ಅನ್ನದಾತ ಸುಖೀಭವ….

*ಜ್ಯೋತಿ.ಸಿ.ಕೋಟಗಿ

“ಹಸಿವು ಅನ್ನುವುದು ಎಲ್ಲರಿಗೂ ಒಂದೇ. ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬoತೆ ಪ್ರತಿಯೊಬ್ಬರೂ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಪ್ರತಿನಿತ್ಯ ದುಡಿಯುತ್ತಾರೆ. ಆದರೂ ಕೆಲವೊಮ್ಮೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಕೂಡಾ ಕೆಲವು ಕಡೆ ಇರುವುದು ನಮ್ಮ ಕಣ್ಣ ಮುಂದಿದೆ. ಹಾಗಾಗಿ ನಮ್ಮ ಮುಂದೆ ಹಸಿವು ಎಂದು ಬೇಡಿ ಬಂದವರಿಗೆ ಅನ್ನ ದಾನ ನೀಡಲು ಹಿಂದೆ ಮುಂದೆ ನೋಡಬಾರದು.
ದೇಶಕ್ಕೆ ದುಸ್ಥಿತಿ ಬಂದೊದಗಿರುವಾಗ ಸರಳ ಸಜ್ಜನಿಕೆಯ ಜೀವನ ನಮ್ಮದಾಗ ಬೇಕಿದೆ. ಬಹು ಮುಖ್ಯವಾಗಿ ಆಹಾರದ ವಿಚಾರದಲ್ಲಿ ಬಹಳ ಗಾಂಭೀರ್ಯತೆ ಮತ್ತು ಸೂಕ್ಷö್ಮತೆ ಬೇಕಿದೆ. ನಮ್ಮ ಭಾರತೀಯರು ಎಷ್ಟು ಸಹೃದಯಿಗಳು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಕೊರೊನ ಸಮಯದಲ್ಲಿ ಎಷ್ಟು ಜನ ತಮಗೆ ತಿಳಿದ ರೀತಿಯಲ್ಲಿ ಕೈಲಾದಷ್ಟು ಸಹಾಯ ಮಾಡುತ್ತಿರುವರು. ನಿಜಕ್ಕೂ ಮೆಚ್ಚಲೇಬೇಕಾದ ಸಂಗತಿ. ಕೊರೊನ ಮಹಾಮಾರಿ ಎಲ್ಲವನ್ನು ಕಲಿಸುತ್ತಿದೆ
ನಿಜ, ಗೆಳೆಯರೇ ಮುಂಚೆ ನಾವು ಹೊಟೆಲ್ಗಳಲ್ಲಿ, ಮಾಲ್ಗಳಲ್ಲಿ, ಬೀದಿಗಳಲ್ಲಿ ಮನ ಬಂದಂತೆ ತಿಂದು ಹೆಚ್ಚಾದನ್ನು ತಟ್ಟೆಯಲ್ಲಿಯೇ ಬಿಟ್ಟು ಬರುತ್ತಿದ್ದೆವು. ಹಸಿದವರ ಗೋಳು ಏನೆಂಬುದು ಈಗ ಅರಿಕೆ ಆಗಿದೆ ಅಂದುಕೊಳ್ಳುವೆ.

ತುತ್ತುಅನ್ನದ ಬೆಲೆ ತಿಳಿಯಬೇಕಿದೆ. ಒಂದು ತುತ್ತುಅನ್ನ ಕೈ ಸೇರಬೇಕಾದರೆ ಅದೆಷ್ಟು ಜನರ ಪರಿಶ್ರಮವಿದೆ ಎಂಬುದು ನಮಗೆಲ್ಲ ಗೊತ್ತಿದೆಯಾದರೂ ಮತ್ತೊಮ್ಮೆ ನೆನೆಯುವ.
ಮನೆಯಲ್ಲಿ ಹಿರಿಯರು ಅನ್ನ ಕೇಡು ಮಾಡಬೇಡಿ ಎಂದಾಗ ಅದೆಷ್ಟು ಬೇಗ ಕೋಪ, ನಮಗೆ ಹೇಳಬೇಕಿಲ್ಲ. ತಮಗೇ ಗೊತ್ತಿರೋ ಹಾಗೆ ಆಡ್ತಾರೆ ಎಂದು ಮನದಲ್ಲಿ ಶಪಿಸುವುದು ಸರ್ವೇ ಸಾಮಾನ್ಯ. ಒಮ್ಮೆ ಸುತ್ತ ಕಣ್ಣರಳಿಸಿ ನೋಡಿ ಹಸಿವಿನಿಂದ ನರಳಾಡುವರನೊಮ್ಮೆ ನೋಡಿ ಪ್ರತಿದಿನ ಹಸಿವಿನಿಂದ ಇಹ ಲೋಕ ತೊರೆಯುವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಬಾಳಿ ಬದುಕಬೇಕಾದ ಮಕ್ಕಳು ಜೀವ ಕಳೆದು ಕೊಳ್ಳುತ್ತಿದ್ದಾರೆ. ಇದೆಲ್ಲ ನಮಗೇಕೆ ಎನ್ನುವಿರಾ ? ಸ್ನೇಹಿತರೆ ಇದು ಜೀವನ ಚಕ್ರ ಯಾವಾಗ ಯಾರಿಗೆ ಯಾವ ಸ್ಥಿತಿ ಬರುವದೋ? ತಿಳಿಯದು.


ಎಲ್ಲರೂ ಎಲ್ಲವೂ ಚೆನ್ನಾಗಿದ್ದಾಗ ಮಾತ್ರ ನಾವು ಚೆನ್ನಾಗಿರುತ್ತೇವೆ . ಯಾಕೆಂದರೆ ನಾವು ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿ ಒಬ್ಬರ ಮೇಲೊಬ್ಬರು ಅವಲಂಬಿತರಾಗಿದ್ದೇವೆ, ಅದಕ್ಕಾಗಿ ಜೀವನಕ್ಕೆ ಬಹು ಮುಖ್ಯವಾದದ್ದು ಆಹಾರ ಅಲ್ಲವೇ? ಆದರೆ ಆ ತುತ್ತಿನ ಹಿನ್ನೆಲೆಯನೊಮ್ಮೆ ಅವಲೋಕಿಸೋಣ. ಭೂ ತಾಯಿಯನ್ನು ಹದಗೊಳಿಸಿ ಬೀಜ ಬಿತ್ತುವ ರೈತನಿಂದ ಹಿಡಿದು ತಟ್ಟೆಗೆ ಬಂದು ಸೇರುವ ಬಗೆಯನೊಮ್ಮೆ ನೋಡಿ. ರೈತ ಬಿತ್ತಿ ರಾಶಿ ಮಾಡಿ ಮಾರುಕಟ್ಟೆಗೆ ತಂದು ಅದು ಅಲ್ಲಿಂದ ಮಾಲಿಗಳ ಬೆನ್ನ ಮೇಲೆ ಕೂತು ವಾಹನಗಳಲ್ಲಿ ಓಡಾಡಿ, ಸಂಸ್ಕರಣೆಗೊಂಡು, ಅಂಗಡಿಗಳಲ್ಲಿ ಕೂತು ಮನೆಗೆ ಬಂದು ಸೇರಿ ಅಮ್ಮನ ಕೈಯ್ಯಲ್ಲಿ ಭೋಜನ ತಯಾರಿಯಾಗಲು ಸಿದ್ದವಾಯಿತು. ನೋಡಿ ಇದರ ಹಿಂದೆ ಯಾರ‍್ಯಾರ ಪರಿಶ್ರಮ ಹೇಗೇಗೆ ಇದೆ ಅಲ್ಲವೇ?

ಮನೆಯ ಹಿರಿಯರು ಅನ್ನ ಪೋಲು ಮಾಡದಿರಿ ಎಂದಾಗ ಎಷ್ಟು ಜಿಪುಣನಿವನು? ಎನ್ನಬಹುದು. ಆದರೆ ಇಲ್ಲಿ ಹಾಗೆನ್ನುವವರೇ ಮೂರ್ಖರು. ಯಾಕೆಂದರೆ ಅವರು ತಮ್ಮ ಮನೆಯಲ್ಲಿ ಮಾತ್ರ ಉಳಿಸಲ್ಲ, ಇಷ್ಟೆಲ್ಲಾ ಪರಿಶ್ರಮ ಪಟ್ಟವರ ದುಡಿಮೆಯನ್ನು ಮತ್ತು ಇಡೀ ದೇಶದ ಸಂಪತ್ತನ್ನು ಪರೋಕ್ಷವಾಗಿ ಉಳಿಸಿದಂತೆ. ನೀರು, ವಿದ್ಯುತ್, ಸಂಚಾರ ಹೀಗೆ ಹಲವಾರು ಅಂಶಗಳನ್ನು ಅವರು ದೇಶಕ್ಕಾಗಿಯೇ ಕೂಡಿಟ್ಟಂತೆ. ಜಿಪುಣನಂತ ದಾನಿ ಜಗತ್ತಲ್ಲಿ ಬೇರೆ ಯಾರಿಲ್ಲ ಎಂಬ ಗಾದೆ ಮಾತು ಕೇಳಿಲ್ಲವೇ?.
ವಿಲಾಸಕ್ಕಾಗಿ ದುಂದುವೆಚ್ಚ ಮಾಡಿ ಆಹಾರವನ್ನು ಹಾಳು ಮಾಡಬೇಡಿ. ಆ ಹಕ್ಕು ನಮಗಿಲ್ಲ. ಬಡವನ, ಹಸಿದವನ ಉದರ ತುಂಬಿಸಿ. ಅವನ ನಗು ಮುಖದಲ್ಲಿ ಪರಮಾತ್ಮನನ್ನು ಕಾಣಿರಿ. ತುತ್ತು ಅನ್ನ ಸಿಗದೆ ಪ್ರಾಣ ಪಕ್ಷಿ ಹಾರಿಹೋಗುವದನ್ನು ಕಂಡಿದ್ದೇವೆ, ಕೇಳಿದ್ದೇವೆ. ಎಷ್ಟು ನಮ್ಮಿಂದ ಸಾಧ್ಯವೋ ಅಷ್ಟು ಸಹಾಯ ಮಾಡೋಣ. ಆಹಾರವನ್ನು ಹಿತಮಿತವಾಗಿ ಬಳಸಿ ಮತ್ತೊಬ್ಬರಿಗೂ ದೊರೆಯುವಂತೆ ಮಾಡೋಣ. ತೋರಿಕೆಗಾಗಿ ನೀಡದೇ ಮಾನವೀಯತೆ ಮೆರೆಯೋಣ. ‘ಅನ್ನದಾತ ಸುಖೀಭವ’ ಎಂಬ ಮಾತನ್ನು ಸಾಕಾರಗೊಳಿಸೋಣ.


(ಲೇಖಕಿ ಜ್ಯೋತಿ.ಸಿ.ಕೋಟಗಿ ಅವರು ಶಿಕ್ಷಕಿ, ಸ.ಹಿ.ಪ್ರಾ ಶಾಲೆ ತಲ್ಲೂರ, ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ.)

Related Articles

ಪ್ರತಿಕ್ರಿಯೆ ನೀಡಿ

Latest Articles