*ದೇವಿಪ್ರಸಾದ್ ಗೌಡ ಸಜಂಕು
ಭಾಗವತ ಪುರಾಣದಲ್ಲಿ ಭಗವಂತನ ದತ್ತಾತ್ರೇಯ ಅವತಾರದ ಬಗ್ಗೆ ಇದ್ದರೂ ಮಾರ್ಕಂಡೇಯ ಪುರಾಣದಲ್ಲಿ ಯೋಗಾಚಾರ್ಯ ದತ್ತಾತ್ರೇಯರ ಬಗ್ಗೆ ಬಹು ಸುಂದರವಾಗಿ ತಿಳಿಸಿದ್ದಾರೆ. ಅದು ಕೂಡಾ ಮಗ ತಂದೆಗೆ ಹೇಳುವ ಕತೆ.
ಸುಮತಿ ಎಂಬ ಪೂರ್ವ ಜನ್ಮದ ಸ್ಮೃತಿ ಇದ್ದ ಅಪರೋಕ್ಷ ಜ್ಞಾನಿ. ವಿಪ್ರ ಬಾಲಕನಿಗೆ ಆತನ ತಂದೆ ತನ್ನ ಮಗನ ಯೋಗ್ಯತೆಯ ಅರಿವಿಲ್ಲದೆ ವೈದಿಕ ಕರ್ಮಗಳನ್ನು ಅನುಷ್ಠಾನ ಮಾಡಲು ಹೇಳಿದಾಗ ಭಗವಂತನ ಅರಿವು, ಜ್ಞಾನಕ್ಕೆ ಪೂರಕವಾಗಿ ವೈದಿಕ ಕರ್ಮಗಳು ಬೇಕು. ಭಗವಂತನ ಬಗ್ಗೆ ಪೂರ್ಣ ಅರಿವು ಆದ ಮೇಲೆ ವೈದಿಕ ಕರ್ಮಗಳು ಯಾಕೆ ಎಂದು ತನ್ನ ತಂದೆಗೆ ಕೇಳುತ್ತಾನೆ.
ಆಗ ತಂದೆ ನಿನಗೆ ಅರಿವು ಆಗಿದೆಯೇ, ಹೇಗೆ ಇತ್ಯಾದಿ ಪ್ರಶ್ನೆ ಕೇಳಿದಾಗ ತನಗೆ ಪೂರ್ವ ಜನ್ಮದ ಸ್ಮೃತಿ ಇರುವ ರಹಸ್ಯವನ್ನು ತನ್ನ ತಂದೆಗೆ ಹೇಳುತ್ತಾನೆ.
ತಂದೆಗೆ ಕುತೂಹಲವಾಗಿ ಸ್ವರ್ಗ, ನರಕದ ಬಗ್ಗೆ, ಭಗವಂತನ ಸಾಕ್ಷಾತ್ಕಾರದ ಬಗ್ಗೆ ಕೇಳಿದಾಗ ಇವೆಲ್ಲವನ್ನೂ ವಿವರಿಸಿ ಜ್ಞಾನಯೋಗ ಒಂದೇ ಭಗವಂತನ ಸಾಕ್ಷಾತ್ಕಾರದ ದಾರಿ ಎನ್ನುತ್ತಾನೆ.
ಆಗ ತಂದೆ ಮಗನಲ್ಲಿ ಆ ಜ್ಞಾನಯೋಗವನ್ನು ತನಗೆ ತಿಳಿಸಬೇಕು ಎಂದು ಕೇಳಿದಾಗ ಯೋಗಾಚಾರ್ಯ ದತ್ತಾತ್ರೇಯರ ಬಗ್ಗೆ, ದತ್ತಾತ್ರೇಯ ಯೋಗದ ಬಗ್ಗೆ ತನ್ನ ತಂದೆಗೆ ಉಪದೇಶ ಮಾಡುತ್ತಾನೆ. ಸ್ವಾಯಂಭು ಮನ್ವಂತರದಲ್ಲಿ ಅತ್ರಿ ಮುನಿಗಳು ಭಗವಂತನನ್ನು ಕುರಿತು ತಪಸ್ಸು ಮಾಡಿ ಒಲಿಸಿಕೊಂಡು ಭಗವಂತನಲ್ಲಿ ಭಗವಂತನೇ ತನ್ನ ಮಗನಾಗಿ ಅವತರಿಸಬೇಕು ಎಂದು ಬೇಡಿದಾಗ ಭಗವಂತನು “ಸ್ವಯಂ ದತ್ತಃ “ ಎಂಬ ವಚನ ನೀಡುತ್ತಾನೆ.
ಇದೇ ಸಮಯದಲ್ಲಿ ಅತ್ರಿ ಮುನಿಗಳ ಪತ್ನಿ ಅನಸೂಯ ಮಾತೆಯ ಪಾತಿವ್ರತಕ್ಕೆ ಒಲಿದ ದೇವತೆಗಳು ಏನು ವರ ಬೇಕು ಎಂದು ಕೇಳಿದಾಗ ತ್ರಿಮೂರ್ತಿಗಳು ತನ್ನ ಮಕ್ಕಳಾಗಿ ಅವತರಿಸಬೇಕು ಎಂದು ಬೇಡುತ್ತಾರೆ. ದೇವತೆಗಳ ಮಾತು ಸತ್ಯ ಮಾಡಲು ಬ್ರಹ್ಮ ದೇವರಿಗೆ ಅವತಾರ ಇಲ್ಲದಿದ್ದರೂ ತನ್ನಂಶದಿಂದ ಚಂದ್ರ ಅವತರಿಸುತ್ತಾನೆ. ಭಗವಂತನಾದ ನಾರಾಯಣನು ಅತ್ರಿ ಮುನಿಗಳಿಗೂ “ಸಯಂ ದತ್ತಃ” ಎಂಬ ವರ ನೀಡಿದ್ದ ಕಾರಣ ದತ್ತಾತ್ರೇಯನಾಗಿ ಅನಸೂಯ ಮಾತೆಯ ಗರ್ಭದಲ್ಲಿ ಉದಯಿಸುತ್ತಾನೆ. ಹಾಗೆಯೇ ಮಹಾದೇವನೂ ಅನಸೂಯ ಗರ್ಭದಲ್ಲಿ ಪ್ರವೇಶ ಆದರೂ ಗರ್ಭವಾಸ ಅಸಹನೆ ಆಗಿ ಏಳೇ ದಿನದಲ್ಲಿ ಮಗುವಾಗಿ ಜನಿಸಿ ದೂರ್ವಾಸ ಎಂದು ಕರೆಸಿಕೊಳ್ಳುತ್ತಾನೆ.
ಮುಂದೆ ದತ್ತಾತ್ರೇಯ ಜ್ಞಾನಯೋಗದಲ್ಲಿ ತೇಲಾಡುತ್ತಿರುವಾಗ ಅವನಲ್ಲಿ ಉಪದೇಶ ಪಡೆಯಲು ಜನರೆಲ್ಲ ಮುಗಿಬಿದ್ದಾಗ ಜನರನ್ನು ಮೋಹಗೊಳ್ಳುವಂತೆ ಮಾಡಿ ಜನರಿಂದ ದೂರವಾಗಿ ಏಕಾಂತವಾಗಿ ನಿಲ್ಲುತ್ತಾರೆ. ಆದರೂ ಇಬ್ಬರನ್ನು ತನ್ನ ಶಿಷ್ಯರನ್ನಾಗಿ ಸ್ವೀಕಾರ ಮಾಡಿ ಉದ್ದರಿಸುತ್ತಾನೆ. ಅವರೇ ಕೃತವೀರ್ಯ ರಾಜನ ಮಗ ಕಾರ್ತವೀರ್ಯಾರ್ಜುನ ಮತ್ತು ಕುವಲಯಾಶ್ವ ರಾಜನ ಮಗ ಅಲರ್ಕ.
ಕಾರ್ತವೀರ್ಯಾರ್ಜುನ ವೈರಾಗ್ಯ ಹೊಂದಿ ತಂದೆಯ ನಂತರ ರಾಜ ಪದವಿ ಬೇಡ ಎಂದಾಗ ಮುನಿ ಜನಗಳ, ಪ್ರಜೆಗಳ ಒತ್ತಾಯಕ್ಕೆ ಮಣಿದು ದತ್ತಾತ್ರೇಯರಲ್ಲಿ ಶಿಷ್ಯತ್ವ ಬೇಡಿ ಬಂದಾಗ ರಾಜ್ಯದ ಹಿತಕ್ಕಾಗಿ ಆತನಿಗೆ ಜ್ಞಾನ ಯೋಗ ಬೋಧಿಸಿ ಉದ್ದರಿಸಿ ಉತ್ತಮ ರಾಜನನ್ನಾಗಿ ರೂಪಿಸುತ್ತಾನೆ. ಹಾಗೆಯೇ ಕುವಲಯಾಶ್ವ ರಾಜನ ಮಗನೂ ವೈರಾಗ್ಯ ಹೊಂದಿದಾಗ ಆತನಿಗೂ ಜ್ಞಾನ ಯೋಗ ಬೋಧಿಸಿ ರಾಜ್ಯಾಭಿಷೇಕ ಮಾಡಿಸುತ್ತಾನೆ.
ಅಲರ್ಕ ಅಂದರೆ ಹುಚ್ಚು ನಾಯಿ ಎಂದು ಅರ್ಥ. ಕುವಲಯಾಶ್ವ ಪುತ್ರ ಪ್ರಾಪ್ತಿ ಆದಾಗ ಮೊದಲನೇ ಮಗನಿಗೆ ವಿಕ್ರಮ, ಎರಡನೆಯ ಮಗನಿಗೆ ಸುಭಾಹು ಮತ್ತು ಮೂರನೇಯ ಮಗನಿಗೆ ಅರಿಮರ್ಧನ ಎಂಬ ಹೆಸರು ಇಡುತ್ತಾನೆ. ಆದರೆ ಪ್ರತಿ ಬಾರಿ ನಾಮಕರಣ ಮಾಡುವಾಗ ಪರಮ ಜ್ಞಾನಿಯಾದ ಆತನ ಮಡದಿ ಈ ಹೆಸರುಗಳು ಭಗವಂತನಿಗೆ ಮಾತ್ರ ಹೊಂದುವುದಾಗಿಯೂ, ಮಕ್ಕಳಿಗೆ ಇದನ್ನು ಇಡುವುದರಿಂದ ಅವರ ವಿಶೇಷತೆ ಹೇಗೆ ಗುರುತಿಸಲ್ಪಡುತ್ತದೆ ಎಂದು ಕೇಳಿದಾಗ ನಾಲ್ಕನೇ ಮಗನಿಗೆ ಪತ್ನಿಯಲ್ಲಿಯೇ ನಾಮಕರಣ ಮಾಡಲು ಹೇಳಿದಾಗ ಆಕೆ ಅಲರ್ಕ ( ಶಬ್ದಅರ್ಥ – ಹುಚ್ಚುನಾಯಿ) ಎಂಬ ಹೆಸರು ಸೂಚಿಸುತ್ತಾಳೆ.
ಕುವಲಯಾಶ್ವನ ಮೊದಲ ಮೂರು ಮಕ್ಕಳೂ ರಾಜ್ಯ ಬೇಡ ಎಂದು ಹೋಗುತ್ತಾರೆ. ಆಗ ಅಲರ್ಕನೂ ರಾಜ ಪದವಿ ಬೇಡ ಎಂದು ದತ್ತಾತ್ರೇಯರ ಬಳಿಗೆ ಬಂದಾಗ ಆತನನ್ನು ಪರೀಕ್ಷೆ ಮಾಡಿ ಶಿಷ್ಯನನ್ನಾಗಿ ಸ್ವೀಕರಿಸಿ ಆತನಿಗೆ ಸಕಲ ಜ್ಞಾನವನ್ನು ಧಾರೆ ಎರೆದು ರಾಜ್ಯಾಭಿಷೇಕ ಮಾಡಿಸುತ್ತಾರೆ. ಹೀಗೆ ದತ್ತಾತ್ರೇಯರು ಯೋಗಾಚಾರ್ಯರಾಗಿ ಪ್ರಸಿದ್ಧಿ ಪಡೆಯುತ್ತಾರೆ. ಆದರೆ ಜನ ಅವರು ಏಕಾಂತಕ್ಕಾಗಿ ಜನರನ್ನು ಮೋಹಗೊಳಿಸಲು ಹೂಡಿದ ಉಪಾಯವನ್ನು ಒಂದು ಪಂಥವಾಗಿ ಅನುಸರಿಸಿ ಅದನ್ನು ವಾಮಾಚಾರ ಪಂಥವಾಗಿ ಮುನ್ನಡೆದರು. ಹಾಗೆಯೇ ಚಿತ್ರಕಾರರು ದತ್ತಾತ್ರೇಯ ತ್ರಿಮೂರ್ತಿಗಳ ಅವತಾರ ಎಂದು ದತ್ತಾತ್ರೇಯನಿಗೆ ಮೂರು ತಲೆ ಜೋಡಿಸಿ ಚಿತ್ರ ಬರೆದರು. ಜೊತೆಗೆ ಅವರ ಪರಮಶಿಷ್ಯ ಅಲರ್ಕನ ಬಗ್ಗೆ ತಿಳಿಯದೆ ಕೇವಲ ಶಬ್ದ ಅರ್ಥ ಮಾಡಿ ನಾಯಿಯನ್ನು ದತ್ತಾತ್ರೇಯರ ಚಿತ್ರದಲ್ಲಿ ಬರೆದರು.
ಆದರೆ ವಾಸ್ತವದಲ್ಲಿ ಭಗವಂತನೇ ಅತ್ರಿ ಮುನಿಗಳಿಗೆ ವರ ನೀಡಿ ದತ್ತರಾದ ಕಾರಣ ಅತ್ರೇಯರಾದರು. ಆದರೆ ಚಂದ್ರ ಹಾಗೂ ದೂರ್ವಾಸರು ಅತ್ರಿ ಅನಸೂಯರ ಮಕ್ಕಳೇ ಆದರೂ ಆತ್ರೇಯ ಎಂದು ಕರೆಸಿಕೊಂಡಿಲ್ಲ. ತ್ರಿಮೂರ್ತಿಗಳು ಅತ್ರಿ ಅನಸೂಯರಲ್ಲಿ ಬೇರೆ ಬೇರೆಯಾಗಿಯೇ ಅವತರಿಸಿದ್ದು ದತ್ತಾತ್ರೇಯರು ಭಗವಂತ ನಾರಾಯಣನ ನೇರ ಅವತಾರ ಆಗಿದೆ. ಹಾಗೆಯೇ ದತ್ತಾತ್ರೇಯರಿಗೂ ನಾಯಿಗೂ ಏನೂ ಸಂಬಂಧ ಇಲ್ಲ.
ಅಲರ್ಕ ಎನ್ನುವ ರಾಜ ಅವರ ಶಿಷ್ಯ. ಅಲರ್ಕ ಎಂಬುದು ಆ ರಾಜನ ಹೆಸರೇ ಹೊರತು ನಾಯಿ ಅಲ್ಲ. ಆದರೆ ನಾವು ದತ್ತಾತ್ರೇಯರ ಬಗ್ಗೆ, ದತ್ತಾತ್ರೇಯ ಯೋಗದ ಬಗ್ಗೆ ತಿಳಿಯದೆ ಬರೇ ದತ್ತಾತ್ರೇಯ ಗುರುವಿನ ಬಗ್ಗೆ ದತ್ತ ಪೀಠದ ಬಗ್ಗೆ ಮಾತನಾಡುವ ಮೊದಲು ದತ್ತಾತ್ರೇಯ ಯೋಗ, ಜ್ಞಾನ ಯೋಗ ನಾವು ಅರಿಯವ. ಅದಕ್ಕಾಗಿ ಭಾಗವತ ಹಾಗೂ ಮಾರ್ಕಂಡೇಯ ಪುರಾಣ ಪಾರಾಯಣ, ಪ್ರವಚನ ಕೇಳೋಣ.