ಸವದತ್ತಿ: ‘ಸನಾತನ ವೈದಿಕ ಪರಂಪರೆಯು ಇಂದಿನ ಕೊರೋನಾ ಮಹಾಮಾರಿಯಂತಹ ರೋಗ ರುಜಿನಗಳನ್ನು ಹೋಗಲಾಡಿಸಲು ಮಹತ್ತರವಾದ ಪಾತ್ರವನ್ನು ವಹಿಸುತ್ತಲಿದೆ. ವೇದ ಪುರುಷನಿಂದ ಯಾವ ಸ್ಥಳದಲ್ಲಿ ಸ್ವರಬದ್ದವಾದ ವೇದ ಮಂತ್ರಗಳ ಉಚ್ಛಾರ ಆಗುತ್ತದೆಯೋ ಆ ಸ್ಥಳ ಶುದ್ದಿಯಾಗುತ್ತದೆ. ಅಂತಹ ಶಕ್ತಿಯನ್ನು ಭಗವಂತ ವೇದಗಳ ಮುಖಾಂತರ ನಮಗೆ ನೀಡಿದ್ದಾನೆ. ಆದ್ದರಿಂದ ಸನಾತನ ವೈದಿಕ ಪರಂಪರೆಯಿಂದ ಲೋಕಕ್ಕೆ ಕಲ್ಯಾಣವಾಗುವುದು’ ಎಂದು ಗುರ್ಲಹೊಸೊರಿನ ಚಿದಂಬರೇಶ್ವರ ದೇವಸ್ಥಾನದ ಪೀಠಾಧಿಕಾರಿಗಳಾದ ದಂಡಪಾಣಿ ದೀಕ್ಷಿತರು ಹೇಳಿದರು.
ಅವರು ಗುರ್ಲಹೊಸೊರಿನ ಚಿದಂಬರೇಶ್ವರ ದೇವಸ್ಥಾನದಲ್ಲಿ ನಡೆದ ವೇದಶಾಸ್ತ್ರ ಸಂಸ್ಕೃತ ಪಾಠಶಾಲೆ ಉದ್ಘಾಟನೆ ಮತ್ತು ಶಂಕರಾಚಾರ್ಯರ ಜಯಂತಿಯ ಶುಭ ದಿನದಂದು ಕಂಚೀ ಕಾಮಕೋಟಿ ಪೀಠದ ಜಗದ್ಗುರುಗಳ ಆಶೀರ್ವಾದದಿಂದ ವೇದ ಸಂರಕ್ಷಣಾ ನಿಧಿ ಟ್ರಸ್ಟ್ ವತಿಯಿಂದ ಶುಕ್ಲ ಯಜುರ್ವೆದದ ಸಂಸ್ಕೃತ ಪಾಠ ಶಾಲೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ನಟೇಶ ದೀಕ್ಷಿತರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, “ಈ ಸಂಸ್ಕೃತ ಪಾಠ ಶಾಲೆಯನ್ನು ಆಡಂಬರದಿ0ದ ಪ್ರಾರಂಭಿಸದೆ. ಸರಕಾರದ ಕೋವಿಡ್ ನಿಯಮ ಪಾಲಿಸುವ ಉದ್ದೇಶದಿಂದ ಸಾಂಕೇತಿಕವಾಗಿ ಈ ದಿನ ಶಂಕರಾಚಾರ್ಯರ ಜಯಂತಿಯ ಶುಭದಿನವಾಗಿದ್ದರಿಂದ ಪ್ರಾರಂಭಿಸಿದ್ದೇವೆ” ಎಂದರು.
ನೂತನ ಪಾಠಶಾಲೆಯ ಪ್ರಾಧ್ಯಾಪಕರಾದ ಯೋಗೇಶ ಶರ್ಮಾ ಜ್ಯೋಶಿಯವರು ವೇದಾಧ್ಯಯನ ಪ್ರಾರಂಭಿಸಿದರು.