ಜ್ಞಾನದ ಬೆಳಕಿನಲ್ಲಿ ಕುಡಿಯೊಡೆಯಲಿ ಕುಡಿಗಳು

*ಜಯಶ್ರೀ.ಜೆ. ಅಬ್ಬಿಗೇರಿ

ಒಂದು ದಿನ ಗೌತಮ ಬುದ್ಧ ತನ್ನ ಶಿಷ್ಯನೊಂದಿಗೆ ಸಂವಾದ ನಡೆಸುತ್ತಿದ್ದ. ಅದೇ ಸಮಯದಲ್ಲಿ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ. ಒಮ್ಮಿಂದೊಮ್ಮೆಲೇ ಬುದ್ಧನ ಬಗ್ಗೆ ಸಿಟ್ಟಿನಿಂದ ಅವಾಚ್ಯವಾಗಿ ತೆಗಳಲಾರಂಭಿಸಿದ. ಸ್ವಲ್ಪ ಸಮಯದವರೆಗೆ ತೆಗಳುವುದನ್ನು ಹಾಗೇ ಮುಂದುವರೆಸಿದ. ಅದನ್ನು ಕೇಳಿಯೂ ಬುದ್ಧ ಶಾಂತ ಮೂರ್ತಿಯಾಗಿ ಕುಳಿತೇ ಇದ್ದ. ತುಟಿ ಪಿಟಕ್ ಎನ್ನಲಿಲ್ಲ.

ಆದರೆ ಆತನ ಶಿಷ್ಯಂದಿರಿಗೆ ಮಾತ್ರ ಕೋಪ ತಡೆಯಲಾಗಲಿಲ್ಲ. ಬುದ್ಧ ತನ್ನ ಶಿಷ್ಯಂದಿರಿಗೆ ಸುಮ್ಮನಿರಲು ಸೂಚಿಸಿದ. ತೆಗಳುತ್ತಿದ್ದ ವ್ಯಕ್ತಿ ಬುದ್ಧನನ್ನು ಕುರಿತು ‘ನಾನು ಆಗಿನಿಂದ ನಿಮ್ಮನ್ನು ನಿಂದಿಸುತ್ತಿದ್ದೇನೆ. ಆದರೆ ನೀವು ಮಾತ್ರ ಯಾವುದೇ ಪ್ರತಿಕ್ರಿಯೆ ತೋರದೇ ಶಾಂತವಾಗಿ ಕುಳಿತು ಬಿಟ್ಟಿದ್ದೀರಲ್ಲ’ ಎಂದು ಕೇಳಿದ. ಬುದ್ಧ ಶಾಂತ ದನಿಯಲ್ಲಿ ಆ ವ್ಯಕ್ತಿಯನ್ನು ಉದ್ದೇಶಿಸಿ ಕೇಳುತ್ತಾನೆ, ‘ನೀವು ನನಗೆ ಏನನ್ನಾದರೂ ಕೊಡಲು ಬಯಸಿದಿರಿ ಎಂದಿಟ್ಟುಕೊಳ್ಳಿ. ನಾನು ಅದನ್ನು ಸ್ವೀಕರಿಸಲು ನಿರಾಕರಿಸಿದರೆ ಅದು ಯಾರೊಂದಿಗೆ ಉಳಿಯುತ್ತದೆ? ಎಂದು ಪ್ರಶ್ನಿಸಿದ. ಅದಕ್ಕೆ ಆ ವ್ಯಕ್ತಿ ತನ್ನಲ್ಲಿಯೇ ಉಳಿಯುತ್ತದೆಂದು ಉತ್ತರಿಸಿದ.

ಮುಂದುವರೆದು ಬುದ್ಧ ‘ನೀವು ನನಗೆ ಅವಾಚ್ಯ ಪದಗಳನ್ನು ಬಳಸಿದಿರಿ. ನಾನು ಪ್ರತಿಕ್ರಿಯಿಸಲಿಲ್ಲ. ಹಾಗಾದರೆ ನೀವಾಡಿದ ಕೆಟ್ಟ ಶಬ್ದಗಳು ಯಾರ ಬಳಿ ಇವೆ?’ ಅದಕ್ಕೆ ಆ ವ್ಯಕ್ತಿ ‘ಅವು ನನ್ನಲ್ಲಿಯೇ ಇವೆ’ ಎಂದುತ್ತರಿಸಿದ. ಬುದ್ಧನ ಅಗಾಧ ಜ್ಞಾನಕ್ಕೆ ಮಾರು ಹೋದ ಆ ವ್ಯಕ್ತಿಗೆ ತನ್ನ ತಪ್ಪಿನ ಅರಿವಾಯಿತು. ಬುದ್ಧನ ಬಗ್ಗೆ ಗೌರವ ಭಾವನೆ ಉಂಟಾಯಿತು. ಆತ ಬುದ್ಧನ ಪಾದಗಳಿಗೆ ನಮಸ್ಕರಿಸಿದ. ಬುದ್ಧನ ಶಿಷ್ಯಂದಿರು ಮತ್ತು ಆ ವ್ಯಕ್ತಿ ಅಂದು ಅಮೂಲ್ಯವಾದ ಪಾಠವನ್ನು ಕಲಿತಿದ್ದರು.


ಈ ದೃಷ್ಟಾಂತವನ್ನು ಹೇಳಿದ ಮೇಲೆ ರಾಮಾಯಣ ಬರೆದ ವಾಲ್ಮೀಕಿ ಹೇಳಿದ ಈ ಕೆಳಗಿನ ಮಾತು ನೆನಪಿಗೆ ಬರುತ್ತಿದೆ.
ಗಗನಂ ಗಗನಾಕಾರಂ ಸಾಗರಃ ಸಾಗರೋಪಮಃ
ರಾಮ ರಾವಣಯೋರ್ಯುದ್ಧಂ
ರಾಮರಾವಣಯೋರಿವ

ಈ ಪ್ರಪಂಚದಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವಿನ ಬಗ್ಗೆ ವಿಶ್ಲೇಷಣೆ ಮಾಡುವಾಗ ಅದಕ್ಕೆ ಮತ್ತೊಂದು ದೃಷ್ಟಾಂತ ಉದಾಹರಣೆ ಕೊಡುವ ರೂಢಿಯಿದೆ. ಆದರೆ ಕೆಲವು ಮಹಾನ್ ಸಾಧಕರಿಗೆ ವಿಶಿಷ್ಟ ವಸ್ತುಗಳಿಗೆ ದೃಷ್ಟಾಂತ ಕೊಡುವ ಅಗತ್ಯವೇ ಇರುವುದಿಲ್ಲ. ಅಂಥ ಮೂರು ವಸ್ತು-ವ್ಯಕ್ತಿಗಳನ್ನು ವಾಲ್ಮೀಕಿ ವಿವರಿಸಿದ್ದಾನೆ. ಆಕಾಶ ಅನಂತವಾದುದು ಅದಕ್ಕೆ ಹೋಲಿಸಿ ಹೇಳುವಂತಹುದು ವಿಶ್ವದಲ್ಲಿ ಮತ್ತೊಂದು ಯಾವುದೂ ಇಲ್ಲ ಹೀಗಾಗಿ ನೀಲಿ ಆಗಸಕ್ಕೆ ನೀಲಿ ಆಗಸವೇ ಸಾಟಿ. ಸಮುದ್ರದ ಆಳ ಅಗಲ ಅಗಾಧತೆ ವಿಸ್ತಾರ ವಿಶಾಲ ಗಾಂಭೀರ್ಯತೆ ಹೋಲುವಂತಹುದು ಜಗದಲ್ಲಿ ಇನ್ನೊಂದಿಲ್ಲ. ಆದ್ದರಿಂದ ಮನೋಹರವಾದ ಸಾಗರಕ್ಕೆ ಸಾಗರವೇ ಸಾಟಿ. ಮುಂದುವರೆದು ವಾಲ್ಮೀಕಿ, ರಾಮ ರಾವಣರ ಯುದ್ಧದ ಬಗ್ಗೆ ಪ್ರಸ್ತಾಪಿಸುತ್ತಾನೆ. ಅವರೀರ್ವರ ಯುದ್ಧಕ್ಕೆ ಸಮನಾದ ದೃಷ್ಟಾಂತ ಇಲ್ಲ. ರಾಮ ರಾವಣರ ಯುದ್ಧಕ್ಕೆ ರಾಮ ರಾವಣರ ಯುದ್ಧವೇ ದೃಷ್ಟಾಂತವಾಗಿದೆ ಎನ್ನುತ್ತಾನೆ.

ಅದೇ ರೀತಿಯಲ್ಲಿ ನಾವಿಲ್ಲಿ ಹೇಳುವುದಾದರೆ ಬುದ್ಧನಿಗೆ ಬುದ್ಧನೇ ಸಾಟಿ. ಸದ್ಗುಣಗಳ ಸಾಕಾರ ಮೂರ್ತಿಯಾಗಿದ್ದ ಬುದ್ಧನ ಉಪದೇಶಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ಬದುಕಿನ ಅನಿಶ್ಚಿತ ಡೋಲಾಯಮಾನ ಸಂದರ್ಭದಲ್ಲಿ ಮತ್ತು ಸಂಕಷ್ಟದ ಸಮಯದಲ್ಲಂತೂ ಆತನ ಬೋಧನೆಗಳು ಹೆಚ್ಚು ಅವಶ್ಯಕ. ಇಂಥ ಎಲ್ಲ ಜೀವನದ ಸಂದೇಶಗಳನ್ನು ಅಂಕೆ ದಾಟಿ ಹೋಗುತ್ತಿರುವ ಈಗಿನ ಮಕ್ಕಳಿಗೆ ಕಾಲ ಕಾಲಕ್ಕೆ ಹದವರಿತು ಉಣಿಸುತ್ತಿದ್ದರೆ ಬೇಲಿ ದಾಟಿ ಸರಿದು ಹೋಗದಂತೆ ಉತ್ತಮ ಮಾನವರಾಗಿ ಬೆಳೆಯುತ್ತಾರೆ ಅಲ್ಲವೇ?

ಖುಷಿ ಮನಸ್ಸಿನಲ್ಲಿ ಸುಳಿದಾಗಲೆಲ್ಲ ನನಗೆ ಒಂದು ಕುತೂಹಲಕಾರಿ ಅಂಶ ನೆನಪಾಗುತ್ತದೆ. ಅದೇನೆಂದರೆ: ಆಯಾ ದಿನದ ಪುಸ್ತಕ ಅಂದ0ದಿನ ರಾತ್ರಿ ತೆರೆದಿಟ್ಟಾಗಲೆಲ್ಲ ಮಾಡಲೇಬೇಕೆಂದು ನಾನಂದುಕೊoಡಿದ್ದ ಕೆಲಸಗಳನ್ನು ಮಾಡಿ ಮುಗಿಸಿದ್ದಕ್ಕೆ ಸಂತಸವೆನಿಸುತ್ತದೆ. ನನ್ನದೇ ತೊಳಲಾಟಕ್ಕೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊ0ಡಾಗ ಖುಷಿಯೆನಿಸುವುದು. ಅದಕ್ಕಿಂತ ಹೆಚ್ಚು ಸಂತೃಪ್ತಿಯ ಕ್ಷಣಗಳೆಂದರೆ ಪ್ರಪಂಚದ ದಾರ್ಶನಿಕರ ತತ್ವಜ್ಞಾನಿಗಳ ಮಹಾನ್ ಪುರುಷರ ತತ್ವ ಆದರ್ಶಗಳನ್ನು ದೃಷ್ಟಾಂತದ ಮೂಲಕ ಮಕ್ಕಳಲ್ಲಿ ಇನ್ನಷ್ಟು ಆಳವಾಗಿ ಭದ್ರವಾಗಿ ಬೇರುನೂರಿಸುವ ಕ್ಷಣಗಳು. ಜನರ ನಡೆವಳಿಕೆಗಳಿಗೆ ಜಗದ ಬೆರಗುಗಳಿಗೆ ಕಕ್ಕಾಬಿಕ್ಕಿಯಾಗಿ ನಿಂತಿರುವ ಪುಟ್ಟ ಪುಟ್ಟ ಜೀವಗಳಿಗೆ ಜೀವನದ ಅಮೂಲ್ಯ ಮೌಲ್ಯಗಳನ್ನು ಹಸ್ತಾಂತರಿಸುವಾಗ ಖುಷಿ ಮೇರೆ ಮೀರಿ ಮೈ ಪುಳಕಗೊಳ್ಳುತ್ತದೆ. ಕನಸಿನ ಮೆರವಣಿಗೆಯಲ್ಲಿ ಹೊರಟಿರುವ ಕುಡಿಗಳು ಇಂಥ ಅಗಾಧ ಜ್ಞಾನದ ಬೆಳಕಿನಲ್ಲಿ ಕುಡಿಯೊಡೆಯಲಿ. ಮಕ್ಕಳನ್ನು ಸುಜ್ಞಾನದ ಸಾಗರದಿ ಹರವಿಕೊಳ್ಳುವಂತೆ ಹಬ್ಬಿಕೊಳ್ಳುವಂತೆ ಮಾಡೋಣ. ಅಮೂಲ್ಯ ಪಾಠಗಳನ್ನು ಕಲಿಸೋಣ. ಸಂತೃಪ್ತಿಯ ಕ್ಷಣಗಳನ್ನು ಅನುಭವಿಸೋಣ.

(ಲೇಖಕಿ ಜಯಶ್ರೀ ಅವರು ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ)

Related Articles

ಪ್ರತಿಕ್ರಿಯೆ ನೀಡಿ

Latest Articles