ಮೂಲ್ಕಿ: ಎಂಟುನೂರು ವರ್ಷಗಳ ಐತಿಹ್ಯವುಳ್ಳ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವವು ಮಾರ್ಚ್ 27ರಿಂದ ಆರಂಭಗೊ0ಡಿದ್ದು ಏಪ್ರಿಲ್ 3ರವರೆಗೆ ನಡೆಯಲಿದೆ.
ಮಾರ್ಚ್ 29 ರಂದು ರಾತ್ರಿ 7 ಗಂಟೆಗೆ ಪೇಟೆ ಸವಾರಿ, 30ರಂದು ರಾತ್ರಿ 7 ಗಂಟೆಗೆ ಕೊಪ್ಪಲ ಸವಾರಿ, 31ರಂದು ಬಾಕಿಮಾರು ದೀಪೋತ್ಸವ, ಏಪ್ರಿಲ್ 1ರಂದು ರಾತ್ರಿ 7 ಗಂಟೆಗೆ ಕೆರೆ ದೀಪೋತ್ಸವ, 2ರಂದು ಮಧ್ಯಾಹ್ನ 12 ಗಂಟೆಗೆ ರಥಾರೋಹಣ, ರಾತ್ರಿ 7.30 ಕ್ಕೆ ಉತ್ಸವ ಬಲಿ, ಶಯನೋತ್ಸವ ನಡೆಯಲಿದೆ. 3ರಂದು ಬೆಳಗ್ಗೆ 7.30ಕ್ಕೆ ಕವಾಟೋದ್ಘಾಟನೆ, ಸಂಜೆ 7ಕ್ಕೆ ಓಕುಳಿ, ಶ್ರೀದೇವಿ ಮತ್ತು ಶ್ರೀ ಭಗವತಿಯರವರ ಭೇಟಿ, ಮಹಾ ರಥೋತ್ಸವ, ಅವಭೃತ ಧ್ವಜಾವರೋಹಣ ನಡೆಯಲಿದೆ. ೪ರಂದು ಊರ ಪರವೂರ ಭಕ್ತಾದಿಗಳಿಂದ ಹಣ್ಣು ಕಾಯಿ ಸಮರ್ಪಣೆ ನಡೆಯಲಿದೆ.
ಮಲ್ಲಿಗೆ ರಾಶಿಯಲಿ ದೇವಿಯ ಶಯನೋತ್ಸವ
ಈ ಬಾರಿ ಏಪ್ರಿಲ್ 2 ರಂದು ದೇವಿಗೆ ಮಲ್ಲಿಗೆ ರಾಶಿಯಲ್ಲಿ ಶಯನೋತ್ಸವ ನಡೆಯಲಿದೆ. ಭಕ್ತರು ದೇವಿಗೆ ಸಮರ್ಪಿಸಿದ ಮಲ್ಲಿಗೆ ರಾಶಿಯಲ್ಲಿ ದೇವಿಗೆ ಶಯನೋತ್ಸವ ನಡೆಸುವುದು ಉತ್ಸವದ ಪ್ರಮುಖ ಆಕರ್ಷಣೆ. ಅಂದು ಗರ್ಭಗುಡಿಗೆ ಬಾಗಿಲು ಹಾಕಲಾಗುತ್ತದೆ. ಶನಿವಾರದಂದು ಗರ್ಭಗುಡಿಯ ಬಾಗಿಲು ತೆಗೆಯುವ ಕ್ರಮ ಇರುತ್ತದೆ. ಮಲ್ಲಿಗೆ ಹೂವಿನ ಪರಿಮಳ ದೇಗುಲದ ಆವರಣದೆಲ್ಲೆಡೆ ಪಸರಿಸುತ್ತದೆ. ಅದೇ ಹೂಗಳನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗತ್ತದೆ.
ಕಳೆದ ವರ್ಷ ಕೊರೋನಾ ಕಾರಣದಿಂದ ಜಾತ್ರೆ ನಡೆದಿಲ್ಲ. ಹಾಗಾಗಿ ಈ ಬಾರಿ ದುಪ್ಪಟ್ಟು ಮಲ್ಲಿಗೆಯ ಹರಕೆ ಸಲ್ಲುವ ನಿರೀಕ್ಷೆ ಇದೆ. 2019 ರಲ್ಲಿ ಬಪ್ಪನಾಡು ದೇವಿಗೆ ಒಂದೂವರೆ ಲಕ್ಷ ಚೆಂಡು ಮಲ್ಲಿಗೆ ದೇವಿಗೆ ಅರ್ಪಣೆಯಾಗಿತ್ತು.
ದೇಗುಲ ಪರಿಚಯ: ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿರುವ ಮೂಲ್ಕಿ ಪಟ್ಟಣದಲ್ಲಿರುವ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ 800 ವರ್ಷಗಳ ಐತಿಹ್ಯವಿದೆ. ಶಾಂಭವಿ ನದಿ ತಟದಲ್ಲಿರುವ ಈ ಕ್ಷೇತ್ರಕ್ಕೆ ಬಪ್ಪ ಎನ್ನುವ ಮುಸ್ಲಿಂ ವ್ಯಾಪಾರಿಯಿಂದಾಗಿ ಈ ಹೆಸರು ಬಂದಿದೆ.
ಇತಿಹಾಸ: ಬಪ್ಪಬ್ಯಾರಿ ಎನ್ನುವ ಮುಸ್ಲಿಂ ವ್ಯಾಪಾರಿಯೊಬ್ಬ ಶಾಂಭವಿ ನದಿಯಲ್ಲಿ ದೋಣಿಯಲ್ಲಿ ಬರುತ್ತಿದ್ದಾಗ ದೋಣಿ ಇದ್ದಕ್ಕಿದ್ದಂತೆ ನಿಲ್ಲುತ್ತದೆ. ನದಿ ತುಂಬಾ ರಕ್ತ ನೋಡಿದ ಬಪ್ಪಬ್ಯಾರಿ ಭಯಗೊಂಡಾಗ ದೇವಿಯ ವಾಣಿ ಕೇಳಿಸುತ್ತದೆ. ನೀನು ನನಗೊಂದು ಗುಡಿ ಕಟ್ಟಿಸಿಕೊಡು, ಜೈನ ಸಾವಂತನ ಬಳಿ ಹೋಗಿ ಸಹಾಯ ಕೇಳು ಹಾಗೂ ಬೈಲು ಉಡುಪರನ್ನು ನನ್ನ ಗುಡಿಯ ಅರ್ಚಕನನ್ನಾಗಿ ನೇಮಿಸು ಎಂದು ಹೇಳುತ್ತಾಳೆ. ಅದರಂತೆ ನಡೆದ ವಿಷಯವನ್ನು ಸಾಮಂತರ ಬಳಿ ಬಪ್ಪಬ್ಯಾರಿ ತೋಡಿಕೊಂಡಾಗ ದೇವಿಗೆ ಗುಡಿ ನಿರ್ಮಾಣವಾಗುತ್ತದೆ. ಅಂದಿನಿಂದ ಕ್ಷೇತ್ರವನ್ನು ಬಪ್ಪನಾಡು ಎಂದು ಕರೆಯಲಾಗುತ್ತದೆ ಎನ್ನುವುದು ಕ್ಷೇತ್ರದ ಇತಿಹಾಸ.
ಮುಸ್ಲಿಂರೂ ಉತ್ಸವದಲ್ಲಿ ಭಾಗಿ: ಈ ಭಾಗದ ಶಕ್ತಿ ದೇವಾಲಯಗಳಲ್ಲೊಂದಾದ ಈ ದೇವಾಲಯ ಲಿಂಗರೂಪಿಣಿ ದುರ್ಗೆ. ಮುಸ್ಲಿಮರಿಗೂ ಕ್ಷೇತ್ರದಲ್ಲಿ ಪ್ರಸಾದ ವಿತರಣೆ ನಡೆಯುತ್ತದೆ. ಬ್ರಹ್ಮರಥೋತ್ಸವದಲ್ಲಿ ಮುಸ್ಲಿಮರೂ ಭಾಗವಹಿಸುತ್ತಾರೆ ಅಲ್ಲದೆ ಪೂಜಾ ನಂತರ ಮೊದಲ ಪ್ರಸಾದ ಬಪ್ಪಬ್ಯಾರಿ ಕುಟುಂಬದವರಿಗೆ ನೀಡಲಾಗುತ್ತದೆ.