ಆರೋಗ್ಯ ಹಾಗೂ ಫಿಟ್‍ನೆಸ್ ಕಾಯ್ದುಕೊಳ್ಳಲು ಬೇಕು ಫಿಸಿಯೋಥೆರಪಿ

* ಡಾ. ನಿರುಪಮಾ ನಿತಿನ್

ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಯಾರು ಎಷ್ಟೇ ಸಂಪತ್ತುಳ್ಳವರಾಗಿರಲಿ, ಅವರ ಆರೋಗ್ಯವೇ ಕೈಕೊಟ್ಟರೆ ಆ ಸಂಪತ್ತೆಲ್ಲ ಯಾವ ಮೂಲೆಗೆ? ಆರೋಗ್ಯ ಸದೃಢವಾಗಿದ್ದರೆ ತಾನೆ ಆ ಸಂಪತ್ತನೆಲ್ಲ ಗಳಿಸಲು ಸಾಧ್ಯ. ಇಷ್ಟೆಲ್ಲ ಗೊತ್ತಿದ್ದರೂ ನಾವು ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಲೇ ಇರುತ್ತೇವೆ, ಅಸಂಬದ್ಧ ಜೀವನಶೈಲಿಯನ್ನು ನಡೆಸುತ್ತಿರುತ್ತೇವೆ.

ಆರೋಗ್ಯದಿಂದಿರಲಿ ಅಥವಾ ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಕೀಲುನೋವು, ಬೆನ್ನುನೋವು ಮತ್ತಾವುದೇ ರೋಗದಿಂದ ಬಳಲುತ್ತಿರಲಿ ಅವರು ಯಾವಾಗಲೂ ಚಲನಶೀಲರಾಗಿರಬೇಕು, ಚಟುವಟಿಕೆಯಿಂದಿರಬೇಕು ಮತ್ತು ನಿಯಮಿತವಾಗಿ ಮತ್ತು ನಿರಂತರವಾಗಿ “ವ್ಯಾಯಾಮ” ಮಾಡುತ್ತಿರಬೇಕು ಎಂಬ ಸಂದೇಶವನ್ನು ಇಂದಿನ ದಿನದಂದು ಫಿಸಿಯೋಥೆರಪಿಸ್ಟ್‌ಗಳು ಜಗತ್ತಿಗೆ ಸಾರಿದ್ದಾರೆ.

ಫಿಸಿಯೋಥೆರಪಿಸ್ಟ್ ಹೇಳೋದೇನು?

“ಯಾವ ಜನರು ಕ್ರಿಯಾತ್ಮಕರಾಗಿರುತ್ತಾರೋ ಅಂಥವರು ಹೆಚ್ಚಾಗಿ ಸಂಭಾವ್ಯ ಕಾರ್ಯಪ್ರವೃತ್ತರಾಗಿ, ಕ್ರಿಯಾಸಕ್ತರಾಗಿ ಮತ್ತು ಆನಂದದಿಂದ ಯಾರ ನೆರವಿಲ್ಲದೆ ಬದುಕುವರು. ಅವರ ಜೀವನವು ಸಮರ್ಥ ಜೀವನ. ಆಲಸ್ಯತನ ದೌರ್ಬಲ್ಯಕ್ಕೆ ಕಾರಣವಾಗುತ್ತದೆ ಮತ್ತು ಪ್ರತಿ ವರ್ಷ ಪ್ರಪಂಚದಲ್ಲಿ ದಶ ಕೋಟಿಯ ಮರಣಗಳಿಗೆ ನಿದರ್ಶನವಾಗುತ್ತಿದೆ. ಅದು ಹೃದಯ ಕಾಯಿಲೆ, ಲಕ್ವಾ (ಸ್ಟ್ರೋಕ್), ಮಧುಮೇಹ ಮತ್ತು ಕ್ಯಾನ್ಸರ್ ರೋಗಗಳಿಗೆ ಕಾರಣವಾಗುತ್ತಿದೆ. ಕೇವಲ ಒಂದು ಗಂಟೆ ಮಿತವಾದ ವ್ಯಾಯಾಮ ದಿನನಿತ್ಯ ಮಾಡಿದ್ದಲ್ಲಿ ನಿಜವಾದ ಬದಲಾವಾಣೆ ಕಾಣಬಹುದು.

ಯಾವ ರೀತಿಯ ವ್ಯಾಯಾಮ ಮಾಡಬೇಕು?

ಹಿರಿಯರಿಗೆ 30 ನಿಮಿಷಗಳ ಕಾಲ ಮಿತವಾದ ದೈಹಿಕ ಚಟುವಟಿಕೆ ಅಗತ್ಯ. ಸೈಕಲ್ ಸವಾರಿ, ಈಜುವುದು ಅಥವಾ ವೇಗವಾದ ನಡಿಗೆ ಇಂತಹ ಚಟುವಟಿಕೆ – ಒಂದು ವಾರಕ್ಕೆ ಐದು ದಿನಗಳು ಅಥವಾ 30 ನಿಮಿಷಗಳ ಕಾಲ ಸತ್ವವುಳ್ಳ ಚಟುವಟಿಕೆ ಇಟ್ಟುಕೊಳ್ಳಬೇಕು ಎಂದು ತಜ್ಞರು ಸಲಹೆಕೊಡುತ್ತಾರೆ. ಯಾವುದೇ ಚಟುವಟಿಕೆ ನಿಮ್ಮ ಉಸಿರಾಟದ ವೇಗವನ್ನು ಮತ್ತು ನಿಮ್ಮ ಹೃದಯ ಬಡಿತದ ವೇಗವನ್ನು ಹೆಚ್ಚಿಸುತ್ತದೆ. ಬಲಪಡಿಸುವ ತರಬೇತಿ ವ್ಯಾಯಾಮಗಳ ಬಗ್ಗೆ ತಜ್ಞರು ಸಲಹೆಕೊಡುತ್ತಾರೆ. ಉದಾಹರಣೆಗೆ ನಿಯಮಿತ ಭಾರ ಎತ್ತುವ ವ್ಯಾಯಾಮ, ಯೋಗ, ಏರೋಬಿಕ್ಸ್ – ಕನಿಷ್ಠ ಒಂದು ವಾರಕ್ಕೆ 5 ದಿನಗಳು.

*18 ವರ್ಷದ ಒಳಗೆ ಇರುವ ಮಕ್ಕಳಿಗೆ ಸಾಧಾರಣ ಅಥವಾ ಸತ್ವವುಳ್ಳ ದೈಹಿಕ ಚಟುವಟಿಕೆ ಪ್ರತಿದಿನ ಅಗತ್ಯ.

*20 ರಿಂದ 40 ವರ್ಷದವರು ಪ್ರತಿ ದಿನ ಕನಿಷ್ಠ 60 ನಿಮಿಷ ಸತ್ವವುಳ್ಳ ಕಠಿಣ ವ್ಯಾಯಾಮ ಮಾಡತಕ್ಕದ್ದು.

ಸಂಶೋಧನೆ ತಿಳಿಸುವುದೆನೆಂದರೆ, ಪ್ರತಿಯೊಬ್ಬರೂ ಸುಮಾರು 5 ಕಿ.ಮೀ. ವೇಗದಲ್ಲಿ ಒಂದು ಗಂಟೆ (3-4 ಮೈಲಿ) ನಡೆದರೆ ವಾರದಲ್ಲಿ ಅತ್ಯಂತ ಎಲ್ಲಾ ದಿನಗಳಲ್ಲಿ, ಪ್ರತಿವರ್ಷ ಸುಮಾರು ಶೇ.30 ರಷ್ಟು ಮರಣವನ್ನು ಮುಂದೂಡಬಹುದು ಅಥವಾ ಹೃದಯ ಕಾಯಿಲೆ ಮತ್ತು ಲಕ್ವಾ ಕಾಯಿಲೆಗಳಿಂದ ದೂರವಿರಬಹುದು.

ಫಿಸಿಯೋಥೆರಪಿ ಆರೋಗ್ಯವಂತರಿಗೂ ಸೂಕ್ತ, ರೋಗಿಗಳಿಗೂ ಉಪಯುಕ್ತ. ವ್ಯಾಯಾಮ ಕೂಡ ಫಿಸಿಯೋಥೆರಪಿಯ ಒಂದು ಭಾಗ. ದಿನನಿತ್ಯದ ನಿಯಮಿತ ವ್ಯಾಯಾಮದಿಂದ ಮುಂಬರುವ ಎಷ್ಟೋ ಕಾಯಿಲೆಗಳನ್ನು ತಡೆಗಟ್ಟಬಹುದು.

ಯಾರಿಗೆಲ್ಲ ಪ್ರಯೋಜನ:

ಕಾಯಿಲೆ ಇದ್ದವರಿಗೂ ಕೂಡ ನಾನಾ ವಿಧದ ಫಿಸಿಯೋಥೆರಪಿಗಳು ಇವೆ. ಪ್ರಮುಖವಾಗಿ ಫಿಸಿಯೋಥೆರಪಿಸ್ಟ್ ಗಳ ಬಳಿ ಬರುವುದು ಪಕ್ಷಾಘಾತ (ಸ್ಟ್ರೋಕ್), ಪಾರ್ಕಿಂಸನ್ ಡಿಸೀಸ್ (ಕಂಪ ವಾತ), ಆರ್ಥ್ರೈಟಿಸ್ (ಆಮವಾತ / ಸಂಧಿವಾತ / ರಕ್ತ ವಾತ). ಸ್ಪಾಂಡೈಲೋಸಿಸ್ (ಕುತ್ತಿಗೆ ಹಾಗೂ ಬೆನ್ನು ಮೂಳೆ ಸವೆತ), ಡಿಸ್ಕ್ ಪ್ರೊಲಾಪ್ಸ್ (ಬೆನ್ನು ಮೂಳೆಯ ಡಿಸ್ಕ್ ಜಾರಿರುವುದು), ಫ್ರೋಜನ್ ಷೋಲ್ಡರ್ (ಭುಜದ ಭಿಗಿತ), ಕಾರ್ಪಲ್ ಟನಲ್ ಸಿಂಡ್ರೋಮ್ (ಕೈ ನರಗಳ ಸಮಸ್ಯೆ), ಮಕ್ಕಳಲ್ಲಿ ಕುಗ್ಗಿದ ಬೆಳವಣಿಗೆ ಹಾಗೂ ಬುದ್ಧಿಮಾಂದ್ಯತೆ (ಸೆರೆಬ್ರಲ್ ಪಾಲ್ಸಿ), ಅಪಘಾತದಿಂದ ದೇಹದ ನರದೌರ್ಬಲ್ಯ (ಟ್ರಾಮಾಟಿಕ್ ಪ್ಯಾರಾಪ್ಲೇಜಿಯಾ), ಮೂಳೆ ಮುರಿತದ ನಂತರ ಉಂಟಾಗುವ ಸ್ನಾಯು ಭಿಗಿತ ಹಾಗೂ ಗಂಟು ನೋವು (ಪೋಸ್ಟ್ ಫ್ರಾಕ್ಚರ್ ಕಾಂಟ್ರಾಕ್ಚರ್ಸ್), ನ್ಯುಮೋನಿಯಾ, ಶ್ವಾಸಕೋಶದ ಇತರೆ ತೊಂದರೆಗಳು, ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಫಿಸಿಯೋಥೆರಪಿ ಬಹಳ ಉಪಯುಕ್ತ.

ಫಿಸಿಯೋಥೆರಪಿ ಕೇವಲ ವ್ಯಾಯಾಮ ಅಲ್ಲ

ಸಾಮಾನ್ಯವಾಗಿ ಜನರು ತಿಳಿದಿರುವ ಹಾಗೆ ಫಿಸಿಯೋಥೆರಪಿ ಎಂದರೆ ಕೇವಲ ವ್ಯಾಯಾಮ ಚಿಕಿತ್ಸೆ ಅಲ್ಲ. ವಿಧವಿಧದ ಕಾಯಿಲೆಗಳಿಗೆ ಅನೇಕ ಚಿಕಿತ್ಸಾ ಕ್ರಮಗಳು ಇಂತಿವೆ – ಅಲ್ಟ್ರಾಸೌಂಡ್ ಥೆರಪಿ, ಐ.ಎಫ್.ಟಿ (ಕರೆಂಟ್ ಥೆರಪಿ), ಟ್ರ್ಯಾಕ್ಷನ್, ಲೇಸರ್ ಥೆರಪಿ, ಅಲ್ಟ್ರಾವಯೊಲೆಟ್ ಥೆರಪಿ, ಇನ್ಫ್ರಾರೆಡ್ ಥೆರಪಿ, ಹಾಟ್ ವ್ಯಾಕ್ಸ್ ಥೆರಪಿ, ಡ್ರೈ ನೀಡ್ಲಿಂಗ್ ಥೆರಪಿ, ಸ್ಟಿಮ್ಯುಲೇಷನ್ ಥೆರಪಿ, ಚೆಸ್ಟ್ ಫಿಸಿಯೋಥೆರಪಿ ಮುಂತಾದ ಪರಿಣಾಮಕಾರಿ ಚಿಕಿತ್ಸೆಗಳು ಇವೆ.

(Dr. Nirupama Nitin)

B.P.T; M.P.T (Neurology); Y.I.C

Consultant Physiotherapist

 P.M.S.S.Y Super speciality block

 Bangalore Medical College, Victoria Hospital

  For appointment & consultation: 8861238279

       E-Mail: [email protected]

 

Related Articles

ಪ್ರತಿಕ್ರಿಯೆ ನೀಡಿ

Latest Articles