ತುಮಕೂರು: ಇಲ್ಲಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಪುಣ್ಯಕ್ಷೇತ್ರ ಕುಪ್ಪೂರು ಗದ್ದುಗೆ ಸಂಸ್ಥಾನ ಮಠ ಶ್ರೀ ಗುರು ಮರುಳಸಿದ್ಧೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಡಿಸೆಂಬರ್30, 31ರಂದು ನಡೆಯಲಿದೆ.
ಈ ಸಂದರ್ಭ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ “ಕುಪ್ಪೂರು ಮರುಳಸಿದ್ಧ ಶ್ರೀ’ ಪ್ರಶಸ್ತಿಯನ್ನು ಸಾಲುಮರದ ತಿಮ್ಮಕ್ಕ ಅವರಿಗೆ ನೀಡಿ ಗೌರವಿಸಲಾಗುತ್ತದೆ ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ.
ಕುಪ್ಪೂರು ಗದ್ದುಗೆ ಮಠ ಐತಿಹ್ಯ : ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ ಕುಪ್ಪೂರು ಗದ್ದುಗೆ ಮಠವು ಸುಮಾರು 5 ಶತಮಾನಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಶ್ರೀಮರುಳಸಿದ್ದೇಶ್ವರ ಶಿವಯೋಗಿಗಳು ಜೀವಂತ ಸಮಾಧಿಯಾದ ಸ್ಥಳವೇ ಇಂದು ಕುಪ್ಪೂರು ಗದ್ದಿಗೆ ಮಠವಾಗಿ ಪ್ರಸಿದ್ಧಿ ಪಡೆದಿದೆ. ಅವರಿಂದ ಆರಂಭವಾದ ಗುರುಪರಂಪರೆಯಲ್ಲಿ ಮರುಳಸಿದ್ದೇಶ್ವರ ಸ್ವಾಮಿಗಳ ವಂಶಸ್ಥರೇ ಆದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಕಾಲದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿವೆ. ಅವರ ನಂತರ ಪಟ್ಟಾಧ್ಯಕ್ಷರಾದ ಸದ್ಯದ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಕುಪ್ಪೂರು ಗದ್ದಿಗೆ ಮಠದ ಸರ್ವಾಂಗೀಣ ಅಭಿವೃದ್ಧಿ ಮಾಡುವುದರ ಜೊತೆಗೆ, ಧಾರ್ವಿುಕವಾಗಿ ಪ್ರಖ್ಯಾತವಾಗಿದ್ದ ಶ್ರೀಮಠವನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅಭಿವೃದ್ಧಿ ಪಡಿಸಿದ್ದಾರೆ.