ವೀರ ಭಂಗಿಯಲ್ಲಿ ಅಭಯ ನೀಡುವ ತಾಳ್ಯದ ಆಂಜನೇಯ

*ಶ್ರೀನಿವಾಸ ಮೂರ್ತಿ ಎನ್ ಎಸ್

ಚಿತ್ರದುರ್ಗವೆಂದರೆ ನಮಗೆ ನೆನಪಾಗುವುದು ದುರ್ಗದ ಪಾಳೇಗಾರರಾಗಿದ್ದ ನಾಯಕರು ಸುಮಾರು 1568 ರಿಂದ 1779 ರ ವರೆಗೆ ಆಳಿದ ಇವರ ಕಾಲದಲ್ಲಿ ಹಲವು ದೇವಾಲಯಗಳು ನಿರ್ಮಾಣಗೊಂಡವು. ಹಾಗೆಯೇ ಚಿತ್ರದುರ್ಗ ಜಿಲ್ಲೆಯಲ್ಲೂ ಹಲವು ಪಾಳೇಗಾರರಿಂದ ನಿರ್ಮಾಣವಾದ ದೇವಾಲಯಗಳಿದ್ದು ಅಂತಹ ದೇವಾಲಯ ಇರುವ ಊರೆಂದರೆ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ.

ಇತಿಹಾಸ ಪುಟದಲ್ಲಿ ಬಹು ದೊಡ್ಡ ಊರಾಗಿ ಕಾಣಿಸದಿದ್ದರೂ ಕೆಲವು ಭಾಗದಲ್ಲಿ ಇದರ ಉಲ್ಲೇಖ ನೋಡಬಹುದು. ಇಲ್ಲಿನ ಕಸ್ತೂರಿ ಬರಮಣ್ಣ ನಾಯಕನ ಕಾಲದಲ್ಲಿ ಮದಕರಿನಾಯಕ ದತ್ತಿ ನೀಡಿದ ಶಾಸನ ಇದ್ದು ಉಳಿದಂತೆ ಇನ್ನಾವುದೇ ಲಿಖಿತ ದಾಖಲೆಗಳು ಅಪರೂಪ. ಎರಡನೇ ಚಿಕ್ಕಣ್ಣ ನಾಯಕನ ಕಾಲದಲ್ಲಿ (1675-1686) ಇಲ್ಲಿ ಬೀಡು ಬಿಟ್ಟಿದ್ದ ಖೂಬುಖಾನನ ದಂಡನ್ನು ಇಲ್ಲಿಂದ ಓಡಿಸಿ ಇಲ್ಲಿನ ಆಂಜನೇಯನ ದೇವಾಲಯವನ್ನು ಕಟ್ಟಿಸಿದ್ದ ಎನ್ನಲಾಗಿದೆ.

ಆಂಜನೇಯ ದೇವಾಲಯ :
ಸುಮಾರು 17 ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ದೇವಾಲಯವನ್ನು ಜೀರ್ಣೋದ್ಡಾರ ಮಾಡಿ ಸುಸ್ಥಿಯಲ್ಲಿಡಲಾಗಿದೆ. ದೇವಾಲಯ ಗರ್ಭಗುಡಿ, ಅಂತರಾಳ ಹಾಗು ಸಭಾಮಂಟಪ ಹೊಂದಿದ್ದು ದೇವಾಲಯದ ಗರ್ಭಗುಡಿಯಲ್ಲಿ ಸುಮಾರು 12 ಆಡಿ ಎತ್ತರದ ಆಂಜನೇಯನ ಶಿಲ್ಪವಿದೆ. ಶಿಲ್ಪದಲ್ಲಿ ಹಲವು ಕೆತ್ತನೆ ನೋಡಬಹುದು. ವೀರಭಂಗಿಯಲ್ಲಿರುವ ಈ ಆಂಜನೇಯ ಪಾರ್ಶ್ವಮುಖನಾಗಿದ್ದು ಒಂದು ಕೈ ಮೇಲೆತ್ತಿದ್ದು ವೀರಾಂಜನೇಯ ಎಂದೇ ಕರೆಯಲಾಗುತ್ತದೆ. ಇಲ್ಲಿನ ಸಮೀಪದ ಕಿಟ್ಟದಹಳ್ಳಿಯಲ್ಲಿ ಶಿಶುವಿನಂತೆ, ಮಲಸಿಂಗನಹಳ್ಳಿಯಲ್ಲಿ ನರನಂತೆ ಹಾಗು ಇಲ್ಲಿ ವೀರನಂತೆ ಅಂಜನೇಯ ಇದೆ ಎಂಬ ಪ್ರತೀತಿ ಇದೆ.

ಗರ್ಭಗುಡಿಯ ಬಾಗಿಲುವಾಡದಲ್ಲಿ ವೈಷ್ಣವ ದ್ವಾರಪಾಲಕರಿದ್ದು ಲಲಾಟದಲ್ಲಿ ಗಜಲಕ್ಶ್ಮಿ ಕೆತ್ತನೆ
ನೋಡಬಹುದು. ಅಂತರಾಳದಲ್ಲಿ ಕಂಚಿನ ಹೊದಿಕೆ ಹಾಕಲಾಗಿದ್ದು ಇಲ್ಲಿನ ದಶವತಾರದ ಕೆತ್ತನೆ
ಸುಂದರವಾಗಿದೆ. ಸಭಾಮಂಟಪದಲ್ಲಿ ಕಂಭಗಳಲ್ಲಿನ ಉಬ್ಬು ಕೆತ್ತನೆಗಳು ಗಮನ ಸೆಳೆಯುತ್ತದೆ.
ಇಲ್ಲಿ ಆಂಜನೇಯ, ವಾಮನ, ಗಣಪತಿ, ಶಿವಲಿಂಗ, ಕಾಲ್ಪನಿಕ ಪಕ್ಷಿ, ವಾಮನ, ಬಾಲಕೃಷ್ಣ,
ಪುರುಷಮೃಗ ಮುಂತಾದ ಕೆತ್ತನೆ ನೋಡಬಹುದು. ಇಲ್ಲಿನ ದೀಪಸ್ಥಂಭದಲ್ಲಿ ಕೈಮುಗಿದಿರುವ
ದಂಪತಿಗಳ ಕೆತ್ತನೆ ನೋಡಬಹುದು.

ದೇವಾಲಯದ ಸುತ್ತಲೂ ಮೇಲೆ ಗಾರೆ ಶಿಲ್ಪದಲ್ಲಿ ದಶವತಾರದ ಹಾಗು ಆಷ್ಟದಿಕ್ಪಾಲಕರ ಕೆತ್ತನೆ
ನೋಡಬಹುದು. ಇಲ್ಲಿನ ಆವರಣದಲ್ಲಿನ ಚಿಕ್ಕ ಕೊಟ್ಟಡಿಯಲ್ಲಿ ರಾಮಬಾಣಗಳು ಎಂದು
ಕರೆಯುವ ಬಾಣಗಳನ್ನು ಇರಿಸಲಾಗಿದೆ. ರಥೋತ್ಸವ ಚೈತ್ರಮಾಸದಲ್ಲಿ ಬೆಂಗಳೂರಿನ
ಕರಗ ನಡೆಯುವ ದಿನ ನಡೆಯಲಿದ್ದು ಶುದ್ಧ ಹುಣ್ಣಿಮೆಯಂದು ನಾಲ್ಕು ದಿನ ಬ್ರಹ್ಮರಥೋತ್ಸವ,
ಹೂವಿನ ಪಲ್ಲಕ್ಕಿ ಉತ್ಸವ, ಮುಳ್ಳಿನ ಆವಿಗೆ, ಓಕುಳಿಯಾಟ ಹಾಗು ಶಯನೋತ್ಸವ ನಡೆಯುತ್ತದೆ..
ಪ್ರತಿ ಶನಿವಾರ ವಿಶೇಷ ಪೂಜೆ, ಕೆರೆ ತುಂಬಿದಾಗ ಇಲ್ಲಿ ನೂರೊಂದೆಡೆ ಉತ್ಸವ
ಎಂಬ ಆಚರಣೆ ನಡೆಯುತ್ತದೆ.

ಇಲ್ಲಿನ ಸ್ಥಳಿಯ ಪುರಾಣದ ಪ್ರಕಾರ ನಂದನ ಹೊಸೂರಿನ ನಂದರಾಜನ ಸೊಕ್ಕು ಮುರಿಯಲು
ಶ್ರೀ ಲಕ್ಶ್ಮೀನರಸಿಂಹಸ್ವಾಮಿ ಅಂಜನೇಯನನ್ನು ಕಳಿಸುತ್ತಾನೆ. ಮಾರುವೇಷದಲ್ಲಿ ಬಂದ
ಆಂಜನೇಯನಿಗೆ ನಂದರಾಜ ಚಿತ್ರಹಿಂಸೆ ನೀಡುತ್ತಾನೆ. ಆಗ ರಂಗ ನಾ ತಾಳೆ ಎಂದು ಓಡಿ
ಹೋಗಲಿದ್ದ ನರಸಿಂಹ ತಾಳಯ್ಯ ಎಂದು ನಿಲ್ಲಿಸುತ್ತಾನೆ. ಹಾಗಾಗಿ ಈ ಸ್ಥಳಕ್ಕೆ ತಾಳ್ಯ ಎಂಬ ಹೆಸರು
ಬಂದಿತು ಎಂಬ ನಂಬಿಕೆ ಇದೆ.

ಕಾಳಿಕಾಮಠೇಶ್ವರಿ ದೇವಾಲಯ

ಆಂಜನೇಯನ ದೇವಾಲಯದ ಮುಂಭಾಗದಲ್ಲಿರುವ ಸುಮಾರು 18 ನೇ ಶತಮಾನದಲ್ಲಿ ನಿರ್ಮಾಣವಾಗಿರುವ ದೇವಾಲಯವಿದೆ. ದೇವಾಲಯ ಗರ್ಭಗುಡಿ ಹಾಗು ಸಭಾಮಂಟಪ ಹೊಂದಿದ್ದು
ಗರ್ಭಗುಡಿಯಲ್ಲಿ ಸುಮಾರು 2 ½ ಅಡಿ ಎತ್ತರದ ವಿಶ್ವಕರ್ಮರ ಆರಾಧ್ಯ ದೈವವಾದ ಕಾಳಿಕಾಮಠೇಶ್ವರಿಯ (ಶಿವ – ಪಾರ್ವತಿ) ಶಿಲ್ಪವಿದೆ. ಸುಖಾಸಿನ ಭಂಗಿಯಲ್ಲಿರುವ ಶಿವನ ಎಡತೊಡೆಯ ಮೇಲೆ ಪಾರ್ವತಿಯು ಕುಳಿತಿರುವಂತೆ ಇದ್ದು ಕೈಗಳಲ್ಲಿ ತ್ರಿಶೂಲ, ಡಮರು ಹಾಗುಪಾಣಿಬಟ್ಟಲು ಇದ್ದರೆ ಪಾರ್ವತಿಯ ಕೈಗಳಲ್ಲಿ ಕಮಲವಿದೆ.

ಇಲ್ಲಿ ವಿಶಾಲದವಾದ ಸುಸುಜ್ಜಿತ ಕಲ್ಯಾಣಮಂಟಪವಿದ್ದು ಉಳಿದುಕೊಳ್ಳಲು ವ್ಯವಸ್ಥೆಮಾಡಲಾಗಿದೆ. ವೀರಭದ್ರಸ್ವಾಮಿ (ಪ್ರಾಚೀನ), ಕೆರೆ ಕೋಡಿ ಹನುಮಂತ ದೇವಾಲಯ,
ಗಣಪತಿ, ಬಂಡಿ ಚಿಕ್ಕಮ್ಮ, ಕರಿಯಮ್ಮ ಮುಂತಾದ ದೇವಾಲಯಗಳನ್ನು ಕೂಡಾ ಇಲ್ಲಿ ನೋಡಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles