*ಕೃಷ್ಣಪ್ರಕಾಶ್ ಉಳಿತ್ತಾಯ
(26 ನೇ ಶ್ಲೋಕ)
ಚಕ್ರರಾಜರಥಾರೂಢಸರ್ವಾಯುಧಪರಿಷ್ಕøತಾ
ಗೇಯಚಕ್ರರಥಾರೂಢಮಂತ್ರಿಣೀಪರಿಸೇವಿತಾ||
ಚಕ್ರರಾಜವೆಂಬ ರಥದಲ್ಲಿ ಕುಳಿತಿರುವ ದೇವಿಯು ತನ್ನೆಲ್ಲಾ ಆಯುಧಗಳಿಂದ ಶೋಭಿಸುತ್ತಿದ್ದಾಳೆ. ಇಲ್ಲಿ ಚಕ್ರರಾರಾಜವೆಂದರೆ ಶ್ರೀಚಕ್ರ. ಶ್ರೀಚಕ್ರದಲ್ಲಿ ದೇವಿ ಲಲಿತೆಯು ಆರೂಢಳಾಗಿದ್ದಾಳೆ ಮತ್ತು ಆಯುಧಗಳನ್ನು ಹಿಡಿದು ಶೋಭಿಸುತ್ತಿದ್ದಾಳೆ ಎಂಬುದು ಋಷಿ ಕಂಡದ್ದು.
ಗೇಯಚಕ್ರವೆಂದರೆ ಲಲಿತೆಯ ಮಂತ್ರಿಣಿಯು ಏರಿರುವ ಚಕ್ರ. ಲಲಿತೆಯ ಮಂತ್ರಿಣಿ ಶ್ಯಾಮಲಾದೇವಿ. ಆಕೆ ಗೇಯ ಚಕ್ರದಲ್ಲಿ ಸ್ಥಿತಳಾಗಿರುವವಳು, ಇಂತಹ ಗೇಯಚಕ್ರದಲ್ಲಿ ಕುಳಿತಿರುವ ಮಂತ್ರಿಣಿಯಿಂದ ಸೇವಿಸಲ್ಪಟ್ಟವಳು ದೇವಿ ಲಲಿತೆ.
ಕ್ಷಾತ್ರತೇಜಸ್ಸೇ ಮೈವಡೆದ ಹೆಸರುಗಳು ಇವು ಮತ್ತು ಮುಂದಿನವು.
27
ಕಿರಿಚಕ್ರ ರಥಾರೂಢದಂಡನಾಥಾಪುರಸ್ಕøತಾ|
ಜ್ವಾಲಾಮಾಲಿನಿಕಾಕ್ಷಿಪ್ತವಹ್ನಿಪ್ರಾಕಾರಮಧ್ಯಗಾ||
ಲಲಿತಾಪರಮೇಶ್ವರಿಯ ಎಪ್ಪತ್ತನೆಯ ಹೆಸರಿನ ಅನುಸಂಧಾನದಲ್ಲಿ ನಾವಿದ್ದೇವೆ. “ಕಿರಿಚಕ್ರ ರಥಾರೂಢದಂಡನಾಥಾಪುರಸ್ಕøತಾ” ಲಲಿತೆಯ ಸೈನ್ಯ ಶಕ್ತಿ ದೇವತೆಗಳದು. ಈ ಶಕ್ತಿ ಸೈನ್ಯದ ದಂಡನಾಥೆ ಅಥವಾ ದಳಪತಿಯಾಗಿ ದಂಡನಾಥಾ ಎಂಬ ಶಕ್ತಿದೇವತೆ ಮುಖ್ಯಳು. ವಾರಾಹಿ ದೇವಿ ಎಂದೂ ಇವಳನ್ನು ಕರೆಯುತ್ತಾರೆ. ಇಂಥ ದಂಡನಾಥಳು ಆರೂಢಳಾಗಿರುವುದು ಕಿರಿಚಕ್ರವೆಂಬ ವರಾಹ ಸಮೂಹದಿಂದಲೇ ಎಳೆಯಲ್ಪಡುವ ರಥಗಳಿಂದ. ದಂಡನಾಥಳಿಂದ ಪುರಸ್ಕøತಳಾದ ತಾಯಿ ಲಲಿತೆಯನ್ನು ಇಲ್ಲಿ ನಾವು ನೆನೆಯಬೇಕು. ಲಲಿತೆಯ ಸಂಸ್ಮರಣೆಯನ್ನು ಆಕೆಯ ನಾಮಗಳ ಮೂಲಕ ಮಾಡುವಾಗ ಒಂದಂಶ ನೆನಪಿಡಬೇಕು. ಹೆಚ್ಚಿನ ಹೆಸರುಗಳಲ್ಲಿ ನಮಗೆ ಒಂದಲ್ಲ ಒಂದು ಬಗೆಯಿಂದ ಗೋಚರಿಸುವುದು ಕ್ಷಾತ್ರ ತೇಜ. ಈ ನಾಮಗಳ ನೆನೆಸುವಿಕೆ ನಮಲ್ಲೂ ಕ್ಷಾತ್ರ ತೇಜವನ್ನು ತಂದುಕೊಡುವುದರಲ್ಲಿ ಸಂಶಯವಿಲ್ಲ. ತಾಯಿ ಯಾವತ್ತೂ ಶಕ್ತಿವಂತೆ. ಇಲ್ಲಿ ಆಲಸ್ಯ, ನಿಸ್ತೇಜ, ನಿರುತ್ಸಾಹ, ಋಣಾತ್ಮಕತೆಗೆ ಅವಕಾಶವಿಲ್ಲ. ಕ್ಷಾತ್ರ ತೇಜವೆಂದರೆ ಉತ್ಸಾಹ ಭರಿತ ಜೀವನ್ಮುಖೀ ನಡೆ. ಹಾಗಾಗಿ ಇಂತಹ ನಾಮಗಳ ಅನುಸಂಧಾನ ನಮ್ಮಲ್ಲಿರುವ ಅಸಾಮಥ್ರ್ಯವನ್ನು ಹೋಗಲಾಡಿಸುತ್ತದೆ. ನಮ್ಮ ಸುಪ್ತ ಆತ್ಮಶಕ್ತಿಯನ್ನು ಉದ್ಧೀಪಿಸುತ್ತದೆ. ಇಂತಹಾ ಶಕ್ತಿಯಿಂದ ಕೂಡಿದ್ದೇ ಮುಂದಿನ ನಾಮ.
“ಜ್ವಾಲಾಮಾಲಿನಿಕಾಕ್ಷಿಪ್ತವಹ್ನಿಪ್ರಾಕಾರಮಧ್ಯಗಾ”
ದೇವಿಯ ಪರಿವಾರ ದೇವತೆಗಳಲ್ಲಿ ಒಬ್ಬಳಾದ ಜ್ವಾಲಾಮಾಲಿನಿಯಿಂದ ನಿರ್ಮಿತವಾದ ಅಗ್ನಿಪ್ರಾಕಾರಗಳ ಮಧ್ಯೆ ಇರುವ ಲಲಿತೆಯನ್ನು ಇಲ್ಲಿ ನಾವು ಸ್ಮರಿಸುತ್ತೇವೆ. ಚಿದಗ್ನಿಕುಂಡ ಸಂಭೂತೆಯಾದ ದೇವಿ ಮತ್ತು ದೇವತೆಗಳು ಮಾಡಿದ ಯಜ್ಞದಿಂದ ಆವೀಭರಿಸಲ್ಪಟ್ಟವಳೆಂಬುದರಿಂದಲೂ ಈಕೆಯನ್ನು ಜ್ವಾಲಾಮಾಲಿಯ ವಹ್ನಿಪ್ರಾಕಾರ ಮಧ್ಯಸ್ಥೆ ಎಂಬು ಸ್ಮರಿಸಲು ಔಚಿತ್ಯವಿದೆ.
ತಾಯಿಯ ನಾಮಗಳ ಈ ಮೇಲಿನ ಎರಡೂ ಹೆಸರುಗಳೂ ಶಕ್ತಿವತ್ತಾದವುಗಳು;ವೀರ್ಯವತ್ತಾಗಿ ಯಾರು ಸ್ಮರಿಸುತ್ತಾರೋ ಅವರಿಗೂ ಧೀಶಕ್ತಿ, ಆತ್ಮಶಕ್ತಿ ಮತ್ತು ಓಜಸ್ಸನ್ನೂ ತೇಜಸ್ಸನ್ನೂ ಕೊಡುವಂಥದ್ದು. ಹಾಗಾಗಿ ತಾಯಿಯ ಈ ರೂಪದ ಸ್ಮರಣೆ ಯಾವತ್ತೂ ಭಕ್ತರಿಗೆ ಆಲಂಬನೀಯ.