ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಗೃಹ ಹಾಗೂ ಕಾನೂನು ಸಂಸದೀಯ ಸಚಿವರಾದ ಬಸವರಾಜ ಬೊಮ್ಮಾಯಿಯವರು ಬೆಂಗಳೂರಿನ ಶ್ವಾಸಯೋಗ ಸಂಸ್ಥೆಗೆ ಗುರುವಾರ ಭೇಟಿ ನೀಡಿ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರುಗಳಾದ ಶ್ರೀಶ್ರೀಶ್ರೀ ವಚನಾನಂದ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದರು.
ಪಂಚಮಸಾಲಿ ಸಮುದಾಯಕ್ಕೆ ರಾಜ್ಯದಲ್ಲಿ 2ಎ ವರ್ಗದಡಿ ಮೀಸಲಾತಿ ಕಲ್ಪಿಸಿಕೊಡಬೇಕು ಮತ್ತು ಕೇಂದ್ರ ಸರ್ಕಾರವು ಸಮುದಾಯವನ್ನು ಓಬಿಸಿ ಕೆಟಗರಿಯಲ್ಲಿ ಸೇರಿಸಬೇಕು. ಈ ಪ್ರಸ್ತಾಪವನ್ನು ರಾಜ್ಯ ಸರ್ಕಾರವು ಸಚಿವ ಸಂಪುಟದ ಮುಂದಿಟ್ಟು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡುವ ಕುರಿತು ಚರ್ಚಿಸಿದರು. ಪಂಚಮಸಾಲಿ ಸಮುದಾಯದ ಬಗ್ಗೆ ಅಪಾರ ಅರಿವು ಹೊಂದಿರುವ ಬೊಮ್ಮಾಯಿಯವರು ಸಮುದಾಯದ ಶ್ರೇಯೋಭಿವೃದ್ಧಿಗೆ ಸ್ಪಂದಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮುದಾಯವನ್ನ 2ಎ ಮೀಸಲಾತಿ ವರ್ಗದಡಿ ಸೇರಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸಿರುವ ಶ್ರೀ ವಚನಾನಂದ ಸ್ವಾಮೀಜಿಗಳಿಗೆ ಬೆಂಬಲವಾಗಿ ನಿಲ್ಲುವ ಆಶಯ ವ್ಯಕ್ತಪಡಿಸಿದರು.