ಇಂದಿನಿಂದ ಧನುರ್ಮಾಸ ಆರಂಭ- ಮಹತ್ವ, ವಿಶೇಷತೆ ಏನು ಗೊತ್ತಾ

ಡಿಸೆಂಬರ್ 16 ರಿಂದ ಧನುರ್ಮಾಸವು ಆರಂಭವಾಗಿ, ಜನವರಿ 13 ರ ವರೆಗೆ ಇರುತ್ತದೆ. ಈ ಮಾಸದಲ್ಲಿ‌ ಮಹಾವಿಷ್ಣುವಿಗೆ ವಿಶೇಷ ಪೂಜೆಗಳು ನಡೆಯುವುದು.

ಹನ್ನೆರಡು ಮಾಸಗಳಲ್ಲಿ ಒಂದೊಂದು ಮಾಸಗಳಿಗೆ ವಿಶಿಷ್ಟವಾದ ಮಹತ್ವವಿದೆ. ಅದರಲ್ಲಿ ಧನುರ್ಮಾಸವು ಮಹಾವಿಷ್ಣುವಿಗೆ ಬಹಳ ವಿಶೇಷವಾಗಿದೆ. ಜ.14ರಂದು ಮಕರ ಸಂಕ್ರಾಂತಿ. ಇಲ್ಲಿಂದ ಶುಭ ಕಾರ್ಯಗಳು‌ ಆರಂಭವಾಗುವುವು.

ಪುರಾಣದ ಕಥೆಯ ಪ್ರಕಾರ ಒಮ್ಮೆ ಸೃಷ್ಟಿಕರ್ತನಾದ ಬ್ರಹ್ಮದೇವರು- ಹಂಸಪಕ್ಷಿಯ ಅವತಾರ ಮಾಡುತ್ತಾ ಲೋಕ ಸಂಚಾರ ಮಾಡುತ್ತಿರುವಾಗ, ಸೂರ್ಯದೇವರು ಹಂಸರೂಪಿಯಾಗಿದ್ದ, ಬ್ರಹ್ಮದೇವರ ಮೇಲೆ ಒಂದೇ ಬಾರಿಗೆ ಹೆಚ್ಚಿನ ಶಾಖ ಮತ್ತು ಬೆಳಕನ್ನು ಬಿಡುತ್ತಾರೆ. ಇದರಿಂದ ಕೋಪಗೊಂಡ ಬ್ರಹ್ಮ ದೇವರು ಸೂರ್ಯದೇವರಿಗೆ ನಿನ್ನ ತೇಜಸ್ಸು ಕ್ಷೀಣಿಸಲಿ ಎಂಬ ಶಾಪ ನೀಡುತ್ತಾನೆ. ಸೂರ್ಯದೇವರು ಕಾಂತಿಹೀನರಾಗಿ ತನ್ನ ಪ್ರಕಾಶ ಕಳೆದುಕೊಳ್ಳುವನು. ಇದರಿಂದ ಇಡೀ ಭೂಮಂಡಲವೇ ಅಲ್ಲೋಲ ಕಲ್ಲೋಲವಾಯಿತು.

ಸೂರ್ಯದೇವನಿಲ್ಲದೆ, ಸೂರ್ಯನ ಬೆಳಕಿಲ್ಲದೇ, ಋಷಿ – ಮುನಿಗಳಿಗೆ ನಿತ್ಯ- ಪೂಜೆ ಹಾಗೂ ಹೋಮ – ಹವನಗಳಿಗೆ ಬಹಳ ತೊಂದರೆಯಾಗಿ ಎಲ್ಲವನ್ನೂ ನಿಲ್ಲಿಸುವಂತಾಯಿತು. ಆಗ ದೇವಾನುದೇವತೆಗಳು ಹಾಗೂ ಮುನಿವೃಂದದವರೆಲ್ಲಾ ಸೇರಿ, ಬ್ರಹ್ಮದೇವರ ಕುರಿತು ತಪಸ್ಸನ್ನು ಆಚರಿಸಿದರು. ಇವರ ತಪಸ್ಸಿಗೆ ಬ್ರಹ್ಮದೇವರು ಒಲಿದು ಪ್ರತ್ಯಕ್ಷರಾದರು. ಆಗ ತಪಸ್ಸಿನ ಉದ್ದೇಶವನ್ನು ಕೇಳಿದ ಬ್ರಹ್ಮದೇವರ ಪ್ರಶ್ನೆಗೆ, ಎಲ್ಲರೂ ನಡೆಯುತ್ತಿರುವ ಸ್ಥಿತಿಯನ್ನು ವಿವರಿಸಿದರು. ಆಗ ಬ್ರಹ್ಮ ದೇವರು ಒಂದು ಪರಿಹಾರ ಸೂಚಿಸುತ್ತಾರೆ. ಸೂರ್ಯದೇವ ಧನುರ್ಮಾಸದಲ್ಲಿ ಮೊದಲ ಜಾವದಲ್ಲಿ ಜಗದೊಡೆಯನಾದ ಶ್ರೀ ಮಹಾವಿಷ್ಣುವನ್ನು ಕುರಿತು ಪೂಜಿಸಿದರೆ ಆತನ ಶಾಪ ವಿಮೋಚನೆಯಾಗಲಿದೆ. ಎಂಬ ಅಭಯವನ್ನು ಬ್ರಹ್ಮ ದೇವರು ನೀಡುತ್ತಾರೆ. ಅದರಂತೆಯೇ ಸೂರ್ಯದೇವರು ಧನುರ್ಮಾಸದ ಪೂಜೆಯನ್ನು ಮೊದಲ ಜಾವದಲ್ಲಿ ಸತತವಾಗಿ ಹದಿನಾರು ವರುಷ ಮಾಡಿ ಶ್ರೀ ಮಹಾವಿಷ್ಣುವಿನ ಪೂರ್ಣ ಅನುಗ್ರಹವನ್ನು ಪಡೆದು, ಎಂದಿನಂತೆ ತೇಜಸ್ಸು ಹಾಗೂ ಕಾಂತಿ ಹೊಂದಿ ಜಗತ್ತಿಗೆ ಬೆಳಕು ನೀಡಿದರು ಎಂದು ಪುರಾಣದಲ್ಲಿ ಹೇಳುತ್ತಾರೆ.

ಸಾಕ್ಷಾತ್ ಸೂರ್ಯದೇವರೇ ಈ ಧನುರ್ಮಾಸದ ಪೂಜೆ ಮಾಡಿ ಜಗತ್ತಿಗೆ ಈ ಆಚರಣೆಯ ಮಹತ್ವ ತಿಳಿಯುವಂತೆ ಮಾಡಿದರು. ಈ ಧನುರ್ಮಾಸದ ಆರಂಭವು ಸೂರ್ಯನು ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಪ್ರವೇಶ ಮಾಡಿ, ಒಂದು ತಿಂಗಳ ಕಾಲದವರೆಗೆ, ಈ ರಾಶಿಯಲ್ಲಿರುವಾಗ ಈ ಪರ್ವಕಾಲವನ್ನು ಧನುರ್ಮಾಸವಾಗಿ ಆಚರಿಸುವರು.

ಮಹತ್ವ

ಧನುರ್ಮಾಸವನ್ನು ‘ಶೂನ್ಯಮಾಸ’ ಎಂಬುದಾಗಿ ನಮ್ಮ ಶಾಸ್ತ್ರಕಾರರು ಹೇಳಿದ್ದು, ಈ ಮಾಸದಲ್ಲಿ ವಿವಾಹ – ಉಪನಯನ – ಗೃಹಪ್ರವೇಶದಂತಹ ಶುಭ ಕಾರ್ಯಕ್ರಮಗಳನ್ನು ಆಚರಿಸಲು ನಿಷಿದ್ಧವಾಗಿದೆ. ಆದರೆ ಮಾನವನಿಗೆ ಶ್ರೀ ಮಹಾವಿಷ್ಣುವು ಧನುರ್ಮಾಸ ಪೂಜೆ ಮಾಡುವ ಅವಕಾಶ ನೀಡಿದ್ದು, ಈ ಪೂಜೆಯಿಂದ ಮಾನವನ ಜನ್ಮ ಜನ್ಮಾಂತರದ ಪಾಪಗಳು ನಾಶವಾಗಿ, ಇಹದಲ್ಲಿ ಸುಖ ಪರದಲ್ಲಿ ಮುಕ್ತಿ ಕರುಣಿಸಿ ಪೂರ್ಣಾ ಅನುಗ್ರಹ ಮಾಡುತ್ತಾನೆ ಎಂದು ಹೇಳುತ್ತಾರೆ.

ಪೂಜಾ ವಿಧಾನ

ಧನುರ್ಮಾಸದಲ್ಲಿ ಪ್ರತಿ ನಿತ್ಯ ಒಂದು ತಿಂಗಳು ಸೂರ್ಯೋದಯಕ್ಕಿಂತ ಮುಂಚಿತವಾಗಿ ಪೂಜೆ ಮಾಡಬೇಕು. ಮೊದಲ ಹದಿನೈದು ದಿವಸ ಮಹಾವಿಷ್ಣುವಿಗೆ ನೈವೇದ್ಯಕ್ಕೆ ಸಕ್ಕರೆ ಅಥವಾ ಬೆಲ್ಲ – ಅಕ್ಕಿ- ಹೆಸರು ಬೆಳೆಯಿಂದ ಹುಗ್ಗಿ ಮಾಡಿ (ಪೊಂಗಲ್) ತಯಾರಿಸಿ ಶ್ರೀ ಹರಿ (ಶ್ರೀ ಮಹಾವಿಷ್ಣು) ಗೆ ಅರ್ಪಿಸಬೇಕು. ಉಳಿದ ಹದಿನೈದು ದಿನ ಖಾರದ ಪೊಂಗಲ್‌ ತಯಾರಿಸಿ, ನೈವೇದ್ಯ ಮಾಡಬೇಕು ಎಂಬ ಪದ್ಧತಿ ಇದೆ.

ಶೋಭಶ್ರೀ ಬಿ.ಕೆ

Related Articles

ಪ್ರತಿಕ್ರಿಯೆ ನೀಡಿ

Latest Articles