ಚಳಿಗಾಲದಲ್ಲಿ ಒಣಹವೆ ಇರುವುದರಿಂದ ಚರ್ಮ ಸುಕ್ಕುಗಟ್ಟಿದಂತಾಗುವುದು. ಚಳಿಗಾಲದಲ್ಲಿ ತ್ವಚೆ ರಕ್ಷಣೆ ಮಾಡಿಕೊಳ್ಳುವುದು ಅಗತ್ಯ. ಇಲ್ಲವಾದರೆ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ವಿಂಟರ್ ಸೀಸನ್‌ನಲ್ಲಿ ತುಟಿ, ಕಾಲು ಹಿಮ್ಮಡಿ ಒಡೆಯುವುದು ಸಾಮಾನ್ಯ.
ಕಾಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮನೆಯಲ್ಲಿಯೇ ಕೆಲವು ವಿಧಾನಗಳನ್ನು ಅನುಸರಿಸಬಹುದು. ಮನೆಯಲ್ಲೇ ಮಾಡಬಹುದಾದ ಸರಳ ಪರಿಹಾರ ಅಂದರೆ ದಿನಕ್ಕೆ ಎರಡರಿಂದ ಮೂರು ಬಾರಿ ಉಗುರು ಬಿಸಿ ನೀರಿಗೆ ಉಪ್ಪು ಸೇರಿಸಿ ಅದರಿಂದ ಕಾಲು ತೊಳೆಯಬೇಕು.
ಮತ್ತೊಂದು ಸುಲಭ ವಿಧಾನ ಅಂದರೆ ಕಳಿತ ಬಾಳೆಹಣ್ಣನ್ನು ಹಿಸುಕಿ ಪೇಸ್ಟ್ ಮಾಡಿ ಸಂಜೆ ಪಾದದ ತಳಭಾಗ, ಹಿಮ್ಮಡಿ ಮತ್ತು ಬೆರಳುಗಳಿಗೆ ಹಚ್ಚಿಕೊಂಡು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ರಾತ್ರಿ ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಚರ್ಮ ಮೃದುವಾಗುತ್ತದೆ. ಹಿಮ್ಮಡಿಯಲ್ಲಿನ ಒಣಚರ್ಮಗಳನ್ನು ತೆಗೆಯಬೇಕು. ನಂತರ ರಾತ್ರಿ ಮುಲಾಮು ಹಚ್ಚಿಕೊಂಡು ಬೆಳಗ್ಗೆ ತೊಳೆದುಕೊಳ್ಳಬಹುದು.
ಕಾಲಿಗೆ ಹಚ್ಚುವ ಮುಲಾಮು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.
ತಯಾರಿಸುವ ವಿಧಾನ: ಜೇನುಮೇಣ 100ಗ್ರಾಂ, ಹರಳೆಣ್ಣೆ 100ಮಿಲೀ., ಅರಶಿನ 1ಚಮಚ, ಕರ್ಪೂರದ ಪುಡಿ 1 ಚಮಚ. ಜೇನುಮೇಣವನ್ನು ಹರಳೆಣ್ಣೆಗೆ ಹಾಕಿ ಸಣ್ಣ ಉರಿಯಲ್ಲಿ ಕರಗುವವರೆಗೆ ಕಾಯಿಸಿ. ನಂತರ ಒಲೆಯಿಂದ ಕೆಳಗೆ ಇಳಿಸಿ. ಅದಕ್ಕೆ ಕರ್ಪೂರದ ಪುಡಿ ಮತ್ತು ಅರಶಿನ ಪುಡಿಯನ್ನು ಸೇರಿಸಿ. ಆರಿದ ನಂತರ ಡಬ್ಬಿಗೆ ಹಾಕಿ ಇಟ್ಟುಕೊಳ್ಳಿ.
ಉಪಯೋಗಿಸುವುದು ಹೀಗೆ: ಹಿಮ್ಮಡಿಯಲ್ಲಿರುವ ಒಣಚರ್ಮಗಳನ್ನು ತೆಗೆದು ಚೆನ್ನಾಗಿ ತೊಳೆದು, ಒರೆಸಿದ ನಂತರ ಮುಲಾಮು ಹಚ್ಚಿ ಪ್ಲಾಸ್ಟಿಕ್ ಕವರ್‌ನಿಂದ ಕಟ್ಟಿಕೊಳ್ಳಿ. ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಹೀಗೆ ಒಂದು ವಾರ ಮಾಡಿದರೆ ಹಿಮ್ಮಡಿ ಒಡೆದಿರುವ ಭಾಗ ಗುಣವಾಗಿ ಅಂದದ ಪಾದದ ನಿಮ್ಮದಾಗುವುದು.