29ರಂದು ಭೂವರಾಹನಾಥಸ್ವಾಮಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ

ಕೆ.ಆರ್.ಪೇಟೆ: ತಾಲ್ಲೂಕಿನ ಪುರಾಣ ಪ್ರಸಿದ್ಧ ವರಾಹನಾಥ ಕಲ್ಲಹಳ್ಳಿಯ ದೇವಸ್ಥಾನದಲ್ಲಿ ಭೂವರಾಹನಾಥ ಸ್ವಾಮಿ ಸಮೇತ ಲಕ್ಷ್ಮೀವರಾಹನಾಥ ಸ್ವಾಮಿಯ ಉತ್ಸವಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಾಲಯದ ಹೆಚ್ಚುವರಿ ಕಟ್ಟಡದ ವಿಸ್ತರಣೆ ಕಾಮಗಾರಿಗೆ ಶಿಲನ್ಯಾಸ ಏ.29 ರಂದು ನಡೆಯಲಿದೆ.

ಏ.26ರಿಂದ 29 ರವರೆಗೆ ವಿಶೇಷ ಪೂಜೆ, ಅಭಿಷೇಕ ನಡೆಯಲಿದೆ. ದೇಗುಲವು ಕಾವೇರಿ ನದಿ ತೀರದಲ್ಲಿದ್ದು, ಹೊಯ್ಸಳ ಅರಸರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಭೂ ದೇವಿ ಸಮೇತ ಇರುವ ವರಾಹನಾಥನ ವಿಗ್ರಹವಿದೆ. ಉತ್ಸವ ಮೂರ್ತಿ ಇಲ್ಲದೆ ಇರುವುದರಿಂದ ಭಕ್ತರು ದೇವರ ಪಲ್ಲಕ್ಕಿ ಉತ್ಸವ, ಮೆರವಣಿಗೆ ಸೇವೆಗಳನ್ನು, ಹರಕೆಗಳನ್ನು ಪೂರೈಸಿಕೊಳ್ಳಲು ಆಗುತ್ತಿರಲಿಲ್ಲ. ಭಕ್ತರಿಗೆ ಅನುಕೂಲವಾಗುವಂತೆ ಉತ್ಸವ ಮೂರ್ತಿಗಳನ್ನು ಏ.29ರಂದು ಪ್ರತಿಷ್ಠಾಪಿಸಲಾಗುತ್ತಿದೆ. ಅದೇ ದಿನ ಸುಮಾರು ₹ 25 ಕೋಟಿ ವೆಚ್ಚದಲ್ಲಿ ದೇವಸ್ಥಾನದ ವಿಸ್ತರಣಾ ಕಾಮಗಾರಿಗೂ ಶಿಲಾನ್ಯಾಸ ನಡೆಯಲಿದೆ.‌

ಹೊಯ್ಸಳ ವಾಸ್ತು ಶೈಲಿಯಲ್ಲಿ 108 ಕಾಲುಗಳ ಮುಖಮಂಟಪ ಸೇರಿದಂತೆ ಮೂರು ಪ್ರಾಕಾರ ಹಾಗೂ ಸುಮಾರು 178 ಅಡಿ ಎತ್ತರದ ರಾಜಗೋಪುರದ ನಿರ್ಮಾಣ ಕಾರ್ಯಕ್ಕೆ ಗ್ರಾನೈಟ್ ಕಲ್ಲುಗಳನ್ನು ತರಲಾಗಿದ್ದು, ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದ ಪೀಠಾಧಿಪತಿ ಪರಕಾಲ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಮುಖಂಡರು, ಗುರುಗಳ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್ ತಿಳಿಸಿದರು. ಕೋವಿಡ್‌ ನಿಯಮಗಳನ್ನು ಅನುಸರಿಸಿ ಧಾರ್ಮಿಕ ಕಾರ್ಯ ಕ್ರಮಗಳನ್ನು ಆಚರಿಸಲಾಗುವುದು ಎಂದು ಹೇಳಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles