ತನ್ನ ಕರ್ಮಕ್ಕಿಂತಲೂ ಮಿಗಿಲಾದ ಧರ್ಮವಿಲ್ಲ

*ಕೃಷ್ಣಪ್ರಕಾಶ್ ಉಳಿತ್ತಾಯ

ಸ್ವಧರ್ಮೇ ನಿಧನಂ ಶ್ರೇಯಃ – ಭಗವದ್ಗೀತೆಯ  ಈ ಸೂಕ್ತಿ ಜಾತಿ ಮತಗಳ ವ್ಯತ್ಯಾಸವಿಲ್ಲದೆ ನಮ್ಮೆದೆಯಲ್ಲಿ ಕರ್ತವ್ಯದ ಕಿಚ್ಚನ್ನು ಹೆಚ್ಚಿಸುವಂತಹದ್ದು. ಕರ್ಮಯೋಗಿಗೆ ಅಥವಾ ಕರ್ಮಜೀವಿಗೆ, ಇನ್ನೂ ಸರಳವಾಗಿ ಹೇಳುವುದಾದರೆ, ಬೆಳಗ್ಗೆದ್ದು ತನಗೆ ಮಾಡಲು ಕೆಲಸವಿದೆ ಮತ್ತದಕ್ಕೆ ಬೇಕಾದ ದೇಹಾರೋಗ್ಯವಿದೆ ಎಂದು ಯೋಚಿಸುವವನಿಗೆ “ತನ್ನ ಕರ್ಮ” ಕ್ಕಿಂತಲೂ ಮಿಗಿಲಾದ ಧರ್ಮವಿಲ್ಲ ಮಾತ್ರವಲ್ಲ ಇದೇ ಅಂದಿನ ಆತನ ಪಾಲಿನ ಪರಮ ಸೌಭಾಗ್ಯ.  ಈಗಿನ ಸಂದರ್ಭದಲ್ಲಿ “ಸ್ವಧರ್ಮ” ಅಂದರೆ “ನನ್ನ ಪಾಲಿಗೆ ಬಂದ ಕೆಲಸ”.  ಅದೆಷ್ಟು ಸಣ್ಣದಿರಬಹುದು ಅಥವಾ ದೊಡ್ಡದಿರಲೂ ಬಹುದು.  ತನ್ನ ಕರ್ಮದಿಂದಲೇ ಋಷಿತ್ವವನ್ನು ಪಡೆದ ಕಟುಕನ ಕತೆಯು ಮಹಾಭಾರತದಲ್ಲಿ ಬರುವುದನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಗೀತೆಯ  ಈ ಮಾತನ್ನು ವಿವೇಚಿಸುತ್ತಿದೆ ಈ ಬರಹ.
ಶ್ರೇಯಾನ್ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್| ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ||
ಪ್ರಸ್ತುತ ಸಂಧರ್ಭದಲ್ಲಿ “ಸ್ವಧರ್ಮ” ಎಂಬುದಕ್ಕೆ ಮಾಡಬೇಕಾದ ನಿರೂಪಣೆ- ತನ್ನ ಪಾಲಿಗೆ ಬಂದ ವಿಹಿತ ಕೆಲಸ- ಅದನ್ನು ಮಾಡುವುದು ನನ್ನ ಕರ್ತವ್ಯ ಎಂಬ ಭಾವ. ಕೃಷ್ಣ ಅರ್ಜುನನಿಗೆ ಹೇಳಿದ ಅಂತರ್ಯವನ್ನು ಈ ರೀತಿಯಾಗಿ ವಿಸ್ತರಿಸಬಹುದು:

ಗಡಿಯಲ್ಲಿ ಸೈನಿಕನಿಗೆ ಎದುರಾಗಿ ಶತ್ರು ಸೈನ್ಯ ಬರುತ್ತದೆ. ಇನ್ನೇನು ತನ್ನ ದೇಶದ ಮೇಲೆ ಆಕ್ರಮಣ ಮಾಡುತ್ತಾರೆ ಎಂಬಲ್ಲಿಗೆ ಸೈನಿಕನಿಗೆ “ಅಹಿಂಸಾ ಪರಮೋಧರ್ಮ” ಎಂಬ ಉಕ್ತಿ ನೆನಪಾಗಿಬಿಟ್ಟು ಶಸ್ತ್ರ ತ್ಯಾಗ ಮಾಡಿದರೆ ದೇಶದ ಗತಿಯೇನು? ಇದಕ್ಕಿಂತ ದೊಡ್ಡ ವಿಕೃತಿಯೇನಿದೆ? ಹಾಗಾಗಿ ಸೈನಿಕನಾಗಿ ತನ್ನ ಕರ್ತವ್ಯವನ್ನು ಮಾಡುತ್ತಾ ಇರುವುದೇ ಶ್ರೇಯಸ್ಸು ಎಂಬ ಪರಮಾರ್ಥ ಗೀತೆಯದು.

ಸಮಷ್ಠಿ ಶಾಂತಿಗಾಗಿ ಸ್ವಧರ್ಮದ ಮಾರ್ಗ ಅತಿ ಶ್ರೇಯಸ್ಕರವಾದದ್ದು. ತಾನು ಮಾಡುತ್ತಿರುವ ಕೆಲಸವು ತನ್ನ ಗುಣಕ್ಕೆ ಹಿತಕರವಾಗಿಲ್ಲವೆಂಬ ಅರಿವಾದರೆ ಅಂತಹ ಕೆಲಸವನ್ನು ಬಿಟ್ಟು ತನಗೆ ವಿಹಿತವಾದದ್ದು ಯಾವುದೋ ಅದನ್ನು ಆರಿಸಿಕೊಳ್ಳುವುದೂ ಯೋಗ್ಯ. ಸಮಾಜದಲ್ಲಿರುವ ತನ್ನ ಹಕ್ಕು, ಕರ್ತವ್ಯ, ಬಾಧ್ಯತೆ ಇವನ್ನು ಚೆನ್ನಾಗಿ ಮನನ ಮಾಡಿಕೊಂಡು ತನ್ನ ಪಾಲಿನ ಕೆಲಸವನ್ನು ಮಾಡುವುದೇ ಕರ್ಮಯೋಗ. ಉಪನಿಷತ್ತು ಹೇಳುವ “ಸತ್ಯಂ ವದ (ತನ್ನ)ಧರ್ಮಂ ಚರ” ಇಲ್ಲಿ ಉಲ್ಲೇಖನೀಯ.

 ಧರ್ಮಶಾಸ್ತ್ರಕಾರರು (ಮೇಧಾತಿಥಿ ಮನುಸ್ಮೃತಿಗೆ ಮಾಡಿದ ವ್ಯಾಖ್ಯಾನ) ಹೇಳುವ ಗುಣಧರ್ಮವು ಇಲ್ಲಿ ಮುಖ್ಯವಾಗುತ್ತದೆ. ಭಾರತದ ಬಹುದೊಡ್ಡ ವಿದ್ವಾಂಸರಾದ ಪಾಂಡುರಂಗ ವಾಮನ ಕಾಣೆಯವರು ಹೇಳುವಂತೆ “ರಾಜನಾದವ ಕ್ಷತ್ರಿಯನೋ ಇತರನೋ ಆತನ ಧರ್ಮ ದೇಶವನ್ನು ಕಾಯುವುದು”. ಇಲ್ಲಿ ಗುಣಧರ್ಮ ಅಂದರೆ ತನಗಿರುವ ಬಾಧ್ಯತೆ ಮತ್ತು  ಕರ್ತವ್ಯವೆಂಬುದನ್ನು ತಿಳಿಯಬೇಕು. ಒಳಗಿಂದ ಕ್ಷಾತ್ರ- ಕಾಂತಿ ಇಲ್ಲದಿದ್ದರೆ ಅಂತಹ ಆಡಳಿತ ದಿಕ್ಕೆಡುವುದಕ್ಕೆ ಇತಿಹಾಸದಲ್ಲೇ ಅನೇಕ ನಿದರ್ಶನಗಳಿವೆ. ರಾಜನಾದವನಿಗೆ ಅಂದರೆ ಪ್ರಸ್ತುತ ಕಾಲದಲ್ಲಿ ಆಡಳಿತಗಾರನಿಗೆ “ಕ್ಷಾತ್ರ” ಧರ್ಮವಾಗುತ್ತದೆ ಎಂಬುದು ಇಲ್ಲಿಯ ಭಾವ. “ಕ್ಷಾತ್ರ”ದ ಕರ್ತವ್ಯ ಕಾಪಾಡುವುದು/ಪೊರೆಯುವುದು ಹೌದಲ್ಲ.

ಡಿವಿಜಿ ತಮ್ಮ ಮೇರುಕೃತಿ ಜೀವನಧರ್ಮಯೋಗದಲ್ಲಿ ಹೇಳುವಂತೆ :

“ಸ್ವಧರ್ಮದಲ್ಲಿದ್ದು ಅದರಂತೆ ತೊಡಗುವವನಿಗೆ ಪ್ರಕೃತಿ ಸಹಾಯ ಮಾಡುತ್ತಾಳೆ. ಆಕೆ ಮಾಡಿಸಿದ್ದೇ ಸ್ವಧರ್ಮ. ಅದಕ್ಕೆ ಆಕೆಯ ಬೆಂಬಲವಿರುವುದರಿಂದ ಅವನ ಕೆಲಸ ಸುಲಭವಾಗುತ್ತದೆ. ಈ ಕಾರ್ಯಸೌಲಭ್ಯ ಮೊದಲನೆಯ ಗುಣ. ಯಾವಾಗ ಸುಲಭವಾಯಿತೋ ಆಗ ಕೆಲಸ ಬೇಗಬೇಗ ನಡೆಯುತ್ತದೆ. ಫಲವೂ ಹೆಚ್ಚಾಗಿ ಬರುತ್ತದೆ. ಹೀಗೆ ಪ್ರತಿಫಲಬಾಹುಳ್ಯ ಎರಡನೆಯ ಗುಣ

ಇದರಿಂದ ಲೋಕಕ್ಕೆ ಪ್ರಯೋಜನ ಹೆಚ್ಚಾಗಿ- ಅವನ ಯೋಗ್ಯತೆಯಿಂದ ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಹೆಚ್ಚಾಗಿ ಆಗುತ್ತದೆ. ಈ ಲೋಕೋಪಯೋಗಾಧಿಕ್ಯ ಮೂರನೆಯ ಗುಣ.

ಸ್ವಧರ್ಮನಿರತನಲ್ಲಿ ಕೆಲವು ಗೊತ್ತಾದ ಗುಣಶಕ್ತಿಗಳಾದರೂ ದೃಢವಾಗಿ ಬೆಳೆದು ಬಲಪಡುತ್ತವೆ; ಹೊಸದು ಸಂಪಾದನೆಯಾಗುವ ಭರವಸೆಯಿಲ್ಲ. ಇಂಥ ಸಾಂಕರ್ಯಶಂಕೆಯಿಲ್ಲದ ಸ್ವಬಲಪುಷ್ಟಿಯ ಅವಕಾಶ – ನಾಲ್ಕನೆಯ ಗುಣ.
ಪ್ರಕೃತಿಯ ಸಹಾಯ, ಪ್ರಯೋಜನಾಧಿಕ್ಯ, ಸುಲಭಸಾಧ್ಯತೆ, ತನ್ನ ಸಾಮರ್ಥ್ಯ ವೃದ್ಧಿ ಇವು ಸ್ವಧರ್ಮದ ಅನುಷ್ಠಾನದ ಲಾಭ.
ಸ್ವಧರ್ಮದಿಂದ ವಿಮುಖವಾಗುವ ಕೆಲವು ಘಟನೆಗಳನ್ನು ನೋಡೋಣ.  ಕಚೇರಿಯಲ್ಲಿಅಧಿಕಾರಿಯಿರುತ್ತಾನೆ. ಸಹಾಯಕನೂ ಇರುತ್ತಾನೆ. ಸಹಾಯಕನು ಅಧಿಕಾರಿಯ ಕೆಲಸದಲದಲ್ಲಿ ತೊಡಗಿದರೆ ಅಲ್ಲಾಗುವ ಅಪಸವ್ಯಗಳಿಗೆ ಹೊಣೆ ಯಾರು?

ಇನ್ನೊಂದು ಉದಾಹರಣೆ ಓರ್ವ ನ್ಯಾಯಾಧೀಶ ತನ್ನ ಎದುರೇ ಶಿಕ್ಷಾರ್ಹ ಅಪರಾಧ ನಡೆದರೂ (ನ್ಯಾಯಾಂಗ ನಿಂದನೆ ಹೊರತುಪಡಿಸಿ) ತಾನು ನ್ಯಾಯಾಧೀಶನಾಗಿರುತ್ತಾ ತೀರ್ಪನ್ನು ಸಾಕ್ಷಿಗಳ ಸಹಾಯವಿಲ್ಲದೆ ನೀಡಬಾರದು.

ಇಲ್ಲಿ ಸ್ವಧರ್ಮವೆಂದರೆ ಸಿದ್ಧ ಸೂತ್ರ ಪ್ರಮೇಯಗಳಿಗೆ ಅಳವಟ್ಟು ತೀರ್ಮಾನಗಳನ್ನು ಕೊಡುವುದಾಗಿದೆ.  ಮತ್ತೂ ಒಂದು ನಿದರ್ಶನವೆಂದರೆ ತನ್ನ ಮಿತಿ ಮತ್ತು ಅರಿವಿನ ಪರಿಧಿ, ಜ್ಞಾನವನ್ನು ಅರಿತು ವ್ಯವಹರಣೆ. ಉದಾಹರಣೆಗೆ ಒಬ್ಬಾತ ಪೋಲೀಸ್ ಅಧಿಕಾರಿಯಿರುತ್ತಾನೆ. ತನ್ನ ಕೆಲಸದಲ್ಲಿ ಬೇಕಾದ ಕಾರ್ಯದಕ್ಷತೆ ಆತನಿಗಿದೆ. ಇದರಿಂದಾಗಿ ಹೆಸರುಗಳಿಸಿದ್ದಾನೆ. ಸಂಗೀತ ಸ್ಫರ್ಧೆಯಲ್ಲಿ ಆತನನ್ನು ಆಯೋಜಕರು ತೀರ್ಪನ್ನು ಕೊಡಲು ಕರೆಯುತ್ತಾರೆ. ಆದರೆ ಆ ಪೋಲೀಸ್ ಅಧಿಕಾರಿಗೆ ಸಂಗೀತದ ಗಂಧವೇ ಇಲ್ಲ. ಇಂತಹಾ ಸಂಧರ್ಭ  ಆತ  ತೀರ್ಪುದಾರನಾಗಿ ಹೋದರೆ ಆಗುವುದು ಅನ್ಯಾಯವಲ್ಲದೆ ಮತ್ತೇನು. ಸ್ವಧರ್ಮ ಪಾಲಿಸುವಾಗ ತನ್ನ ಇತಿ -ಮಿತಿ, ಕಾರ್ಯ ವ್ಯಾಪ್ತಿ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡಿರಬೇಕಲ್ಲವೇ? ಇಲ್ಲವಾದರೆ “ಸಂಗೀತಕ್ಕೆ ಸರ್ಕಲ್ ಇನ್ಸಪೆಕ್ಟರ್ ನ ಸರ್ಟಿಫಿಕೇಟ್” ಎಂಬ ಫಲವೇ ಗತಿ.

(ಲೇಖಕರು ಕರ್ಣಾಟಕ ಬ್ಯಾಂಕ್ ಉದ್ಯೋಗಿ ಯಕ್ಷಗಾನ ಕಲಾವಿದ, ಬರಹಗಾರ, ಖ್ಯಾತ ಮದ್ದಳೆವಾದಕರು, ಮಂಗಳೂರು)

Related Articles

ಪ್ರತಿಕ್ರಿಯೆ ನೀಡಿ

Latest Articles