ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರಕ್ಕೆ ಭಕ್ತರಿಂದ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ದೆಹಲಿಯಲ್ಲಿ ಬುಧವಾರ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅದರ ಸಹಯೋಗಿ ಸಂಘಟನೆಗಳ ಕಾರ್ಯಕರ್ತರು ಫೆ.27ರವರೆಗೆ ದೇಶವ್ಯಾಪಿ ದೇಣಿಗೆ ಸಂಗ್ರಹ ಅಭಿಯಾನದಲ್ಲಿ ತೊಡಗಲಿದ್ದಾರೆ.
2024ರೊಳಗೆ ದೇಗುಲ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿಯನ್ನು ರಾಮಮಂದಿರ ನಿರ್ಮಾಣ ಟ್ರಸ್ಟ್ ಹೊಂದಿದೆ. ಕಳೆದ ವರ್ಷ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕರಾಗಿರುವ ಡಾ.ಮೋಹನ್ ಭಾಗವತ್ ಅವರು ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಅಭಿಯಾನದಲ್ಲಿ ನಿರತರಾಗಿದ್ದು, ಇಂದು ದೆಹಲಿಯಲ್ಲಿ ರಾಷ್ಟ್ರೀಯ ವಾಲ್ಮೀಕಿ ಮಂದಿರದ ಸಂತ ಪೂಜ್ಯ ಮಹಾಮಂಡಲೇಶ್ವರ ಕೃಷ್ಣ ಶಾಹ್ ವಿದ್ಯಾರ್ಥಿಜೀ ಅವರನ್ನು ಭೇಟಿ ಮಾಡಿದರು.