ಈಗ ಹಲಸಿನಕಾಯಿ ಗುಜ್ಜೆ ಬಿಡುವ ಸಮಯ. ತುಳುನಾಡು, ಕರ್ನಾಟಕದ ಕರಾವಳಿ ಭಾಗದಲ್ಲಿ ಎಳೆ ಹಲಸಿನಕಾಯಿಯನ್ನು ವಿವಿಧ ರೀತಿಯಲ್ಲಿ ಉಪಯೋಗಿಸುತ್ತಾರೆ. ಗುಜ್ಜೆ ಸಾಂಬಾರು, ಪಲ್ಯ, ಹುಳಿ, ಉಪ್ಪಿನಕಾಯಿ, ಬಜ್ಜಿ ಕೂಡಾ ತಯಾರಿಸುತ್ತಾರೆ.
ಹಲಸಿನಕಾಯಿ ಗುಜ್ಜೆ ಸಾಂಬಾರು ಮಾಡುವುದು ಬಹಳ ಸುಲಭ. ಅದನ್ನು ರುಚಿಕರವಾಗಿ ಹೇಗೆ ಮಾಡಬಹುದು ಎಂಬುದರ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಗ್ರಿ: ಎಳೆ ಹಲಸಿನಕಾಯಿ, ಪಚ್ಚೆ ಹೆಸರು, ಕಡಲೆ ಇಲ್ಲವೇ ಅಲಸಂಡೆ ಬೀಜ-ಅರ್ಧ ಕಪ್, ಈರುಳ್ಳಿ 2 ಹಸಿಮೆಣಸಿನಕಾಯಿ-6, ಬೆಳ್ಳುಳ್ಳಿ-10 ಎಸಳು, ಕೊತ್ತಂಬರಿ ಬೀಜ, ಜೀರಿಗೆ, ಒಣಮೆಣಸು 10, ಅರಸಿನ ಪುಡಿ, ಹುಣಸೆ ಹಣ್ಣು. ಒಗ್ಗರಣೆಗೆ ಎಣ್ಣೆ, ಸಾಸಿವೆ, ಬೆಳ್ಳುಳ್ಳಿ, ಕರಿಬೇವು, ಜೀರಿಗೆ ಬಳಸಿಕೊಳ್ಳಬಹುದು.
ಮಾಡುವ ವಿಧಾನ: ಹಲಸಿನಕಾಯಿಯನ್ನು ಭಾಗ ಮಾಡಿ ಹೊರಭಾಗವನ್ನು ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ. ಅದನ್ನು ತೊಳೆದು ಅದಕ್ಕೆ ನೀರು, ಉಪ್ಪು ಸೇರಿಸಿ ಬೇಯಿಸಿ. ಬೆಂದ ನಂತರ ನೀರನ್ನು ಬಸಿದು ಇಟ್ಟುಕೊಳ್ಳಿ. ಅದಕ್ಕೆ ಬೆರಕೆಯಾಗಿ ಸೇರಿಸಲು ಇಟ್ಟುಕೊಂಡಿರುವ ಕಡಲೆ, ಅಲಸಂದೆಇಲ್ಲವೇ ಪಚ್ಚೆ ಹೆಸರನ್ನು ಬೇಯಿಸಿಟ್ಟುಕೊಳ್ಳಿ.
ತೆಂಗಿನತುರಿಯನ್ನು ಹುರಿದು ಅದಕ್ಕೆ ಒಣಮೆಣಸು, ಕೊತ್ತಂಬರಿ, ಜೀರಿಗೆ ಬೆಳ್ಳುಳ್ಳಿ, ಅರಸಿನ ಪುಡಿ ಎಲ್ಲವನ್ನು ಸೇರಿಸಿ ಹುರಿದುಕೊಂಡು, ನುಣ್ಣಗೆ ರುಬ್ಬಿಕೊಳ್ಳಬೇಕು.
ಬಾಣಲೆ ಬಿಸಿಮಾಡಿ ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಸಾಸಿವೆ, ಕರಿಬೇವು ಎಲ್ಲ ಸೇರಿಸಿ ಒಗ್ಗರಣೆ ಸಿದ್ಧಪಡಿಸಿಕೊಳ್ಳಿ. ಅದಕ್ಕೆ ರುಬ್ಬಿದ ಮಸಾಲೆಯನ್ನು ಸೇರಿಸಿ. ಮಸಾಲೆ ಕುದಿ ಬಂದಾಗ ಬೇಯಿಸಿಟ್ಟುಕೊಂಡಿದ್ದ ಅಲಸಂದೆ / ಪಚ್ಚೆ ಹೆಸರು/ ಕಡಲೆ ಹಾಗೂ ಗುಜ್ಜೆಯನ್ನು ಸೇರಿಸಿದರಾಯಿತು.