ಹರಿಹರದ ಶ್ರೀ ಜಗದ್ಗುರು ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ, ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರೊಂದಿಗೆ ನಡೆಸಿದ ಮಾತುಕತೆಯನ್ನು, ಜಗದ್ಗುರುಗಳು ಸ್ವತಃ ಇಲ್ಲಿ ಹಂಚಿಕೊ0ಡಿದ್ದಾರೆ.
ಮಂತ್ರಾಲಯ ಗುರುಸಾರ್ವಭೌಮರೆನಿಸಿಕೊಂಡ ಶ್ರೀ ರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಪುಣ್ಯಕ್ಷೇತ್ರ. ಪರಮ ಪೂಜ್ಯರು ನೆಲೆನಿಂತ ಪುಣ್ಯಕ್ಷೇತ್ರವನ್ನು ದರ್ಶಿಸುವುದು ಸೌಭಾಗ್ಯವೇ ಸರಿ. ಇಂದು ಆ ಸೌಭಾಗ್ಯ ನಮಗೂ ಲಭಿಸಿತು.
ನಾವಿಂದು ಮಂತ್ರಾಲಯದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಪವಿತ್ರ ಪುಷ್ಕರ ಮಾಸದಲ್ಲಿ ಭೇಟಿ ಮಾಡಿದೆವು. ಭೇಟಿ ಆಧ್ಯಾತ್ಮದ ಹೊಸ ಹೊಳಹುಗಳನ್ನು ತೆರೆಯುವಂತೆ ಮಾಡಿತು. ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯರು ಸಹೃದಯರು. ಜ್ಞಾನಿಗಳು. ಆಧ್ಯಾತ್ಮ ಪರಂಪರೆಯಲ್ಲಿ ಅವರು ಸಲ್ಲಿಸುತ್ತಿರುವ ಸೇವೆ ಬಹಳ ದೂರರ್ಶಿತ್ವ ಉಳ್ಳದ್ದು. ಭೇಟಿ ಸಮಯದಲ್ಲಿ ಹಲವು ಮಹತ್ವದ ವಿಷಯಗಳು ಚರ್ಚಿತವಾದುವು.
ನಮ್ಮ ನಮ್ಮ ಪರಂಪರೆಯನ್ನು ಒಂದಾಗಿಸಿಕೊಂಡು ಮುನ್ನಡೆಯಬೇಕು. ದೇಶದ ಸಕಲ ಸಂತರ ಸ್ವಾಮೀಜಿಗಳ ಮನೋಧರ್ಮ ಒಂದಾಗಿರಬೇಕು. ಒಗ್ಗಟ್ಟಾಗಿರಬೇಕು. ರಾಷ್ಟ್ರ ಧರ್ಮ ಪಾಲನೆಯಲ್ಲಿ ನಾವು ಪ್ರಮುಖ ಪಾತ್ರ ವಹಿಸಬೇಕು. ಧರ್ಮಸಂಸತ್ತನ್ನು ಸ್ಥಾಪಿಸಬೇಕು ಅನ್ನುವುದು ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿಯವರ ಇಚ್ಛೆ.
ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಯೋಗಪ್ರಿಯರು. ಅವರು ನಮ್ಮ ಯೋಗವನ್ನು ಗಮನಿಸಿದ್ದಾರೆ, ಅಭಿನಂದಿಸಿದ್ದಾರೆ. ಆಯುರ್ವೇದದಲ್ಲಿ ಅವರಿಗೆ ಅತೀವವಾದ ಒಲವಿದೆ. ಕಾರಣ ಇಷ್ಟೆ ಆಧ್ಯಾತ್ಮ, ಯೋಗ, ಆಯುರ್ವೇದ ನಮ್ಮ ಭವ್ಯ ಪರಂಪರೆಯ ಕೊಂಡಿಗಳು. ಅವು ನಮ್ಮನ್ನು ಮಾತ್ರವಲ್ಲ ದೇಶವನ್ನೇ ಬೆಸೆಯುತ್ತವೆ. ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿಗಳ ಭೇಟಿಯಿಂದ ನಮ್ಮ ಆಧ್ಯಾತ್ಮ ಮಾರ್ಗದಲ್ಲಿ ಹೊಸ ಬೆಳಕೊಂದು ಕಂಡಂತಾಯಿತು. ಅವರ ಜೊತೆ ನಾವಿದ್ದೇವೆ. ಮತ್ತು ರಾಷ್ಟ್ರಧರ್ಮ ಸ್ಥಾಪನೆಯಲ್ಲಿ ಕೈ ಜೋಡಿಸುತ್ತೇವೆ ಎಂದು ನಾವು ವಿನಯಪೂರ್ವಕವಾಗಿ ಹೇಳಲು ಇಚ್ಚಿಸುತ್ತೇವೆ.
ಇದೇ ಸಂದರ್ಭ ಬಿಜಿಎಸ್ ಮತ್ತು ಎಸ್ ಜೆಬಿ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಪರಮಪೂಜ್ಯ ಡಾ. ಶ್ರೀ ಪ್ರಕಾಶನಾಥ ಸ್ವಾಮೀಜಿಯವರೂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಮಗೆ ಸುವ್ಯವಸ್ಥೆಯನ್ನು ಮಾಡಿ ಉಪಚರಿಸಿದ ಶ್ರೀ ಸುಭುದೇಂದ್ರ ಶ್ರೀಗಳ ಬಾಲ್ಯದ ಗೆಳೆಯರಾದ ಶ್ರೀ ಮೋಹನ್ ಅವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ. ಸರ್ವೆ ಜನಾಃ ಸುಖಿನೋ ಭವಂತು.