ನವಗ್ರಹ ದೇವತೆಗಳಿಗೆ ದೀಪಾರಾಧನೆ ಮಾಡುವಾಗ ಯಾವ ಮಂತ್ರವನ್ನು ಪಠಿಸಬೇಕು, ದೀಪಾರಾಧನೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
*ಸೂರ್ಯ
‘ಜಪಾ ಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ’ ಈ ಮಂತ್ರದೊಂದಿಗೆ ಸೂರ್ಯ ದೇವರಿಗೆ ಬೆಳ್ಳಿಯ ನಿರಾಜನ ಬೆಳಗುವುದರಿಂದ ಸೂರ್ಯ ಸಂಪ್ರೀತನಾಗುತ್ತಾನೆ, ಸೂರ್ಯನಿಗೆ ಬೆಳ್ಳಿ ದೀಪ ಬೆಳಗುವುದರಿಂದ ಬಡತನ ನಿವಾರಣೆಯಾಗುತ್ತದೆ, ಆರೋಗ್ಯ ಪ್ರಾಪ್ತಿಯಾಗುತ್ತದೆ, ಶತ್ರು ದಮನವಾಗುತ್ತದೆ. ದೀಪ ಬೆಳಗಿದವನು ತೇಜೋವಂತನಾಗುತ್ತಾನೆ. ಆದಿತ್ಯ ಹೃದಯ ವನ್ನು ಪಠಿಸಿ ಬೆಳ್ಳಿ ದೀಪವನ್ನು ಬೆಳಗಿದರಂತೂ ರಾಜಯೋಗ ದೊರೆತು ಅಧಿಕಾರ ಪ್ರಾಪ್ತವಾಗುತ್ತದೆ.
*ಚಂದ್ರ
‘ಶ್ರೀಮಾನ್ ಶಶಿಧರಶ್ಚಂದ್ರೋ ತಾರಾಧೀಶೋ ನಿಶಾಕರಃ ಸುಧಾನಿಧಿಸ್ಸದಾರಾಧ್ಯಸ್ಸತ್ಪತಿಸ್ಸಾಧು ಪೂಜಿತಃ ‘ ಈ ಮಂತ್ರದೊಂದಿಗೆ ಚಂದ್ರನಿಗೆ ಬೆಳ್ಳಿ ದೀಪ ಬೆಳಗುವುದರಿಂದ ಬೆಳಗಿದವರು ಕಾಂತಿವಂತರೂ , ತೇಜೋವಂತರೂ ಆಗುತ್ತಾರೆ. ಕಟಕ ಲಗ್ನ ಅಥವಾ ಕಟಕ ರಾಶಿಗೆ ಅಧಿಪತಿ ಚಂದ್ರನಾಗಿರುವುದರಿಂದ ಕಟಕ ರಾಶಿಯವರು ಬೆಳ್ಳಿದೀಪಾರಾಧನೆ ಮೂಲಕ ಚಂದ್ರನನ್ನು ಪೂಜಿಸಿದರೆ ಶುಭಫಲಗಳು ಶತಸಿದ್ಧ.
*ಮಂಗಳ
ಮಹಿಸುತೋ ಮಹಾಭಾಗೋ ಮಂಗಲೋ ಮಂಗಲಪ್ರದಃ ಮಹಾವೀರೋ ಮಹಾಶೂರೋ ಮಹಾಬಲ ಪರಾಕ್ರಮಃ ಈ ಮಂತ್ರದ ಮೂಲಕ ಮತ್ತು ಕುಜ ಅಷ್ಟೋತ್ತರ ಸ್ತೋತ್ರಗಳ ಪಠನದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಕುಜ ದೋಷದ ಪರಿಹಾರ ಸಾಧ್ಯ ಮತ್ತು ಮನದ ಉದ್ವೇಗ ಕಡಿಮೆಯಾಗುತ್ತದೆ. ಯಾರಿಗೆ ಅಧಿಕ ರಕ್ತದೊತ್ತಡ ಇದೆಯೋ ಅವರು ದೀಪ ಬೆಳಗಿದಲ್ಲಿ ರಕ್ತದೊತ್ತಡ ಕಡಿಮೆ ಮಾಡಬಹುದು.
*ಬುಧ
‘ಬುಧೋ ಬುಧಾರ್ಚಿತಃ ಸೌಮ್ಯಃ ಚಿತ್ತಃ ಶುಭಪ್ರದಃ ದೃಢವ್ರತೋ ದೃಢಫಲಃ ಶ್ರುತಿಚಾಲ ಪ್ರಭೋಧಕಃ‘ ಈ ಮಂತ್ರದ ಪಠನದ ಮೂಲಕ ದೀಪ ಬೆಳಗಿದಲ್ಲಿ ಶುಭಫಲ ಲಭ್ಯವಾಗುವುದು. ಬುದ್ಧಿಶಕ್ತಿಗೆ ಕಾರಕ ಗ್ರಹ ಬುಧ. ಮಿಥುನ ಮತ್ತು ಕನ್ಯಾರಾಶಿಯವರಿಗೆ ಬುಧ ಅಧಿಪತಿ. ಈ ಜಾತಕರು ಬುಧನ ಆರಾಧನೆ ಮಾಡಿದರೆ ಉತ್ತಮ. ಇತರ ಜಾತಕರಿಗೂ ಒಳ್ಳೆ ಫಲ ಇದೆ, ಸ್ವಂತ ವ್ಯವಹಾರ ಮಾಡುವವರು ಬೆಳ್ಳಿ ದೀಪ ಬೆಳಗಿದಲ್ಲಿ ಅಭಿವೃಧ್ಹಿ ಕಾಣುವರು, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗುತ್ತದೆ.
*ಗುರು
‘ದೇವಾನಾಂಚ ಋಷೀಣಾಂಚ ಗುರುಂ ಕಾಂಚನ ಸನ್ನಿಭಂ ಬುದ್ದಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ‘ ಈ ಮಂತ್ರ ಪಠಿಸಿ ಬೆಳ್ಳಿ ದೀಪವನ್ನು ಕಡಲೆಕಾಯಿ ಎಣ್ಣೆ ಬಳಸಿ ಬೆಳಗಿಸಿದರೆ ಗುರು ಸಂಪ್ರೀತನಾಗುತ್ತಾನೆ. ಎಲ್ಲಾ ವಿಧದ ಜಯಗಳನ್ನು ಕೊಡುತ್ತಾನೆ ಮತ್ತು ಉದರ ಸಂಬಂಧೀ ಕಾಯಿಲೆಗಳು ಶಮನವಾಗುತ್ತದೆ.
*ಶುಕ್ರ
‘ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮಂ ಗುರುಂ ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ‘ ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿಸಿದಲ್ಲಿ ಕೌಟುಂಬಿಕ ಸಮಸ್ಯೆಗಳ ಪರಿಹಾರ ಸಾಧ್ಯ ಮತ್ತು ಪತಿ ಪತ್ನಿಯರ ಭಿನ್ನಾಭಿಪ್ರಾಯ ದೂರವಾಗಿ ಸಾಮರಸ್ಯ ಏರ್ಪಡುತ್ತದೆ. ಶುದ್ಧ ತುಪ್ಪವನ್ನು ಬಳಸಿ ದೀಪ ಬೆಳಗುವುದರಿಂದ ಪಿತ್ರಾರ್ಜಿತ ಆಸ್ತಿಯು ದೊರಕುತ್ತದೆ.
*ಶನಿ
‘ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ‘ ಶನಿ ದೇವರಿಗೆ ಪ್ರಿಯವಾದ ಧಾನ್ಯ ಎಳ್ಳು ಹಾಗಾಗಿ ಎಳ್ಳೆಣ್ಣೆಯಿಂದ ಬೆಳ್ಳಿದೀಪ ಬೆಳಗಿದರೆ ಶುಭಫಲ ಮತ್ತು ಗುಪ್ತರೋಗಗಳು ಪರಿಹಾರವಾಗುವುದು. 19 ಶನಿವಾರ ಈ ರೀತಿ ದೀಪ ಬೆಳಗಿಸಿದಲ್ಲಿ ನ್ಯಾಯಾಲಯದಲ್ಲಿರುವ ವ್ಯಾಜ್ಯಗಳಿಗೆ ಪರಿಹಾರ ದೊರಕುವುದು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿರುವವರಿಗೆ ಆರ್ಥಿಕವಾಗಿ ಚೇತರಿಕೆ ಕಂಡು ಬರುತ್ತದೆ.
*ರಾಹು
‘ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ಧನಂ ಸಿಂಹಕಾ ಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ‘ ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಪೂರ್ವಜರಿಂದ ಬಂದ ಪಾಪಗಳ ನಿವಾರಣೆಯಾಗುತ್ತದೆ, ಸರ್ಪದೋಷ ನಿವಾರಣೆ, ಬಡತನ ನಿವಾರಣೆ ಆಗುತ್ತದೆ. ತುಪ್ಪ ಬಳಸಿ ದೀಪ ಹಚ್ಚಿದಲ್ಲಿ ನಾಗಹತ್ಯಾ ದೋಷ ನಿವಾರಣೆ ಆಗುತ್ತದೆ, ಪುರಾತನ ರೋಗ ನಿವಾರಣೆ, ಅನಾರೋಗ್ಯ, ನರ ದೌರ್ಬಲ್ಯ ಇತ್ಯಾದಿ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ.
*ಕೇತು
‘ಪಾಲಾಶ ಪುಷ್ಪ ಸಂಕಾಶಂ ತಾರಾಗ್ರಹ ಮಸ್ತಕಂ ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಂ’ ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಅಪಘಾತ ಭೀತಿ ದೂರವಾಗುತ್ತದೆ, ಕೆಲಸ ಕಾರ್ಯಗಳಲ್ಲಿನ ವಿಘ್ನ ದೂರವಾಗುತ್ತದೆ, ಪುತ್ರ ಸಂತಾನದ ಅಪೇಕ್ಷೆ ಇದ್ದವರು 21 ದಿನಗಳ ಕಾಲ ತುಪ್ಪದಿಂದ ಬೆಳ್ಳಿ ದೀಪ ಬೆಳಗಿಸಿದರೆ ಮನೋಭಿಲಾಷೆ ಪೂರ್ಣವಾಗುತ್ತದೆ. ಕೇತುವಿನ ಎದುರು ಬೆಳ್ಳಿ ದೀಪ ಬೆಳಗಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಹಾಗೆಯೇ ಗಂಗಾಸ್ನಾನದ ಫಲದೊರೆಯುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
ಸಂಗ್ರಹ: ಹೆಚ್.ಎಸ್.ರಂಗರಾಜನ್
ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು, ಬೆಂಗಳೂರು