ದೊಮ್ಮತ್ತಮರಿ ಆಂಜನೇಯ ದೇವಾಲಯ

*ಶ್ರೀನಿವಾಸ ಮೂರ್ತಿ ಎನ್ ಎಸ್

ವಿಜಯನಗರ ಕಾಲದ ನಮ್ಮ ದೇವಾಲಯಗಳ ನಿರ್ಮಾಣದಲ್ಲಿ ಸ್ಥಳೀಯ ಶೈಲಿಗಳು ರೂಢಿಗೆ ಬಂದವು. ಹಲವು ರಾಜ ಮನೆತನಗಳು ರಾಜ್ಯದ ಉದ್ದಕ್ಕೂ ಹಂಚಿಹೋದ ಕಾರಣ ಅಲ್ಲಿನ ಪ್ರ್ಯಾಂತ್ಯಕ್ಕೆ ತಕ್ಕಂತೆ ದೇವಾಲಯಗಳ ನಿರ್ಮಾಣ ಸಾಗಿ ಬಂತು. ಕೆಳದಿ ಅರಸರು ಒಂದು ಭಾಗದಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡಿದರೆ ತುಮಕೂರು ಸುತ್ತ ಮುತ್ತ ಬಹುತೇಕ ಪಾಳೇಗಾರರು ಆಡಳಿತ ನಡೆಸಿದರು. ಆ ಸಮಯದಲ್ಲಿ ನಿರ್ಮಾಣಗೊಂಡ ದೇವಾಲಯವೊಂದು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ದೊಮ್ಮತ್ತಮರಿಯಲ್ಲಿದೆ.

ಇತಿಹಾಸ ಪುಟದಲ್ಲಿ ಈ ಗ್ರಾಮದ ಹೆಸರು ವಿಜಯನಗರ ಹಾಗು ಪೂರ್ವದಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. 1589 ರಲ್ಲಿ ಪೆನುಗೊಂಡೆಯನ್ನು ಆಳುತ್ತಿದ್ದ ವೆಂಕಟಪತಿ ರಾಜನ ಕಾಲದಲ್ಲಿ ಇಲ್ಲಿ ಪಾವಗಡ ಸಂಸ್ಥಾನವನ್ನು ಆಳುತ್ತಿದ್ದ ಬಾಲ ನಾಯಕನಿಗೆ ದತ್ತಿ ನೀಡದ ಗ್ರಾಮಗಳಲ್ಲಿ ಈ ಗ್ರಾಮವು ಒಂದು.
ನಂತರ ಈ ಪ್ರದೇಶ ಮರಾಠ, ನಂತರ ಪಾವಗಡ ನಾಯಕರ ಹಾಗು ಗುತ್ತಿಯ ಮುರಾರಿ ರಾಯರ ಅಧೀನಕ್ಕೆ ಒಳಪಟ್ಟಿತ್ತು. ಅವನ ಕಾಲದಲ್ಲಿ ಇಲ್ಲಿ ಕೆರೆ ನಿರ್ಮಾಣವಾಗಿದೆ. ಇಲ್ಲಿನ ಸ್ಥಳೀಯ ಕಥೆಯ ಪ್ರಕಾರ ಈ ಗ್ರಾಮಕ್ಕೆ ದೊಂಬರ ಚೆನ್ನಮ್ಮನಿಂದ ದೊಂಬರ ಮರಿ ಎಂಬ ಹೆಸರು ಬಂದಿದ್ದು ನಂತರ ದೊಮ್ಮತ್ತಮರಿ ಆಗಿದೆ ಎನ್ನಲಾಗಿದೆ. ದೊಮ್ಮತ್ತಮರಿ ಎಂದರೆ ಒಣ ಭೂಮಿ ಎಂದು ಡ್ರಾವಿಡ ಪದಕೋಶದಲ್ಲಿ ಉಲ್ಲೇಖಿಸಿದೆ.

ಇಲ್ಲಿನ ಪ್ರಮುಖ ದೇವಾಲಯ ಆಂಜನೇಯ ದೇವಾಲಯ. ಸುಮಾರು 16 – 17 ನೇ ಶತಮಾನದಲ್ಲಿ ಪಾಳೇಗಾರರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ನಂತರ ಕಾಲದಲ್ಲಿ ಸಂಪೂರ್ಣವಾಗಿ ನವೀಕರಣಗೊಂಡಿದೆ. ಸುತ್ತಮುತ್ತ ಕಾಣುವ ವ್ಯಾಸರಾಜರು ನಿರ್ಮಾಣದ ಆಂಜನೇಯ ಮೂರ್ತಿಯ ಕೆಲ ಅಂಶಗಳ ಅನುಕರಣೆ ಎದ್ದು ಕಾಣುತ್ತದೆ. ಆದರೆ ಇದು ಅವರು ಸ್ಥಾಪಿಸಿದ ಮೂರ್ತಿಯಾಗಿರದೆ ವೀರಾಂಜನೆಯ ಸ್ವರೂಪವಾಗಿದೆ. ದೇವಾಲಯ ಮುಂಚೆ ಚಿಕ್ಕ ಮಂಟಪ ಮಾತ್ರ ಹೊಂದಿದ್ದು ನಂತರ
ಕಾಲದಲ್ಲಿ ನವೀಕರಣಗೊಂಡಿದೆ. ಪ್ರಸ್ತುತ ಈಗ ಇರುವ ದೇವಾಲಯ ಗರ್ಭಗುಡಿ ಹಾಗು
ಮಂಟಪವನ್ನು ಹೊಂದಿದ್ದು ಗರ್ಭಗುಡಿಯಲ್ಲಿ ಆಂಜನೇಯನ ಮೂರ್ತಿ ಇದೆ. ಇನ್ನು ಶಿಲ್ಪದ ಒಂದು ಕೈ ಮೇಲೆತ್ತಿದ್ದಂತೆ ಅಭಯಹಸ್ತ ಸ್ವರೂಪದಲ್ಲಿದೆ. ಬಾಲ ಅರ್ಧ ಚಂದ್ರಾಕೃತಿಯಲ್ಲಿ ತಲೆಯನ್ನು ಬಳಸಿದ್ದು ಮತ್ತೊಂದು ಕೈನಲ್ಲಿ ಬಳ್ಳಿಯ ಗೊಂಚಲನ್ನು ನೋಡಬಹುದು. ಬಹುತೇಕ ಆಂಜನೇಯ ಮೂರ್ತಿಗಳಂತೆ ಬಲಕ್ಕೆ ತಿರುಗಿ ನಿಂತಿದಂತೆ ಸ್ಥಾನಿಕ ಭಂಗಿಯಲ್ಲಿದೆ. ತಲೆಯಲ್ಲಿ ಕಟ್ಟಿರುವ
ಜುಟ್ಟು ಇದ್ದು ಇದು ವಿರಾಂಜನೇಯ ಸ್ವರೂಪ. ಹಾಗಾಗಿ ಇದನ್ನು ಪ್ರಸನ್ನ ವೀರಾಂಜನೆಯ ಎಂದು
ಕರೆಯುವ ಪದ್ದತಿ ಇದೆ.

ದೇವಾಲಯದ ಆವರಣದಲ್ಲಿ ಸುಂದರ ವೀರಗಲ್ಲು ಇದ್ದು ಪಾವಗಡ ರಸ್ತೆಯಲ್ಲಿ ಸುಂದರವಾದ
ವೀರ ಮಾಸ್ತಿಕಲ್ಲು ಸಹ ನೋಡಬಹುದು. ಎಲ್ಲಾ ದೇವಾಲಯಗಳಲ್ಲಿ ಅಚರಿಸುವಂತೆ ಇಲ್ಲಿ ಹನುಮ
ಜಯಂತಿ ಅಚರಿಸದೇ ವೈಶಾಖ ಬಹುಳ ದಶಮಿಯಂದು ಹನುಮ ಜಯಂತಿ ಆಚರಿಸುವುದು ಇಲ್ಲಿನ
ವಿಶೇಷ.

ತಲುಪುವ ಬಗ್ಗೆ: ದೊಮ್ಮತ್ತಮರಿ ಪಾವಗಡ – ಹಿಂದೂಪುರ ರಸ್ತೆಯಲ್ಲಿ ಪಾವಗಡದಿಂದ ಸುಮಾರು
20 ಕಿ.ಮೀ ದೂರದಲ್ಲಿದೆ. ಮಡಕಶಿರ – ಪೆನುಗೊಂಡ ರಸ್ತೆಯಲ್ಲಿ ಮಡಕಶಿರದಿಂದ ಸುಮಾರು
8 ಕಿ.ಮೀ ದೂರದಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles