* ವಿಜಯಲಕ್ಷ್ಮೀ.ಎಸ್
ಒಂದು ತೆಂಗಿನಕಾಯಿಯನ್ನು ತೊಳೆದು ದೇವರಿಗೆ ಮೂರು ಸಲ ನಿವಾಳಿಸಿ, ದೇವಸ್ಥಾನದ ಧ್ವಜಸ್ತಂಬದ ಬಳಿ ಒಡೆಯುವುದಕ್ಕೆ ಈಡುಗಾಯಿ ಎಂದು ಹೇಳುತ್ತಾರೆ. ಎಲ್ಲಾ ದೇವಸ್ಥಾನಗಳಲ್ಲೂ ಜನರು ಈಡುಗಾಯಿ ಒಡೆಯುವುದನ್ನು ನೀವು ನೋಡಿರಬಹುದು. ಹಲವಾರು ಕಾರಣಗಳಿಗಾಗಿ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಈಡುಗಾಯಿ ಹಾಕುತ್ತಾರೆ.
ಈಡುಗಾಯಿ ಎಂದರೆ, ನಿತ್ಯದ ಕೆಲಸಗಳಿಗೆ ಯಾವ ಭಂಗವೂ ಉಂಟಾಗದಂತೆ, ಆ ಅಡ್ಡಿಯನ್ನು ದೇವರಕೃಪೆಯಿಂದ, ಪಟ್ ಎಂದು ನಿವಾರಣೆಯಾಗಲಿ ಎಂಬ ಕಾರಣವೇ ಮುಖ್ಯವಾಗಿರುತ್ತದೆ.
ಇನ್ನೂ ಕೆಲವು ತಡೆ ಒಡೆಯುವುದು ಎಂದು ಹೇಳುತ್ತಾರೆ. ಅದಕ್ಕಾಗಿಯೂ ಈಡುಗಾಯಿ ಹಾಕುತ್ತಾರೆ. ಏನಾದರೂ ಸಂಕಲ್ಪವನ್ನು ಮಾಡಿಕೊಂಡು, ಈಡುಗಾಯಿ ಹಾಕಿದಾಗ ಅದು ತುಂಡು ತುಂಡಾಗಿ ಒಡೆದರೆ, ನಿಮ್ಮ ಕೆಲಸ ಸುಲಭವಾಗಿ ಆಗುತ್ತದೆ ಎಂದರ್ಥ.
ಅಕಸ್ಮಾತ್ ಸರಿಯಾಗಿ ಒಡೆಯದಿದ್ದರೆ, ನಿಮ್ಮ ಕೆಲಸ ಆಗುವುದಿಲ್ಲವೆಂದು ಅರ್ಥ. ಆಗ ಬೇರೆ ಈಡುಗಾಯಿ ಹಾಕಬೇಕು. ಚೆನ್ನಾಗಿ ಒಡೆದರೆ, ಎರಡನೆಯ ಪ್ರಯತ್ನ ಸಫಲವಾಗುತ್ತದೆ ಎಂದರ್ಥ.
ಆಗಲೂ ಆಗದಿದ್ದರೆ, ಸ್ವಲ್ಪ ದಿನಗಳನ್ನು ಬಿಟ್ಟು ಪ್ರಯತ್ನಪಡಬೇಕು ಎಂದು ಅರ್ಥ. ಇತ್ತೀಚೆಗೆ ವಾಹನಗಳ ಮುಂದೂ ಇದನ್ನು ಈಡುಗಾಯಿ ಹಾಕುವುದನ್ನು ನೋಡುತ್ತೇವೆ. ವಾಹನದಿಂದಲೂ, ವಾಹನಕ್ಕೂ ಯಾವುದೇ ರೀತಿಯಲ್ಲಿ ಹಾಗೂ ತಮಗೂ ಏನೂ ತೊಂದರೆಯಾಗದಿರಲಿ, ಯಾರ ಕಣ್ಣು ಬಿದ್ದಿದ್ದರೂ ಅದು ನಿವಾರಣೆ ಆಗಲಿ ಎಂದು ಈಡುಗಾಯಿ ಹಾಕುವುದು.