ಆಕೆ ಲಾವಣ್ಯದ ಮಹಾನಿಧಿ

*ಕೃಷ್ಣಪ್ರಕಾಶ್ ಉಳಿತ್ತಾಯ

ಶಿಂಜಾನಮಣಿಮಂಜೀರಮಂಡಿತಶ್ರೀಪದಾಂಬುಜಾ|
ಮರಾಲೀಮಂದಗಮನಾ ಮಹಾಲಾವಣ್ಯಶೇವಧಿಃ||

ತಾಯಿಯ ಪಾದಗಳನ್ನು ವರ್ಣಿಸಿದಷ್ಟೂ ಸಾಕಾಗದು ಋಷಿಗೆ. ಆಕೆಯ ಅಡಿದಾವರೆಗಳಿಗೆ ಕಾಲಂದಿಗೆಗಳನ್ನು ತೊಡಿಸಿದ್ದಾರೆ.  ಇದು ಮಣಿಮಂಜೀರದಿಂದ ಕೂಡಿದೆ. ಇದರ ಝಣತ್ಕಾರದಿಂದ ತಾಯಿಯ ಪಾದಗಳು ಪರಿಶೋಭಿಸುತ್ತಿದೆ.
“ಮರಾಲೀಮಂದಗಮನಾ” ಹಂಸದಂತೆ ಮೆಲ್ಲನೆಯ ನಡಿಗೆಯನ್ನು ಹೊಂದಿದವಳು ತಾಯಿ ಲಲಿತೆ. ಆಕೆಯು ಲಾವಣ್ಯದ ಮಹಾನಿಧಿಯಾಗಿರುವವಳು.
ಇಲ್ಲಿ ಋಷಿ ಕವಿಯೂ ಆಗುತ್ತಾನೆ ಭಕ್ತನೂ ಆಗುತ್ತಾನೆ. ಪದಾಂಜಾ ಎಂಬ ರೂಪಕಾಲಂಕಾರ ಹುಟ್ಟಿದ್ದೇ ತಾಯಿಯ ಪದದ್ವಯಗಳನ್ನು ನೋಡಿದ ಕವಿಯಿಂದೇನೋ ಎಂದು ಭಾಸವಾಗುತ್ತದೆ. ಕೇವಲ ತಾವರೆಯಡಿವಳೆಂದು ಕರೆದದ್ದಲ್ಲ. ಸಿರಿದಾವರೆಯಡಿವಳೆಂದಿದೆ ನಾಮ. ಅಂತೆಯೇ, ಮತ್ತಿನ ಹೆಸರಿನಲ್ಲಿ “ಮರಾಲೀಮಂದಗಮನಾ” ಇದು ಉಪಮಾಲಂಕಾರ. ಇಲ್ಲಿ ಉಪಮೇಯ ಮತ್ತು ಉಪಮಾವಾಚಕ ಎರಡೂ ಲುಪ್ತವಾಗಿದ್ದು ಉಪಮಾನ ಮತ್ತು ಸಾಧಾರಣ ಧರ್ಮ ಮಾತ್ರ ಹೇಳಲ್ಪಟ್ಟಿದೆ. ಉಪಮನವಾದ ಮರಾಲೀ (ಹಂಸ); ಸಾಧಾರಣ ಧರ್ಮವಾದ ಮಂದಗಮನ ಇದರಿಂದ ತಾಯಿಯ ನಡಿಗೆಯನ್ನು ಹಂಸದ ನಡಿಗೆಯಂತೆ ಕವಿ/ಋಷಿ ಕಂಡಿದ್ದಾನೆ. ಈ ಅಲಂಕಾರಗಳನ್ನು ಬಳಸಿದ್ದುದರ ಉದ್ದೇಶ ಕೇವಲ ಅನ್ಯ ಮಾರ್ಗವಿಲ್ಲ ಎಂಬ ಕಾರಣಕ್ಕಾಗಿಯಲ್ಲದೆ ತಾಯಿಯ ರೂಪ ಸೌಂದರ್ಯಗಳನ್ನು ವರ್ಣಿಸಲು ಅದೇ ಉಪಾಧಿ ಎಂಬ ಕಾರಣಕ್ಕಾಗಿ ಅಲ್ಲ. ಇಲ್ಲಿ ಧ್ವನಿತವಾಗುವುದು ಉಪಮಾನಕ್ಕಿಂತಲೂ ಮಿಗಿಲಾದ ಗುಣವಿಶೇಷಣಗಳನ್ನು ಹೊಂದಿರುವವಳು ತಾಯಿ ಲಲಿತೆ ಎಂಬುದು ಪ್ರಧಾನ ವಿವಕ್ಷೆ.

Related Articles

ಪ್ರತಿಕ್ರಿಯೆ ನೀಡಿ

Latest Articles