ನೃತ್ಯ ಮಾಡಲು ಅನರ್ಹಳು ಎಂದುವಿಮರ್ಶಕರಿಂದ ಟೀಕೆಗೆ ಒಳಗಾಗಿದ್ದ ನೃತ್ಯಕಲಾವಿದೆಯ ಸಾಧನೆಗೆ ಸಾಕ್ಷಿಯಿದು

ಮೊದಲ ಬಾರಿಗೆ ನೃತ್ಯ ಮಾಡಿದಾಗ ನೃತ್ಯ ಮಾಡಲು ಅನರ್ಹಳು ಎಂದು ಡಾನ್ಸ್‌ ವಿಮರ್ಶಕರಿಂದ ಟೀಕೆಗೆ ಒಳಗಾಗಿದ್ದಗುಬ್ಬಿ ವೀರಣ್ಣ ಮನೆತನದ ಆ ಬಾಲೆ ಇಂದು ವಿಶ್ವವಿಖ್ಯಾತಿ. ನೃತ್ಯ ಕ್ಷೇತ್ರದಲ್ಲಿಸಾಧಿಸಿದ್ದು ಅಮೋಘ.

ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ, ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎನ್ನುವ ಮಾತಿದೆ. ಅಂತೆಯೇ ಸತತ ಪ್ರಯತ್ನ, ಪರಿಶ್ರಮದಿಂದ  ನೃತ್ಯವೇ ನನ್ನ ಪ್ರೀತಿ, ಅದೇ ನನ್ನ ಬದುಕು ಎಂದು ಪೂಜಿಸುತ್ತಾ ಬಂದಿರುವವರು ಕೂಚಿಪುಡಿ ನೃತ್ಯಕಲಾವಿದೆ ವೈಜಯಂತಿ ಕಾಶಿ ಅವರು.

ಮೊದಲ ಬಾರಿಗೆ ನೃತ್ಯ ಮಾಡಿದಾಗ ನೃತ್ಯ ಮಾಡಲು ಅನರ್ಹಳು ಎಂದು ಡಾನ್ಸ್‌ ವಿಮರ್ಶಕರಿಂದ ಟೀಕೆಗೆ ಒಳಗಾಗಿದ್ದರು.

“ಆ ಸಂದರ್ಭದಲ್ಲಿ ನಾನು ಕೆಟ್ಟದಾಗಿ ಮಾಡಿದ್ದಿರಬಹುದೇನೋ’ ಎಂದು ನೃತ್ಯವಿಮರ್ಶಕರ ಮಾತಿಗೆ ಸಮಾಧಾನಿಸಿಕೊಳ್ಳುವ ಅವರು- ‘ಪ್ರತಿಯೊಂದು ಘಟನೆಗಳೂ ಕೂಡಾ ನನ್ನ ಬದುಕಿನ ಒಳಗನ್ನು ತೆರೆಸಿತು, ನನ್ನನ್ನು ಸಾಧನೆಗೆ ಪ್ರೇರೇಪಿಸಿತು’ ಎನ್ನುವ ಸಂತೃಪ್ತಿಯೂ ಅವರದು.
‘ನೃತ್ಯಕ್ಕೆ ಪ್ರೇರಣೆ ನಮ್ಮ ಅಮ್ಮ ಅಪ್ಪ. ಅವರಿಗೆ ನಾನು ಒಬ್ಬಳು ಡಾನ್ಸರ್‌ ಆಗಬೇಕು ಎಂಬುದಿತ್ತು. ನನಗೆ ಅದರಲ್ಲಿಆಸಕ್ತಿ ಇರಲಿಲ್ಲ. ಆಸಕ್ತಿ ಇಲ್ಲದಿದ್ದರೆ ಅದು ಕೇವಲ ಅಭ್ಯಾಸ ಆಗುತ್ತದೆ. ನಮ್ಮ ಅಪ್ಪನ ಬಲವಂತಕ್ಕೆ ನೃತ್ಯ ಮಾಡುವುದನ್ನು ಅಭ್ಯಾಸ ಮಾಡಿದೆ. ಆದರೆ ಮುಂದೆ ಅದು ನನ್ನ ಬದುಕಿಗೊಂದು ಶಿಸ್ತು ನೀಡಿತು. ಯಾವುದೇ ಕಲಾಪ್ರಕಾರ ನಮ್ಮೊಳಗೊಂದು ಶಿಸ್ತು, ಸಾಮರಸ್ಯ ಮನೋಭಾವವನ್ನು ಬೆಳೆಸುತ್ತದೆ. ಹಾಗೆಯೇ ನಾವು ಬೆಳೆಯುವ ಪರಿಸರ ನಮ್ಮನ್ನು ರೂಪಿಸುತ್ತದೆ’ ಎನ್ನುತ್ತಾರವರು.
ಅತಿಯಾಗಿ ಪ್ರೀತಿಸುವ ಯಾವುದೇ ಕಲೆ ನಮಗೆ ಅನೇಕ ಅವಕಾಶ ಮಾಡಿಕೊಡುತ್ತದೆ ಎನ್ನುವ ಅವರಿಗೆ ನಾಟಕದಲ್ಲಿಅಭಿನಯಿಸಲು ಅವಕಾಶ ಸಿಗುತ್ತದೆ. ಅವರು ಅಭಿನಯಿಸಿದ ಮೊದಲ ನಾಟಕ ಸಂಗ್ಯಾಬಾಳ್ಯ. ಟಿ.ಎಸ್‌.ನಾಗಾಭರಣ, ವಿಜಯ್‌ ಕಾಶಿ ಅವರೊಂದಿಗೆ ರಂಗಭೂಮಿಯಲ್ಲೂಹಲವು ವರ್ಷಗಳ ಕಾಲ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ನನ್ನ ಪ್ರತಿ ಸಾಧನೆಯ ಹಂತದಲ್ಲೂನನಗೆ ಚಾಲೆಂಜ್‌ ಇತ್ತು. ಆ ಸನ್ನಿವೇಶಗಳಿಂದಾಗಿ ನಾನು ಈ ಮಟ್ಟಕ್ಕೆ ಬೆಳೆಯುವುದಕ್ಕೆ ಸಾಧ್ಯವಾಯಿತು ಎನ್ನುವ ಸಕಾರಾತ್ಮಕ ಮನಸ್ಥಿತಿ ಅವರದ್ದು. ಬದುಕಿನಲ್ಲಿಬರುವ ಪ್ರತಿ ಸಂದರ್ಭವನ್ನು, ಸವಾಲುಗಳನ್ನು ಸಕಾರಾತ್ಮಕ ದೃಷ್ಟಿಯಿಂದ ಮನಗಾಣಬೇಕು ಎಂಬುದು ಅವರ ನಿಲುವು.
ತಾನು ಕಲಿತದ್ದನ್ನು ಆಸಕ್ತರಿಗೂ ಕಲಿಸಿಕೊಡಬೇಕು ಎನ್ನುವ ಕಾರಣದಿಂದ ಬೆಂಗಳೂರಿನಲ್ಲಿಶಾಂಭವಿ ನೃತ್ಯ ಶಾಲೆ ಹಾಗೂ ನಾಟ್ಯ ಶಾಸ್ತ್ರದ ನೃತ್ಯ ಕೇಂದ್ರ ತೆರೆದಿದ್ದಾರೆ. ಈ ಮೂಲಕ ಅವರು ತರಬೇತುಗೊಳಿಸಿದ ಶಿಷ್ಯ ವರ್ಗ ಅಪಾರ. ಪ್ರತಿಯೊಬ್ಬ ಶಿಷ್ಯ ಕೂಡಾ ನನಗೆ ನನ್ನ ಮಗಳ ಹಾಗೆ ಎನ್ನುವ ರೀತಿಯಲ್ಲಿಶಿಷ್ಯರೊಂದಿಗೆ ಅವಿನಾಭಾವ ಬಂಧವನ್ನು ಬೆಳೆಸಿಕೊಂಡಿದ್ದ ಅವರಿಗೆ ಯಾವುದೋ ಕಾರಣದಿಂದ ಶಿಷ್ಯಂದಿರು ದೂರಾದಾಗ ತುಂಬಾ ಬೇಸರ ಉಂಟಾಗುತ್ತಿತ್ತಂತೆ. ಕ್ರಮೇಣ ಅದು ಸ್ವಾಭಾವಿಕ. ಶಿಷ್ಯಂದಿರಿಗೆ ಹೇಳಿಕೊಡುವುದು ನನ್ನ ಕರ್ತವ್ಯ ಎಂದೇ ಭಾವಿಸುತ್ತಿದ್ದರು. ಬದುಕಿನಲ್ಲಿತೀರಾ ಅಟ್ಯಾಚ್‌ಮೆಂಟ್‌ ಬೆಳೆಸಿಕೊಳ್ಳಬಾರದು ಎಂಬುದನ್ನು ಅರಿತುಕೊಂಡೆ ಎನ್ನುತ್ತಾರವರು.
 ಬದುಕಿನ ಪ್ರತಿ ಹಂತವೂ ಅವರಿಗೆ ಸವಾಲಾಗಿತ್ತು. ಆ ಸವಾಲುಗಳಿಂದ ಎಂದಿಗೂ ದೂರ ಸರಿದವರಲ್ಲ. ಅದು ಅವರ ಬದುಕಿನ ಒಳಗನ್ನು ಮತ್ತಷ್ಟು ಬೆಳಕಿಗೆ ತರುವಂತೆ ಮಾಡಿತು ಎನ್ನುವ ಸಂತೃಪ್ತಿ ಅವರದ್ದು.
ನಾನು ಪಡೆದುಕೊಂಡಿದ್ದನ್ನು ಇತರರಿಗೂ ಹಂಚಬೇಕು, ಕಲೆ ಉಳಿಸಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿನೃತ್ಯ ಜಾತ್ರೆ ಹಮ್ಮಿಕೊಳ್ಳುತ್ತಿದ್ದಾರೆ.

ಸಾಧನೆಗೆ ಸಾಕ್ಷಿಯಿದು
ವೈಜಯಂತಿ ಅವರು ಅಮೆರಿಕದ ಇಂಟರ್‌ ನ್ಯಾಷನಲ್‌ ಕೂಚಿಪುಡಿ ಕನ್ವೆನ್ಷನ್‌, ಜರ್ಮನಿಯ ಓರಿಯಂಟಲ್‌ ಡ್ಯಾನ್ಸ್‌ ಫೆಸ್ಟಿವಲ್‌, ಆಫ್ರಿಕಾದ ಫೆಸ್ಟಿವಲ್‌ ಆಫ್‌ ಇಂಡಿಯಾ, ಕೊರಿಯಾದ ಅಪ್ಪನ್‌ ಡ್ಯಾನ್ಸ್‌ ಫೆಸ್ಟಿವಲ್‌, ಇಟಲಿಯ ಒಲಿಂಪಿಕ್‌ ಫೆಸ್ಟಿವಲ್‌, ಲಾಸ್‌ ಏಂಜಲಿಸ್‌ ಕನ್ನಡ ಕನ್ವೆನ್ಶನ್‌, ಈಜಿಪ್ಟ್‌ ಇಂಟರ್‌ ನ್ಯಾಷನಲ್‌ ಡ್ಯಾನ್‌ ಅಂಡ್‌ ಮ್ಯೂಸಿಕ್‌ ಫೆಸ್ಟಿವಲ್‌ ಮುಂತಾದ ಪ್ರತಿಷ್ಠಿತ ನೃತ್ಯೋತ್ಸವಗಳೇ ಅಲ್ಲದೆ ವಿಶ್ವದೆಲ್ಲೆಡೆಯಲ್ಲಿತಮ್ಮ ನೃತ್ಯ ಕಾರ್ಯಕ್ರಮ ನೀಡಿ ಕಲಾರಸಿಕರ ಮನ ತಣಿಸಿದ್ದಾರೆ.
 ಕೂಚಿಪುಡಿ ನೃತ್ಯ ಸಂಪ್ರದಾಯ, ಮಂತ್ರಗಳ ಶಕ್ತಿ ಮುಂತಾದ ಧ್ವನಿ ದೃಶ್ಯ ಸುರುಳಿಗಳನ್ನು ಹೊರ ತಂದಿದ್ದಾರೆ. ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರಗಳೇ ಅಲ್ಲದೆ ಕರ್ನಾಟಕ ಕಲಾಶ್ರೀ, ಸಿಂಗಾರಮಣಿ, ಆರ್ಯಭಟ ಇನ್ನೂ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ.

ಕಿರುತೆರೆಯಲ್ಲೂಅಭಿನಯ
ನೃತ್ಯ ಕಲಾವಿದೆ ವೈಜಯಂತಿ ಕಾಶಿ ಅವರು ಬೆಂಗಳೂರಿನಲ್ಲಿಜನವರಿ 1, 1960ರಲ್ಲಿ ಜನಿಸಿದರು. ನಾಟಕರತ್ನ ಗುಬ್ಬಿ ವೀರಣ್ಣನವರ ಮೊಮ್ಮಗಳಾದ ವೈಜಯಂತಿ ಕಾಶಿ ಅವರ ತಂದೆ ವಿಶ್ವನಾಥ್‌, ತಾಯಿ ಗಿರಿಜಮ್ಮನವರು.
ತುಮಕೂರಿನಲ್ಲಿನಾಟ್ಯಾಚಾರ್ಯ ಕೆ.ಎ. ರಾಮನ್‌ ಅವರಲ್ಲಿಮೊದಲ ನೃತ್ಯ ಶಿಕ್ಷಣ. ನಂತರ ಅಹಮದಾಬಾದಿನ ದರ್ಪಣ ಸಂಸ್ಥೆಯ ಹಿರಿಯ ನಾಟ್ಯಾಚಾರ್ಯ ಸಿ.ಆರ್‌. ಆಚಾರ್ಯಲು, ಗುರು ವೇದಾಂತಂ ಪ್ರಹ್ಲಾದ ಶರ್ಮ, ಪದ್ಮಭೂಷಣ ಡಾ. ನಟರಾಜ ರಾಮಕೃಷ್ಣ ಮುಂತಾದ ದಿಗ್ಗಜರುಗಳ ಬಳಿ ಕೂಚಿಪುಡಿ ಅಭ್ಯಾಸ. ನೃತ್ಯ ಸಂಶೋಧನಾ ಶಿಕ್ಷಣಕ್ಕೆ ಕೇಂದ್ರ ಸರ್ಕಾರದಿಂದ ಫೆಲೋಷಿಪ್‌ ಪಡೆದ ಕರ್ನಾಟಕದ ಪ್ರಥಮ ಮಹಿಳಾ ಕಲಾವಿದೆ ಎಂಬ ಹೆಗ್ಗಳಿಕೆ. ಇತ್ತೀಚೆಗೆ ಕಿರುತೆರೆಯಲ್ಲೂಅಭಿನಯಿಸುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿಗಾರ್ಡನಿಂಗ್‌, ಒಳಾಂಗಣ ವಿನ್ಯಾಸ, ಆರೋಗ್ಯ ಕುರಿತ ಲೇಖನಗಳನ್ನು ಓದುವ ಹವ್ಯಾಸ ಅವರದು.

Related Articles

ಪ್ರತಿಕ್ರಿಯೆ ನೀಡಿ

Latest Articles