ಹುಬ್ಬಳ್ಳಿ: ಭಾರತೀಯ ಇತಿಹಾಸದಲ್ಲಿ ಯೋಗಕ್ಕೆ ಬಹಳಷ್ಟು ಮಹತ್ವದ ಸ್ಥಾನ ಕಲ್ಪಿಸಿದ್ದಾರೆ. ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಮತ್ತು ಆಚಾರ್ಯರು. ಯೋಗ ಸಾಧನೆಯಿಂದ ಆಯುಷ್ಯ ಆರೋಗ್ಯದಿಂದ ಬಾಳುತ್ತಿದ್ದರೆಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಜರುಗುತ್ತಿರುವ ಉಚಿತ ಯೋಗ ಶಿಬಿರ ಸಮಾರಂಭದ ಸಾನಿಧ್ಯ ವಹಿಸಿ ಜ. 22ರಂದು ಆಶೀರ್ವಚನ ನೀಡಿದರು.
ಹಿಂದೆಂದಿಗಿಂತಲೂ ಇಂದು ಮನುಷ್ಯ ಬಹಳಷ್ಟು ಒತ್ತಡಕ್ಕೆ ಒಳಗಾಗಿ ಮಾನಸಿಕ ಶಾಂತಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಹಣ ಗಳಿಕೆಗಾಗಿ ಆರೋಗ್ಯ ನಿರ್ಲಕ್ಷಿಸುತ್ತಾನೆ. ಆರೋಗ್ಯ ಹದಗೆಟ್ಟಾಗ ಸಂಪಾದಿಸಿದ ಹಣ ಖರ್ಚು ಮಾಡಿದರೂ ಕಳೆದುಕೊಂಡ ಆರೋಗ್ಯ ಮರಳಿ ಪಡೆಯಲು ಸಾಧ್ಯವಾಗದು. ದಿನ ನಿತ್ಯ ಯೋಗ ಸಾಧನೆಗಾಗಿ ಕನಿಷ್ಠ ಅರ್ಧ ಗಂಟೆಯನ್ನಾದರೂ ಮೀಸಲಿಡುವುದು ಒಳ್ಳೆಯದೆಂದ ಅವರು ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘ ಜನ್ಮ ದಿನದ ನಿಮಿತ್ಯ ಪ್ರತಿ ವರ್ಷ ಯೋಗ ಶಿಬಿರ ಹಮ್ಮಿಕೊಂಡು ಬರುತ್ತಿರುವುದು ಸಂತೋಷ ತಂದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೆಸರಾಂತ ನರರೋಗ ತಜ್ಞ ಡಾ.ಎಸ್.ಪಿ.ಬಳಿಗಾರ 2021 ನೇ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದರು. ಪಂಚಲಿ0ಗಪ್ಪ ಕವಲೂರು ಶಿಬಿರಾರ್ಥಿಗಳಿಗೆ ಯೋಗದ ಮಹತ್ವವನ್ನು ವಿವರಿಸಿದರು. ಬಿ.ಎಸ್.ಪಾಟೀಲ, ಬಸವರಾಜ ಸುಳ್ಳದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಶಿವಸ್ವಾಮಿ ಪ್ರಾರ್ಥನೆ ಸಲ್ಲಿಸಿದರು. ರಾಜಕೀಯ ಧುರೀಣ ರಾಜಣ್ಣ ಕೊರವಿ ವಂದನಾರ್ಪಣೆ ಸಲ್ಲಿಸಿದರು. ಜಿ.ವಿ.ಹಿರೇಮಠ ನಿರೂಪಿಸಿದರು.
ವರದಿ: ಸಿ.ಎಚ್. ಬಾಳನಗೌಡ್ರ