ಧನುರ್ಮಾಸದ ವಿಶೇಷ ತಿನಿಸು ಪೊಂಗಾಲ್ ರೆಸಿಪಿ ಇಲ್ಲಿದೆ

ಧನುರ್ಮಾಸಲ್ಲಿ ವಿಷ್ಣು ದೇವರಿಗೆ ವಿಶೇಷವಾಗಿ ನೈವೇದ್ಯವಾಗಿ ಪೊಂಗಾಲ್ ಸಮರ್ಪಣೆಯಾಗುತ್ತದೆ. ಇಂತಹ ಹಬ್ಬಗಳಲ್ಲಿ ಇಂತಹದ್ದೇ ನೈವೇದ್ಯ ಮಾಡಬೇಕು ಎಂಬ ನಿಯಮ ಬಂದಿದ್ದು ಸೀಸನ್‌ಗೆ ಅನುಗುಣವಾಗಿಯೂ ಇರಬಹುದೇನೋ. ಈಗ ಚಳಿಗಾಲ. ಧನುರ್ಮಾಸ ಆರಂಭಗೊಂಡಿದ್ದು, ಬಿಲ್ಲಿನಂತೆ ಬಾಗಿ, ಮುದುಡಿ ಮಲಗುವಂತಹ ಚಳಿ. ಚರ್ಮ ಒಡೆಯುವುದು, ಸುಕ್ಕುಗಟ್ಟುವುದರಿಂದ ನಮ್ಮ ಆಹಾರಕ್ರಮದಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ಶರೀರದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುವುದರಿಂದಲೂ, ಧನುರ್ಮಾಸದಲ್ಲಿ ಹುಗ್ಗಿಯನ್ನು ಸೇವಿಸುವುದರಿಂದ ಕೊಬ್ಬಿನ ಅಂಶವನ್ನು ಹೆಚ್ಚಿಸಿ ಶಾರೀರಿಕ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಹೀಗೆ ಧನುರ್ಮಾಸದಲ್ಲಿ ಹುಗ್ಗಿ ಸೇವನೆಯು ವೈಜ್ಞಾನಿಕವಾಗಿಯೂ ಸರಿ.

ಖಾರ ಪೊಂಗಾಲ್

ಹೆಸರು ಬೇಳೆ – 3/4 ಕಪ್, ಅಕ್ಕಿ -3/4 ಕಪ್, ಜೀರಿಗೆ -1 ಚಮಚ, ಶುಂಠಿ- 1 ಇಂಚು (ತುರಿದಿರುವುದು) ಕರಿಬೇವು/ಒಗ್ಗರಣೆ ಸೊಪ್ಪು, ಹಸಿ ಮೆಣಸಿನ ಕಾಯಿ – 5-6, ಕೊತ್ತಂಬರಿ ಸೊಪ್ಪು, ಕಾಳು ಮೆಣಸಿನ ಪುಡಿ -3/4 ಚಮಚ, ಗೋಡಂಬಿ 10, ಅರಿಶಿನ ಪುಡಿ, ಉಪ್ಪು, ತುಪ್ಪ.

ಮಾಡುವ ವಿಧಾನ

ಕುಕ್ಕರ್ ಪಾತ್ರೆಯಲ್ಲಿ ಅಕ್ಕಿಯನ್ನು ಹಾಕಿ. ಅದಕ್ಕೆ ಹೆಸರು ಬೇಳೆಯನ್ನು ಸೇರಿಸಿ, 3 ನಿಮಿಷಗಳ ಕಾಲ ಹುರಿಯಿರಿ. ಅದಕ್ಕೆ 6 ಕಪ್ ನೀರನ್ನು ಸೇರಿಸಿ. ಒಮ್ಮೆ ತಿರುವಿ, ನಂತರ ಮುಚ್ಚಳವನ್ನು ಮುಚ್ಚಿ. ಕುಕ್ಕರ್ 4-5 ಸೀಟಿ ಕೂಗಲು ಬಿಡಿ. ನಂತರ ಒಂದು ಪಾತ್ರೆಗೆ ತುಪ್ಪವನ್ನು ಹಾಕಿ, ಬಿಸಿ ಮಾಡಿ. ನಂತರ ಜೀರಿಗೆ ಮತ್ತು ಕರಿಬೇವಿನ ಎಲೆ ಸೇರಿಸಿ. ತುರಿದುಕೊಂಡ ಶುಂಠಿ ಮತ್ತು ಸೀಳಿಕೊಂಡ ಹಸಿಮೆಣಸಿನ ಕಾಯಿಯನ್ನು ಸೇರಿಸಿ. ಒಮ್ಮೆ ಚೆನ್ನಾಗಿ ತಿರುವಿ. ಕಾಳು ಮೆಣಸಿನ ಪುಡಿ ಮತ್ತು ಗೋಡಂಬಿಯನ್ನು ಸೇರಿಸಿ. ನಂತರ ಅರಿಶಿನವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಬೇಯಿಸಿಕೊಂಡ ಅನ್ನ ಮತ್ತು ಬೇಳೆಯನ್ನು ಸೇರಿಸಿ. ಒಂದು ಕಪ್ ನೀರನ್ನು ಸೇರಿಸಿ, ಎಲ್ಲಾ ಸಾಮಾಗ್ರಿಗಳು ಹೊಂದಿಕೊಳ್ಳುವಂತೆ ಚೆನ್ನಾಗಿ ಮಿಶ್ರಗೊಳಿಸಿ. 5 ನಿಮಿಷಗಳ ಕಾಲ ಬೇಯಲು ಬಿಡಿ. ಹೆಚ್ಚಿಕೊಂಡ ಕೊತ್ತಂಬರಿಸೊಪ್ಪನ್ನು ಸೇರಿಸಿ. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.

Related Articles

ಪ್ರತಿಕ್ರಿಯೆ ನೀಡಿ

Latest Articles