*ಶಿವಲೀಲಾ ಹುಣಸಗಿ ಯಲ್ಲಾಪುರ
ಸದ್ದಿಲ್ಲದೇ ತನ್ನೊಳಗೆ ಕಠಿಣವಾದವ
ಮದ್ದಿಲ್ಲದೇ ರೋಗವ ನಿವಾಳಿಸಿದವ
ಮಜ್ಜಿಗಿಯ ಮಜ್ಜನದಲಿ ತೃಪ್ತಿಯಾಗಿ
ಮುರುಕು ಗುಡಿಸಲಿಗೆ ಶಕ್ತಿಯಾದವ
ಹರಕು ಚಾಪೆಗೆ ನೂರು ತೆಪೆಗಳಿದ್ದರೂ
ಹೊದ್ದ ಹೊದಿಕೆಯ ತುಂಬ ತಾರೆಗಳು
ಬಾನಿಗೂ ಭೂವಿಗೂ ನೇರ ಮಾತುಗಳೂ
ಅಪ್ಪನ ಎದೆಯಾಳದ ಮೌನ ಗೀತೆಗಳು
ರಾಗಿಯಂಬಲಿಯಲಿ ಎದೆಸೆಟಿಸಿದವನು
ರಾಗಿ ಕುಡಿದವ ನೀರೋಗಿ ಎಂದವನು
ಬಡವನ ಎದೆಯಾಗ ಪ್ರೇಮವಿದೆಯೆಂದು
ಬೆನ್ನಿಗೊಂದು ತತ್ರಾಣಿ ಹೊತ್ತು ನಡೆದವನು
ಕೆಲಸಕಾಗಿ ಬೀದಿಗಿಳಿದು ಮೈ ಬಗ್ಗಿಸಿದವನು
ತುತ್ತಿನ ಚೀಲಗಳ ಎದೆಯಲಿ ಹೊತ್ತವನು
ಪ್ರೀತಿ ಬಸಿದು ಗಂಜಿಯಾಗಿ ಸುರಿದವನು
ದಣಿವಾರಿಸಲು ಕೊಂಚ ಯೋಚಿಸಿದವನು
ಅಪ್ಪನೆಂದಿಗೂ ಎಲೆಮರೆಯ ಕಾಯಿಂತೆ
ಅವನ ನೋವು ಯಾರ ಕಣ್ಣಿಗೂ ಬೀಳದಂತೆ
ಅಮ್ಮನ ಕೈಲಿ ಕೀಲಿ ಕೈ ಕೊಟ್ಟು ಸರಿದಂತೆ
ಗುಮ್ಮನಾಗಿ ನಕ್ಕು ನಲಿವ ಜೋಕರನಂತೆ
ಪುಡಿಕಾಸಿಗೂ ನೆತ್ತರು ಹರಿಸಲು ಸೋತಿಲ್ಲ
ಅಪ್ಪನೆದೆಯ ಹತ್ತಿ ಕುಣಿವಾಗೆಲ್ಲ ನೊಂದಿಲ್ಲ
ಅವನ ನೆರಳೆ ನನಗೆ ಭದ್ರಕೋಟೆಯಲ್ಲ
ನಂಬಿಕೆ,ಭರವಸೆ,ಪ್ರೀತಿಗೆ ನನ್ನಪ್ಪನಂತಿಲ್ಲ
ಅಪ್ಪ ನಕ್ಕಿದ್ದು ಕಮ್ಮಿ ಬೆವತಿದ್ದು ಜಾಸ್ತಿ
ಅಪ್ಪನ ಒರಟಲ್ಲಿದೆ ಪ್ರೇಮಭಾವದ ಮಸ್ತಿ
ಅಪ್ಪಾ ಜಗದ ತೂಕ ನನ್ನಂತರಂಗದಾ ಶಕ್ತಿ
ಅಪ್ಪನೆಂಬ ಬೆಪ್ಪ ಕೋಟಿಗೊಬ್ಬನೆಂಬುದೆ ಆಸ್ತಿ...
Appa na bagge chanagi bardidiri….👌👌over all super ma’am
thank you