ಸಂಸ್ಕಾರದಿಂದ ಸಂಸ್ಕೃತಿ ಉಳಿಯಲು ಸಾಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಕೊಲ್ಲಿಪಾಕಿ(ತೆಲಂಗಾಣ): ಮಾನವನ ಶ್ರೇಯಸ್ಸಿಗೆ ಸಂಸ್ಕಾರ ಬೇಕು. ಸಂಸ್ಕಾರವಿಲ್ಲದ ಮನುಷ್ಯ ಪಶುವಿಗೆ ಸಮಾನ. ಸಂಸ್ಕಾರ ಮತ್ತು ಧರ್ಮ ಪರಿಪಾಲನೆಯಿಂದ ಸಂಸ್ಕೃತಿ ಉಳಿದು ಬೆಳೆದು ಬರಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯ ಪಟ್ಟರು.
ಜನವರಿ 6 ರಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ, ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಅವರು ಆಶೀರ್ವಚನ ನೀಡಿದರು.
ಈ ಕಾಲದಲ್ಲಿ ಸತ್ಯ, ಧರ್ಮ, ನ್ಯಾಯಕ್ಕೆ ಬೆಲೆ ಇಲ್ಲದಂತಾಗಿದೆ. ಹೂವಿನ ಹಾರ ಎಲ್ಲರಿಗೂ ಕಂಡರೂ ಅದರೊಳಗಿನ ದಾರ ಯಾರ ಕಣ್ಣಿಗೂ ಕಾಣುವುದಿಲ್ಲ. ಮರ ಬಿಟ್ಟ ಹಣ್ಣುಗಳು ಕಾಣುತ್ತವೆ ಹೊರತು ಮರದ ಮೂಲ ತಾಯಿ ಬೇರು ಕಾಣುವುದಿಲ್ಲ. ಅದರಂತೆ ಸತ್ಯ ಸನಾತನ ಆಚಾರ್ಯರ ಸಂದೇಶಗಳ ಅರಿವು ಆಚರಣೆ ಇಲ್ಲದ ಕಾರಣ ಬದುಕು ಬರಡಾಗುತ್ತಿದೆ. ನಂಬಿಕೆ ಅನ್ನುವ ಬೇರು ಗಟ್ಟಿಯಾಗಿರುವ ತನಕ ಯಾರೇನು ಮಾಡಿದರೂ ನಾಶಗೊಳಿಸಲು ಸಾಧ್ಯವಿಲ್ಲ. ಅಕ್ಷರ ಕಲಿತ ವ್ಯಕ್ತಿ ಕೆಲವೊಮ್ಮೆ ಭ್ರಷ್ಟನಾಗಬಹುದು. ಆದರೆ ಸಂಸ್ಕಾರ ಕಲಿತ ಮನುಷ್ಯ ಎಂದಿಗೂ ಭ್ರಷ್ಟನಾಗಲಾರ. ಒಳ್ಳೆಯವರಿಗೆ ಇರುವಷ್ಟು ಶತ್ರುಗಳು ಕೆಟ್ಟವರಿಗೆ ಇರುವುದಿಲ್ಲ. ಬೆಳಗುವ ದೀಪ ಬಡವ ಶ್ರೀಮಂತನ ಮನೆಯಲ್ಲಿ ಸಮಾನವಾಗಿ ಬೆಳಕನ್ನು ನೀಡುತ್ತದೆ.ಅದರಂತೆ ವಿಶ್ವಬಂಧುತ್ವ ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜೀವನ ದರ್ಶನ ಸಂದೇಶಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿ ದೀಪ ಎಂದರು.


ಚಂದನಕೇರಾ ಕಟ್ಟಿಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಬೆನಕನಹಳ್ಳಿ ಹಿರೇಮಠದ ವೀರಶಿವಲಿಂಗೇಶ್ವರ ಶಿವಾಚಾರ್ಯರು ನುಡಿ ನಮನ ಸಲ್ಲಿಸಿದರು.
ಕೊಲ್ಲಿಪಾಕಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ನ ಕಾರ್ಯಾಧ್ಯಕ್ಷರಾದ ಬಿಚಗುಂದ ಸೋಮಲಿಂಗ ಶಿವಾಚಾರ್ಯರು, ಕಾರ್ಯದರ್ಶಿ ಅಣ್ಣಾರಾವ್ ಬಿರಾದಾರ, ಸದಸ್ಯರಾದ ಬಾಬುರಾವ್ ಬಿರಾದಾರ, ನಾಂದೇಡಸ ವಿನಾಯಕ ಮೊದಲಾದವರು ಉಪಸ್ಥಿತರಿದ್ದರು. ‘ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಸಮಾರಂಭದ ನೇತೃತ್ವ ವಹಿಸಿದ್ದರು.
ಇದೇ ಸಂದರ್ಭ ಶ್ರೀ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗ, ಗೋತ್ರ ಪುರುಷ ಶ್ರೀ ವೀರಭದ್ರ ಸ್ವಾಮಿ, ಶಕ್ತಿಮಾತೆ ಚಂಡಿಕಾಂಬಾ ದೇವಿಗೆ ವಿಶೇಷ ಪೂಜೆ ಜರುಗಿತು.

ವರದಿ: ಸಿ.ಎಚ್.ಬಾಳನಗೌಡ್ರ

Related Articles

ಪ್ರತಿಕ್ರಿಯೆ ನೀಡಿ

Latest Articles