ಪಟ್ಟಾಭಿಷೇಕದೊಂದಿಗೆ ವೈರಮುಡಿ ಜಾತ್ರೆ ಸಂಪನ್ನ

ಮೇಲುಕೋಟೆಯ ಚೆಲುವನಾರಾಯಣಸ್ವಾಮಿಗೆ ಸೋಮವಾರ ಸಂಜೆ ಪಟ್ಟಾಭಿಷೇಕ ಮಹೋತ್ಸವ ನೆರವೇರುವುದರೊಂದಿಗೆ ವೈರಮುಡಿ ಬ್ರಹ್ಮೋತ್ಸವ ಸಂಪನ್ನಗೊಂಡಿತು.

ಜಾತ್ರಾಮಹೋತ್ಸವದ ಪ್ರಧಾನ ದಿನವಾದ ಸ್ವಾಮಿ ಜಯಂತಿಯ ಮೀನ ಹಸ್ತನಕ್ಷತ್ರದ ಶುಭದಿನದ ಪ್ರಯುಕ್ತ ಪಂಚಕಲ್ಯಾಣಿಯಲ್ಲಿ ಅವಭೃತ-ತೀರ್ಥಸ್ನಾನ ಮಹೋತ್ಸವ ನೆರವೇರಿತು. ಚೆಲುವನಾರಾಯಣಸ್ವಾಮಿ ಬ್ರಹ್ಮಲೋಕದಿಂದ ಭೂಲೋಕಕ್ಕೆ ಅವಿರ್ಭವಿಸಿದ ದಿನವಾದ ಮೀನ ಮಾಸದ ಹಸ್ತನಕ್ಷತ್ರ ಹಿಂದಿನ ಎಂಟು ದಿನ ವೈರಮುಡಿ ಜಾತ್ರೆ ನಡೆಯುತ್ತಾ ಬಂದಿದೆ. ನವಾಹ ಉತ್ಸವದ ಕೊನೆಯ ಮತ್ತು 9ನೇ ತಿರುನಾಳ್ ಅವಭೃತ ಅಂಗವಾಗಿ ಬೆಳಿಗ್ಗೆ ಹತ್ತು ಗಂಟೆಯವೇಳೆಗೆ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವವನ್ನು ಗಜೇಂದ್ರವರದನ ಸನ್ನಿಧಿಗೆ ನೆರವೇರಿಸಲಾಯಿತು. ಅಲ್ಲಿ ಬೆಳ್ಳಿಯ ಸ್ನಪನಶೆಲ್ವರ್‌ಗೆ ವೇದಮಂತ್ರಗಳೊಂದಿಗೆ ಅಭಿಷೇಕ ನೆರವೇರಿಸಿ ತೀರ್ಥಸ್ನಾನ ನೆರವೇರಿಸಲಾಯಿತು.

ಸಂಜೆ ಕಲ್ಯಾಣಿ ತೀರದಲ್ಲಿರುವ ಪರಕಾಲಮಠದಲ್ಲಿ ಹೋಮಾದಿ ಕಾರ್ಯಕ್ರಮಗಳು ಮುಕ್ತಾಯವಾದ ನಂತರ ಚೆಲುವನಾರಾಯಣಸ್ವಾಮಿ ಪಟ್ಟಾಭಿಷೇಕ ಮಹೋತ್ಸವ ನೆರವೇರಿತು. ಈ ವೇಳೆ ರಾಜಗುರು ಮೈಸೂರು ಅಭಿನವ ವಾಗೀಶ ಬ್ರಹ್ಮತಂತ್ರ ಪರಕಾಲ ಶ್ರೀಗಳು ಭಾಗವಹಿಸಿದ್ದರು.

ನಂತರ ಸ್ವಾಮಿಗೆ ಪುಷ್ಪಮಂಟಪಾರೋಹಣ ನೆರವೇರಿತು. ಈ ವೇಳೆ ದೇವಾಲಯದಲ್ಲಿ ಪಡಿಮಾಲೆ ನಡೆದು ವೈರಮುಡಿ ಜಾತ್ರಾಮಹೋತ್ಸವದ ಧಾರ್ಮಿಕ ಕೈಂಕರ್ಯಗಳ ಯಶಸ್ಸಿನಲ್ಲಿ ಪ್ರಮುಖಪಾತ್ರವಹಿಸಿದ ನಾಲ್ಕೂ ಸ್ಥಾನೀಕರಿಗೆ ಮಾಲೆ ಮರ್ಯಾದೆ ಮಾಡಲಾಯಿತು. ಸರ್ವಶಾಂತಿಗಾಗಿ ಮಂಗಳವಾರ ಮೂಲಮೂರ್ತಿಗೆ ಮಹಾಭಿಷೇಕ ಕಾರ್ಯಕ್ರಮ, ರಾತ್ರಿ ಕತ್ತಲುಪ್ರದಕ್ಷಿಣೆ, ಹನುಮಂತವಾಹನೋತ್ಸವ ನೆರವೇರಲಿದೆ ಬುಧವಾರ ಅನ್ನಕೋಟಿ ಉತ್ಸವ ನೆರವೇರಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles