ನಂಬಿಕೆ ಮತ್ತು ಪ್ರಾರ್ಥನೆ ಇದ್ದಲ್ಲಿ ಅಸಾಧ್ಯವಾದುದನ್ನು ಸಾಧಿಸುವ ಶಕ್ತಿ ಇದೆ: ಶ್ರೀ ರಂಭಾಪುರಿ ಜಗದ್ಗುರುಗಳು

ತರೀಕೆರೆ: ಮನುಷ್ಯನ ಬಾಳ ಬದುಕು ಉಜ್ವಲಗೊಳ್ಳಬೇಕು. ಉತ್ತಮ ನಡೆ ನುಡಿಗಳ ಮೂಲಕ ಜೀವನದಲ್ಲಿ ಉತ್ಕರ್ಷತೆ ಗೌರವ ಪಡೆಯಲು ಸಾಧ್ಯ. ಅಧ್ಯಾತ್ಮ ಜ್ಞಾನದ ಮೂಲಕ ಬಾಳಿಗೆ ಬೆಳಕು ತೋರುವುದೇ ಮಹಾತ್ಮರ ಅವತಾರದ ಮೂಲ ಧ್ಯೇಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಬುಕ್ಕಾಂಬುಧಿ ಕ್ಷೇತ್ರದಲ್ಲಿ ಫೆಬ್ರುವರಿ 1ರಂದು ಜರುಗಿದ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳವರ 85ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನ ಅಂತರಂಗ ಬಹಿರಂಗ ಎರಡೂ ಶುದ್ಧವಾಗಿರಬೇಕು. ನೀರು ಎರೆದವರಿಗೂ ಕಡಿಯ ಬಂದವರಿಗೂ ಭೇದವೆಣಿಸದೇ ಮರ ಹಣ್ಣು ನೆರಳು ಕೊಡುವ ಬುದ್ಧಿ ಮನುಷ್ಯನಿಗೆ ಇಲ್ಲ. ಪ್ರಾರ್ಥನೆ ಮತ್ತು ನಂಬಿಕೆ ಎರಡು ಕಣ್ಣಿಗೆ ಕಾಣದಿರಬಹುದು. ಆದರೆ ಅಸಾಧ್ಯವಾದುದನ್ನು ಸಾಧಿಸುವ ಶಕ್ತಿ ಎರಡಕ್ಕೂ ಇದೆ. ಬದುಕು ಅನ್ನೋ ಹೊಲದಲ್ಲಿ ಸಮಸ್ಯೆ ಅನ್ನೋ ಕಳೆ ಬೆಳೆಯುತ್ತಲೇ ಇರುತ್ತದೆ. ಕಳೆ ಕಿತ್ತು ಬೆಳೆ ಸಂರಕ್ಷಿಸುವ ಕಲೆ ಅರಿತು ಬಾಳಬೇಕು. ವಿವೇಕಯುತ ಚಿಂತನೆ ಮತ್ತು ಉತ್ತಮ ಕಾರ್ಯ ಚಟುವಟಿಕೆಗಳಿಂದಾಗಿ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ಬರುತ್ತದೆ. ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಧಾರ್ಮಿಕ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಅಪಾರ. ನಂಬಿ ಬಂದ ಭಕ್ತರಿಗೆ ಸಂಸ್ಕಾರ ಸಂಸ್ಕೃತಿ ಬೋಧಿಸಿ ಬದುಕಿನ ಉನ್ನತಿಗೆ ದಾರಿ ತೋರಿಸಿದ ಗೌರವ ಅವರಿಗೆ ಸಲ್ಲುತ್ತದೆ. ಕಲುಷಿತಗೊಂಡ ಮನುಷ್ಯನ ಮನಸ್ಸು ಪರಿಶುದ್ಧಗೊಂಡು ಸದ್ಭಾವನೆ ಸಾಮರಸ್ಯದಿಂದ ಜನ ಬಾಳಬೇಕೆಂಬುದು ಅವರ ಗುರಿಯಾಗಿತ್ತು. ಆ ಮಹಾನುಭಾವರ ತಪೋಶಕ್ತಿ-ತೋರಿದ ದಾರಿ ಬದುಕಿ ಬಾಳುವ ಮನುಷ್ಯನಿಗೆ ದಾರಿ ದೀಪವಾಗಬೇಕೆಂದರು.
ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನುಡಿ ನಮನ ಸಲ್ಲಿಸಿದರು. ಹೊಳವನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯರು, ನೆಲಮಂಗಲ ಬ್ರಹ್ಮಲಿಂಗ ಶ್ರೀಗಳು, ಕೊಣ್ಣೂರು ಚಂದ್ರಶೇಖರ ಶ್ರೀಗಳು ಉಪಸ್ಥಿತರಿದ್ದರು.
ಅಜ್ಜಂಪುರ ಪುರಸಭಾ ಮಾಜಿ ಅಧ್ಯಕ್ಷ ಬಿ. ಏಕೋರಾಮಸ್ವಾಮಿ, ಹಿರಿಯ ಜೀವಿಗಳಾದ ಬುಕ್ಕಾಂಬುಧಿ ಚಂದ್ರಶೇಖರಪ್ಪ, ಆಸಂಬಿ ರುದ್ರಯ್ಯ ಸೇರಿದಂತೆ ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಶುಭ ಹಾರೈಸಿದರು. ಶಾಂಭವಿ ಮಹಿಳಾ ಮಂಡಳದಿ0ದ ಪ್ರಾರ್ಥನೆ ಜರುಗಿತು.

ಟ್ರಸ್ಟಿನ ಉಪಾಧ್ಯಕ್ಷ ಎಸ್.ಎಂ. ವೀರಭದ್ರಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಹೇಶ್ವರಯ್ಯ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ನೆರವೇರಿತು.
ಬೆಳಗ್ಗೆ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಮಂಗಳ ಶಿಲಾ ಮೂರ್ತಿಗೆ ರುದ್ರಾಭಿಷೇಕ-ಅಷ್ಟೋತ್ತರ ಮಹಾಪೂಜೆ ನೆರವೇರಿತು.


ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು.

Related Articles

ಪ್ರತಿಕ್ರಿಯೆ ನೀಡಿ

Latest Articles