ಕಲಶ ಪ್ರತಿಷ್ಠಾಪನೆಯ ಮಹತ್ವ

ಲೇಖನ: ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್

ಭಾರತೀಯ ಸನಾತನ ಧರ್ಮದಲ್ಲಿ ದೇವತಾ ಆವಾಹನ ಅತ್ಯಂತ ಮುಖ್ಯವಾದ ಒಂದು ವಿಷಯ.‌ ಪಂಚಭೂತಾತ್ಮಕ ವಸ್ತುಗಳಲ್ಲಿ ಪಂಚಭೂತಗಳಿಗೆ ಅತೀತವಾದ ಅಪ್ರಾಕೃತ ದಿವ್ಯಶಕ್ತಿಯನ್ನು ಪ್ರಾಕೃತ ಪ್ರಪಂಚಕ್ಕೆ ಆವಾಹಿಸುವುದು ಒಂದು ವಿಶಿಷ್ಡಪೂಜಾ ಪದ್ಧತಿ. ಈ ದೇಹ ಅಥವಾ ಪ್ರಕೃತಿಯಲ್ಲಿ ಯಾವುದೇ ಜೀವಿ ಉತ್ಪತ್ತಿಯಾಗಬೇಕಾದರೆ ಅಲ್ಲಿ ಪಂಚೀಕರಣವಾಗಬೇಕು. ಪಂಚಭೂತಗಳ ಸಂಯೋಗ ಮತ್ತು ಅದರಲ್ಲಿ ಆತ್ಮ‌ದ ಮತ್ತು ಪರಮಾತ್ಮನ ಅನುಪ್ರವೇಶವಾದರೆ ಮಾತ್ರ ಅದು ಜೀವಿಯಾಗುತ್ತದೆ. ಈ ತತ್ವವನ್ನೇ ತೈತ್ತಿರೀಯ ಉಪನಿಷತ್ತಿನಲ್ಲಿ ಆನಂದವಲ್ಲಿಯಲ್ಲಿ ಮತ್ತು ಅದರ ಉಪಾಸನೆಯನ್ನು ಭೃಗುವಲ್ಲಿಯಲ್ಲಿ ಹೇಳಲಾಗಿದೆ. 
ಈ ಪಂಚಭೂತಾತ್ಮಕವಾದ ಶರೀರ ಭೂಮಿಯ ಮತ್ತು ಬ್ರಹ್ಮಾಂಡದ ಮಾದರಿಯಾಗಿದೆ ( Model) ಭೂಮಿಯಲ್ಲಿ ಇರುವಷ್ಟೇ ನೀರು, ಖನಿಜಾಂಶಗಳು, ಬಂಡೆ, ಲೋಹಗಳು, ಮರಗಳು, ಇತ್ಯಾದಿ ಅದಕ್ಕೆ ಪ್ರತಿಸಂವಾದಿ ಪ್ರಮಾಣದಲ್ಲಿ ಶರೀರದಲ್ಲಿದೆ. ಅದಕ್ಕೆ ವೇದಾಂತದಲ್ಲಿ ಪಿಂಡ, ಅಂಡ, ಬ್ರಹ್ಮಾಂಡ ಎಂದು ಉಲ್ಲೇಖಿಸಲಾಗಿದೆ. ‌ಶರೀರದ ಸಪ್ತಧಾತುಗಳು ಭೂಮಿಯ ಸಪ್ತ ಪದಾರ್ಥಗಳ ಪ್ರತಿರೂಪವೇ ಆಗಿದೆ. 
ಹೀಗೆ ಶರೀರ ರೂಪವನ್ನು ಪಂಚೀಕರಣ ಮಾಡಿ ಅದರಲ್ಲಿ ದೇವತಾ ಶಕ್ತಿಯನ್ನು ಅವಾಹನ ಮಾಡುವ ಕ್ರಮವೇ ಕಲಶ ಪ್ರತಿಷ್ಠಾಪನೆ. ಕುಂಭವೇ ಶರೀರ. ಕುಂಭದಲ್ಲಿರುವ ಜಲವೇ ದೇಹದ ಜಲ. ಅಲ್ಲಿರುವ ರತ್ನಗಳು ಮೂಳೆ ಮತ್ತು ಖನಿಜಗಳ ಸಂಕೇತ. ಹಿರಣ್ಯ ಪಿಂಡ, ರಜತ ಇತ್ಯಾದಿ ಮೇದಸ್ಸುಗಳು. ಹೊರಭಾಗದ ಸೂತ್ರಗಳೇ ನರಗಳು. ಗಂಧಾದಿ ಸುಗಂಧವಸ್ತುಗಳು ಶರೀರದ ಗಂಧವಸ್ತುಗಳು. ಕೂರ್ಚವೇ ಪ್ರಾಣಶಕ್ತಿಯನ್ನು ಆವಾಹಿಸುವ ಪ್ರಧಾನ ವಸ್ತು. ಮಾವಿನ ಎಲೆಯೇ ಅದರ ಶಕ್ತಿ (Energy). ಅದರಲ್ಲಿ ಅವಾಹಿಸುವ ಮಂತ್ರಗಳೇ ಪ್ರಾಣಶಕ್ತಿಯ ಸಂಕೇತ. ದೇವರೇ ಅದರ ನಿಜಪ್ರಾಣರೂಪದ ಮಹಾಶಕ್ತಿ. ತೆಂಗಿನಕಾಯಿ ದೇವತಾ ಶಕ್ತಿಯ ಶಿರಸ್ಸು. ತೆಂಗಿನಕಾಯಿಯ ಶಿಖೆ ದೈವೀ ಶಕ್ತಿಯ ಶಿಖೆ. ಹೀಗೆ ಪವಿತ್ರವಾದ ದೇವರ ಶಕ್ತಿಯನ್ನೇ ನಿಜವಾಗಿಯೂ ಆವಾಹಿಸುವ ಶಕ್ತಿಯೇ ಈ ಕಲಶ ಸ್ಥಾಪನೆ. ( ಇತರ ವಿವರಣೆಗಳು ಸಹ ಇರುವುದನ್ನು ಗಮನಿಸಬಹುದು) 
ಈ ಕಲಶ ಪ್ರತಿಷ್ಠೆಯನ್ನು ಎಲ್ಲ ದೇವಾಲಯಗಳಲ್ಲಿ, ಮನೆಗಳಲ್ಲಿ ಸಕಲ ಕಾರ್ಯಗಳಲ್ಲೂ ಮಾಡಿ ಆಯಾಯ ದೇವತೆಗಳನ್ನು ಸೂರ್ಯ ಮಂಡಲದಿಂದ ಆಹ್ವಾನಿಸಿ ಪೂಜೆ ನಡೆಸಲಾಗುತ್ತದೆ. ಇದು ಭಾರತದ ಅತಿ ವಿಶಿಷ್ಟ ಪೂಜಾ ಕ್ರಮ. 
ಆದರೆ ಇಂದು ಆಗುತ್ತಿರುವುದೇನು? ಕಲಶದ ಅಲಂಕಾರ ಎಂಬ ನೆಪದಲ್ಲಿ ಅದರ ಮೂಲಾರ್ಥವನ್ನೇ ಹಾಳು ಮಾಡುತ್ತಿದ್ದಾರೆ. ನೀರನ್ನು ಎಂದೋ ತುಂಬುವುದು, ಬಳಸಬಾರದ ಅವಸ್ತುಗಳನ್ನು, ಅನೈಸರ್ಗಿಕ ವಸ್ತುಗಳನ್ನು ಬಳಸುವುದು, ಕಲಶದ ಕಂಠಕ್ಕೆ ದಬ್ಬೆಗಳನ್ನು ಬಿಗಿದು, ಚಿಟ್ಟೆ ಅಲಂಕಾರ ಎಂದು ಮಾರುಕಟ್ಟೆಯಲ್ಲಿ ದೊರಕುವ ದೊಡ್ಡ ದೊಡ್ಡ ಬಣ್ಣದ ಮಾಲೆಗಳನ್ನು ಹಾಕಿ ಕಲಶಕ್ಕಿಂತ ಅದನ್ನೇ ದೊಡ್ಡದಾಗಿ ಮಾಡುವುದು.‌ ಸುತ್ತಲಿ, ಗೋಣೀ ದಾರ, ಪಿನ್ನು, ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳಿಂದ ಅಲಂಕಾರದ ಹೆಸರಲ್ಲಿ ಕಲಶದ ಪ್ರಾಣಶಕ್ತಿಯನ್ನೇ ನಾಶಗೊಳಿಸಿ, ಸನಾತನ ಪದ್ಧತಿಗಳನ್ನು ಪೂರ್ಣವಾಗಿ ತಿರಸ್ಕರಿಸುವುದು. ಹೀಗೆ ಹೇಳಲು ಸಾಧ್ಯವಿಲ್ಲದಷ್ಟು ವಿಚಿತ್ರ ಪದ್ಧತಿಗಳನ್ನು ಜಾರಿಗೆ ತಂದಿದ್ದಾರೆ. 
ಇನ್ನು ದೇವಾಲಯಗಳಲ್ಲಿ ದೇವರಿಗೆ ಅಭಿಷೇಕ ಮಾಡುವ ಮುನ್ನವೇ ಪ್ರಧಾನ ಕಲಶಗಳಿಗೆ ಕೈಗಳನ್ನು ಹಾಕಿ ಕಲಕಿ ಆ ದೇವತಾ ಶಕ್ತಿಯನ್ನೇ ಅಪಹಾಸ್ಯ ಮಾಡಿ ಅದು ಕೇವಲ ಮನೆಯಲ್ಲಿ ಕೈ ತೊಳೆಯುವ ನೀರಿನಂತೆ ವರ್ತಿಸಿ, ಅದರ ಅಧಿವಾಸ, ಆವಾಹನಾ, ಮಹಾಕುಂಭಪೂಜೆ ಇತ್ಯಾದಿಗಳ ಬಗ್ಗೆ ಅವರೇ ಅಗೌರವ ತೋರಿಸುವುದನ್ನು ಮಾಡುತ್ತಿದ್ದಾರೆ. 
ಕಲಶದ ಆವಾಹನೆಯಲ್ಲಿ ಸಪ್ತದ್ವೀಪಯುಕ್ತವಾದ ಭೂಮಿ, ಸಮುದ್ರ, ಮಾತೃಗಣಗಳು, ಸಮಸ್ತದೇವತೆಗಳು, ವರುಣ, ಸರ್ವದೇವತ್ಮಕನಾದ ಶ್ರೀ ಮನ್ ನಾರಾಯಣ, ಕಂಠದಲ್ಲಿ ರುದ್ರ ಇತ್ಯಾದಿ ದೇವತೆಗಳ ಬೃಂದವನ್ನೇ ಆವಾಹಿಸಲಾಗುತ್ತದೆ. ಆದರೆ ಪಂಚ ಭೂತಾತ್ಮಕವಾದ, ನಮ್ಮ ಮನಸ್ಸನ್ನು ಯೋಗಮಾರ್ಗದ ಮೂಲಕ ದೈವೀಪದಕ್ಕೆ ಕೊಂಡೊಯ್ಯುವ ಪೂಜೆ ಬಿಟ್ಟು ದುಡ್ಡು, ಜನಾಕರ್ಷಣೆ ಮುಂತಾದ ಲೌಕಿಕ ವಿಷಯಗಳೇ ಪ್ರಧಾನವಾಗಬೇಕೆ?? ಯೋಚಿಸಿ. ನಿಮ್ಮ ಅಭಿಪ್ರಾಯ ತಿಳಿಸಿ. 
ಸರ್ವೇ ಜನಾಃ ಸುಖಿನೋ ಭವಂತುಸಮಸ್ತ ಸನ್ಮಂಗಳಾನಿ ಭವಂತು 

ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯಸ್ವಾಮಿ ದೇಗುಲ, ಎಲೆಕ್ಟಾನಿಕ್ ಸಿಟಿ ಹತ್ತಿರ, ಹುಸ್ಕೂರು, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles