*ಟಿ.ಪಿ.ಉಮೇಶ್ (ಸಹಶಿಕ್ಷಕರು), ಅಮೃತಾಪುರ, ಹೊಳಲ್ಕೆರೆ (ತಾ)
ಚಿತ್ರದುರ್ಗ.
ಶ್ರೀ ಶಂಕರ ಭಗವತ್ಪಾದರು ಮಹಾ ಅರಿವಿನ ಗಣಿಯೂ, ಶ್ರೇಷ್ಠತತ್ತ್ವಜ್ಞಾನಿಯೂ,ಅದ್ವೈತ ಸಿದ್ಧಾಂತ ನಿಷ್ಠರೂ ಆಗಿದ್ದರಲ್ಲದೇ ಸನಾತನ ಭಾರತೀಯ ಹಿಂದೂ ಧರ್ಮದಲ್ಲಿನ ಕಂದಾಚಾರಗಳ ಹೋಗಲಾಡಿಸಿ ನವ ಮನ್ವಂತರದತ್ತ ಕೊಂಡೊಯ್ದ ಆಧ್ವರ್ಯುಗಳಲ್ಲೊಬ್ಬರು ಆಗಿದ್ದಾರೆ.
ಸುಮಾರು1200 ವರ್ಷಗಳ ಹಿಂದೆ ಭಾರತದ ಸಂಸ್ಕೃತಿ ಪರಂಪರೆಯ ಸನಾತನ ವಿಚಾರಗಳು ಕಾಲಕ್ಷಯಕ್ಕೆ ಒಳಗಾಗುತ್ತಿದ್ದಂತಹ ದುರ್ಭರ ಸಂದರ್ಭವಾಗಿತ್ತು. ಅಂತಹ ಕಾಲಘಟ್ಟದಲ್ಲಿ ಕಾಲಟಿ ಎಂಬ ಕುಗ್ರಾಮದಲ್ಲಿ ಕಾಲಪುರುಷರಾಗಿ ಯುಗ ಪುರುಷರಾಗಿ ಅವತರಿಸಿ ಬಂದ0ತಹವರು ಮಹಾ ವಿಶ್ವ ದಾರ್ಶನಿಕ ಶ್ರೀ ಶಂಕರಾಚಾರ್ಯರು. ಬಹುತೇಕ ಜನರು ಅನ್ಯಮತ ಕುರುಡು ಅನುಯಾಯಿಗಳಾಗಿ ಸನಾತನವಾದ ಧರ್ಮ ಸಂಸ್ಕೃತಿ ಸಂಸ್ಕಾರಗಳನ್ನು ಬಿಟ್ಟು ಆತ್ಮ ನಿಸ್ತೇಜರಾಗಿ ಬದುಕುತ್ತಿದ್ದ ಕಾಲದಲ್ಲಿ ಶ್ರೀ ಶಂಕರರ ಹುಟ್ಟು ಅಪೇಕ್ಷಣೀಯವಾದುದಾಗಿತ್ತು. ಅವನತಿ ಹೊಂದುತ್ತಲಿದ್ದ ಸನಾತನ ಹಿಂದೂ ಧರ್ಮದಲ್ಲಿ ಅನೇಕ ಒಡಕುಗಳು ಉಂಟಾಗಿ ಐಕ್ಯತೆಯೂ ನಶಿಸುತ್ತಿತ್ತು. ಅಸಂಖ್ಯಾತ ಒಳ ಪಂಗಡಗಳು ಹುಟ್ಟಿ ತನ್ನದೇ ಆದಂತಹ ತತ್ವ ನಿಯಮಗಳನ್ನು ಪ್ರತಿಪಾದಿಸತೊಡಗಿ, ಕೊನೆಯಿಲ್ಲದಂತಹ ವಿವಾದಗಳಿಗೆ ಅಂತಃಕಲಹಗಳಿಗೆ ಆಸ್ಪದವುಂಟಾಗಿತ್ತು. ಪ್ರತಿಯೊಬ್ಬ ಮತ ಧರ್ಮಾನುಯಾಯಿಯಿಗಳು ಪ್ರತ್ಯೇಕವಾಗಿ ತಮ್ಮ ತಮ್ಮ ಅನುಯಾಯಿಗಳನ್ನು ಹೊಂದಿದ್ದು ಧರ್ಮಕ್ಕೆ ತಮ್ಮದೇ ಆದಂತಹ ವ್ಯಾಖ್ಯಾನ ನೀಡುತ್ತಿದ್ದರು.
ಧರ್ಮೋದ್ಧಾರಕರಾಗಿ ಬಂದವರು
ಹಿಂದೂ ಧರ್ಮದಲ್ಲೇ ಹಿಂದೂ ಧರ್ಮದ ಕಾರ್ಯ ಶ್ರದ್ಧೆಗಳನ್ನು ನೀತಿ ನಿಯಮ ಸಂಸ್ಕಾರಗಳನ್ನು ವಿರೋಧಿಸುವವರು ಪ್ರಬಲರಾಗಿದ್ದರು. ಈ ರೀತಿಯಲ್ಲಿ ವಿವೇಚನೆ ಇಲ್ಲವಾಗಿ ತಾತ್ಕಾಲಿಕ ಲಾಭ ಆಮಿಶಗಳಿಗೆ ಬಲಿಯಾಗಿ ಬೌದ್ಧಿಕತೆಯ ಅಡವಾಗಿ ಭಾವೈಕ್ಯತೆಯೇ ನಾಶವಾಗಿದ್ದಂತಹ ಕಾಲವಾಗಿತ್ತು. ಅದರಲ್ಲು ವೇದ ಉಪನಿಷತ್ತುಗಳು ಮಹಾಕಾವ್ಯಗಳಿಗೆ ಎಂದಿಲ್ಲದ ಅಪಾಯಕಾರಿ ವಿನಾಶಕ ಸ್ಥಿತಿ ಒದಗಿತ್ತು ಅಂತಹ ಕಠಿಣ ಸನ್ನಿವೇಶದಲ್ಲಿ ಭಾರತ ಸಂಸ್ಕೃತಿ, ಧರ್ಮೋದ್ಧಾರಕರಾಗಿ ಬಂದವರು ಸಾಕ್ಷಾತ್ ದೈವತಾಸ್ವರೂಪಿ ಶ್ರೀ ಶಂಕರಾಚಾರ್ಯರು.
ಮತೀಯ ಗೊಂದಲ ಹಾಗೂ ಬೌದ್ಧಿಕ ದಾರಿದ್ರ್ಯದ ವಾತಾವರಣದಲ್ಲಿ ಶ್ರೀ ಶಂಕರರು ಚೈತನ್ಯದಾಯಕವಾದ ಉಪನಿಷತ್ತುಗಳ ಅದ್ವೈತಬ್ರಹ್ಮವನ್ನು ಪ್ರಚಾರಕ್ಕೆ ತಂದರು. ಇಂದಿನ0ತೆ ಅಂದು ವಿಫುಲ ವಾಹನಗಳ ಸೌಲಭ್ಯಗಳು ಇರಲಿಲ್ಲ. ಪ್ರಚಾರ ಸಾಧನಗಳು ಇರಲಿಲ್ಲ. ಅಂತಹ ಕಷ್ಟತಮವಾದ ಕಾಲಘಟ್ಟದಲ್ಲಿ ಯಾರಿಗೇ ಆಗಿರಲಿ ಒಬ್ಬನೇ ವ್ಯಕ್ತಿಯಿಂದ ಇಡೀ ಅಖಂಡ ಭಾರತಾದ್ಯಂತ ಸಂಚರಿಸಿ ಅಲ್ಪ ಕಾಲದಲ್ಲೇ ಮಾನವ ಪುರೋಭಿವೃದ್ಧಿಗೆ ಕಾರಣವಾಗುವ ಧರ್ಮ ಸ್ಥಾಪನಾ ಕಾರ್ಯಗಳ ಕೈಗೊಂಡುದು ಅಪೌರುಷೇಯ ಕಾರ್ಯವಾಗಿಯೇ ತೋರುತ್ತದೆ. ಅಂತಹ ಧೀಮಂತ ಮಹಾ ನೈತಿಕ ಹಾಗು ಆತ್ಮಬಲ ಹೊಂದಿದ್ದ0ತಹವರು ಶ್ರೀ ಶಂಕರರು. ತಮ್ಮ ಅಲ್ಪ ಜೀವಿತಾವಧಿಯಲ್ಲೇ ಅನ್ಯಮತಗಳ ದೂಷಣೆಗಳಿಂದ, ಕಬಂಧಬಾಹುಗಳಿಂದ ಭಾರತೀಯರ ಮೂಲ ಸನಾತನ ಧರ್ಮವನ್ನು ಉಳಿಸಿ ಬೆಳೆಸಿ ಅದಕ್ಕೊಂದು ಚೌಕಟ್ಟನ್ನು ಹಾಕಿದರು.
ಅನ್ಯಮತಗಳು ಭಾರತದ ಗಡಿಯಿಂದ ಆಚೆ ಹೋಗುವಂತೆ ಮಾಡಿದರು. ಇಡೀ ಭಾರತದ ಆರ್ಯವರ್ತದ ತುಂಬೆಲ್ಲ ಮೊದಲಿದ್ದ ವೇದಾಂತದ ತತ್ವಗಳನ್ನು ಪ್ರಚಾರಕ್ಕೆ ತಂದರು. ಶ್ರೀ ಶಂಕರಾಚಾರ್ಯರು ಋಷಿಸಂಸ್ಕೃತಿಯ ರಕ್ಷಣೆಯ ಮಹತ್ತರವಾದ ಕಾರ್ಯವನ್ನು ತಾವಾಗಿಯೇ ಕೈಗೆತ್ತಿಕೊಂಡು ತಮ್ಮ ಸ್ವಂತ ಶಕ್ತಿಯಿಂದ ನಿರ್ವಹಿಸಿ ಅಸಾಧ್ಯ ಕೆಲಸ ಸಾಧಿಸಿದರು. ನಮ್ಮ ಭಾರತ ದೇಶದ ನಿಜವಾದ ತಳಹದಿ ಉಪನಿಷತ್ ತತ್ವಗಳನ್ನು ಪ್ರಚಾರಕ್ಕೆ ತಂದು, ದೇಶದ ಸಂಸ್ಕೃತಿಗೆ ತಳಹದಿಯಾದ ವೇದಾಂತಗಳನ್ನು ಸಾಮಾನ್ಯ ಜನರಿಗೂ ತಿಳಿಸಲು ದೇಶದ ನಾಲ್ಕು ಕಡೆ ಮಠಗಳನ್ನು ಸ್ಥಾಪಿಸಿ ಭವ್ಯ ಭಾರತದ ಪುನರುತ್ಥಾನಕ್ಕೆ ಅಡಿಪಾಯ ಹಾಕಿದರು.
ಧರ್ಮ ಸಂಸ್ಥಾಪನಾ ಕಾರ್ಯ
ಉನ್ನತ ಮಟ್ಟದ ಆಲೋಚನಾಪರರು, ಬ್ರಹ್ಮಾನುಭೂತಿಯ ತೇಜಸ್ಸಿನಿಂದ ಪ್ರಕಾಶಿಸುತ್ತಿರುವವರು, ರಾಷ್ಟçಸೇವೆಯ ಔತ್ಸುಕತೆಯನ್ನು ಸದಾ ಹೊಂದಿದವರು, ದೇಶದ ಧರ್ಮದ ಏಳ್ಗೆಗೆ ನಿರಂತರ ಮಿಡಿಯುವವರು ಆಗಿದ್ದ ಮೃದು ಹೃದಯಿಗಳು, ಭಾವಾವೇಶದ ಭಾವೈಕ್ಯತೆಗೆ ಕಡಿವಾಣ ಹಾಕಿ ತಾರ್ಕಿಕವಾಗಿ ಎಲ್ಲವನ್ನು ಪರಾಂಭರಿಸುವ ತತ್ತ್ವವೇತ್ತರೂ ಆದ ಶ್ರಿ ಶಂಕರಾಚಾರ್ಯರನ್ನು ಭಾರತದ ಆಧ್ಯಾತ್ಮಿಕ ದಿಗ್ಧರ್ಶನಕ್ಕೆ ತಕ್ಕ ವ್ಯಕ್ತಿಯೆಂದು ವೇದೋಪನಿಷತ್ತುಗಳೇ ಆಯ್ದುಕೊಂಡು ಭಗವಂತನ ಪ್ರಾರ್ಥಿಸಿದವು ಎನಿಸುತ್ತದೆ. ಬದುಕಿನ ಮೂವತ್ತೆರಡು ವರ್ಷಗಳಲ್ಲೆ ಸಾವಿರಾರು ವರ್ಷಗಳು ಮಾಡುವಷ್ಟು ಪ್ರಭಾವಯುತ, ಪರಿಣಾಮಕಾರಿ ಧರ್ಮ ಸಂಸ್ಥಾಪನಾ ಕಾರ್ಯವನ್ನು ತಾವೊಬ್ಬರೇ ಮಾಡಿದುದು ಇಂದಿಗೂ ಸಖೇದಾಶ್ಚರ್ಯವಾಗಿ ಕಾಣುತ್ತದೆ.
ದೇಶವನ್ನು ಸಂಸ್ಕೃತೀಕರಣದ ಸಂಸ್ಕಾರವ0ತವಾಗಿಸುವಲ್ಲಿ ಅವರು ತಮ್ಮ ಲೇಖನಿಯಿಂದ ಅಸಂಖ್ಯ ಕೃತಿಗಳನ್ನು ರಚಿಸಿದರು. ಆಚಾರ್ಯರಾಗಿದ್ದು ಸ್ವತಃ ದೊಡ್ಡ ಮಟ್ಟದ ಆಧ್ಯಾತ್ಮ ಪ್ರಚಾರಕರಾಗಿ ದೂರದೃಷ್ಟಿಯುಳ್ಳ ವ್ಯವಹಾರ ನಿಪುಣರಾಗಿ ಧೈರ್ಯವಂತ ವೀರಾಗ್ರಣಿಗಳಾಗಿ ಅವಿಶ್ರಾಂತ ದೇಶ ಸೇವಕರಾಗಿ ನಿಸ್ವಾರ್ಥದ ಊಹಾತೀತ ಮಹಾನುಭಾವರಾಗಿ, ದೇಶದ ಎಲ್ಲೆಡೆ ವಿದ್ಯಾಮಂದಿರಗಳ ತೆರೆಯಲು ಕಾರಣೀಕರ್ತರಾದರು.
ಮಠಗಳ ಮೂಲಕ ಕೇವಲ ಧರ್ಮದ ಪ್ರಚಾರ ಮಾಡದೆ ಜೀವನಾವಶ್ಯಕ ಕೌಶಲಗಳ ಕಲಿಕೆಗೆ ಚಾಲನೆ ನೀಡಿದರು. ಅವರ ಅಸೀಮ ಸಾಹಸೀ ಜೀವನದ ಕಾರಣವಾಗಿಯೇ ಇಂದು ಭಾರತವು ಲೋಕ ಗುರುವಾಗಿ ಬೆಳಗಲು ಕಾರಣವಾಗಿದೆ. ಶ್ರೀ ಶಂಕರರ ಬಾಳಿನ ಗುರಿ ಭಾರತ ಬೆಳಗುವ ದಾರಿಯೇ ಆಗಿತ್ತು. ಅದನ್ನವರು ಸಾಧಿಸಿ ತೋರಿದರು. ಕೋಟ್ಯಾಂತರ ಮಾನವರ ಜನ್ಮ ಉದ್ಧಾರಕರಾದರು. ಭಾರತದ ಆತ್ಮ ಜಾಗೃತಗೊಳಿಸಿ ಇಂದಿಗೂ ಎಂದೆ0ದಿಗೂ ಪ್ರಜ್ವಲಿಸಲು ಕಾರಣೀಭೂತರಾಗಿರುವರು.
ಟಿ.ಪಿ.ಉಮೇಶ್ ಸ.ಶಿ.