ಇಂದು ರಾತ್ರಿಯಿಂದಲೇ ಕುಕ್ಕೆ ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ನಿರ್ಬಂಧ

ಸುಬ್ರಹ್ಮಣ್ಯ:  ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ 2ನೇ ಅಲೆ ತೀವ್ರವಾಗಿ ಹೆಚ್ಚುತ್ತಿರುವುದರಿಂದ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಸರಕಾರದ ಆದೇಶದ ಪ್ರಕಾರ ಏಪ್ರಿಲ್ 21ರ ರಾತ್ರಿಯಿಂದ ಮುಂದಿನ ಆದೇಶದವರೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಂ ಅವರು ತಿಳಿಸಿದ್ದಾರೆ.

ಶ್ರೀ ದೇವರ ದರ್ಶನ, ಸೇವೆ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಮತ್ತು ವಿಶೇಷ ಉತ್ಸವಾದಿಗಳು ಇರುವುದಿಲ್ಲ. ಹಾಗೂ ದೇವಾಲಯಗಳಲ್ಲಿನ ವಸತಿಗೃಹ, ಅತಿಥಿ ಗೃಹಗಳನ್ನು ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಹಂಚಿಕೆ ಮಾಡುವುದನ್ನು ರಾತ್ರಿ ಬುಧವಾರ ರಾತ್ರಿ 9 ಗಂಟೆಯಿಂದ ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಮತ್ತು ಕಾರ್ಯನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.

ಸರಕಾರದ ಆದೇಶದಂತೆ ಶ್ರೀ ದೇವಳದಲ್ಲಿ ಶ್ರೀ ದೇವರಿಗೆ ನಡೆಯತಕ್ಕ ದೈನಂದಿನ ಪೂಜಾದಿ ವಿನಿಯೋಗಗಳು ಹಾಗೂ ಪಂಚಪರ್ವಾದಿ ವಿಶೇಷ ಕಟ್ಲೆಯ ಉತ್ಸವಗಳು ಸಹಿತ ಸಂಬಂಧಪಟ್ಟ ಅರ್ಚಕಾದಿ ಸಿಬ್ಬಂದಿಗಳ ಮೂಲಕ ದೇವಳದ ಒಳಾಂಗಣ ಮತ್ತು ಹೊರಾಂಗಣಕ್ಕೆ ಮಾತ್ರ ಸೀಮಿತಗೊಳಿಸಿ ನೆರವೇರಿಸಲ್ಪಡುತ್ತದೆ. ಯಾವುದೇ ಸಾರ್ವಜನಿಕ ಭಕ್ತಾದಿಗಳಿಗೆ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಶ್ರೀ ದೇವಳದಲ್ಲಿ ಈಗಾಗಲೇ ಭಕ್ತಾದಿಗಳು ಸರ್ಪ ಸಂಸ್ಕಾರ ಸೇವೆ ಹಾಗೂ ಮುಂಗಡವಾಗಿ ಕಾದಿರಿಸಲ್ಪಟ್ಟ ಇನ್ನಿತರ ಯಾವುದೇ ಸೇವೆಗಳನ್ನು ಕೂಡಾ ನಡೆಸುವುದನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದ್ದು, ಮುಂದಕ್ಕೆ ಅಧಿಕೃತವಾಗಿ ಭಕ್ತಾದಿಗಳಿಗೆ ಕಾದಿರಿಸಿದ ಸೇವೆಗಳನ್ನು ನಡೆಸುವ ವಿಚಾರವಾಗಿ ತಿಳಿಸಲಾಗುವುದು.

Related Articles

ಪ್ರತಿಕ್ರಿಯೆ ನೀಡಿ

Latest Articles