ಮಿನುಗುತಾರೆ ಕಲ್ಪನಾ ಅವರ ಬಣ್ಣದ ಬದುಕಿನ ಚಿತ್ರಣ

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ದಿವಂಗತ ಕಲ್ಪನಾ ಅವರನ್ನು ಅಗ್ರಸ್ಥಾನಕ್ಕೆ ಸೇರಿಸಬೇಕಾಗುತ್ತದೆ. ತಮಗೆ ದೊರೆತ ಪಾತ್ರಗಳಿಗೆ ಜೀವ ತುಂಬುವ ಅವರ ಭಾವಾಭಿನಯ ಅವರನ್ನು ಚಿರಸ್ಥಾಯಿಯಾಗಿಸಿದೆ.

*ವೈ.ಬಿ.ಕಡಕೋಳ

ಮೇ 13 ಮಿನುಗುತಾರೆ ಕಲ್ಪನಾ ಅವರ ಪುಣ್ಯತಿಥಿ. 1979ರ ಮೇ 13 ರಂದು ಕಲ್ಪನಾ ದುರಂತ ಅಂತ್ಯ ಕಂಡ ದಿನ. ಗುಡಗೇರಿ ಬಸವರಾಜರ ನಾಟಕ ಕಂಪನಿಯಲ್ಲಿ ಸಂಕೇಶ್ವರದಲ್ಲಿ “ಕುಮಾರ ರಾಮ” ನಾಟಕ ಅವರ ಬದುಕಿನ ಕೊನೆಯನ್ನು ಹೇಳಿತೇನೋ ಅನ್ನಿಸಿದರೂ ಅವರಲ್ಲಿನ ಪ್ರಬುದ್ಧ ಕಲಾವಿದೆಯ ನೆನಪು ಅಜರಾಮರ. ಒಂದು ಸಾವಿಗೆ ಹತ್ತಾರು ಕತೆಗಳು ಹುಟ್ಟಿಕೊಳ್ಳುವಂತೆ ಕಲ್ಪನಾರ ಬದುಕಿಗೂ ಅವರ ಸಾವಿಗೂ ಹಲವು ಪ್ರಶ್ನೆಗಳು ಮೂಡಿ ಬಂದವು. ಈಗ ಅವರ ಸಾವನ್ನು ನೆನೆಯುವ ಬದಲು ಅವರು ಎಷ್ಟು ಮಹಾನ್ ಕಲಾವಿದೆಯಾಗಿದ್ದರು ಎಂಬುದನ್ನು ನೆನೆಯಬೇಕು. ಕನ್ನಡ ಚಿತ್ರರಂಗ ಕಂಡ ಮಿನುಗುತಾರೆ ಕಲ್ಪನಾ ಅವರಿಗೆ ಅವರೇ ಸಾಟಿ.

ಹೀಗಾಗಿ ಅವರ ಚಲನಚಿತ್ರಗಳ ಜೊತೆಗೆ ಅವರ ಅಭಿನಯದ ಕುರಿತು ಒಂದು ಹಿನ್ನೋಟ.
‘ಶರಪಂಜರ’ ವರ್ಧಿನಿ ಆರ್ಟ್ಸ ಸಂಸ್ಥೆಯಿ0ದ 1971ರಲ್ಲಿ ಕನ್ನಡದ ಖ್ಯಾತ ಸಾಹಿತಿಗಳಾದ ತ್ರಿವೇಣಿಯವರ ಕಾದಂಬರಿ ಆಧಾರಿತ ಪುಟ್ಟಣ್ಣ ಕಣಗಾಲ್ ನಿರ್ದೆಶನದ ಚಲನಚಿತ್ರ. ಈ ಚಲನಚಿತ್ರದಲ್ಲಿ ಕಲ್ಪನಾರ ಮನೋಜ್ಞ ಅಭಿನಯ ನಿಜಕ್ಕೂ ಅದ್ಬುತವಾಗಿತ್ತು. 1972 ರಲ್ಲಿ ಅತ್ಯುತ್ತಮ ಚಿತ್ರವೆಂದು 20 ನೆಯ ರಾಷ್ಟçಪ್ರಶಸ್ತಿ ಹಾಗೂ 1970-71 ನೇ ಸಾಲಿನಲ್ಲಿ ಅತ್ಯುತ್ತಮ ಚಿತ್ರ ಅತ್ಯುತ್ತಮ ನಟಿ (ಕಲ್ಪನಾ).ಅತುತ್ತಮ ಚಿತ್ರಕಥೆ ಪುಟ್ಟಣ್ಣ ಕಣಗಾಲ್. ಎಂಬ ರಾಜ್ಯಪ್ರಶಸ್ತಿಗಳನ್ನು ಈ ಚಲನಚಿತ್ರ ಪಡೆದಿತ್ತು. ಇಷ್ಟೆಲ್ಲ ಹೇಳಲು ಕಾರಣ ಮಹಿಳಾ ಪ್ರಧಾನ ಪಾತ್ರಗಳನ್ನು ಪುಟ್ಟಣ್ಣ ಕಣಗಾಲ್ ಚಿತ್ರಿಸಿದ ರೀತಿ ಮತ್ತು ಅದಕ್ಕೆ ತಕ್ಕುದಾದ ಅಭಿನಯಿಸುವ ಸಾಮರ್ಥ್ಯ ಹೊಂದಿದ ಕಲಾವಿದೆ.

‘ಶರಪಂಜರ’ ಚಲನಚಿತ್ರ ಆರಂಭವಾಗುವುದು ಮಡಿಕೇರಿಯ ಕಾನನದ ನಡುವೆ ಅನೇಕ ತಿರುವುಗಳುಳ್ಳ ರಸ್ತೆಯಲ್ಲಿ ಕೆಂಪು ಬಸ್ಸೊಂದು ಬರುವ ದೃಶ್ಯದೊಂದಿಗೆ. ಸ್ನೇಹಿತರ ಮದುವೆಗೆಂದು ಅದೇ ಬಸ್ಸಿನಲ್ಲಿ ಕಥಾನಾಯಕ ಸತೀಶ (ಗಂಗಾಧರ) ಕಥಾನಾಯಕಿ ಕಾವೇರಿ(ಕಲ್ಪನಾ) ಮಡಿಕೇರಿಗೆ ಬರುತ್ತಾರೆ. ಕಾವೇರಿಯ ಅಂದಕೆ ಮನಸೋತ ಸತೀಶ ತನ್ನ ಸ್ನೇಹಿತನ ಸಹಾಯದಿಂದ ಆಕೆಯ ಪರಿಚಯ ಮಾಡಿಕೊಳ್ಳುತ್ತಾನೆ. ಗಂಗಾಧರ ಕಿತ್ತಳೆ ಹಣ್ಣಿನ ತೋಟದೊಳಗೆ ಕಲ್ಪನಾಳನ್ನು ಹಣ್ಣು ತೋರಿಸಿ ಪ್ರೇಮ ನಿವೇದನೆ ಮಾಡುವ ದೃಶ್ಯ ಕೂಡ ಹೃದಯಂಗಮ ‘ಹಣ್ಣು ಕೊಟ್ಟೆಯೋ ಹೃದಯ ಕೊಟ್ಟೆಯೋ…’ ಎನ್ನುವಾಗ ನಡುಗುವ ಧ್ವನಿ ಹೆಣ್ಣಿನ ಭಾವನೆಯ ಮಿಡಿತವನ್ನು ಕಲ್ಪನಾ ಅಭಿನಯಿಸಿದ ರೀತಿ ನೆನಪುಳಿಯುತ್ತದೆ. ಅಷ್ಟೇ ಅಲ್ಲ ಸಿನಿಮಾ ತಿರುವು ಪಡೆಯುವ ಸನ್ನಿವೇಶ ಎರಡು ಮಕ್ಕಳ ತಾಯಿಯಾಗಿ ನಂತರ ಗಂಡನನ್ನು ಶ್ರೀರಂಗಪಟ್ಟಣದ ನದಿ ತೀರಕ್ಕೆ ಕರೆದೊಯ್ಯುವ ದೃಶ್ಯ ‘ನಾ ಬಂದೆ ನಾ ನೋಡಿದೆ ನಾ ಗೆದ್ದೆ’ ಎನ್ನುವ ಸಂದರ್ಭದಲ್ಲಿ ಸ್ತಿçÃಯ ಮನಸ್ಸು ಸ್ವಲ್ಪ ಘಾಸಿಯಾದರೂ ಸಾಕು ಮುಂದಿನ ಜೀವನ ನರಕ ಎನ್ನುವ ಭಾವವಿದೆಯಲ್ಲ ಅದು ಕಲ್ಪನಾರಿಗೆ ಅವರೇ ಸಾಟಿ ಎನ್ನುವ ಅಭಿನಯ. ಮಾನಸಿಕ ಚಿಕಿತ್ಸಾಲಯವನ್ನು ಪರಿಚಯಿಸುತ್ತ ಡಾಕ್ಟರ್ ಬಾಯಿಂದ ಹೇಳುವ ಮಾತು ‘ನಿಮಗೆ ಕಾರಣ ಮುಖ್ಯವೋ ? ಅವಳು ಗುಣವಾಗುವುದು ಮುಖ್ಯವೋ ?’ ಎನ್ನುವ ವೈದ್ಯರ ಮಾತು ಪ್ರತಿ ಘಟನೆಗೂ ಒಂದು ಕಾರಣ ಇರುತ್ತದೆ. ಅದು ವಾಸಿಯೂ ಆಗುತ್ತದೆ ಎಂಬುದನ್ನು ಸಾಂಕೇತಿಸುವ ಕಣಗಾಲ್‌ರ ದೃಶ್ಯ ಸಂಯೋಜನೆ ನಿಜಕ್ಕೂ ಅಮೋಘ.


ಅದೇ ರೀತಿ ಕಪ್ಪು ಬಿಳುಪು ಚಲನಚಿತ್ರ ಇಲ್ಲಿ ದ್ವಿಪಾತ್ರದಲ್ಲಿ ಕಲ್ಪನಾಳ ಅಭಿನಯ. 1969ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿತ್ತು. ಆರ್ಯಾ0ಬಾ ಪಟ್ಟಾಭಿಯವರ ಕಾದಂಬರಿ ಆಧಾರಿತ ಈ ಚಲನಚಿತ್ರ ಒಂದೇ ರೀತಿಯ ಆದರೆ ವಿಭಿನ್ನ ಜೋಡಿ ಅವಳಿಗಳ ವ್ಯತಿರಿಕ್ತ ವರ್ತನೆಗಳ ಸುತ್ತ ಸುತ್ತುವ ಈ ಕತೆಯಲ್ಲಿ ಆಧುನಿಕ ಹೆಣ್ಣಾಗಿ ಕಲ್ಪನಾ ಅವರ ಅಭಿನಯ ಅಮೋಘ. ವತ್ಸಲಾ ಹಳ್ಳಿಯಲ್ಲಿ ಚಿಕ್ಕಮ್ಮನ ಶೋಷಣೆಯಲ್ಲಿ ಬೆಳೆಯುತ್ತಿರುವವಳು. ಚಂದ್ರಾ ದೆಹಲಿಯಲ್ಲಿ ಶಿಕ್ಷಣ ಪಡೆದು ಬರುವ ಮಾಡರ್ನ ಹೆಣ್ಣು. ಅವಳಾಡುವ ಮಾತು ನಿಜಕ್ಕೂ ಹಾಗೂ ಮಾದಕ ನಗು ಗಮನ ಸೆಳೆಯುತ್ತವೆ. ಅದರಲ್ಲೂ ಆರ್.ಟಿ.ರಮಾ ಅವರು “ಗುಡ್ ಮಾರ್ನಿಗ್.” ಪಾತ್ರ ತರುಣರಾದ ಮಧು (ರಾಜೇಶ), ಸುದರ್ಶನ ಅಭಿನಯ, ಆರ್.ರತ್ನರ ಸಂಗೀತ, ಆರ್.ಎನ್.ಜಯಗೋಪಾಲ್ ಅವರ ಸಂಭಾಷಣೆ ಮತ್ತು ಹಾಡುಗಳು ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಚ0ದ್ರಾಳ ಮದುವೆಯಾಗಲು ಬಯಸಿದ ಶ್ರೀವತ್ಸಾ ಆತ್ಮಹತ್ಯಗೆ ಮೊದಲು ಬರೆದ ಪತ್ರ ಗೆಳೆಯ (ಮಧು) ರಾಜೇಶ ಕೈಗೆ ಸಿಗುತ್ತದೆ. ಅದು ಸಿನಿಮಾಕ್ಕೊಂದು ವಿಶಿಷ್ಟ ತಿರುವು. ಅಲ್ಲಿ ಮಧು (ರಾಜೇಶ) ಮದುವೆಯನ್ನು ಚಂದ್ರಾಳೊ0ದಿಗೆ ಮಾಡಲು ಅವರ ತಂದೆ ಬಯಸಿರುತ್ತಾನೆ.
ಆದರೆ ಅವಳಿಗೆ ಮನಸ್ಸಿರುವುದಿಲ್ಲ. ಆದರೆ ಅವರ ಮನೆ ಗೃಹಪ್ರವೇಶಕ್ಕೆ ಅವರ ತಂದೆ ಹೋಗೆಂದಾಗ ಮನಸ್ಸಿಲ್ಲದ ಅವಳು ವತ್ಸಲಾಳನ್ನು ಅಲ್ಲಿಗೆ ಚಂದ್ರಾ ಹೆಸರಲ್ಲಿ ಕಳಿಸುತ್ತಾಳೆ. ಮಧು (ರಾಜೇಶ) ಚಂದ್ರಾಳ ಮೋಸದ ಸಂಗತಿ ತಿಳಿದು ಮನಸ್ಸಲ್ಲಿ ದ್ವೇಷದ ಭಾವನೆ ಹೊಂದಿರುತ್ತಾನೆ. ಆದರೆ ಬಂದವಳು ವತ್ಸಲಾ. ಅವಳು ಚಂದ್ರಾ ಹೆಸರಲ್ಲಿ ಆ ಗೃಹಪ್ರವೇಶದ ಸಂದರ್ಭದಲ್ಲಿ ನಡೆಯುವ ಘಟನೆಗಳು. ಅನಿರೀಕ್ಷಿತವಾಗಿ ಗೃಹಪ್ರವೇಶಕ್ಕೆ ಚಂದ್ರಾಳ ತಂದೆಯ ಆಗಮನ. ಗೃಹಪ್ರವೇಶದ ದಿನ ಚಂದ್ರಾ ಹೆಸರಲ್ಲಿದ್ದ ವತ್ಸಲಾ ಹಾಡುವ “ ಈ ಚಂದದ ಮನೆಯಲ್ಲಿ, ಶ್ರೀ ಗಂಧದ ಗುಡಿಯಲ್ಲಿ, ಆನಂದದ ಹೊಳೆ, ಅನುರಾಗದ ಮಳೆ, ಎಂದೆ0ದೂ ಚಿಮ್ಮುತಿರಲಿ” ಗೀತೆ ಮಧು (ರಾಜೇಶ) ಬಾಳಿನಲ್ಲಿ ಚಂದ್ರಾ (ವತ್ಸಲಾ)ಳ ಕುರಿತು ತಳೆದಿದ್ದ ನಿಲುವಿನಲ್ಲಿ ಬದಲಾವಣೆ ಆಗುತ್ತದೆ.


ಅಷ್ಟರಲ್ಲಿ ಪೇಪರ್ನಲ್ಲಿ ಬಂದಿರುವ ಸುದ್ದಿ ಮಧು (ರಾಜೇಶ) ಎಂ.ಎ. ಪದವೀಧರ ಜೊತೆಗೆ ಉತ್ತಮ ಕೃಷಿಕ ಪ್ರಶಸ್ತಿ ಬಂದಿರುವ ಮಾಡರ್ನ್ ಚಂದ್ರಾಳಿಗೆ ತಿಳಿಯುತ್ತದೆ. ಅವನನ್ನು ತನ್ನ ತೆಕ್ಕೆಗೆ ತಗೆದುಕೊಳ್ಳುವ ಮನೋಭಾವ ಅವಳಲ್ಲಿ ಮೂಡುತ್ತದೆ. ಅಷ್ಟರಲ್ಲಿ ಅವನು ವತ್ಸಲಾಳಲ್ಲಿ ಅನುರಕ್ತನಾಗಿರುತ್ತಾನೆ. “ಇದೇ ರೂಪ ಅದೇ ನೋಟ, ಓಹೋ ನಾ ಸೋತೆ” ಎನ್ನುವ ಗೀತೆಯಲ್ಲಿ ಅವಳ ಬೆರಳಿಗೆ ಉಂಗುರ ತೊಡಿಸುತ್ತಾನೆ. ಗೃಹಪ್ರವೇಶ ಮುಗಿಸಿ ತಮ್ಮ ಊರಿಗೆ ಮರಳುವ ಮೊದಲು ಅರಿಸಿನ ಕೊಂಬಿರುವ ದಾರವನ್ನು ತಾಳಿ ರೂಪದಲ್ಲಿ ದೇವಾಲಯದಲ್ಲಿ ಕಟ್ಟಿಸಿಕೊಂಡು ರೈಲು ನಿಲ್ದಾಣಕ್ಕೆ ಮರಳುತ್ತಾಳೆ. ಅದೇ ರೈಲಿನಲ್ಲಿ ಚಂದ್ರಾ ಬಂದಿರುತ್ತಾಳೆ. ಅವಳು ಮಧು (ರಾಜೇಶ) ಮತ್ತು ವತ್ಸಲಾಳ ಪ್ರೀತಿಯನ್ನು ಗಮನಿಸುತ್ತಾಳೆ. ಅವಳು ಮಧುವನ್ನು ವಿವಾಹವಾಗಲು ಬಯಸಿ ತನ್ನ ನಿಲುವನ್ನು ಬದಲಿಸಿಕೊಳ್ಳುವಳು. ಇತ್ತ ಬಡತನದಲ್ಲಿ ಬೆಳೆದ ವತ್ಸಲಾ ಚಿಕ್ಕಮ್ಮಳ ಕಷ್ಟದ ಕೋಟಲೆಯಲ್ಲಿ ಬೆಳೆಯತೊಡಗುತ್ತಾಳೆ.
ಅಲ್ಲಿ ಅವಳ ತಂದೆಯ ಸಾವು ಚಿಕ್ಕಮ್ಮ ಮತ್ತು ಅವಳ ತಮ್ಮ ಸೇರಿ ಮನೆ ಮಾರಾಟ ಮಾಡುವುದರೊಂದಿಗೆ ಬೀದಿಪಾಲಾದ ವತ್ಸಲ ಚಂದ್ರಾಳ ಮನೆಗೆ ಬರುತ್ತಾಳೆ. ಇತ್ತ ಮಧು ಚಂದ್ರಾಳ ಮದುವೆಯ ಎಲ್ಲ ಏರ್ಪಾಟು ಆರಂಭವಾಗುತ್ತದೆ. ಮದುವೆ ಗಂಡು ತನ್ನ ಕುಟುಂಬದವರೊ0ದಿಗೆ ಮಾವನ ಮನೆಗೆ ಬರುತ್ತಾನೆ. ಆದರೆ ವತ್ಸಲಾ ಚಂದ್ರಾಳಿಗೆ ವಿವಾಹವಾಗಲೆಂದು ಮನೆ ಬಿಟ್ಟು ಹೊರಡುವಳು. ಅವಳು ಮಧು ಬರುವ ರೈಲು ಹತ್ತುವ ಮುನ್ನ ವತ್ಸಲಾ ಅದೇ ರೈಲಿನಲ್ಲಿ ಹತ್ತುವುದನ್ನು ನೋಡುತ್ತಾನೆ. ಆದರೂ ಅವರ ಮನೆಗೆ ಬಂದಾಗ ನಿಜ ಚಂದ್ರಳನ್ನು ಗಮನಿಸುತ್ತಾನೆ. ಅವನಿಗೆ ಅವಳು ಇವಳಲ್ಲ ಎಂಬ ಸಂಗತಿ ಗೊತ್ತಾಗುತ್ತದೆ. ಆ ಸತ್ಯವನ್ನು ಅವಳ ತಂದೆಗೆ ಹೇಳುತ್ತಾನೆ. ಆಗ ನಡೆದ ಘಟನೆಯನ್ನು ಚಂದ್ರಾ ಬಾಯಿಬುಡುತ್ತಾಳೆ. ಮರಳಿ ಮಧು ಅವಳನ್ನು ಬೆಂಬತ್ತಿ ಅದೇ ರೈಲು ಹತ್ತಿ ವತ್ಸಲಾಳನ್ನು ಕರೆದುಕೊಂಡು ಬರುವುದರೊಂದಿಗೆ ಚಂದ್ರಾ ವತ್ಸಲಾ ಇಬ್ಬರಲ್ಲೂ ನಡೆಯುವ ಸಂಭಾಷಣೆ. ತನ್ನ ತಪ್ಪಿನ ಅರಿವಾದ ಚಂದ್ರ “ರೂಪದಲ್ಲಿ ನಾವಿಬ್ಬರೂ ಒಂದೇ ಆದರೂ ಗುಣದಲ್ಲಿ ತನ್ನನ್ನು ಕಪ್ಪು, ವತ್ಸಲಾ ಗುಣದಲ್ಲಿ ಬಿಳುಪು” ಎನ್ನುವ ಮೂಲಕ ಮಧು ಮತ್ತು ವತ್ಸಲಾಳ ವಿವಾಹ ಏರ್ಪಡುತ್ತದೆ. ಅವರ ಈ ದ್ವಿಪಾತ್ರ ಅಭಿನಯ ಹೃದಯ ಕಲುಕುವ ಸನ್ನಿವೇಶ ಪುಟ್ಟಣ್ಣನವರು ಸೆರೆಹಿಡಿದ ರೀತಿ ಮರೆಯಲಾಗದು. ಈ ಎರಡೂ ಪುಟ್ಟಣ್ಣನವರ ಕಲಾಕೃತಿಗಳ ಮೂಲಕ ಕಲ್ಪನಾರ ಬದುಕನ್ನು ಒಂದು ಸಲ ಹಿಂತಿರುಗಿ ನೋಡುವ ಪ್ರಯತ್ನ ಈ ಬರಹ.


ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ದಿವಂಗತ ಕಲ್ಪನಾರನ್ನು ಅಗ್ರಸ್ಥಾನಕ್ಕೆ ಸೇರಿಸಬೇಕಾಗುತ್ತದೆ. ನಟನೆಯಲ್ಲಿ ಮಾತ್ರವಲ್ಲ ತಮಗೆ ದೊರೆತ ಪಾತ್ರಗಳಿಗೆ ಜೀವ ತುಂಬುವ ಜೊತೆಗೆ ಆ ಪಾತ್ರದ ವೇಷಭೂಷಣ ಸಂಭಾಷಣೆ ಶೈಲಿ ಮುಗ್ದತೆ ಮತ್ತು ಭಾವಾಭಿನಯ ಎಲ್ಲದರಲ್ಲೂ ಸೈ ಎನಿಸಿಕೊಂಡವರು ಕಲ್ಪನಾ.

ಕಲ್ಪನಾ ಅವರ ಹುಟ್ಟು, ಬಾಲ್ಯ

1943 ಜುಲೈ 18ರಂದು ಎನ್.ಎಸ್.ಕೃಷ್ಣಮೂರ್ತಿ ಮತ್ತು ಎಂ ಜಾನಕಮ್ಮನವರ ಪುತ್ರಿಯಾಗಿ ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದರು. ಮಾತೃ ಭಾಷೆ ತುಳು. ನಟಿ ಕಲ್ಪನಾ ಮೂಲತಃ ಮಂಗಳೂರಿನವರು. ಚಿತ್ರರಂಗವನ್ನು ಪ್ರವೇಶಿಸುವ ಮೊದಲು ಅವರ ಹೆಸರು ‘ಶರತ್ ಲತಾ”. ಬಾಲ್ಯದಲ್ಲಿಯೇ ಕಲಾವಿದೆಯಾಗುವ ಕನಸು ಕಂಡವರು ಕಲ್ಪನಾ. ಇವರ ಕುಟುಂಬದಲ್ಲಿ ಯಾರೂ ಕಲಾವಿದರಿರಲಿಲ್ಲ. ಆದರೆ ಅವರ ಚಿಕ್ಕಮ್ಮ ಮತ್ತು ಚಿಕ್ಕಪ್ಪ ರಂಗಭೂಮಿಯಲ್ಲಿ ಆಗಾಗ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು. ಕಲ್ಪನಾ ಕೂಡ ನಾಲ್ಕನೆಯ ತರಗತಿಯಲ್ಲಿದ್ದಾಗ ಶಾಲೆಯ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ್ದರು. ನಂತರ ಅವರು ಆಗ ನೋಡಿದ ಸಿನಿಮಾವೊಂದು ಅವರಲ್ಲಿ ತಾನೂ ಏಕೆ ಸಿನಿಮಾದಲ್ಲಿ ಅಭಿನಯಿಸಬಾರದು ಎಂಬ ಆಸೆಯನ್ನು ಹುಟ್ಟು ಹಾಕಿತ್ತು. ಅನಿರೀಕ್ಷಿತವಾಗಿ ನರಸಿಂಹರಾಜು ಒಂದು ಪಾತ್ರವೊಂದಕ್ಕೆ ಇವರ ಚಿಕ್ಕಪ್ಪನನ್ನು ಮದ್ರಾಸಿಗೆ ಬರುವಂತೆ ಹೇಳಿದಾಗ. ಇವರ ಚಿಕ್ಕಪ್ಪ ತನ್ನ ಜೊತೆಗೆ ಕಲ್ಪನಾಳನ್ನು ಕರೆದೊಯ್ಯುತ್ತಾರೆ. ಅಲ್ಲಿ ನರಸಿಂಹರಾಜು ಕಲ್ಪನಾರನ್ನು ನೋಡುತ್ತಾರೆ. ನರಸಿಂಹರಾಜು ಮೂಲಕ ಪಂತುಲು ಅವರ ಪರಿಚಯ. ಮುಂದೆ “ಸಾಕುಮಗಳು” ಚಲನಚಿತ್ರದ ಅಭಿನಯದೊಂದಿಗೆ ಸಿನಿಮಾ ಪ್ರವೇಶ.

ಸಿನಿ ಪಯಣದಿಂದ ನಾಟಕ ರಂಗಕ್ಕೆ ಪ್ರವೇಶ ಪಡೆದು ಗುಡಗೇರಿ ಎನ್. ಬಸವರಾಜರೊಂದಿಗೆ ಬದುಕನ್ನು ಕಟ್ಟಿಕೊಳ್ಳುವ ಮುಂಚೆ ನಿದ್ರಾ ಮಾತ್ರೆಗಳ ಸೇವಿಸಿ ದುರಂತ ಅಂತ್ಯ ಕಟ್ಟಿಕೊಂಡ ಅವರ ಬದುಕಿನ ಪ್ರತಿ ಪುಟಗಳೂ ದುಃಖದಿಂದ ಕೂಡಿದ್ದವು ಎನ್ನುವ ಹತ್ತು ಹಲವು ಸಿನಿ ಮನಸುಗಳ ಸಂದರ್ಶನಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ.

ಕಲ್ಪನಾ ಕುರಿತ ಸಾಹಿತ್ಯ
ಕಲ್ಪನಾ ಕುರಿತು 1114 ಪುಟಗಳ ರಜತರಂಗದ ಧ್ರುವತಾರೆ ಕೃತಿ ಮೈಸೂರಿನ ಸಾಹಿತಿ ವಿ.ಶ್ರೀಧರ ಅವರ ಮೂಲಕ ಬೃಹತ್ ಸಂಸ್ಮರಣ ಗ್ರಂಥ ಓದುಗರಿಗೆ ಲಭ್ಯವಾಗಿದೆ. ಅಷ್ಟೇ ಅಲ್ಲ ರವಿ ಬೆಳಗೆರೆಯವರು ಕೂಡ ಕಲ್ಪನಾ ವಿಲಾಸ ಕೃತಿಯನ್ನು ಪ್ರಕಟಿಸಿರುವರು. ಇವುಗಳ ಜೊತೆಗೆ ಆರ್.ಎನ್.ಜಯಗೋಪಾಲ್ ಬರೆದ ಬರಹ.ಎಸ್.ಜಯಸಿಂಹ ಅವರ ಲೇಖನ.ಎನ್.ಎಸ್.ಶ್ರೀಧರಮೂರ್ತಿ ಅವರ ಬರಹಗಳನ್ನು ನಟ ಶಿವರಾಂ ಹಾಗೂ ಹೆಲೆನ್, ಮಾಲತಿ ಸುಧೀರ, ನಿರ್ದೇಶಕ ಭಾರ್ಗವ, ನಟ ರಾಜೇಶ ಅವರ ಸಂದರ್ಶನಗಳನ್ನು ಗಮನಿಸಿದಾಗ ಕಲ್ಪನಾರ ಬದುಕಿನ ವಿವಿಧ ಚಿತ್ರಣಗಳನ್ನು ಕಾಣಬಹುದು.

ಪಾತ್ರಗಳಲ್ಲಿ ಪರಕಾಯ ಪ್ರವೇಶ
ರೇವತಿ ಕಲ್ಯಾಣಕುಮಾರ್ ಹೇಳುವಂತೆ “ಕಲ್ಪನಾ ತುಂಬಾ ಪ್ರಾಮಾಣಿಕರಾಗಿದ್ದರು. ಇದರಿಂದಲೇ ಹಲವರು ಅವರನ್ನು ತಪ್ಪು ತಿಳಿದರು. ಅವರ ಬಗ್ಗೆ ಹಬ್ಬಿದ ಕತೆಗಳೆಲ್ಲ ಸುಳ್ಳು. ತುಂಬಾ ಒಳ್ಳೆಯ ಹೆಂಗಸು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರೆ. ಆರ್.ಎನ್.ಜಯಗೋಪಾಲ್ “ಆಕೆ ತನಗೆ ದೊರಕಿದ ಪಾತ್ರವನ್ನು ನಿರ್ದೇಶಕರೊಡನೆ ಚರ್ಚಿಸಿ,ಪಾತ್ರದ ಪ್ರತಿಯೊಂದು ವೇಷಭೂಷಣ, ಹಾವಭಾವಗಳು ಹೇಗಿರಬೇಕೆಂಬುದನ್ನು ಮುಂಚಿತವಾಗಿಯೇ ನಿರ್ಧರಿಸಿ ನಟಿಸುತ್ತಿದ್ದ ಮಹಾನ್ ನಟಿ. ಕಲ್ಪನಾ ಪಾತ್ರದಲ್ಲಿ ಲೀನವಾಗಿಬಿಟ್ಟರೆ ಅದರಿಂದ ಹೊರಗೆ ಬರಲು ಕಷ್ಟಪಡುತ್ತಿದ್ದರು. ಬೇರೆ ನಟಿಯರು ನಿರ್ದೇಶಕ ಕಟ್ ಹೇಳಿದ ತಕ್ಷಣ ಸಹಜಭಾವಕ್ಕೆ ಬಂದುಬಿಡುತ್ತಾರೆ. ಆದರೆ ಒಂದೇ ಷಾಟ್‌ನಲ್ಲಿ ನಟಿಸಿ ಕಲ್ಪನಾ ಕಟ್ ಹೇಳಿದ ಐದು ನಿಮಿಷದವರೆಗೂ ಅಳುತ್ತಲೇ ಇದ್ದರು. ಅವರಿಗೆ ಅಳು ನಿಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ಇಂಥಹ ಪರಕಾಯ ಪ್ರವೇಶವನ್ನು ಕಲ್ಪನಾರಲ್ಲಿ ಕಾಣಲು ಸಾಧ್ಯವಾಯಿತು.

ಕಲ್ಪನಾ ಶೂಟಿಂಗ್‌ಗೆ ತಡವಾಗಿ ಬರುತ್ತಾರೆ ಎಂಬ ಆರೋಪ ಅವರ ಮೇಲಿತ್ತು.ನಾನು “ಕೆಸರಿನ ಕಮಲ” ನಿರ್ದೇಶಿಸುವಾಗ ಕಲ್ಪನಾ ನನಗೆ ಹೇಳಿದರು. ‘ನನಗೆ ಬೆಳಗ್ಗೆ ಹೊತ್ತು ಪಾದಗಳಲ್ಲಿ ಸ್ವೆಲ್ಲಿಂಗ್ ಬರುತ್ತದೆ.ಅದನ್ನು ೪೫ ನಿಮಿಷ ಕಾಲ ಬಿಸಿ ನೀರಿನಲ್ಲಿ ಇಡಬೇಕಾಗುತ್ತದೆ. ನಾನು 9.30 ಕ್ಕೆ ಬರ‍್ತೀನಿ’ ಅಂತ ಹೇಳುತ್ತಿದ್ದರು ನಾನು ಪರ್ಮಿಷನ್ ಕೊಡುತ್ತಿದ್ದೆ. 9 ಗಂಟೆಗೆ ಬೇರೆ ಷಾಟ್ ಇಡುತ್ತಿದ್ದೆ. ಅದನ್ನು ಮುಗಿಸುವಷ್ಟರಲ್ಲಿ ಅವರು ಬಂದು ಬಿಡುತ್ತಿದ್ದರು. ಅದೇ ರೀತಿ ಸಂಜೆ 6 ಗಂಟೆಗೆ ಆಕೆಗೆ ಮನೆಗೆ ಹೋಗುವಾಸೆ. ನಾನು ಸಂಜೆ 5.55 ಕ್ಕೆ ನೀವು ಮನೆಗೆ ಹೋಗಬಹುದು’ ಅಂತ ಹೇಳಿದರೆ ಖುಷಿಯಾಗಿ ಕುಣಿಯುತ್ತ ಹೋಗುತ್ತಿದ್ದರು. ಹೀಗೆ ಅವರ ಜೊತೆಗೆ ತಮ್ಮ ನೆನಪನ್ನು ಆರ್.ಎನ್.ಜಯಗೋಪಾಲ್ ಹಂಚಿಕೊ0ಡಿರುವರು.
ಹೀಗೆ ಕಲ್ಪನಾ ಕುರಿತು ಹತ್ತು ಹಲವು ಸಂದರ್ಶನಗಳನ್ನು, ಕಲಾ ಮಾಧ್ಯಮ ಚಾನೆಲ್‌ದಲ್ಲಿನ ಸಂದರ್ಶನಗಳನ್ನು ಒಂದೊ0ದಾಗಿ ಗಮನಿಸಿದಾಗ ಅವರ ಅಭಿನಯಕ್ಕೆ ಕೈಗನ್ನಡಿ ಎಂಬ0ತೆ ಹಲವು ಚಲನಚಿತ್ರಗಳನ್ನು ವೀಕ್ಷಿಸಿದೆನು. ಕಲ್ಪನಾ ಕೇವಲ ಅಭಿನೇತ್ರಿ ಮಾತ್ರವಲ್ಲ ಅವರಲ್ಲಿ ಒಬ್ಬ ಒಳ್ಳೆಯ ಓದುಗಾರ್ತಿ ಬರಹಗಾರ್ತಿ ಕೂಡ ಇದ್ದರು ಎಂಬ ಸಂಗತಿಯನ್ನು ನಟ ಶಿವರಾಂ ಸಂದರ್ಶನವೊ0ದರಲ್ಲಿ ಹೇಳಿದ್ದಾರೆ. ಗೆಜ್ಜೆಪೂಜೆ ಕಾದಂಬರಿಯನ್ನು ಓದಿದ ಕಲ್ಪನಾ ಅದನ್ನು ಸಿನಿಮಾ ಮಾಡಲು ಶಿವರಾಂ ಜೊತೆಗೆ ಚರ್ಚಿಸಿದ್ದನ್ನು ಶಿವರಾಂ ನೆನಪಿಸುತ್ತಾರೆ. ಅಂದರೆ ಅವರಲ್ಲಿನ ಕಲಾವಿದೆ ತನ್ನ ಮನಸ್ಸಿನ ಪಾತ್ರಗಳು ಚಲನಚಿತ್ರವಾಗಿ ಮೂಡಿ ಬರಲಿ ಎಂದು ಬಯಸುವ ಮನೋಭಾವನೆ ಕೂಡ ಮೆಚ್ಚುವಂತದ್ದೇ. ಮಲ್ಲಿಗೆ ಮಾಸಪತ್ರಿಕೆಗೆ ಬೈಲೋ ರಷ್ಯದ ಪ್ರವಾಸದ ಅನುಭವವನ್ನು ವಿಶೇಷ ಲೇಖನವನ್ನು ಬರೆದಿದ್ದರು.
ಕಲ್ಪನಾ ಅಭಿನಯದ “ಉಯ್ಯಾಲೆ” ಚಲನಚಿತ್ರವನ್ನು ಇಲ್ಲಿ ಹೆಸರಿಸಲೇಬೇಕು. ಚದುರಂಗರ ಕಾದಂಬರಿ ಈ ಚಲನಚಿತ್ರ. ಒಂದು ಸುಂದರ ಕಥಾ ಹಂದರವನ್ನು ಹೊಂದಿದೆ. ಈ ಕತೆಯಲ್ಲಿ ಬರುವ ಮೂರು ಪ್ರಮುಖ ಪಾತ್ರಗಳು. ಶೇಷಗಿರಿ (ಕೆ.ಎಸ್.ಅಶ್ವತ್ಥ) ಅವನ ಹೆಂಡತಿ ರಾಧ(ಕಲ್ಪನಾ) ಮತ್ತು ಶೇಷಗಿರಿಯ ಗೆಳೆಯ ಕೃಷ್ಣೇಗೌಡ (ಡಾ.ರಾಜಕುಮಾರ).
ಶೇಷಗಿರಿ ಕಾಲೇಜು ಪ್ರೊಫೆಸರ್. ಶೇಷಗಿರಿಯ ಗೆಳೆಯ ಕೃಷ್ಣೇಗೌಡ ತನ್ನ ಕೆಲಸದ ನಿಮಿತ್ತ ಮೈಸೂರಿಗೆ ಬರುತ್ತಾನೆ. ಗೆಳೆಯನ ಮನೆಯಲ್ಲಿ ಉಳಿದುಕೊಳ್ಳುತ್ತಾನೆ. ಸದಾಕಾಲ ತನ್ನ ಕೆಲಸದಲ್ಲಿ ಮುಳುಗಿರುವ ಶೇಷಗಿರಿ ಮನೆಯಲ್ಲಿ ಮಗಳಿಗೆ ಹುಷಾರಿಲ್ಲದ ಸಮಯದಲ್ಲಿ ಗಂಡ ತೋರುವ ನಿರ್ಲಕ್ಷ. ಕೃಷ್ಣ ತೋರುವ ಕಾಳಜಿ ತನ್ನ ಬದುಕೆಷ್ಟು ಅಪೂರ್ಣ ಎಂಬ ಭಾವನೆ ಮೂಡಲಾರಂಭಿಸುತ್ತದೆ. ಆದರೆ ನಮ್ಮ ಸಮಾಜದಲ್ಲಿ ಇಂಥ ಭಾವಗಳ ಬೆಳೆವಣಿಗೆಗೆ ಅವಕಾಶವಿಲ್ಲ.ಇಂಥ ಕೋಮಲ ಸಂಬ0ಧದ ವ್ಯಾಪ್ತಿ ತೀರ ಕಡಿಮೆ.
ವಿವಾಹಿತೆಯೊಬ್ಬಳ ಮನಸ್ಸು ವಿವಾಹಬಾಹೀರ ಸಂಬ0ಧಗಳತ್ತ ತುಡಿವ ವಸ್ತುವಿನ ಈ ಪಾತ್ರ ಸಂಪ್ರದಾಯಿಕ ಗ್ರಹಿಕೆಗೆ ಬಹು ಬೇಗ ತಪ್ಪು ಅನ್ನಿಸಬಲ್ಲದಾಗಿತ್ತು. ಕಲ್ಪನಾ ಇದನ್ನು ಗಮನದಲ್ಲಿರಿಸಿ ಸಭ್ಯತೆ ಗಡಿ ದಾಟದ ಸಂಯಮದಲ್ಲಿ ದೈಹಿಕ ತೀವ್ರತೆ ಅಭಿವ್ಯಕ್ತವಾಗುವ ರೀತಿಯಲ್ಲಿ ಮನೋಜ್ಞ ಅಭಿನಯವನ್ನು ನೀಡಿದ್ದರು.ಆದರೆ ಆ ಪಾತ್ರವನ್ನು ಹೆಚ್ಚು ಯಾರೂ ಪ್ರಚುರ ಪಡಿಸಲಿಲ್ಲ.
“ಸೋತು ಗೆದ್ದವಳು” ಚಲನಚಿತ್ರದಲ್ಲಿನ ಶಾರದಾಳ ಪಾತ್ರ ನಿಜಕ್ಕೂ ಅಮರ. ಶ್ರೀಮಂತ ತಂದೆಯ ಏಕೈಕ ಪುತ್ರಿಯಾಗಿ ಚೆಲ್ಲು ಚೆಲ್ಲಾದ ಆಟವನ್ನು ಆಡುತ್ತ ತನ್ನ ಕಾಲೇಜಿಗೆ ಬಂದ ಕನ್ನಡ ಅಧ್ಯಾಪಕರನ್ನು ಪ್ರೇಮಿಸಿ ತಂದೆ ವಿದೇಶದಲ್ಲಿರುವ ಅಳಿಯನಿಗೆ ಇವಳನ್ನು ಕೊಟ್ಟು ಮದುವೆ ಮಾಡುವ ಸಂಗತಿ ತಿಳಿದಾಗ ಮನೆ ಬಿಟ್ಟು ಬರುವ ಶಾರದಾ ಹಿರಿಯರ ಸಮ್ಮುಖದಲ್ಲಿ ಪ್ರೇಮಿಸಿದ ತನ್ನ ಉಪನ್ಯಾಸಕನನ್ನು ವಿವಾಹವಾಗಿ ಜೀವನ ನಡೆಸುವ ಸಂದರ್ಭ ಅನಿರೀಕ್ಷಿತ ತಿರುವು. ಗಂಡ ಆಘಾತಕ್ಕೆ ಒಳಗಾಗುವ ಪೆಟ್ಟು ತಿಂದಾಗ ಪತಿವ್ರತೆಯಾಗಿ ದೇವರ ಸ್ಮರಣೆಯೊಂದಿಗೆ ಬದುಕುವ ರೀತಿ. ಅಕ್ಕಮಹಾದೇವಿಯವರ ವಚನಗಳನ್ನು ಈ ಸಂದರ್ಭದಲ್ಲಿ ನಿದೇರ್ಶಕರು ಸಮಯೋಜಿತವಾಗಿ ಬಳಸಿರುವುರಲ್ಲದೇ ಕುವೆಂಪು ರಚನೆಯ “ಕೆಂಪು ಗುಲಾಬಿಯ ಕೆಂದುಟಿ ಚೆಲುವೆ” ಗೀತೆಯನ್ನು ಕೂಡ ಈ ಚಲನಚಿತ್ರದಲ್ಲಿ ಅಳವಡಿಸಿರುವರು. ಕೊನೆಗೆ ಚಲನಚಿತ್ರ ನಾಟಕೀಯ ತಿರುವನ್ನು ಪಡೆಯುವ ಜೊತೆಗೆ ತನ್ನ ಗಂಡನೇ ಮರುಮದುವೆಯಾಗಲು ಒತ್ತಾಯ ಮಾಡಿದಾಗ “ಏಕಪತಿ ವ್ರತಸ್ಯೆ”ಎಂಬುದನ್ನು ಅಂತ್ಯದಲ್ಲಿ ದುರಂತ ಅಂತ್ಯವನ್ನು ಕಾಣುವ ಚಿತ್ರಣ ಮರೆಯಲಾಗದು. ಪ್ರತಿ ಸನ್ನಿವೇಶದಲ್ಲೂ ಪತಿವ್ರತಾ ನಿಯಮಗಳನ್ನು ತಮ್ಮ ಭಾರತೀಯ ಸಂಸ್ಕೃತಿಯ ವೇಷಭೂಷಣದಲ್ಲಿ ಅಷ್ಟೇ ಅಲ್ಲ ತಮ್ಮ ಸಂಭಾಷಣೆಯ ಮೂಲಕ ನಿರೂಪಿಸಿದ ಕಲ್ಪನಾರಿಗೆ ಕಲ್ಪನಾರೇ ಸಾಟಿ.
ಹೀಗೆ ಕಲ್ಪನಾ ಅಭಿನಯಿಸಿದ ಒಂದೊ0ದು ಚಲನಚಿತ್ರದಲ್ಲೂ ಅವರ ಅಭಿನಯ ಹೃದಯಂಗಮವಾಗಿತ್ತು. ಇನ್ನು ಎರಡು ಕನಸು ಚಲನಚಿತ್ರದ ಪಾತ್ರವಂತೂ ಅದ್ಬುತ. ತನ್ನನ್ನು ಒಪ್ಪಿಕೊಳ್ಳದ ಗಂಡನ ಕುರಿತಾದ ನವವಿವಾಹಿತೆಯ ತಾಕಲಾಟವನ್ನು ಅವರು ಅತ್ಯುತ್ತಮವಾಗಿ ಬಿಂಬಿಸಿದ್ದರು.ನಾಯಕನಿಗೆ ಕನಸ್ಸಿದ್ದಂತೆ ನಾಯಕಿಗೂ ಕನಸಿರಬೇಕು ಎಂಬುದು ಕಲ್ಪನಾ ಅವರ ಪ್ರತಿಪಾದನೆ.ಅದಕ್ಕೆಂದೇ ಈ ಚಿತ್ರದಲ್ಲಿ “ತನಂ ತನಂ ನನ್ನೀ ಮನಸು ಮಿಡಿಯುತಿದೆ” ಗೀತೆಯನ್ನು ಅಳವಡಿಸಲಾಗಿತ್ತು. ಈ ಗೀತೆಯಲ್ಲಿ ದಾಂಪತ್ಯದ ಕನಸ್ಸನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದರು. ನಿಜಕ್ಕೂ ಇದೊಂದು ಸವಾಲಿನ ಪಾತ್ರ.ಗಂಡನ ಪ್ರೀತಿಗಾಗಿ ಪರಿತಪಿಸುತ್ತ ನಿರಾಸೆ ಅನುಭವಿಸಿದ ಪತ್ನಿಯ ಪಾತ್ರದಲ್ಲಿ ಕಲ್ಪನಾ ಅಭಿನಯ ಮರೆಯಲಾಗದು. ‘ಯಾಕೆ ನಿಮ್ಮ ಮೌನದಿಂದ ಕೊಲ್ಲುತ್ತಿದ್ದೀರಿ.? ನಿಮ್ಮ ಮನಸ್ಸಿಗೆ ಬಂದ್ಹಾಗೆ ನನ್ನನ್ನು ಬೈದು ಬಿಡಿ. ನಿಮ್ಮ ಧ್ವನಿ ಹೇಗಿದೆ ಅಂತಾದರೂ ತಿಳಿದುಕೊಳ್ಳುತ್ತೀನಿ. ಹೆಂಡತಿ ಎಂಬ ಸಲಿಗೆಯಿಂದಲಾದರೂ ಒಂದೇ ಒಂದು ಸಲ ನನ್ನ ಮೇಲೆ ಕೋಪಿಸಿಕೊಳ್ಳಿರಿ. ಈ ಕೈಗಳಿಂದ ಹೊಡಿರಿ” ಎಂದು ಅಳುತ್ತ ಅಂಗಲಾಚುವ ದೃಶ್ಯವಿದೆಯಲ್ಲ ಎಂತವರ ಮನಸ್ಸನ್ನು ಕಲುಕುತ್ತದೆ. ಈ ದೃಶ್ಯವನ್ನು ಡಾ.ರಾಜಕುಮಾರ ಕಲ್ಪನಾ ಅಭಿನಯ ಕಂಡು ಸ್ವತಃ ಕಣ್ಣೀರು ತಂದಾಗ ಕಲ್ಪನಾ ಶೂಟಿಂಗ ಮುಗಿದರೂ ನಿಜವಾಗಿಯೂ ಅಳತೊಡಗಿದರಂತೆ. ಈ ಸಂದರ್ಭವನ್ನು ನಿರ್ದೇಶಕ ದೊರೆ ಭಗವಾನ್ ನೆನಪಿಸಿಕೊಂಡಿರುವರು.
ಬಯಲುದಾರಿ ಚಲನಚಿತ್ರವನ್ನು ಗಮನಿಸಿದಾಗ ಚಂದ್ರಾಳ ಪಾತ್ರ ಸಿನಿಮಾ ಮುಗಿದ ಮೇಲೂ ನೆನಪಿನಲ್ಲಿಯುಳುತ್ತದೆ. ದೇವರನ್ನು ನಂಬಿ ಕೆಟ್ಟವರಿಲ್ಲ ಎಂಬ ಸಂದೇಶ ಹೊಂದಿದ್ದ ಬಯಲುದಾರಿ ಭಾರತೀಸುತರ ಕಾದಂಬರಿ ಆಧಾರಿತ ಚಿತ್ರ. ಎರಡು ಕನಸು ಕಲ್ಪನಾಳನ್ನು ಇಲ್ಲಿ ಮತ್ತೊಂದು ಬಗೆಯಲ್ಲಿ ತೋರಿಸುವ ಪ್ರಯತ್ನ ದೊರೆ ಭಗವಾನ್‌ರದ್ದು. ಅದೂ ರಾಜಕುಮಾರ ಹೊರತು ಪಡಿಸಿ ಅನಂತನಾಗ್ ನಾಯಕತ್ವದಲ್ಲಿ ಈ ಚಲನಚಿತ್ರ ಮೂಡಿ ಬಂದಿದ್ದು. ಕತೆಯನ್ನು ಮಾಡಲು ಪಾರ್ವತಮ್ಮ ರಾಜಕುಮಾರ್ ನಿರ್ದೇಶಕರ ಕೈಯಲ್ಲಿ ಕಾದಂಬರಿ ನೀಡಿ ಈ ಕತೆಯನ್ನು ಮಾಡಿ ನಮ್ಮ ಬೆಂಬಲ ನಿಮಗಿದೆ ಎಂದಾಗ. ಹೆಲಿಕ್ಯಾಪ್ಟರ್ ಬಳಸಿ ಹಾಡೊಂದನ್ನು ಚಿತ್ರೀಕರಿಸುವುದು ಕೂಡ ಈ ಚಲನಚಿತ್ರದಲ್ಲಿ ಮೂಡಿ ಬಂದಿತು. ಮೂಡಿಗೆರೆ ಕುದುರೆಮುಖ ಲೋಕೇಶನ್ ತುಂಬಾ ಸೊಗಸಾಗಿ ಮೂಡಿ ಬಂದಿದ್ದು. ಗಂಡ ಅಪಘಾತದಲ್ಲಿ ತೀರಿಹೋದ ಎಂಬ ಸಂಗತಿ ತಿಳಿದ ಚಂದ್ರಾಳ ಮನೋಜ್ಞ ಅಭಿನಯ. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಸಲುಹುವ ರೀತಿ. ಕೊನೆಗೆ ಗಂಡನನ್ನು ಸಂಧಿಸುವುದು ಕತೆಯ ಕೊನೆಯಲ್ಲಿ ಎಲ್ಲವೂ ಸುಖಾಂತ. ಹೀಗೆ ಒಂದೊ0ದು ಪಾತ್ರವೂ ಕಲ್ಪನಾಳ ಬದುಕಿನಲ್ಲಿ ಹೊಸತನ ಮತ್ತು ಅವರ ಅಮೋಘ ಅಭಿನಯದಿಂದ ಮೂಡಿ ಬಂದವು. ಹೀಗೆ ಹೆಸರಿಸುತ್ತ ಹೊರಟರೆ ಎಲ್ಲ ಚಲನಚಿತ್ರಗಳನ್ನು ಒಂದೂ ಬಿಡದಂತೆ ಹೇಳಬಹುದು.


ಭಲೇ ಅದೃಷ್ಟವೋ ಅದೃಷ್ಟ ಚಲನಚಿತ್ರದಲ್ಲಿ “ಕಲ್ಪನಾ ರೂಪ ರಾಸಿ ಬಂದಿಹೆ ನಿನ್ನ ಅರಸಿ. ನಿಲ್ಲೇ ನಿಲ್ಲು ನೀ ಓಡದೇ” ಎಂಬ ಗೀತೆಯನ್ನು ಅವರ ಹೆಸರಿನಲ್ಲಿ ಗೀತೆ ರಚನೆ ಮಾಡಿದ್ದನ್ನು ಮರೆಯಲಾಗದು. ಜೊತೆಗೆ ಕಲ್ಪನಾ ಹೆಸರಿನೊಂದಿಗೆ ಈ ಪಾತ್ರ ಹೊಂದಿದ್ದನ್ನು ಮರೆಯಲಾಗದು. ಈ ಚಲನಚಿತ್ರದಲ್ಲಿ ಕಲ್ಪನಾ ಸಹಜತೆಯಿಂದ ಪಾತ್ರ ಲೀಲಾಜಾಲವಾಗಿ ಅಭಿನಯಿಸಿದ್ದರು. ಬೆಳ್ಳಿಮೋಡದಲ್ಲಿ ಆರ್.ಎನ್.ಜಯಗೋಪಾಲ್ ಬಳಸಿದ “ಮಿನುಗುತಾರೆ” ಎಂಬ ಪದ ಅವರ ಹೆಸರಿನೊಂದಿಗೆ ಉಳಿಯಿತು. ಇನ್ನು ಮುಕ್ತಿ ಎನ್ನುವ ಚಲನಚಿತ್ರ ವೇಶ್ಯಾ ಸಮಸ್ಯೆ ಹೊಂದಿದ “ಶಾಪ” ಕಾದಂಬರಿ ಆಧಾರಿತವಾಗಿತ್ತು. ಗೆಜ್ಜೆಪೂಜೆಯಲ್ಲಿ ಈ ಸಮಸ್ಯೆಯ ಪಾತ್ರ ಪೋಷಣೆ ಕಲ್ಪನಾರಿಂದ ಬಂದಿದ್ದರೂ ಕೂಡ ಪ್ರೇಕ್ಷಕರ ಗಮನಸೆಳೆಯುವಲ್ಲಿ ಪರಿಣಾಮವನ್ನುಂಟು ಮಾಡಲಿಲ್ಲ.
ಗಂಧದ ಗುಡಿಯಲ್ಲಿ ಲಂಬಾಣಿ ವೇಷದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದನ್ನು ಮರೆಯಲಾಗದು. ಈ ಸಂದರ್ಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ ನಿರ್ದೇಶನದಲ್ಲಿ “ಮಲೆಯ ಮಕ್ಕಳು” ಚಲನಚಿತ್ರದಲ್ಲಿ ಅಭಿನಯಿಸಿದರು. ಹೀಗೆ ಕೊನೆಯ ದಿನಗಳು ಸಿನಿಮಾದಲ್ಲಿ ಅವಕಾಶ ಕಡಿಮೆಯಾಗುತ್ತ ಬಂದವು. ಅದು ರಂಗಭೂಮಿಯ ನಂಟಿನತ್ತ ಕೊಂಡ್ಯೋಯ್ದಿತ್ತು. ಅಲ್ಲಿ ದುರಂತ ಬದುಕು ಕಲ್ಪನಾಳದಾಗಿತ್ತು. ಅವರ ಬದುಕು ದುರಂತಮಯವಾದರೂ ಅಭಿನಯದ ಮೂಲಕ ಅವರು ಮಿನುಗುತಾರೆ. ಅವರು ಕಣ್ಮರೆಯಾಗಿದ್ದರೂ ಬೆಳ್ಳಿ ತೆರೆಯ ಮೇಲಿನ ಅವರ ಪಾತ್ರಗಳು ಇಂದಿಗೂ ಜೀವಂತವಾಗಿವೆ.

Related Articles

ಪ್ರತಿಕ್ರಿಯೆ ನೀಡಿ

Latest Articles