ಸುಳ್ಯ (ದಕ) : ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವ ಗೊನೆ ಮುಹೂರ್ತದೊಂದಿಗೆ ಜ. 24 ರಂದು ಆರಂಭಗೊಂಡಿದ್ದು, ಫೆಬ್ರವರಿ 6 ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.
ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಐತಿಹ್ಯ:
ಶ್ರೀ ಪರಿವಾರ ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ ಪುರಾತನ ದೇಗುಲ. ಬಲ್ಲಾಳ ಅರಸರ ಕಾಲದಿಂದಲೂ ಸೀಮಾ ವ್ಯಾಪ್ತಿಯ ಧಾರ್ಮಿಕ ಕೇಂದ್ರವಾಗಿ ಆರಾಧಿಸಲ್ಪಡುತ್ತಿದೆ. ಈ ಕ್ಷೇತ್ರದ ಋಷಿಗಳ ತಪಃ ಫಲದಿಂದ ಸ್ಥಾಪಿಸಲ್ಪಟ್ಟಿದೆ.
ಈ ಪುಣ್ಯ ಕ್ಷೇತ್ರದಿಂದ ಸುಮಾರು 4 ಕಿಮೀ ದೂರದಲ್ಲಿನ ಬಂಟಮಲೆ ಎಂಬಲ್ಲಿ ಸದಾಶಿವ ದೇವರು ಲಿಂಗಸ್ವರೂಪಿಯಾಗಿ ಆರಾಧಿಸಲ್ಪಡುತ್ತಿದ್ದಾನೆ. ಅಲ್ಲಿ ಕೆರೆ ಹಾಗೂ ದೇವರ ಗುಡಿಯ ಅವಶೇಷಗಳು ಈಗಲೂ ಕಾಣಸಿಗುತ್ತದೆ. ಜಾತ್ರೆ ಸಂದರ್ಭದಲ್ಲಿ ಆ ಕೆರೆಯಿಂದ ನೀರು ತಂದು ದೇವರಿಗೆ ಅಭಿಷೇಕ ಮಾಡುವ ಸಂಪ್ರದಾಯ ನಡೆಯುತ್ತದೆ. ಹಿಂದೆ ಬಂಟಮಲೆಯ ಮೂಲ ಸ್ಥಳದಲ್ಲಿ ಅರ್ಚನೆಗಾಗಿ ಕಠಿಣವಾದ ಬೆಟ್ಟದ ದಾರಿಯಲ್ಲಿ ಸಾಗಬೇಕಿತ್ತು. ಅವರ ನಿತ್ಯ ಪ್ರಾರ್ಥನೆಯಿಂದ ಪರವಶನಾದ ಸ್ವಾಮಿ ಪಂಚಲಿಂಗೇಶ್ವರ ಸ್ವಾಮಿಯ ಗುಡಿಯ ಮುಂದುಗಡೆಯ ನಂದಿ ಇರುವ ಸ್ಥಾನದಲ್ಲಿ ಸ್ವಯಂಭೂತವಾಗಿ ಉದ್ಭವಗೊಂಡಿದ್ದು, ಹಾಗಾಗಿ ಈ ದೇಗುಲವನ್ನು ಪರಿವಾರ ಸದಾಶಿವ ದೇಗುಲ ಎಂದೇ ಕರೆಯುತ್ತಾರೆ.
ಈ ದೇಗುಲದಲ್ಲಿ ಹಿಂದೆ ನಡೆದ ಘಟನೆಯೊಂದು ಸೌಹಾರ್ದತೆಗೆ ಸಾಕ್ಷಿ ಎಂಬಂತಿದೆ. ಆ ಆಚರಣೆ ಇಂದಿಗೂ ಚಾಲ್ತಿಯಲ್ಲಿದೆ.
ಪಂಜ ಮಾಗಣೆ ವ್ಯಾಪ್ತಿಯ ಎಣ್ಮೂರು ಬೀಡಿನ ಬಲ್ಲಾಳರು ಮತ್ತು ಎಣ್ಮೂರು ಕಟ್ಟ ಬೀಡಿನ ಯುವ ಬಲ್ಲಾಳರಿಗೆ ಅಧಿಕಾರಕ್ಕಾಗಿ ನಡೆದ ಕಲಹದಲ್ಲಿ ಪಿಲಿಕುಂಞ ಎಂಬ ಮುಸ್ಲಿಂ ಯೋಧನು ಎಣ್ಮೂರು ಬೀಡಿನ ಬಲ್ಲಾಳರ ಪರ ನಿಂತು ಕಟ್ಟುಬೀಡಿನ ಯುವ ಅರಸರನ್ನು ಸೋಲಿಸುತ್ತಾನೆ. ನಂತರ ಪಟ್ಟದ ಕತ್ತಿ, ಕಿರೀಟಗಳನ್ನು ಎಣ್ಮೂರು ಬಲ್ಲಾಳರಿಗೆ ನಿಷ್ಠೆಯಿಂದ ಒಪ್ಪಿಸುತ್ತಾನೆ.
ಈತನ ರಾಜ ಭಕ್ತಿಗೆ ಮೆಚ್ಚಿದ ರಾಜ ತನ್ನ ನಂತರ ಕಟ್ಟಬೀಡಿಗೆ ಸಂಬಂಧಿಸಿದ ತನ್ನ ಆಸ್ತಿಯು ಈ ಮುಸ್ಲಿಂ ಯೋಧ ಪಿಲಿಕುಂಞಗೆ ಸೇರಬೇಕು ಎಂದು ಶಾಸನ ಮಾಡಿಸುತ್ತಾನೆ. ಕಾಲಾನಂತರ ಈ ಮುಸ್ಲಿಂ ಮನೆತನದವನ ರಾಜಭಕ್ತಿ, ದೈವಭಕ್ತಿಯ ಪ್ರತೀಕವಾಗಿ ಇಂದಿಗೂ ಈ ದೇಗುಲದಲ್ಲಿ ನಡೆಯುವ ಜಾತ್ರೋತ್ಸವದಂದು ಆ ರಾಜ ಮನೆತನದ ಮಯಸ್ಲಿಂ ಬಂಧುಗಳನ್ನು ಕತ್ತಿ, ಗುರಾಣಿಗಳ ರಕ್ಷಣೆಯೊಂದಿಗೆ ರಥಬೀದಿ ಕಟ್ಟೆಯಿಂದ ದೇಗುಲಕ್ಕೆ ಕರೆತರುವ ಆಚರಣೆ ಈಗಲೂ ಮುಂದುವರಿಸಿಕೊಂಡು ಬರಲಾಗುತ್ತಿದೆ.