ಶ್ರೀ ಚೈತನ್ಯ ಮಹಾಪ್ರಭುಗಳ ಜಯಂತಿ, ಇಸ್ಕಾನ್‌ನಲ್ಲಿ ವಿವಿಧ ಕಾರ್ಯಕ್ರಮ

ಬೆಂಗಳೂರು: ಶ್ರೀ ಚೈತನ್ಯ ಮಹಾಪ್ರಭುಗಳ 535 ನೇ ಜಯಂತಿಯನ್ನು ಮಾರ್ಚ್ 28 ರಂದು ಬೆಂಗಳೂರು ಇಸ್ಕಾನ್ ಆಚರಿಲಾಗುತ್ತಿದೆ.

ಮಾರ್ಚ್ 28ರಂದು ಸಂಜೆ 6 ಗಂಟೆಗೆ ಶ್ರೀ ಶ್ರೀ ನಿತಾಯ್ ಗೌರಾಂಗರ (ಶ್ರೀ ಚೈತನ್ಯ ಮಹಾಪ್ರಭು ಮತ್ತು ಶ್ರೀ ನಿತ್ಯಾನಂದ ಪ್ರಭು) ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀ ಗೌರ ಪೂರ್ಣಿಮೆ ಆಚರಣೆ ಆರಂಭವಾಗಲಿದೆ. ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಉತ್ಸವ ನಡೆಯಲಿದೆ. ಉತ್ಸವದ ಅನಂತರ ಅಭಿಷೇಕ ನಡೆಯಲಿದೆ. ಅರ್ಚಾ ವಿಗ್ರಹಗಳಿಗೆ ಮೊದಲು ಪಂಚಾಮೃತ, ಪಂಚಗವ್ಯ ಫಲಗಳ ರಸದಿಂದ ಮತ್ತು 108  ನದಿಗಳ ಪವಿತ್ರ ಜಲದಿಂದ ಅಭಿಷೇಕ ನೆರವೇರಲಿದೆ. ಅನಂತರ ಭವ್ಯವಾದ ಆರತಿಯನ್ನು ನೆರವೇರಿಸಲಾಗುತ್ತದೆ. ಪದ್ಮಶ್ರೀ ಪುರಸ್ಕೃತ ಹಾಗೂ ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸ ಅವರು ಉತ್ಸವದ ಆಚರಣೆಯ ಉದ್ದೇಶವನ್ನು ಪ್ರವಚನದೊಂದಿಗೆ ತಿಳಿಸಿಕೊಡುತ್ತಾರೆ. ಶಯನ ಆರತಿ ಮತ್ತು ಶಯನ ಪಲ್ಲಕ್ಕಿ ಉತ್ಸವದೊಂದಿಗೆ ಕಾರ್ಯಕ್ರಮವು ಸಮಾಪ್ತಗೊಳ್ಳಲಿದೆ.

ದೇಶದಲ್ಲಿ ಸದ್ಯ ನೆಲೆಸಿರುವ ಸಾಂಕ್ರಾಮಿಕ ಪೀಡಿತ ವಾತಾವರಣದ ನಡುವೆ, ಭಕ್ತರು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಶ್ರೀ ಚೈತನ್ಯ ಮಹಾಪ್ರಭುಗಳ ಜಯಂತಿಯನ್ನು ಆಚರಿಸಲಾಗುವುದು. ಇಡೀ ಆಚರಣೆಯ ಎಲ್ಲಾ ಕಾರ್ಯಕ್ರಮಗಳ ನೇರಪ್ರಸಾರವನ್ನು ವೆಬ್ಸೈಟ್ ಮೂಲಕ ಹಾಗೂ ಇಸ್ಕಾನ್ ಯೂಟ್ಯೂಬ್ ಚಾನೆಲ್ ನ ಮೂಲಕ ಭಕ್ತಾದಿಗಳು ವೀಕ್ಷಿಸಿ ಭಗವಂತನ ಕೃಪೆಗೆ ಪಾತ್ರರಾಗಬಹುದು.

ಲಿಂಕ್: www.iskconbangalore.org/live-darshan

ಅಥವಾ http://bit.ly/gaurapurnima

ಚೈತನ್ಯ ಮಹಾಪ್ರಭುಗಳ ಜನನ

ದೇವೋತ್ತಮ ಶ್ರೀ ಕೃಷ್ಣನು ಈ ಕಲಿಯುಗದ ಯುಗ-ಧರ್ಮವಾಗಿ ಸಂಕೀರ್ತನೆಯನ್ನು ಸ್ಥಾಪಿಸಲು ಶ್ರೀ ಚೈತನ್ಯರಾಗಿ ಆವಿರ್ಭವಿಸಿದನು. ಅವರು ಕ್ರಿಸ್ತ ಶಕ 1486, ಫಾಲ್ಗುಣ ಮಾಸ (ಫೆಬ್ರವರಿ-ಮಾರ್ಚ್) ಪೂರ್ಣಿಮೆಯಂದು ಶ್ರೀಧಾಮ ಮಾಯಾಪುರದಲ್ಲಿ ಅವತರಿಸಿದರು. 

ಶ್ರೀ ಚೈತನ್ಯ ಮಹಾಪ್ರಭುಗಳ ಆವಿರ್ಭಾವದ ಶುಭ ದಿನವೇ ಗೌರ ಪೂರ್ಣಿಮೆ. ಈ ಉತ್ಸವವು ಗೌಡೀಯ ವೈಷ್ಣವರಿಗೆ ಹೊಸ ವರ್ಷದ ಆರಂಭವೂ ಹೌದು.

ಸಾಮಾಜಿಕ ಪರಿವರ್ತನೆಯ ಹರಿಕಾರ

ಕರ್ನಾಟಕದಲ್ಲಿ ದಾಸಪರಂಪರೆಯ ಮೂಲಕ ಕೃಷ್ಣಭಕ್ತಿಯನ್ನು ಪಸರಿಸಿದಂತೆ, ಸರಿಸುಮಾರು ಅದೇ ಕಾಲದಲ್ಲಿ ಬಂಗಾಳದಲ್ಲಿ ಚೈತನ್ಯ ಮಹಾಪ್ರಭುಗಳು ಜನಮಾನಸದಲ್ಲಿ ಭಕ್ತಿಯ ಬೀಜವನ್ನು ಬಿತ್ತುವುದರ ಮೂಲಕ ಸಾಮಾಜಿಕ ಪರಿವರ್ತನೆಯ ಹರಿಕಾರರಾದರು. ಜನಸಾಮಾನ್ಯರ ಬದುಕಿನಲ್ಲಿ ಆಧ್ಯಾತ್ಮಿಕ ಒರತೆಯನ್ನು ಚಿಮ್ಮಿಸಿದರು. ಪರಕೀಯರ ಆಕ್ರಮಣ, ರಾಜಕೀಯ ಮತ್ತು ಸಾಮಾಜಿಕ ದೌರ್ಜನ್ಯದಿಂದ ಭಾರತೀಯ ಸಮಾಜ ನಲುಗಿ ಹೋಗುತ್ತಿದ್ದ ಸಂದರ್ಭದಲ್ಲಿ ಚೈತನ್ಯರು ಜನಸಾಮಾನ್ಯರ ಬದುಕಿನಲ್ಲಿ ಕೃಷ್ಣಭಕ್ತಿಯನ್ನು ಸಂಕೀರ್ತನೆಯ ಮೂಲಕ ವಿಸ್ತರಿಸಿದರು. ಅಂತಹ ಕಾರ್ಯಕ್ರಮದ ಮೂಲಕ ಬಡವರು-ಬಲ್ಲಿದರು, ಶೋಷಿತ ವರ್ಗದವರು, ಅನ್ಯ ಧರ್ಮಿಯರು ಹೀಗೆ ಪ್ರತಿಯೊಬ್ಬರೂ ಹೃದಯವೆಂಬ ಕನ್ನಡಿಗೆ ಮೆತ್ತಿಕೊಂಡಿರುವ ಐಹಿಕ ಸಂಗವೆಂಬ ಧೂಳನ್ನು ನಿವಾರಿಸಿಕೊಳ್ಳಬಹುದು ಎಂದು ಸಾರಿದ ಮೊಟ್ಟಮೊದಲ ಸಾಧಕರೆಂದರೆ ಚೈತನ್ಯ ಮಹಾಪ್ರಭುಗಳು.  ಅಲ್ಲದೆ, ಸಮಾಜದಲ್ಲಿ ಜಾತಿ ಪದ್ದತಿಯಿಂದ ಕಂಗಾಲಾಗಿದ್ದ ಜನರಿಗೆ ಪರಮಾತ್ಮನಲ್ಲಿ ಭಕ್ತಿ ನಿಷ್ಠೆಗೆ ಪ್ರಾಧ್ಯಾನ್ಯತೆ ಕೊಡುವ ಮೂಲಕ ಶಾಂತಿ ಸ್ಥಾಪಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles