ಅದೊಂದು ಬಂಗಾರದ ಗೂಡು. ಅದರಲ್ಲಿ ಒಂದು ಗಿಣಿ. ಅದು ಒಂದು ವಿಶೇಷವಾದ ಗಿಣಿ. ಅದು ಮನುಷ್ಯರಂತೆ ಮಾತಾಡುತ್ತಿತ್ತು. ಅದೂ ರಾಜನ ಅರಮನೆಯಲ್ಲಿ ರಾಣೀವಾಸದಲ್ಲಿತ್ತು.
ರಾಜನ ಅರಮನೆಯಲ್ಲಿ ತಿಂಗಳಿಗೆ ಎರಡು ಬಾರಿ ಪಂಡಿತರನ್ನು ಕರೆದು ಹರಿಕಥೆಯನ್ನು ಮಾಡಿಸುತ್ತಿದ್ದರು. ಹಾಗೆ ಹರಿಕಥೆಯು ಮುಗಿಯುತ್ತಲೇ ಪಂಡಿತರು ಹರಿಯ ನೆನೆದರೆ ಬಂಧನ ಮುಕ್ತಿ ಅನ್ನುವ ಉಕ್ತಿಯೊಂದಿಗೆ ಮುಗಿಸುತ್ತಿದ್ದರು. ಅದನ್ನು ಕೇಳಿದ ಗಿಣಿಯು ಗಟ್ಟಿಯಾಗಿ ಅಪಹಾಸ್ಯದಿ ನಕ್ಕು ಪಂಡಿತರು ಸುಳ್ಳು ಹೇಳುತ್ತಿದ್ದಾರೆ ಅನ್ನುತ್ತಿತ್ತು.
ಹೀಗೆ 3 -4 ಸಲ ನಡೆಯಲು ಆ ಪಂಡಿತರು ಅವರ ಗುರುಗಳ ಬಳಿಗೆ ಹೋಗಿ ಅರಮನೆಯಲ್ಲಿ ನಡೆದ ವಿಚಾರವನ್ನು ತಿಳಿಸಿದರು ಮತ್ತು ಯಾಕೆ ಗಿಣಿ ಹಾಗೆ ಹೇಳುತ್ತದೆ ಎಂದು ವಿಚಾರಿಸಿದರು.
ಅದಕ್ಕೆ ಪಂಡಿತರು “ಸರಿ ನಾನು ಬರುತ್ತೇನೆ. ಅದನ್ನು ನೋಡಬೇಕು ಮತ್ತು ಅದರ ವಿಚಾರ ತಿಳಿಯಬೇಕು” ಎಂದು ಹೇಳಿ ಮುಂದಿನ ಬಾರಿ ಅರಮನೆಗೆ ಹೋಗುವಾಗ ಗುರುಗಳು ಪಂಡಿತರ ಜೊತೆಗೆ ಹೋದರು. ಅಲ್ಲಿ ಹರಿಕತೆಯು ಮುಗಿಯುತ್ತಲೇ ಪಂಡಿತರು ಹರಿಯ ನೆನೆದರೆ ಬಂಧನ ಮುಕ್ತಿ ಅನ್ನುತ್ತಲೇ, ಪಂಜರದಲ್ಲಿ ಗಿಣಿಯು ನಗುತ್ತಾ ಮತ್ತೆ ಪಂಡಿತರು ಸುಳ್ಳುಹೇಳುತ್ತಿದ್ದಾರೆ ಅಂದಿತು.
ಅದನ್ನು ಕೇಳಿಸಿಕೊಂಡ ಗುರುಗಳು ಅದರ ಬಳಿಗೆ ಹೋಗಿ “ನೀನು ಯಾಕೆ ಹೀಗೆ ಹೇಳುತ್ತಿದ್ದೀಯ” ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಗಿಣಿಯು “ನಾನು ಹಿಂದೆ ಹಾರಿಕೊಂಡು ಹೋಗಿ ಒಂದು ಆಶ್ರಮ ಸೇರಿದೆ, ಅಲ್ಲಿ ಬಹಳಷ್ಟು ಮಂತ್ರಗಳನ್ನು ಹೇಳುತ್ತಿದ್ದರು. ನಾನು ಅದನ್ನು ಕೇಳಿ ಮತ್ತೆ ಅದನ್ನು ಹೇಳಲಾರಂಭಿಸಿದೆ. ಇದನ್ನು ನೋಡಿದ ಶಿಷ್ಯರು ವ್ಹಾ… ಮಾತಾಡುವ ಗಿಣಿ ಎಂದು ಹೇಳಿ ನನ್ನನ್ನು ಕಬ್ಬಿಣದ ಗೂಡಿನಲ್ಲಿ ಹಾಕಿದರು.
ಒಂದೊಮ್ಮೆ ಆ ಆಶ್ರಮಕ್ಕೆ ಒಬ್ಬ ಶ್ರೀಮಂತ ಬಂದ ಅವರು ಮಾತಾಡುವ ಗಿಣಿಯನ್ನು ನೋಡಿ ಅವರು ನನ್ನನ್ನು ಅಲ್ಲಿಂದ ಕೊಂಡುಹೋಗಿ ಬೆಳ್ಳಿಯ ಪಂಜರದಲ್ಲಿಟ್ಟರು. ಹೀಗಿರುವಾಗ ಒಂದೊಮ್ಮೆ ಅರಮನೆಯಲ್ಲಿ ಒಂದು ಔತಣ ಕೂಟವಿತ್ತು ಅದಕ್ಕೆ ಆ ಶ್ರೀಮಂತರಿಗೂ ಆಹ್ವಾನವಿತ್ತು. ಅವರು ಪಂಜರದ ಸಮೇತ ನನ್ನನ್ನು ಅರಮನೆಗೆ ಕೊಂಡುಹೋಗಿ ರಾಜನಿಗೆ ಉಡುಗೊರೆಯಾಗಿ ಕೊಟ್ಟರು. ಇದನ್ನು ನೋಡಿದ ಮಹಾರಾಣಿ ಬಹಳ ಸಂತಸದಿಂದ ನನ್ನನ್ನು ಚಿನ್ನದ ಪಂಜರದಲ್ಲಿ ಬಂಧಿಸಿಟ್ಟರು. ಪಂಜರಗಳು ಬದಲಾದವೇ ವಿನಃ, ಏನೇ ಆದರೂ ನಾನು ಮಾತ್ರ ಇದ್ದದ್ದು ಗೂಡಿನಲ್ಲಿ. ಗೂಡಿನಿಂದ ಹೊರಬರಲಾಗಲಿಲ್ಲ. ನಾನು ಪಂಡಿತರು ಹೇಳಿದಂತೆ ಹರಿ ನಾಮ ಉಚ್ಛರಿಸಿದೆ ಆದರೂ ನನಗೆ ಬಂಧನದಿಂದ ಬಿಡುಗಡೆ ಆಗಲೇ ಇಲ್ಲ” ಎಂದು ನೊಂದು ನುಡಿಯಿತು.
ಇದನ್ನೆಲ್ಲಾ ಕೇಳಿದ ಗುರು ಗಿಣಿಯನ್ನು ಹತ್ತಿರಕ್ಕೆ ತಂದು ಅದರ ಕಿವಿಯಲ್ಲಿ ಏನೋ ಹೇಳಿ ಅಲ್ಲಿಂದ ಹೊರಟು ಹೋದರು. ಮರುದಿನ ಬೆಳಗಾಗುತ್ತಲೇ ಅರಮನೆಯ ಸೇವಕರು ಗೂಡನ್ನು ನೋಡುತ್ತಾರೆ ಗಿಣಿ ಅದರಲ್ಲಿ ಸತ್ತು ಬಿದ್ದಂತಿತ್ತು. ಗಾಬರಿಗೊಂಡ ಸೈನಿಕರು ಹತ್ತಿರ ಹೋಗಿ ನೋಡಿದರು. ಅದು ಸತ್ತಿತ್ತು. ಅದನ್ನು ನೋಡಿದ ಸೇವಕರು ತಕ್ಷಣವೇ ವಿಷಯವನ್ನು ಮಹಾರಾಣಿಗೆ ತಿಳಿಸಿದರು. ಗಿಣಿಯು ಸತ್ತ ಸುದ್ದಿ ಕೇಳಿ ಬೇಸರದಿಂದ ಅರಸರ ಜೊತೆ ಬಂದು ನೋಡಿದ ಮಹಾರಾಣಿ ಮರುಗುತ್ತಾ ಸತ್ತ ಗಿಣಿಯನ್ನು ಒಂದು ಕಡೆ ಸಂಸ್ಕಾರ ಮಾಡುವಂತೆ ತಿಳಿಸಿದರು.
ಅನುಮತಿಯಂತೆ ಗೂಡಿನ ಬಾಗಿಲನ್ನು ತೆರೆದ ತಕ್ಷಣವೇ ಸತ್ತಿದ್ದ ಗಿಣಿ ಒಮ್ಮೆಲೇ ದಿಗ್ಗನೆ ಎದ್ದು ಗೂಡಿಂದ ಪುರ್ರನೆ ಹಾರಿ ಹೋಯಿತು. ಹಾಗೆ ಹಾರಿ ಹೋಗುತ್ತಿರುವಾಗ ಅದು ಗಟ್ಟಿಯಾಗಿ ಹೇಳಿತು “ಸರಿಯಾದ ಗುರು ಸಿಕ್ಕರೆ ಮಾತ್ರ ಬಂಧನದಿಂದ ಮುಕ್ತಿ ದೊರೆಯುತ್ತದೆ. ಜೀವನದಲ್ಲಿ ಸನ್ಮಾರ್ಗವನ್ನು ತೋರಿಸುವ ಗುರು ಅತಿ ಮುಖ್ಯ. ಸರಿದಾರಿಯಲ್ಲಿ ಸಾಗಲು ಅವರ ಸಲಹೆ ಅತೀ ಅಗತ್ಯ. ಅದೇ ತಪ್ಪು ಸಲಹೆ ಸಿಕ್ಕಿದರೆ ತಪ್ಪುದಾರಿಯಲ್ಲಿ ಹೋಗಬೇಕಾದೀತು, ಅಲ್ಲದೆ ಜೀವನದಲ್ಲಿ ಏನನ್ನು ಸಾಧಿಸಲಾಗದು” ಎಂದು ಕೂಗಿ ಕೂಗಿ ಹೇಳಿತು.
ಈ ಅಚ್ಚರಿಯ ಆಶ್ಚರ್ಯಕರ ಸಂದರ್ಭವನ್ನು ಬೆಕ್ಕಸ ಬೆರಗಾಗಿ ನೋಡುತ್ತಾ ನಿಂತಿದ್ದ ಅರಸ ರಾಣಿ ಸೈನಿಕರೆಲ್ಲರೂ ಬಿಟ್ಟ ಕಣ್ಣುಗಳನ್ನು ಬಿಟ್ಟಂತೆ ನೋಡುತ್ತಾ ನಿಂತರು. (ಸತ್ಸಂಗ ಸಂಗ್ರಹ)