ಶ್ರೀ ಸುಬುಧೇಂದ್ರ ತೀರ್ಥರ ಪೂವಾಶ್ರಮ ಪಿತ ರಾಜಾ ಎಸ್. ಗಿರಿ ಆಚಾರ್ಯ ಅವರಿಗೆ ಬಳ್ಳಾರಿ ವಿವಿಯಿಂದ ಗೌರವ ಡಾಕ್ಟರೇಟ್

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲದಲ್ಲಿ ಇಂದು(ಡಿ.29) ನಡೆದ 8ನೇ ಘಟಿಕೋತ್ಸವದಲ್ಲಿ ಮಂತ್ರಾಲಯದ ಡಾಕ್ಟರ್ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಪೂವಾಶ್ರಮ ಪಿತ ರಾಜಾ ಎಸ್. ಗಿರಿ ಆಚಾರ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ವಿದ್ವಾನ್ ರಾಜಾ ಎಸ್.ಗಿರಿ ಆಚಾರ್ಯ ಅವರು ಮಂತ್ರಾಲಯದ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷರಾಗಿದ್ದಾರೆ.

ರಾಜಾ ಎಸ್. ಗಿರಿ ಆಚಾರ್ಯ ಅವರ ಪರಿಚಯ

ಮಹಾ ಮಹೋಪಾಧ್ಯಾಯ ರಾಜಾ ಎಸ್.ಗಿರಿ ಆಚಾರ್ಯರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಡಾ|| ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಪೂರ್ವಾಶ್ರಮದ ತಂದೆಯಾಗಿದ್ದಾರೆ.

ಮೈಸೂರು ಪ್ರಾಂತ್ಯದಲ್ಲಿ ಜನನ ಹಾಗೂ ಪಿಯುಸಿವರೆಗೆ ಆಂಗ್ಲ ವಿದ್ಯಾಭ್ಯಾಸ, ನಂತರ ತಮ್ಮ ತಂದೆಯವರಾದ ಶ್ರೀ ಸುಜಯೀಂದ್ರ ತೀರ್ಥ ಶ್ರೀಪಾದಂಗಳವರಲ್ಲಿ ಸಂಸ್ಕೃತ ವಿದ್ಯಾಭ್ಯಾಸ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವಿದ್ಯಾರ್ಥಿಯಾಗಿ ವಿಶೇಷ ತರ್ಕ ಶಾಸ್ತ್ರಾಭ್ಯಾಸವನ್ನು ನಡೆಸಿದರು. ವಿದ್ಯಾಭ್ಯಾಸದ ನಂತರ ಅಧ್ಯಾಪಕರಾಗಿ ಶಾಸ್ತ್ರ , ಮೀಮಾಂಸ, ಜ್ಯೋತಿಷ್ಯ, ಧರ್ಮಶಾಸ್ತ್ರಗಳ ಪಾಠಗಳನ್ನು ಮಾಡಿದ್ದಾರೆ.

ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯ ಸಂಸ್ಕೃತ ವಿದ್ಯಾಲಯದಿಂದ ಮಹಾ ಮಹೋಪಾಧ್ಯಾಯ ಎಂಬ ಬಿರುದನ್ನು ಪಡೆದಿದ್ದಾರೆ. ತಾಮ್ರ ಪತ್ರಗಳ ಸಂಗ್ರಹ ಹಾಗೂ ಸಂಶೋಧನೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಮಂತ್ರಾಲಯದಲ್ಲಿರುವ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷರಾಗಿದ್ದಾರೆ.

ಅನೇಕ ಗ್ರಂಥಗಳ ರಚನೆ ,ಅನುವಾದ ಜೊತೆಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯದ ಆರ್ಯಭಟ ಪ್ರಶಸ್ತಿ, ರಾಷ್ಟ್ರಪತಿಗಳಿಂದ ರಾಷ್ಟ್ರಪತಿ ಪ್ರಶಸ್ತಿ ,ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಆಸ್ಥಾನ ವಿದ್ವಾನ್ ಗೌರವಕ್ಕೆ ಪಾತ್ರರಾಗಿದ್ದಾರೆ ಹಾಗೂ ಕರ್ನಾಟಕ ರಾಜ್ಯದ ಬೋರ್ಡ್ ಎಕ್ಸಾಮಿನರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ರಾಜಾ ಎಸ್ ಗಿರಿ ಆಚಾರ್ಯರಿಗೆ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ವರ್ಚ್ಯುವಲ್ ಅಕಾಡೆಮಿಯಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಲಭಿಸಿವೆ.ಕೆಲವು ಸಂಘ-ಸಂಸ್ಥೆಗಳು ಹಾಗೂ ಕೆಲವು ಮಠಮಾನ್ಯಗಳು ಆಚಾರ್ಯರಿಗೆ ಪಂಡಿತ ಕೇಸರಿ, ಪಂಡಿತರಾಜಾ ,ಪಂಡಿತರತ್ನ ಹಾಗೂ ಮೊದಲಾದ ಬಿರುದುಗಳು ಲಭಿಸಿವೆ.

ಈಗ ಎರಡನೇ ಬಾರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles