ಸಿದ್ಧಗಂಗಾ ಶ್ರೀಗಳು ತುಮಕೂರಿಗೆ ದಾಸೋಹ ದೀಕ್ಷೆಯನ್ನು ಕೊಟ್ಟಿದ್ದಾರೆ : ಡಾ. ಶ್ರೀ ಶಿವಾನಂದ ಶಿವಾಚಾರ್ಯರು

ತುಮಕೂರು: ಬೇರೆ ಗುರುಗಳು ತಮ್ಮ ಭಕ್ತರಿಗೆ ಲಿಂಗ ದೀಕ್ಷೆಯನ್ನೋ, ಮಂತ್ರ ದೀಕ್ಷೆಯನ್ನೋ, ಉಪವೀತ ದೀಕ್ಷೆಯನ್ನೋ, ಸದ್ಭಾವ ದೀಕ್ಷೆಯನ್ನೋ, ಸತ್ಸಂಗ ದೀಕ್ಷೆಯನ್ನೋ ಕೊಟ್ಟಿರಬಹುದು. ಆದರೆ ಪರಮಪೂಜ್ಯ ಲಿಂಗೈಕ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ತಮ್ಮ ಭಕ್ತರಿಗೆ ಮಾತ್ರವಲ್ಲ, ಇಡೀ ತುಮಕೂರಿಗೆ ದಾಸೋಹ ದೀಕ್ಷೆಯನ್ನು ಕೊಟ್ಟಿದ್ದಾರೆ ಎಂದು ತುಮಕೂರು ಹಿರೇಮಠದ ಡಾ. ಶ್ರೀ ಶಿವಾನಂದ ಸ್ವಾಮೀಜಿ ನುಡಿದರು.

ಪರಮಪೂಜ್ಯ ಲಿಂಗೈಕ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ದ್ವಿತೀಯ ಪುಣ್ಯಸ್ಮರಣೋತ್ಸವದ ನಿಮಿತ್ತ ಚಿಕ್ಕಪೇಟೆಯಲ್ಲಿ ಜ.21ರಂದು ಚಿನ್ನ, ಬೆಳ್ಳಿ ಕೆಲಸಗಾರರ ಸಂಘ ಏರ್ಪಡಿಸಿದ್ದ ‘ಅನ್ನಸಂತರ್ಪಣಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಕಾರಣದಿಂದಾಗಿಯೇ, ತುಮಕೂರಿನಲ್ಲಿ ಒಂದಲ್ಲ, ಇನ್ನೊಂದು ಸಂದರ್ಭದಲ್ಲಿ ದಾಸೋಹವು ನಡೆದುಕೊಂಡಿರುತ್ತದೆ. ತುಮಕೂರಿನ ಜನಗಳಿಗೆ ದಾಸೋಹ ಮಾಡುವುದು ಮತ್ತು ಮಾಡಿದ ದಾಸೋಹವನ್ನು ನೀಡುವುದು, ಜನಗಳಿಗೆ ಉಣಬಡಿಸುವುದು ಎಂದರೆ ಮೈ ತುಂಬ ಹಬ್ಬ, ಮನಸ್ಸಿನ ತುಂಬ ಉಲ್ಲಾಸ! ತುಮಕೂರಿನ ಜನಗಳಿಗೆ ‘ಲಿಂಗಮಧ್ಯೇ ಜಗತ್ಸರ್ವಮ್’ ಎಂದು ಹೇಳಿದರೆ ಅವರು ಒಪ್ಪಲ್ಲ.
ಅವರು ಅದನ್ನು ತಿದ್ದುಪಡಿ ಮಾಡಿಬಿಟ್ಟು ‘ದಾಸೋಹ ಮಧ್ಯೇ ಜಗತ್ಸರ್ವಮ್' ಎಂದು ಹೇಳುತ್ತಾರೆ. ಅವರಿಗೆ “ಈಶಾವಾಸ್ಯಮಿದಂ ಸರ್ವಮ್” ಎಂದು ಹೇಳಿದರೆ, ಅವರು ‘ದಾಸೋಹಾವಾಸ್ಯಮಿದಂ ಸರ್ವಮ್' ಎಂದು ಹೇಳುತ್ತಾರೆ. ಲೋಕೋದ್ಧಾರಕ್ಕಾಗಿ ವಿಷ್ಣುಪರಮಾತ್ಮ ದಶಾವತಾರಗಳನ್ನು ಧರಿಸಿದಂತೆ ಪರಮಪೂಜ್ಯ ಸಿದ್ಧಗಂಗಾ ಶ್ರೀಗಳು ಹಸಿವೆಯ ಉಪಶಮನಕ್ಕಾಗಿ ‘ದಾಸೋಹಾವತಾರ” ಧರಿಸಿಬಂದು ನಮ್ಮ, ನಿಮ್ಮಗಳ ಮಧ್ಯದಲ್ಲಿ ನಡೆದಾಡಿದರು.
ಶ್ರೀಗಳ ಮೇಲೆ ತುಮಕೂರಿನ ಜನಗಳದು ನಿರ್ವ್ಯಾಜ ಪ್ರೀತಿ. ಶ್ರೀಗಳನ್ನು ಎಲ್ಲರೂ ಪ್ರೀತಿಸುತ್ತಾರೆ. ಎಲ್ಲರೂ ಅವರನ್ನು ಗೌರವಿಸುತ್ತಾರೆ. ಎಲ್ಲರೂ ಅವರನ್ನು ಪೂಜಿಸುತ್ತಾರೆ. ಅಕ್ಕಮಹಾದೇವಿ ತನ್ನ ಇಷ್ಟದೈವ ಚೆನ್ನಮಲ್ಲಿಕಾರ್ಜುನನನ್ನು, ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವ, ಸೀಮೆಯಿಲ್ಲದ ನಿಸ್ಸೀಮ ಚೆಲುವ ಎಂದು ವರ್ಣಿಸಿದ ಹಾಗೆ, ಸಿದ್ಧಗಂಗಾ ಶ್ರೀಗಳನ್ನು ಎಲ್ಲ ಜನಗಳು ಜಾತಿಯಿಲ್ಲದ, ಉಪಜಾತಿಯಿಲ್ಲದ, ಪಕ್ಷವಿಲ್ಲದ, ಪಂಗಡವಿಲ್ಲದ, ಪಕ್ಷಪಾತವಿಲ್ಲದ, ಆಲಸ್ಯ, ಆಯಾಸ, ಅಲಸಿಕೆಯಿಲ್ಲದ, ಲೋಕಕಲ್ಯಾಣ ಕಾರ್ಯದಲ್ಲಿ ದಣಿವಿಲ್ಲದ, ಕೆಂಚ, ಕರಿಕನೆಂಬ ಭೇದವಿಲ್ಲದ, ದರಿದ್ರ, ಸಿರಿವಂತರೆAಬ ಉಭಯವಿಲ್ಲದ ನಿತ್ಯ ನಿಸ್ಸೀಮ ಗುರುವರ' ಎಂದು ಬಣ್ಣಿಸುತ್ತಾರೆ ಮತ್ತು ಹಾಗೆಂದು ಭಾವಿಸುತ್ತಾರೆ. ವೀರಶೈವ ಲಿಂಗಾಯತರು ಪರಮಪೂಜ್ಯರನ್ನುನಮ್ಮವರು” ಎಂದು ಹೇಳಿಕೊಳ್ಳಬಹುದು.
ಆದರೆ ವೀರಶೈವರಲ್ಲದವರು, ಲಿಂಗಾಯತರಲ್ಲದವರು ಸಿದ್ಧಗಂಗಾ ಶ್ರೀಗಳನ್ನು ನಮ್ಮವರು ಎಂದು ಹೇಳಿದರೆ ವೀರಶೈವ-ಲಿಂಗಾಯತರು ದೂರುವ ಹಾಗಿಲ್ಲ. ಅವರು ನಿಮ್ಮವರಲ್ಲ; ಅವರು ನಮ್ಮವರು. ಅವರು ಕೇವಲ ನಮ್ಮವರು. ಅವರ ನಮಗೆ ಮಾತ್ರ ಮೀಸಲು ಎಂದು ವೀರಶೈವ-ಲಿಂಗಾಯತರು ಹೇಳುವ ಹಾಗಿಲ್ಲ. ಪರಮಪೂಜ್ಯರ ಮೇಲೆ ಜಾತಿಸಂಹಿತೆಯನ್ನು ಜಾರಿಮಾಡುವ ಹಾಗಿಲ್ಲ. ಅದಕ್ಕೆ ಸಿದ್ಧಗಂಗಾ ಶ್ರೀಗಳು ಅವಕಾಶ ಕೊಟ್ಟಿಲ್ಲ. ಪೂಜ್ಯ ಸಿದ್ಧಗಂಗಾ ಶ್ರೀಗಳು ಜಾತಿಗುರುಗಳಲ್ಲ; ಅವರು ಜಾತ್ಯತೀತ ಗುರುಗಳು. ಅವರು ಜಾತಿ, ಉಪಜಾತಿಗಳಿಗೆ ಅತೀತರಾದ ಗುರುಗಳು!
ಸಿದ್ಧಗಂಗಾ ಶ್ರೀಗಳು ಎಲ್ಲರವರು - ಅಂಥೊ0ದು ಹಕ್ಕನ್ನು ಪರಮಪೂಜ್ಯರು ತಮ್ಮ ಜೀವಿತಾವಧಿಯಲ್ಲಿ ಎಲ್ಲರಿಗೂ ಕೊಟ್ಟು ಎಲ್ಲರನ್ನೂ ಅನುಗ್ರಹಿಸಿದ್ದಾರೆ. ಇದು ಕಾರಣವಾಗಿ, ಪರಮಪೂಜ್ಯ ಶ್ರೀಗಳನ್ನು, ಜಾತಿಗೂಡಿನಲ್ಲಾಗಲಿ, ಜೇನುಗೂಡಿನಲ್ಲಾಗಲಿ ಹಿಡಿದಿಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ಪರಮಪೂಜ್ಯರ ಮೇಲೆ ಜಾತಿ, ಉಪಜಾತಿಗಳ ದಿಗ್ಬಂಧನವನ್ನು ಹೇರುವುದಕ್ಕೆ ಆಗುವುದಿಲ್ಲ. ಅದೇನು ಕಾರಣವೆಂದರೆ, ಪರಮಪೂಜ್ಯರು ತಮ್ಮ ಬದುಕಿಗೆ ವಸುಧೈವ ದೀಕ್ಷೆಯನ್ನು ಮತ್ತು ವಸುಧೈವಕುಟುಂಬ ದೀಕ್ಷೆಯನ್ನು ಕೊಟ್ಟುಕೊಂಡಿದ್ದರು. ಪರಮಪೂಜ್ಯರುಕೇವಲ ನಮ್ಮವರು” ಎಂದು ಯಾರೂ ಸಹ ಕ್ಲೇಮ್ ಮಾಡುವ ಹಾಗಿಲ್ಲ! ಅವರು ವಿಶ್ವಮಾನವರು. ಅವರು ವಿಶ್ವಪಥದಲ್ಲಿ ನಡೆದ ಮಹಾಚೇತನ! ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಸದಸ್ಯರಾದ ಟಿ. ಎಮ್. ಮಹೇಶ್, ಚಿನ್ನ, ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಚಿಕ್ಕಪೇಟೆಯ ಹಿರಿಯ ನಾಗರಿಕರು ಮತ್ತು ಯುವಕರು ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles