*ಶ್ರೀನಿವಾಸ ಮೂರ್ತಿ ಎನ್ ಎಸ್
ಕರ್ನಾಟಕದ ವಾಸ್ತುಶಿಲ್ಪದ ಕೊಡುಗೆಯಲ್ಲಿ ಶೈವ ದೇವಾಲಯಗಳು ಗಣನೀಯವಾಗಿವೆ. ಕದಂಬರ ಕಾಲದಿಂದಲೂ ಹಲವು ಶೈವ ದೇವಾಲಯಗಳು ನಮ್ಮ ನಾಡಿನಲ್ಲಿ ನಿರ್ಮಾಣಗೊಂಡಿದ್ದು ಶಿವನನ್ನು ಲಿಂಗ ರೂಪದಲ್ಲಿ ಆರಾಧಿಸುವುದೇ ಹೆಚ್ಚು. ಆದರೆ ಈಚೆಗೆ ನಾಡಿನ ಹಲವು ಭಾಗದಲ್ಲಿ ಬೃಹತ್ ಶಿವನ ಮೂರ್ತಿಗಳನ್ನ ಕೆತ್ತಲಾಗಿದೆ. ಇಂತಹ ಮೂರ್ತಿಗಳ ಪರಿಚಯ
ಮುರ್ಡೇರ್ಶ್ವರ ಶಿವ
ಶ್ರೀ ಆರ್ ಎನ್ ಶೆಟ್ಟಿ ಅವರ ಇಲ್ಲಿನ ಸಮುದ್ರ ತೀರದಲ್ಲಿ ನಿರ್ಮಿಸಿದ ಈ ಪ್ರತಿಮೆ ನಾಡಿನ ಬೃಹತ್ ಮೂರ್ತಿಗಳಲ್ಲಿ ಒಂದಾದ ಈ ಶಿವನ ಶಿಲ್ಪ ಸುಮಾರು 132 ಅಡಿ ಎತ್ತರವಿದ್ದು ಶಿವಮೊಗ್ಗದ ಶ್ರೀ ಕಾಶಿನಾಥ ಮತ್ತು ಅವರ ತಂಡದ ಕಲ್ಪನೆಯಲ್ಲಿ ಮೂಡಿ ಬಂದಿದೆ. ವಿಶಾಲವಾದ ಸಮುದ್ರ ತಟದಲ್ಲಿ ಗಜ ಚರ್ಮಾಂಭರಿಯಾಗಿ ಕುಳಿತ ಭಂಗಿಯಲ್ಲಿರುವ ಶಿವನ ಶಿಲ್ಪ ಸುಂದರವಾಗಿದೆ. ಶಿವನ ಜಟೆ, ಕೈನಲ್ಲಿನ ಬೃಹತ್ ಡಮರುಗ ಹಾಗು ತ್ರಿಶೂಲವಿದ್ದರೆ ಉಳಿದ ಎರಡು ಕೈಗಳಲಿ ಧ್ಯಾನ ಭಂಗಿಯಲ್ಲಿದೆ. ಇಲ್ಲಿನ ಶಿವನ ಕೆಳ ಭಾಗದಲ್ಲಿ ಆತ್ಮಲಿಂಗದ ಕಥಾವಳಿಯನ್ನು ಸಂಪೂರ್ಣವಾಗಿ ಕೆತ್ತಲಾಗಿದೆ.
ಇನ್ನು ಮುರ್ಡೇಶ್ವರ ಪೌರಾಣಿಕವಾಗಿ ಪವಿತ್ರ ಕ್ಷೇತ್ರವಾಗಿದ್ದು ರಾವಣ ಆತ್ಮಲಿಂಗ ನೆಲದಿಂದ ತೆಗೆಯುವ ಪ್ರಯತ್ನದಲ್ಲಿ ಬಂದ ಮುರುಡದ ಭಾಗವಾದ ಮುರುಡೇಶ್ವರ ಎಂಬ ಹೆಸರು ಬಂದಿದೆ. ಇಲ್ಲಿನ ಶಿವನ ಲಿಂಗ ಪುರಾತನವಾದದ್ದು. ಇಲ್ಲಿ ದೇವಾಲಯಕ್ಕೆ ಬೄಹತ ರಾಜಗೋಪ್ರುರವನ್ನ ನಿರ್ಮಿಸಲಾಗಿದ್ದು ಶಿವನ ಮೂರ್ತಿ, ಗೋಪುರ ದೇವಾಲಯಕ್ಕೆ ಕಳಸ ಪ್ರಾಯದಂತಿದೆ.
ಶಿವಮೊಗ್ಗ ಹರಕೆರೆ ಶಿವ:
ಶಿವಮೊಗ್ಗದ ಹರಕೆರೆಯ ಇತಿಹಾಸ ಪ್ರಸಿದ್ದ ರಾಮಲಿಂಗೇಶ್ವರ ಸಮೀಪದಲ್ಲಿ ಬೄಹತ್ತಾದ ಶಿವನ ಪ್ರತಿಮೆಯನ್ನ ಸ್ಥಾಪಿಸಲಾಗಿದೆ. ಇಲ್ಲಿನ ಶಿಲ್ಪ ಎತ್ತರವಾದ ಪೀಠದ ಮೇಲೆ ಕುಳಿತಿದ್ದು ಜಟೆಯಿಂದ ಗಂಗೆ ಬರುವಂತೆ ಇದ್ದು ಕೈನಲ್ಲಿ ಇಲ್ಲಿಯೂ ಸಹ ಡಮರುಗ ಹಾಗು ತ್ರಿಶೂಲವಿದ್ದರೆ ಕೆಳಗಿನ ಕೈಗಳಲ್ಲಿ ಅಭಯ ಹಸ್ತ ಹಾಗು ಜಪ ಮಾಲೆ ಇರುವುದು ವಿಷೇಶ. ಇಲ್ಲಿನ ದೇವಾಲಯ ೯ ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ನಂತರದ ಕಾಲದಲ್ಲಿ ನವೀಕರಣ ಗೊಂಡಿದೆ. ದೇವಾಲಯ ಗರ್ಭಗುಡಿ, ಮುಚ್ಚಿದ ಅಂತರಾಳ ಹಾಗು ನವರಂಗ ಹೊಂದಿದೆ. ಈ ಮೂರ್ತಿ ಶಿವಮೊಗ್ಗ ಮಂಗಳೂರು ಹೆದ್ದಾರಿಯಲ್ಲಿ ಶಿವಮೊಗ್ಗದಿಂದ ಸುಮಾರು ೩ ಕಿ ಮೀ ದೂರದಲ್ಲಿದೆ
ಬೆಂಗಳೂರು ಶಿವ:
ಈ ದೇವಾಲಯ ಇಲ್ಲಿನ ಕೆಂಪ್ ಪೋರ್ಟ್ ಮಾಲಿಕರ ಆಶಯದಂತೆ ಸುಮಾರು 65 ಆಡಿ ಎತ್ತರದಲ್ಲಿ ನಿರ್ಮಾಣವಾಗಿದ್ದು ಪದ್ಮಾಸನ ಭಂಗಿಯಲ್ಲಿದೆ. ಇಲ್ಲಿನ ಶಿವನ ಮೂರ್ತಿಯು ಹಿಮಾಲದಯ ನಡುವೆ ಇರುವಂತೆ ಕೆತ್ತಲಾಗಿದ್ದು ದೇವರ ಸುತ್ತಲೂ ಗಂಗಾಜಲ ಬರುವಂತೆ ಮೂಡಿಸಲಾಗಿದೆ. ಇಲ್ಲಿನ ಶಿಲ್ಪದಲ್ಲಿ ಸಹ ಡಮರುಗ ಹಾಗು ತ್ರಿಶೂಲವಿದ್ದರೆ ಎರಡು ಕೈಗಲೂ ಪದ್ಮಾಸನ ಭಂಗಿಯಲ್ಲಿರುವಂತೆ ಇರುವುದು ವಿಷೇಶ. ಇನ್ನು ಕೊರಳಲ್ಲಿನ ನಾಗದೇವ ಹಾಗು ಜಟೆಯಲ್ಲಿನ ಚಂದ್ರ ಗಮನ ಸೆಳೆಯುತ್ತದೆ.
ಇನ್ನು ದೇವಾಲಯದ ಕೆಳ ಭಾಗದಲ್ಲಿ ಗುಹೆಯಂತ ವಾತವರಣ ನಿರ್ಮಾಣ ಮಾಡಲಾಗಿದ್ದು ಇಲ್ಲಿನ ಜ್ಯೋತಿರ್ಲಿಂಗಗಳು ಗಮನ ಸೆಳೆಯುತ್ತದೆ. ಮೂರ್ತಿಯಿಂದ ಬರುವ ಜಲವನ್ನ ಇಲ್ಲಿ ಮುಂಭಾಗದಲ್ಲಿ ಕೊಳದಂತಹ ಪುಟ್ಟ ಸರೋವರವನ್ನ ಮಾಡಲಾಗಿದ್ದು ಪ್ರಶಾಂತೆಯ ವಾತಾವರಣ ನಿರ್ಮಿಸಲಾಗಿದೆ. ಇನ್ನು ಈಗ ನೂತನವಾಗಿ ಬೃಹತ್ ಗಣಪತಿಯನ್ನ ಪ್ರವೇಶದಲ್ಲಿ ನಿರ್ಮಿಸಲಾಗಿದೆ.
ಈ ಶಿಲ್ಪ ಬೆಂಗಳೂರಿನ ಹಳೇ ವಿಮಾನದ ನಿಲ್ದಾಣ ಮಾರ್ಗದಲ್ಲಿದೆ.
ಬಿಜಾಪುರ ಶಿವಗಿರಿ ಶಿವ :
ಶ್ರೀ ಬಸಂತ ಕುಮಾರ ಪಾಟೀಲ್ ಅವರ ಆಸಕ್ತಿಯಿಂದ ನಿರ್ಮಾಣವಾದ ಈ ಬೃಹತ್ ಮೂರ್ತಿ ಬಿಜಾಪುರದ ಹೊರ ಆವರಣದಲ್ಲಿದೆ. ಸುಮಾರು 85 ಅಡಿ ಎತ್ತರವಿರುವ ಈ ಶಿಲ್ಪ ಪಿರಮಿಡ ಮಾದರಿಯಲ್ಲಿ ನಿರ್ಮಿಸಲಾಗಿದೆ. ಈ ಮೂರ್ತಿಯನ್ನ ಶಿವಮೊಗ್ಗದ ಪ್ರಶಾಂತ ಮತ್ತು ತಂಡದವರು ನಿರ್ಮಿಸಿದ್ದು ಈ ಶಿಲ್ಪ ಧ್ಯಾನ ಭಂಗಿಯಲ್ಲಿದೆ. ಇಲ್ಲಿ ಒಂದೇ ಕೈನಲ್ಲಿ ಡಮರುಗ ಹಾಗು ತ್ರಿಶೂಲವಿದ್ದರೆ, ಮತ್ತೊಂದು ಕೈನಲ್ಲಿ ಜಪ ಮಾಲೆ ಹಾಗು ಉಳಿದ ಎರಡು ಕೈಗಳು ಧ್ಯಾನ ಭಂಗಿಯಲ್ಲಿದೆ. ಇಲ್ಲಿನ ಮೂರ್ತಿಯ ಕೊರಳಲಲ್ಲಿ ನಾಗವಿದ್ದರೆ ಜಟೆಯಲ್ಲಿ ಚಂದ್ರ ಹಾಗು ಕೊರಳಲ್ಲಿನ ರುದ್ರಾಕ್ಷಿ ಮಾಲೆ ಗಮನ ಸೆಳೆಯುತ್ತದೆ.
ಇನ್ನು ಇಲ್ಲಿ ವಿಶಾಲವಾದ ನವಗ್ರಹ ಹಾಗು ಮಕ್ಕಳ ಉದ್ಯಾನವನವನ್ನ ನಿರ್ಮಿಸಲಾಗಿದೆ. ಈ ಶಿಲ್ಪ ಬಿಜಾಪುರ ರೈಲು ನಿಲ್ದಾಣದಿಂದ ಸುಮಾರು 2 ಕಿ.ಮೀ ದೂರದಲ್ಲಿದೆ.