ದೇವರು ಎಲ್ಲೆಡೆಯೂ ಇದ್ದಾನೆ ಎಂಬುದು ನಮ್ಮ ನಂಬಿಕೆ. ಅದೇ ನಂಬಿಕೆ ನಮ್ಮನ್ನು ಎಷ್ಟೋ ಬಾರಿ ತಪ್ಪು ಮಾಡದಂತೆ ಎಚ್ಚರಿಸುತ್ತದೆ, ನಮ್ಮನ್ನು ನಿಯಂತ್ರಣದಲ್ಲಿರಿಸುತ್ತದೆ. ಎಲ್ಲೆಡೆಯೂ ದೇವನಿದ್ದ ಮೇಲೆ ದೇವಸ್ಥಾನಗಳಿಗೆ ಯಾಕೆ ಹೋಗಬೇಕು ಎನ್ನುವ ಪ್ರಶ್ನೆಯೂ ಮೂಡಬಹುದು. ದೇವಸ್ಥಾನಗಳಿಗೆ ಹೋಗುವುದರಿಂದ ಆತ್ಮೋನ್ನತಿ ಹೇಗೆ ಸಾಧ್ಯ ಎಂಬುದರ ಕುರಿತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥರ ಚಿಂತನ ಬರಹ ಇಲ್ಲಿದೆ.
ಭಾರತ ದೇಶ ದೇವಭೂಮಿ. ದೈವೀಶಕ್ತಿಯ ಮೇಲೆ ಅಪಾರ ಶ್ರದ್ಧೆಯಿಟ್ಟ ನಾಡು. ಯಾರೊಡನೆಯೂ ಹೇಳಲಾಗದ ಕಷ್ಟವನ್ನು ಹೇಳಿಕೊಳ್ಳಬಹುದಾದ ಒಂದು ನಂಬಿಕೆಯ ಕೇಂದ್ರ ಅದು ದೇವರ ಸನ್ನಿಧಾನ. ನಮ್ಮದು ಕರ್ಮಭೂಮಿ ಸಿದ್ಧಾಂತ. ಜೀವಗಳು ಈ ಶರೀರದ ಮೂಲಕ ಅಥವಾ ಪರಿಸರದ ಪ್ರಭಾವಕ್ಕನುಗುಣವಾಗಿ ಕರ್ಮಗಳನ್ನು ಮಾಡುತ್ತಾರೆ. ಸತ್ಕರ್ಮದ ಫಲವಾಗಿ ಪುಣ್ಯಸಂಪಾದನೆ ಆಗುತ್ತದೆ. ಅದರ ಫಲವಾಗಿ ಸುಖವನ್ನು ಅನುಭವಿಸಬೇಕು. ದುಷ್ಟ ಕರ್ಮದ ಫಲವಾಗಿ ಪಾಪ. ಪಾಪದ ಫಲವಾಗಿ ದುಃಖ ಕಷ್ಟಕೋಟಲೆಗಳು.
ಪಾಪದ ಫಲವಾಗಿ ದುಃಖವನ್ನು ಅನುಭವಿಸಲೇಬೇಕಾದರೂ ಪಾಪದ ಪರಿಹಾರಕ್ಕೆ ನಮ್ಮ ಧರ್ಮಗಳು ಅವಕಾಶ ಮಾಡಿಕೊಟ್ಟಿವೆ.
ಯಾವುದೇ ಅಪರಾಧಗಳಿಗೆ ಪ್ರಾಯಶ್ಚಿತವೇ ದೊಡ್ಡ ಪರಿಮಾರ್ಜನೆ. ಪ್ರಾಯಶ್ಚಿತ ಅಂದರೆ ಪಶ್ಚಾತ್ತಾಪ.
ದೇವರ ಮುಂದೆ ನಮ್ಮ ತಪ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುವುದು. ಮುಂದೆ ಅಂತಹದ್ದನ್ನು ಮಾಡಲಾರೆ. ಆಕಸ್ಮಿಕವಾಗಿಯೋ, ಅಲ್ಪ ಅರಿವಿನಿಂದಲೋ ಆದ ತಪ್ಪನ್ನು ಮನ್ನಿಸು ಎಂದು ಭಗವಂತನಿಗೆ ಶರಣಾಗತನಾಗಿ ಕೇಳಿಕೊಳ್ಳುವನು. ಶರಣಾಗತಿಯ ಜತೆಗೆ ಸಕಾರಾತ್ಮಕ ಮನಸ್ಥಿತಿ ಹೊಂದಲು ದೈವೀಶಕ್ತಿಯ ಕೇಂದ್ರಗಳು ಪೂರಕ.
ನಮ್ಮ ನಂಬಿಕೆ ಉಚ್ಛವಾದ ಶಕ್ತಿಯ ಮೇಲೆ. ಅಣುರೇಣುತೃಣಕಾಷ್ಟಗಳಲ್ಲಿ ಭಗವಂತ ತುಂಬಿದ್ದಾನೆ ಎಂಬ ನಂಬಿಕೆ ಯಾರ ಕಣ್ಣು ತಪ್ಪಿಸಿ ಅನ್ಯಾಯ ಮಾಡಿದರೂ ಎಲ್ಲೆಡೆ ತುಂಬಿದ ಭಗವಂತನ ಕಣ್ತಪ್ಪಿಸಿ ಅಪರಾಧ ಮಾಡುವುದು ಅಸಾಧ್ಯ. ಈ ಸಾತ್ವಿಕ ನಂಬಿಕೆಯೇ ಮನುಷ್ಯನನ್ನು ನಿಯಂತ್ರಣದಲ್ಲಿಟ್ಟಿದೆ.
ಭಗವಂತನ ಸನ್ನಿಧಾನ ಎಲ್ಲೆಡೆ ತುಂಬಿದ್ದರೂ ವಿಶೇಷ ಸನ್ನಿಧಾನವಿರುವ ಸ್ಥಳ ಕೆಲವೊಂದಿದೆ. ಅವುಗಳೇ ದೇವಾಲಯಗಳು. ಅವು ನಮ್ಮ ಶ್ರದ್ಧೆಯ ಕೇಂದ್ರಗಳು. ನಮ್ಮ ಸಂಸ್ಕೃತಿಯ ಜೀವಾಳಗಳು.
ಅಭೀಷ್ಟ ಸಿದ್ಧಿಯ ತಾಣಗಳು. ಅಪರಾಧಕ್ಕೆ ಕ್ಷಮೆ ಬೇಡುವ ಕ್ಷಮಾಕೇಂದ್ರಗಳು, ಮನಃಶಾಂತಿಯ ನೆಲೆವೀಡು. ಇಂತಹ ಸ್ಥಳಗಳಳ್ಲಿ ಭಗವದ್ಭಕ್ತ ಶರಣಾಗತನಾಗುವುದರಿಂದ ನೆಮ್ಮದಿ ಮತ್ತು ಆತ್ಮೋನ್ನತಿಯನ್ನುಹೊಂದಲು ಸಾಧ್ಯ.