವನ್ನು ಕಟ್ಟಿಸಿಕೊಂಡು ಶೋಭಿಸುತ್ತಿರುವ ಕಂಠವುಳ್ಳವಳು.
ಶಂಭು ಕಟ್ಟಿದ ಮಂಗಲಸೂತ್ರದಿಂದ ತಾಯಿಯ ಕಂಠ ಶೋಭಿಸುತ್ತಿದೆ. ತಾಯಿಯ ಮಂಗಲಸೂತ್ರದ ಚಿಂತನೆ ನಮಗೆಲ್ಲರಿಗೂ ಮಂಗಲವನ್ನು ಕೊಡಲಿ.
(ಲೇಖಕರು ಕರ್ಣಾಟಕ ಬ್ಯಾಂಕ್ ಉದ್ಯೋಗಿ ಯಕ್ಷಗಾನ ಕಲಾವಿದ, ಬರಹಗಾರ, ಖ್ಯಾತ ಮದ್ದಳೆವಾದಕರು. ಮಂಗಳೂರು)