- ಶ್ರೀನಿವಾಸ ಮೂರ್ತಿ ಎನ್ ಎಸ್
ಹುಂಚ ಎಂದರೆ ನಮಗೆ ನೆನಪಾಗುವುದು ಸಾಂತರಸರು ಮತ್ತು ಅಲ್ಲಿನ ಜೈನ ದೇವಾಲಯಗಳು. ಆದರೆ ಇಲ್ಲಿ ಸುಮಾರು ಎಂಟನೇ ಶತಮಾನದಲ್ಲಿ ನಿರ್ಮಾಣವಾದ ಅಪರೂಪದ ಕಮಠೇಶ್ವರ ದೇವಾಲಯ ಇದ್ದು ಅಷ್ಟಾಗಿ ಯಾರ ಗಮನ ಸೆಳೆಯುವುದಿಲ್ಲ. ಇಲ್ಲಿ ಜೈನ ದೇವಾಲಯಗಳು ನಿರ್ಮಾಣವಾಗುವ ಮುಂಚೆಯೇ ಇಲ್ಲಿ ಶೈವಾರಾಧಾನೆ ಇತ್ತು ಎನ್ನುವದಕ್ಕೆ ಇಲ್ಲಿನ ಕಮಠೇಶ್ವರ ದೇವಾಲವೂ ಒಂದು.
ಸಾಂತರಸರು ಮಲೆನಾಡಿನಲ್ಲಿ ಆಳಿದ ಪ್ರಮುಖ ಪ್ರಾದೇಶಿಕ ರಾಜ ಮನೆತನಗಳಲ್ಲಿ ಪ್ರಮುಖವಾದುದು. ಸಾಂತರಸರು ಬೇರೆ ಭಾಗದಿಂದ ಇಲ್ಲಿ ಬಂದರೂ ಸ್ಥಳೀಯವಾಗಿ ಹೊಂದಿಕೊಂಡು ಜನರ ವಿಶ್ವಾಸದೊಂದಿಗೆ ರಾಜರಾದವರು. ತಮ್ಮ ಕಾಲದಲ್ಲಿ ಸ್ವತಂತ್ರ ರಾಜರಾಗದ ಇವರು ಮಾಂಡಲೀಕರಾಗಿದ್ದರೂ ನಾಡಿನ ವಾಸ್ತು ಲೋಕಕ್ಕೆ ತಮ್ಮದ ಕೊಡುಗೆ ನೀಡಿದವರು. ಮೂಲತಃ ಶೈವ ಬ್ರಾಹ್ಮಣರಾಗಿದ್ದ ನಂತರ ಜಿನದತ್ತನ ಕಾಲದಲ್ಲಿ ಜೈನರಾಗಿ ಪರಿವರ್ತರಾದರು. ಈ ಹಿನ್ನೆಲೆಯಲ್ಲಿ ಈ ದೇವಾಲಯ ಮುಖ್ಯವಾದದ್ದು. ಸಾಂತ ಎಂದರೆ ಶಿವ ಎನ್ನುವದಕ್ಕೆ ಈ ದೇವಾಲಯ ಪ್ರಮುಖ ಸಾಕ್ಷಿಯಂತಿದೆ.
ಕಮಟೇಶ್ವರ ಎಂದರೆ…
ಕಮಠೇಶ್ವರ ಎಂಬುದು ಶಿವಲಿಂಗಕ್ಕಿರುವ ಹೆಸರು. ಕಮಠ ಎಂದರೆ ಆದಿ ಕೂರ್ಮ ವಿಷ್ಣುವಿನ ದಶಾವಾತರಗಳಲ್ಲಿ ಒಂದು. ಅಕ್ಕಸಾಲಿಗರು ಕಮಠೇಶ್ವರ ಅರಾಧಕರು ಎಂಬ ನಂಬಿಕೆ ಇದೆ. ಈ ಪುರಾತನ ದೇವಾಲಯ ಮೂಲತಹ 8ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಇಲ್ಲಿನ ದೇವಾಲಯಕ್ಕೆ 1122ರಲ್ಲಿ ಹಡವಳ ಗಂಗಯ್ಯ ದತ್ತಿ ನೀಡಿದ ಉಲ್ಲೇಖವಿದೆ. ಈ ದೇವಾಲಯವನ್ನು 1122 ರಲ್ಲಿ ಹೆಮಾಡಿ ದೇವರಸ ಜಿರ್ಣೋದ್ದಾರ ಮಾಡಿದ್ದರೆ ನಂತರ ಸುಮಾರು 1287 ರಲ್ಲಿ ಸೋವೆಯ ನಾಯ್ಕ ಹಾಗು ಅವನ ಸಹೋದರರು ಪುನರ್ ಪ್ರತಿಷ್ಟೆ ಮಾಡಿ ದತ್ತಿ ನೀಡಿದ ಉಲ್ಲೇಖವಿದೆ. ಆದರೆ ಈ ದೇವಾಲಯ ಹೆಚ್ಚಿನ ಮಾರ್ಪಟು ಇಲ್ಲದೇ ತನ್ನ ಪ್ರಾಚೀನ ಸ್ವರೂಪವನ್ನ ಉಳಿಸಿಕೊಂಡಿದೆ.
ದೇಗುಲ ವೈಶಿಷ್ಟ್ಯ
ದೇವಾಲಯ ಗರ್ಭಗುಡಿ, ಅಂತರಾಳ ಮತ್ತು ನವರಂಗ (ಸಭಾಮಂಟಪ) ಹೊಂದಿದೆ. ಗರ್ಭಗುಡಿಯ ದ್ವಾರಾಭಂಧ ಚಿಕ್ಕದಾಗಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆ ಹೊಂದಿದೆ. ಗರ್ಭ ಗುಡಿಯಲ್ಲಿ ಶಿವಲಿಂಗ ಇದ್ದು ಸಭಾಮಂಟಪದಲ್ಲಿ ಕಂಭಗಳಿದ್ದು ವಿತಾನದಲ್ಲಿ ಆಶ್ಟ್ಜ ದಿಕ್ಪಾಲಕರು ಹಾಗು ಮಧ್ಯದಲ್ಲಿ ನಟರಾಜನ ಕೆತ್ತನೆ ಇದೆ. ಇಲ್ಲಿನ ಮುಖ್ಯದ್ವಾರದಲ್ಲಿನ ಶಿವನನ್ನ ಪೂಜಿಸುವ ಭಕ್ತ ವೃಂದ ಗಮನ ಸೆಳೆಯುತ್ತದೆ. ಇಲ್ಲಿ ಗಣೇಶ ಮತ್ತು ಕಾರ್ತಿಕೇಯರ ಕೆತ್ತನೆ ಸಹ ನೋಡಭಹುದು, ಡ್ರಾವಿಡ ಶೈಲಿಯ ಈ ದೇವಾಲಯ ದ್ವಿತಲ ಮಾದರಿಯದ್ದು.
ಗಮನ ಸೆಳೆಯುವ ಕೆತ್ತನೆ
ಈ ದೇವಾಲಯ ಗಮನ ಸೆಳೆಯುವುದೇ ಇಲ್ಲಿನ ಹೊರಭಿತ್ತಿಯಲ್ಲಿರುವ ಶಿಲ್ಪಗಳ ಕೆತ್ತನೆಗಳು. ಇಲ್ಲಿ ಗಮನ ಸೆಳೆಯುವುದು ಪಂಚತಂತ್ರದ ಕಥನದ ಕೆತ್ತನೆಗಳು. ಇಲ್ಲಿನ ಪಂಚತಂತ್ರ ಕಥೆಗಳು ನೈಜ ಕಥೆಯನ್ನ ಹೇಳುವಂತಿವೆ. ಮೊಲ ಮತ್ತು ಸಿಂಹದ ಕಥೆಯಲ್ಲಿ ಮೊಲ ಹಾಗು ಸಿಂಹದ ಮಾತುಕಥೆ, ಸಿಂಹಕ್ಕೆ ಬಾವಿಯಲ್ಲಿ ಮತ್ತೊಂದು ಸಿಂಹ ತೋರಿಸುವ ಚಿತ್ರ ಹೇಳುತ್ತದೆ. ಮತ್ತೊಂದು ಕಥೆಯಲ್ಲಿ ಮೊಲ ಮತ್ತು ಆಮೆ ಓಟದ ಸ್ಪರ್ಧೆಯ ಕಥೆ, ಆನೆ ಮತ್ತು ಸಿಂಹ ಜಗಳದ ಕಥೆ, ಅಮೆಯನ್ನ ಹಂಸಗಳು ಕಡ್ಡಿಯಲ್ಲಿ ಹಿಡಿದು ಸಾಗುವ ಕಥೆ, ಕಳ್ಳನ ವಸ್ತ್ರಗಳನ್ನು ಅಪಹರಿಸುವ ಕಥೆಯ ಕೆತ್ತನೆ ಗಮನ ಸೆಳೆಯುತ್ತದೆ.
ಇದರ ಜೊತೆಯಲ್ಲಿ ಮುಂಗುಸಿಯನ್ನ ತನ್ನ ಮಗುವಿನ ರಕ್ಷಣೆಗೆ ಬಿಟ್ಟು ಹೋಗಿ, ಮರಳಿ ಬಂದಾಗ ಮಗು ಕೊಲ್ಲಲು ಬಂದ ಹಾವನ್ನು ಸಾಯಿಸಿದ್ದ ಮುಂಗುಸಿಯ ಬಾಯಲ್ಲಿ ರಕ್ತ ನೋಡಿ ಅದು ತನ್ನ ಮಗುವನ್ನ ಸಾಯಿಸಿದೆ ಎಂದು ಕೊಲ್ಲುವ ಕೆತ್ತೆನೆ ಸುಂದರವಾಗಿದೆ. ಇದಲ್ಲದೇ ಆನೆಯು ತನ್ನ ದಂತದಿಂದ ಮಾನವನನ್ನ ಕೊಲ್ಲುತಿರುವುದು, ವಾಮನ ಕೆತ್ತನೆ, ಮಿಥುನ ಶಿಲ್ಪಗಳು, ಸಿಂಹ ಶಾರ್ದೂಲ ಕಾಳಗ, ಇನ್ನು ಕಪೋತ ಬಾಗದಲ್ಲಿನ ರಾಮಾಯಣದ ಕೆತ್ತೆನೆಗಳು ಹನುಮಂತನಿಗೆ ಮುದ್ರಿಕೆ ನೀಡುತ್ತಿರುವ ಕೆತ್ತನೆ, ಪುಷ್ಪಕ ವಿಮಾನದಲ್ಲಿ ಸೀತಾಪಾಹರಣ ಹಾಗು ಜಟಾಯು ವಧೆ ಹಾಗು ಕುಬ್ಜರ ಕೆತ್ತನೆ ಗಮನ ಸೆಳೆಯುತ್ತದೆ.
ತಲುಪುವ ಬಗ್ಗೆ: ಶಿವಮೊಗ್ಗದಿಂದ ರಿಪ್ಪನ ಪೇಟೆ ಮೂಲಕ ಹುಂಚ ತಲುಪಬಹುದು. (ಸುಮಾರು 35 ಕಿ ಮೀ). ಇಲ್ಲಿನ ಪಂಚಬಸದಿ, ಪುರಾತನ ಬಾಹುಬಲಿ ಮತ್ತು ಪದ್ಮಾವತಿ ದೇವಾಲಯ ಸಹ ನೋಡಬಹುದು.
ಲೇಖಕರ ಪರಿಚಯ:
(ಎನ್.ಎಸ್.ಶ್ರೀನಿವಾಸ ಮೂರ್ತಿ ಪ್ರಸಿದ್ಧ ಗಣಿತ ಲೇಖಕರಾಗಿದ್ದ ಸೀತಾರಾಮ ರಾವ್ ಅವರ ಪುತ್ರ. ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದಲ್ಲಿ ತಮ್ಮ ಆರಂಭಿಕ ವಿದ್ಯಾಭ್ಯಾಸ ಮುಗಿಸಿ ನಂತರ ಕುವೆಂಪು ವಿವಿಯಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದರು. ನಂತರ ನಾಲ್ಕು ರ್ವ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ಈಗ ಕಳೆದ 23 ವರ್ಷಗಳಿಂದ ಕರ್ಣಾಟಕ ಬ್ಯಾಂಕ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ನೆಲೆಸಿದ್ದು, ಪ್ರಸ್ತುತ ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ15 ವರ್ಷಗಳಿಂದ ದೇವಾಲಯಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಇವರು ಈ ನಿಮಿತ್ತ ರಾಜ್ಯದ ಸುಮಾರು 1500ಕ್ಕೂ ಅಧಿಕ ಪುರಾತನ ದೇವಾಲಯಗಳಿಗೆ ಭೇಟಿ ನೀಡಿದದ್ದು, ಇದನ್ನು ಕೇವಲ ಸಂಶೋಧನೆಗೆ ಸೀಮಿತಗೊಳಿಸಿದೇ ಜನಸಾಮಾನ್ಯರಿಗೂ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಭೇಟಿ ನೀಡಿದ ದೇಗುಲಗಳ ಛಾಯಾಚಿತ್ರ ತೆಗೆಯುವ ಹವ್ಯಾಸ ಹೊಂದಿದ್ದು, ಸುಮಾರು 20 ಸಾವಿರಕ್ಕೂ ಅಧಿಕ ಛಾಯಾಚಿತ್ರಗಳನ್ನು ಸಂಗ್ರಹ ಮಾಡಿದ್ದಾರೆ. 250ಕ್ಕೂ ಹೆಚ್ಚು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.)